ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಸಿ.ರೋಡ್‌: ‘ಪಿಂಕ್ ಶೌಚಾಲಯ’ ಉದ್ಘಾಟನೆ ಸಿದ್ಧ

ಬಿ.ಸಿ.ರೋಡು: ವಿರೋಧದ ನಡುವೆ ಪೂರ್ಣಗೊಂಡ ‘ಪಿಂಕ್ ಶೌಚಾಲಯ’ ಲೋಕಾರ್ಪಣೆಗೆ ಸಿದ್ಧ
Published 13 ಸೆಪ್ಟೆಂಬರ್ 2023, 6:24 IST
Last Updated 13 ಸೆಪ್ಟೆಂಬರ್ 2023, 6:24 IST
ಅಕ್ಷರ ಗಾತ್ರ

ಬಂಟ್ವಾಳ: ಬಿ.ಸಿ.ರೋಡು ಆಡಳಿತ ಸೌಧದ ಮುಂಭಾಗದ ಗೇಟ್ ಬಳಿ ನಿರ್ಮಾಣಗೊಂಡಿರುವ, ಒಂದೂವರೆ ವರ್ಷಗಳಿಂದ ಕೆಲವು ಪರಿಸರಾಸಕ್ತರು, ಕಲಾವಿದರ ವಿರೋಧಕ್ಕೆ ಕಾರಣವಾಗಿದ್ದ ಮಹಿಳೆಯರ ‘ಪಿಂಕ್ ಶೌಚಾಲಯ’ದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಸಿದ್ಧಗೊಂಡಿದೆ.

ಕೇಂದ್ರ ಸರ್ಕಾರದ ‘ಅಮೃತ್ ನಿರ್ಮಲ’ ನಗರ ಯೋಜನೆಯಡಿ ಬಂಟ್ವಾಳ ಪುರಸಭೆಗೆ ಮಂಜೂರಾದ ₹ 1ಕೋಟಿ ವಿಶೇಷ ಅನುದಾನದಲ್ಲಿ ₹25.50 ಲಕ್ಷ ವೆಚ್ಚದಲ್ಲಿ ಈ ಶೌಚಾಲಯ ನಿರ್ಮಾಣಗೊಂಡಿದೆ.

ಕಾಮಗಾರಿಗೆ ಅಡೆ-ತಡೆ: ಈ ಶೌಚಾಲಯ ಬಿ.ಸಿ.ರೋಡಿನ ಕೈಕಂಬ ಅಥವಾ ಬಿ.ಸಿ.ರೋಡು ಬಸ್ ನಿಲ್ದಾಣ ಬಳಿ ನಿರ್ಮಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ, ಆಡಳಿತ ಸೌಧದ ಮುಂಭಾಗದ ಗೇಟಿನ ಬಳಿ ನಿರ್ಮಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಹಿಂದೆ ಇಲ್ಲಿ ಕಲಾವಿದರು ಸೇರಿ ನಿರ್ಮಿಸಿದ್ದ ಸಾರ್ವಜನಿಕ ರಂಗ ಮಂದಿರ ಕೆಡವಲಾಗಿದೆ. ತಾಲ್ಲೂಕಿನ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡ ಬಿ.ಸಿ.ರೋಡಿನಲ್ಲಿ ಸುಸಜ್ಜಿತ ಸಾರ್ವಜನಿಕ ರಂಗ ಮಂದಿರವೇ ಇಲ್ಲ. ಇಲ್ಲಿನ ಆಡಳಿತ ಸೌಧ ಮತ್ತು ಮುಖ್ಯರಸ್ತೆ ಬಳಿ ತೆರೆದ ಜಾಗದಲ್ಲಿ ಶೌಚಾಲಯ ನಿರ್ಮಾಣಗೊಂಡರೆ ಮಹಿಳೆಯರು ಹೋಗಲು ಮುಜುಗರಪಡುತ್ತಾರೆ ಎಂದು ಆರೋಪಿಸಿ ಹಲವು ಮಂದಿ ಸಹಿ ಸಂಗ್ರಹಿಸಿ ಅಂದಿನ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರಿಗೆ ಮನವಿ ಸಲ್ಲಿಸಿದ್ದರು.‌

ಕಾಮಗಾರಿಗೆ ತಡೆ ನೀಡಿ ಆದೇಶಿಸಿದ್ದ ಜಿಲ್ಲಾಧಿಕಾರಿ ಬಳಿಕ ಪರ್ಯಾಯ ಸ್ಥಳ ಪರಿಶೀಲಿಸಿದ್ದರು. ಈ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು ಬಳಿಕ ಮತ್ತೆ ಕಾಮಗಾರಿ ಆರಂಭಗೊಂಡಿತ್ತು.

‌ಹೈಟೆಕ್ ಸ್ಪರ್ಶ: ಇಲ್ಲಿ ದೇಶಿ ಮತ್ತು ವಿದೇಶಿ ಶೈಲಿ ಶೌಚಾಲಯ ಇದೆ. ಮಕ್ಕಳಿಗೆ ಹಾಲುಣಿಸಲು ಸುಸಜ್ಜಿತ ಕೊಠಡಿ ಇದೆ. ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಸ್ಯಾನಿಟರಿ ನ್ಯಾಪ್ ಕಿನ್ ವ್ಯವಸ್ಥೆಯೂ ಇಲ್ಲಿದೆ.

ಈ ಶೌಚಾಲಯ ತಾಲ್ಲೂಕು ಕಚೇರಿ, ನ್ಯಾಯಾಲಯ, ಸಾರ್ವಜನಿಕ ಗ್ರಂಥಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಮೆಸ್ಕಾಂ ಉಪ ವಿಭಾಗ, ನಗರ ಪೊಲೀಸ್ ಠಾಣೆ ಮತ್ತಿತರ ಸರ್ಕಾರಿ ಕಚೇರಿಗಳಿಗೆ ಬರುವ ಮಹಿಳೆಯರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯವೂ ನಾಗರಿಕರಿಂದ ವ್ಯಕ್ತವಾಗಿದೆ.

‘ಅಮೃತ ನಿರ್ಮಲ’ ನಗರ ಯೋಜನೆಯಡಿ ‘ಪಿಂಕ್ ಶೌಚಾಲಯ’ ಬಿ.ಸಿ.ರೋಡು ನಗರದಲ್ಲಿ ಅವಶ್ಯಕವಾಗಿದ್ದು, ಸೂಕ್ತ ಸ್ಥಳಾವಕಾಶ ಕೊರತೆಯಿಂದ ಆಡಳಿತ ಸೌಧದ ಮುಂಭಾಗದ ಗೇಟಿನ ಬಳಿ ನಿರ್ಮಾಣಗೊಂಡಿದೆ. ಈ ಹಿಂದೆ ಮೈಸೂರಿನಲ್ಲಿ ತರಬೇತಿಗೆ ಹೋಗಿದ್ದ ವೇಳೆ ಅಲ್ಲಿನ ‘ಪಿಂಕ್ ಶೌಚಾಲಯ’ ಕಂಡು ಇಲ್ಲಿಗೂ ಬೇಕು ಎಂಬ ಕಲ್ಪನೆ ಮೂಡಿತ್ತು ಎಂದು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಮುಖ್ಯಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT