ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಂಕ್ ಶೌಚಾಲಯ’ ನಿರ್ಮಾಣಕ್ಕೆ ಆಕ್ಷೇಪ

ಮಿನಿ ವಿಧಾನ ಸೌಧದ ಎದುರಿನ ಕಾಮಗಾರಿ ಸ್ಥಗಿತಕ್ಕೆ ಜಿಲ್ಲಾಧಿಕಾರಿ ಸೂಚನೆ
Last Updated 9 ಜೂನ್ 2022, 4:32 IST
ಅಕ್ಷರ ಗಾತ್ರ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನಲ್ಲಿ ಐದು ವರ್ಷಗಳ ಹಿಂದೆ ನಿರ್ಮಾಣಗೊಂಡ ಮಿನಿ ವಿಧಾನಸೌಧ ಎದುರು ಗೇಟ್‌ ಬಳಿ ಪುರಸಭೆ ವತಿಯಿಂದ ₹ 25 ಲಕ್ಷ ವೆಚ್ಚದಲ್ಲಿ ಮಹಿಳೆಯರಿಗಾಗಿ ‘ಪಿಂಕ್ ಶೌಚಾಲಯ’ ನಿರ್ಮಾಣಗೊಳ್ಳುತ್ತಿದ್ದು, ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಇದೇ ಜಾಗದಲ್ಲಿ ಗಾಂಧಿ ಜಯಂತಿ ದಿನ ತಹಶೀಲ್ದಾರ್ ರಶ್ಮಿ ಎಸ್.ಆರ್. ಗಿಡ ನೆಟ್ಟು ಪ್ರಚಾರ ಪಡೆದಿದ್ದ ಗಿಡವನ್ನೂ ಕಡಿದು ಹಾಕಲಾಗಿದೆ. ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಈಗಿನ ತಹಶೀಲ್ದಾರ್ ಡಾ.ಸ್ಮಿತಾ ರಾಮು ಅದೇ ಗೇಟ್‌ ಬಳಿ ಮತ್ತೆ ಗಿಡ ನೆಟ್ಟು ಗಮನ ಸೆಳೆದಿದ್ದಾರೆ.

ಕಳೆದ 1982ರಲ್ಲಿ ಅಂದಿನ ತಹಶೀಲ್ದಾರ್ ರಾಜು ನೇತೃತ್ವದಲ್ಲಿ ಸ್ಥಳೀಯ ಕಲಾವಿದರು ಮತ್ತು ದಾನಿಗಳ ನೆರವಿನಿಂದ ನಿರ್ಮಿಸಿದ್ದ ಸಾರ್ವಜನಿಕ ರಂಗ ಮಂದಿರವನ್ನು ಕಳೆದ ವರ್ಷ ಧ್ವಂಸಗೊಳಿಸಲಾಗಿದೆ. ಈ ಜಾಗದಲ್ಲಿ ‘ಪಿಂಕ್ ಶೌಚಾಲಯ’ ನಿರ್ಮಿಸುವುದಕ್ಕೆ ಪರಿಸರಾಸಕ್ತರು, ಕಲಾವಿದರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಹೋರಾಟ, ಪ್ರತಿಭಟನೆ, ಚುನಾವಣಾ ಪ್ರಚಾರ ಸಭೆ, ಮಕ್ಕಳ ನಾಟಕ, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಏಕೈಕ ತಾಣವಾಗಿ ರಂಗ ಮಂದಿರ ಗುರುತಿಸಿಕೊಂಡಿತ್ತು. ಇದೀಗ ಬಿ.ಸಿ.ರೋಡು-ಕೈಕುಂಜೆ ರಸ್ತೆ ವಿಸ್ತರಣೆಗೊಂಡಿದ್ದು, ಇಲ್ಲಿ ರಂಗಮಂದಿರ ಪುನರ್ ನಿರ್ಮಿಸುವ ಬದಲಾಗಿ ಪಿಂಕ್ ಶೌಚಾಲಯ ನಿರ್ಮಿಸುತ್ತಿದ್ದಾರೆ. ಮಿನಿ ವಿಧಾನಸೌಧ ಎದುರು ಶೌಚಾಲಯಕ್ಕೆ ತೆರಳಲು ಮಹಿಳೆಯರು ಕೂಡಾ ಹಿಂದೇಟು ಹಾಕುತ್ತಾರೆ. ಈ ಬಗ್ಗೆ ಸ್ಥಳೀಯ ಮಹಿಳೆಯರು ಮತ್ತು ನಾಗರಿಕರಿಂದ ಸಹಿ ಸಂಗ್ರಹಿಸಿದ ಪ್ರತ್ಯೇಕ ಎರಡು ಮನವಿಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ’ ಎಂದು ಹೋರಾಟಗಾರ ಲೋಹಿತ್ ಭಂಡಾರಿಬೆಟ್ಟು ತಿಳಿಸಿದರು.

‘ಇತ್ತೀಚೆಗಷ್ಟೇ ವರ್ಗಾವಣೆಯಾಗಿ ಬಂದಿದ್ದು, ಈ ಬಗ್ಗೆ ಪುರಸಭೆ ಕೈಗೊಂಡ ನಿರ್ಣಯ ಮತ್ತು ಟೆಂಡರ್ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಜಿಲ್ಲಾಧಿಕಾರಿ ಸೂಚನೆಯಂತೆ ಮುಂದಿನ ಕ್ರಮವಹಿಸಲಾಗುತ್ತದೆ’ ಎಂದು ‍ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT