ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ನೆರೆ ಬಾಬುಗುಡ್ಡೆಯ ಅನಿವಾರ್ಯ ಅತಿಥಿ

Last Updated 27 ಏಪ್ರಿಲ್ 2011, 8:15 IST
ಅಕ್ಷರ ಗಾತ್ರ

ಮಂಗಳೂರು: ‘ದಯವಿಟ್ಟು ನಮ್ಮ ಕಾರ್ಪೊರೇಟರ್ ಹುಡುಕಿ ಕೊಡಿ’!... ಇದು ಮಳೆ ಬಂದರೆ ‘ಅನಿವಾರ್ಯ ಅತಿಥಿ’ಯಂತೆ ಬಂದು ಕಾಡುವ ನೆರೆ ಭೀತಿಯಿಂದ ಕಂಗಾಲಾಗಿರುವ ನಗರದ ಅತ್ತಾವರ ಬಾಬುಗುಡ್ಡೆ ನಿವಾಸಿಗಳ ಮೊರೆ...

‘ನೆರೆಯಿಂದ ನಮ್ಮನ್ನು ರಕ್ಷಿಸಬೇಕಾದ ಕಾರ್ಪೊರೇಟರ್ ವಿಜಯಲಕ್ಷ್ಮಿ 3 ವರ್ಷಗಳ ಹಿಂದೆ ಓಟು ಕೇಳಲು ಬಂದವರು ಮತ್ತೆ ಇತ್ತ ತಲೆ ಹಾಕಿಲ್ಲ. ಸುರಿಯುವ ಮಳೆಯ ಹಿಂದೆಯೇ ಸಮಸ್ಯೆಗಳ ಸರಮಾಲೆಯೇ ಇಲ್ಲಿ ಸೃಷ್ಟಿಯಾಗುತ್ತದೆ. ನಮ್ಮ ಬವಣೆ ಕೇಳುವವರೇ ಇಲ್ಲದಂತಾಗಿದೆ’ ಎಂದು ಅಲವತ್ತುಕೊಳ್ಳುತ್ತಾರೆ ಇಲ್ಲಿನ ನಿವಾಸಿಗಳು.

ಮಂಗಳೂರು ಮಹಾನಗರದ ಬದುಕಿಗೆ ಒಗ್ಗಿಕೊಳ್ಳುವ ಮುನ್ನ ದೊಡ್ಡ ಗ್ರಾಮ ಎನಿಸಿದ್ದ ಅತ್ತಾವರ ಬಾಬುಗುಡ್ಡೆ ಹಾಗೂ ನಂದಿಗುಡ್ಡೆ ಎಂಬ ದೊಡ್ಡ ಜನವಸತಿ ಪ್ರದೇಶಗಳನ್ನು ಒಡಲಲ್ಲಿಟ್ಟುಕೊಂಡಿದೆ. ಜತೆಗೆ ಫಳ್ನೀರ್, ಮೋತಿಮಹಲ್, ವೆನ್ಲಾಕ್ ಆಸ್ಪತ್ರೆಯ ಸುತ್ತಲ ಪ್ರದೇಶಗಳನ್ನು ಒಳಗೊಂಡಿದೆ. ವಿಶೇಷವೆಂದರೆ ಅತ್ತಾವರದ ಗ್ರಾಮೀಣ ಹಿನ್ನೋಟ ಮೂಲವಾಗಿ ದಶಕಗಳ ಹಿಂದೆ ಆರಂಭವಾಗಿರುವ ‘ಅತ್ತಾವರ ಗ್ರಾಮ ಸಂಘ’ ಈಗಲೂ ಅಸ್ತಿತ್ವದಲ್ಲಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ‘ಮುಳುಗಡೆ’ ಪ್ರದೇಶವಾಗಿ ಬದಲಾಗುವ ಪಾಲಿಕೆಯ 55ನೇ ವಾರ್ಡ್ ವ್ಯಾಪ್ತಿಯ ಬಾಬುಗುಡ್ಡೆಗೆ ಅದರ ಭೌಗೋಳಿಕ ರಚನೆ ಹಾಗೂ ದೂರದೃಷ್ಟಿ ಇಲ್ಲದ ಅಭಿವೃದ್ಧಿ ಚಟುವಟಿಕೆಗಳು ಶಾಪವಾಗಿ ಪರಿಣಮಿಸಿದೆ. ಉಳ್ಳಾಲದ ನೇತ್ರಾವತಿ ನದಿಯ ಎರಡನೇ ಸೇತುವೆ ಆಸುಪಾಸಿನಲ್ಲಿ ಬೀಳುವ ಮಳೆ ನೀರು, ಮಾರ್ನಮಿಕಟ್ಟೆ ಪ್ರದೇಶದಲ್ಲಿ ಬೀಳುವ ನೀರು ಅತ್ತಾವರದ ಬಾಬುಗುಡ್ಡೆಯನ್ನು ಬಳಸಿ ಹರಿಯುವ ದೊಡ್ಡ ತೋಡಿಗೆ ಸೇರುತ್ತಿದ್ದು, ಮುಂದೆ ಪಾಂಡೇಶ್ವರ, ಹೊಯ್ಗೆ ಬಜಾರ್ ಮೂಲಕ ಕಡಲು ಸೇರುತ್ತದೆ.

ದೊಡ್ಡ ಮಳೆ ಬಂತೆಂದರೆ ಈ ಪ್ರದೇಶದ ಬವಣೆ ಇಮ್ಮಡಿಗೊಳ್ಳುತ್ತದೆ. 45 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ತೋಡು ಸದ್ಯ ಹೂಳಿನಿಂದ ತುಂಬಿದ್ದು, ಮಳೆ ನೀರಿನೊಟ್ಟಿಗೆ ಈ ಪ್ರದೇಶದ ತ್ಯಾಜ್ಯ ವಸ್ತು ಸಾಗಿಸುವ ಹೆಚ್ಚುವರಿ ಹೊಣೆ ಹೊತ್ತಿರುವುದು ಅದರಲ್ಲಿ ಸರಾಗ ನೀರು ಹರಿಯುವ ಕ್ರಿಯೆಗೆ ತೊಡಕಾಗಿ ಪರಿಣಮಿಸಿದೆ.

ಇನ್ನೊಂದೆಡೆ ಬಾಬುಗುಡ್ಡೆಯ ಪಕ್ಕದಲ್ಲಿಯೇ ರೈಲ್ವೆ ಹಳಿ ಹಾದುಹೋಗಿದ್ದು, ಹಳಿ ನಿರ್ಮಾಣ ವೇಳೆ ಅಕ್ಕಪಕ್ಕದ ಪ್ರದೇಶವನ್ನು ರೈಲ್ವೆ ಇಲಾಖೆ ಏರಿ ನಿರ್ಮಿಸಿ ಎತ್ತರಗೊಳಿಸಿರುವುದು ಮಳೆಯ ನೀರು ಹರಿದುಹೋಗಲು ತೊಡಕಾಗಿದೆ. ಇದರೊಟ್ಟಿಗೆ ಈ ಪ್ರದೇಶದಲ್ಲಿ ಯೋಜನಾರಹಿತವಾಗಿ ನಿರ್ಮಾಣಗೊಂಡಿರುವ ಬೃಹತ್ ಕಟ್ಟಡಗಳು ಮಳೆ ನೀರಿಗೆ ತಡೆಯಾಗಿ ಪರಿಣಮಿಸಿದ್ದು, ಮಳೆಗಾಲದಲ್ಲಿ ಬಾಬುಗುಡ್ಡೆ ಅಕ್ಷರಶಃ ದ್ವೀಪವಾಗಲು ಕಾರಣವಾಗಿದೆ.

ವಾರದ ಹಿಂದೆ ಬಿದ್ದ ಮಳೆಗೆ ತೋಡು ತುಂಬಿ ಉಂಟಾದ ಕೃತಕ ನೆರೆಯ ದ್ಯೋತಕವಾಗಿ ಬಾಬುಗುಡ್ಡೆಯ ಇಡೀ ಪ್ರದೇಶ ತೇವಗೊಂಡಿದ್ದು ಹಾಗೂ ಕೆಸರಿನಿಂದ ಕೂಡಿ, ದಟ್ಟ ಪೊದೆ ಬೆಳೆದಿರುವುದು ಮಂಗಳವಾರ ‘ಪ್ರಜಾವಾಣಿ’ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು.

ತೋಡಿನ ಬದಿಯಲ್ಲಿದ್ದ ಮನೆ ಹಾಗೂ ಅಂಗಡಿಗೆ ನೀರು ನುಗ್ಗಿದ್ದು, ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದರು ಎಂಬಂತೆ ಅತ್ತಾವರ ಕೆಎಂಸಿ ಆಸ್ಪತ್ರೆಯ ಪಕ್ಕದಲ್ಲಿ ಪಾಲಿಕೆ ಈ ಪ್ರದೇಶದ ಒಳಚರಂಡಿಗಳಿಗೆ ತೋಡಿನೊಂದಿಗೆ ಸಂಪರ್ಕ ಕಲ್ಪಿಸಲು ಕಾಮಗಾರಿ ಕೈಗೊಂಡಿದ್ದು ಕಂಡು ಬಂದಿತು.

ಮುಂಜಾನೆ ಪ್ರತಿಷ್ಠಿತ ಖಾಸಗಿ ಸಂಸ್ಥೆಯೊಂದು ಪಕ್ಕದಲ್ಲಿಯೇ ನಿರ್ಮಿಸುತ್ತಿರುವ ಶಾಲಾ ಸಮುಚ್ಛಯದಿಂದಾಗಿ ನೀರು ಹರಿಯಲು ತೊಂದರೆಯಾಗಿದೆ ಎಂದು ಸ್ಥಳೀಯರು ಪ್ರತಿಭಟಿಸಿದ್ದರು. ಮಳೆ ನೀರು ಹೊರಗೆ ಹೋಗಲು ಪರ್ಯಾಯ ವ್ಯವಸ್ಥೆ ಮಾಡಲು ತಾಕೀತು ಮಾಡಿದ್ದರು. ನಿವಾಸಿಗಳ ವಿರೋಧಕ್ಕೆ ಮಣಿದಿದ್ದ ಶಾಲೆಯ ಆಡಳಿತ ವರ್ಗ ನೀರು ಹರಿಯಲು ಅಗತ್ಯ ಕಾಮಗಾರಿ ಆರಂಭಿಸಿದ್ದು ಕಂಡುಬಂದಿತು. ಪ್ರತಿಭಟನೆ ವೇಳೆ ತಮ್ಮ ಸಮಸ್ಯೆಗೆ ದನಿಗೂಡಿಸಲು ಕಾರ್ಪೊರೇಟರ್ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಲೇ ನಿವಾಸಿಗಳು ಪತ್ರಿಕೆ ಎದುರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT