ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡಿಲ್ಲದೆ ಪರದಾಡಿದ ಲಕ್ಷ್ಮಣ ಗೌಡ

Last Updated 7 ಮೇ 2011, 7:10 IST
ಅಕ್ಷರ ಗಾತ್ರ

ಮಂಗಳೂರು: ಟೈಲರ್ ವೃತ್ತಿ ನಡೆ ಸುತ್ತಾ ಬದುಕಿನಲ್ಲಿ ಬೆಳಕು ಕಂಡು ಕೊಂಡಿದ್ದ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದ ಲಕ್ಷ್ಮಣ ಗೌಡ ಅವರ ಮನೆಯಲ್ಲಿ ಶುಕ್ರವಾರ ಶಾಶ್ವತ ಕತ್ತಲೆ ಆವರಿಸಿದೆ.

ಕೊಕ್ಕಡದ ಪ್ರಸಿದ್ಧ ಸೌತಡ್ಕ ದೇವಸ್ಥಾನದ ಕೂಗಳತೆ ದೂರದಲ್ಲಿರುವ ಲಕ್ಷ್ಮಣ ಗೌಡ ಅವರ ಮನೆ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಲಿಕತ್ವಕ್ಕೆ ಒಳಪಡುವ ತೋಟದ ಮಧ್ಯದಲ್ಲಿಯೇ ಇರುವುದು ಅವರಿಗೆ ಶಾಪವಾಗಿ ಪರಿಣಮಿಸಿತು. ಲಕ್ಷ್ಮಣಗೌಡ ಮೊದಲು ಚರ್ಮ ವ್ಯಾದಿಗೆ ತುತ್ತಾ ದರು. ವರ್ಷದ ಹಿಂದೆ ವೈದ್ಯರು ಅವರಿಗೆ ಯಕೃತ್ ಕ್ಯಾನ್ಸರ್ ಇದೆ ಎಂದಿದ್ದರು. ಅನಾರೋಗ್ಯದಿಂದಾಗಿ ಲಕ್ಷ್ಮಣ ಗೌಡ ಟೈಲರ್ ವೃತ್ತಿ ನಿಲ್ಲಿಸಿದ್ದರಿಂದ ಆದಾಯವೇ ಇಲ್ಲದೇ ಆರ್ಥಿಕ ಸಂಕಷ್ಟದಿಂದ ಜರ್ಝರಿತರಾಗಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಅವರು ನಿಧನರಾದಾಗ ಚಿಕಿತ್ಸೆ ವೆಚ್ಚ ರೂ. 32 ಸಾವಿರ ಪಾವತಿಸಲೂ ಸಾಧ್ಯವಿಲ್ಲದ ಅಸಹಾಯಕ ಪರಿಸ್ಥಿತಿಯಲ್ಲಿತ್ತು ಅವರ ಕುಟುಂಬ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪುತ್ತೂರಿನ ಎಂಡೋಸಲ್ಫಾನ್ ವಿರೋಧಿ ಹೋರಾಟಗಾರರ ವೇದಿಕೆ ಸದಸ್ಯರು ಹಾಗೂ ಕೊಕ್ಕಡದ ಸ್ನೇಹಿತರು ಆಸ್ಪತ್ರೆ ಬಿಲ್ ಪಾವತಿಸಿ ಮೃತದೇಹವನ್ನು ಪಡೆದು ಊರಿಗೆ ಕೊಂಡೊಯ್ಯುವ ವ್ಯವಸ್ಥೆ ಮಾಡಿದರು.

ಎಂಡೋಸಲ್ಫಾನ್ ಪೀಡಿತ ಪ್ರದೇಶದ ಕೇಂದ್ರ ಭಾಗದಲ್ಲಿಯೇ ಮನೆ ಇದ್ದು, ಗೇರು ತೋಟಗಳಲ್ಲಿ ಕೀಟ ನಿವಾರಣೆಗೆ ಈ ಹಿಂದೆ ಎಂಡೋಸಲ್ಫಾನ್ ದೊಡ್ಡ ಮಟ್ಟದಲ್ಲಿ ಸಿಂಪರಣೆ ನಡೆಯುತ್ತಿದ್ದು, ದಶಕದಿಂದಲೂ ಇಡೀ ಕುಟುಂಬದ ಸದಸ್ಯರು ಎಂಡೋಸಲ್ಫಾನ್ ಬಾಧೆಗೆ ಒಳಗಾಗಿದ್ದಾರೆ ಎನ್ನುವುದು ಪುತ್ತೂರಿನ ಎಂಡೋಸಲ್ಫಾನ್ ವಿರೋಧಿ ಹೋರಾಟಗಾರರ ವೇದಿಕೆಯ ಆರೋಪ.

ಪರಿಹಾರ ರೀತಿ ಸಲ್ಲ: ಎಂಡೋಸಲ್ಫಾನ್ ಬಾಧೆಗೆ ಒಳಗಾದವರನ್ನು ಸೂಕ್ತ ರೀತಿ ಗುರ್ತಿಸಿ ಪರಿಹಾರ ನೀಡು ವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ನೀಡುವ ಪರಿಹಾರದ ಮಾನದಂಡ ಬದಲಾಗಬೇಕು ಎಂದು ವೇದಿಕೆ ಮುಖಂಡ ಶ್ರೀಧರಗೌಡ ಆಗ್ರಹಿಸಿದ್ದಾರೆ.

ವೇದಿಕೆಯ ಹೋರಾಟ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರ ಕಾಳಜಿಯಿಂದಾಗಿ 2010ರ ಫೆ. 28ರಂದು ಸರ್ಕಾರ ಪರಿಹಾರ ನೀಡಲು ಮುಂದಾಗಿದ್ದು, ಆಗ 211 ಕುಟುಂಬಗಳ 231 ಮಂದಿ ಅಂಗವಿಕಲರಿಗೆ ಪರಿಹಾರ ದೊರೆತಿದೆ.

ಎಂಡೋಸಲ್ಫಾನ್‌ನಿಂದ ಅಂಗವೈಕಲ್ಯಕ್ಕೆ ಒಳಗಾದವರಿಗೆ ಮಾತ್ರ ಪರಿಹಾರ ನೀಡುತ್ತಿರುವುದು ಸಮಸ್ಯೆಗೆ ಕಾರಣ. ಕೊಕ್ಕಡವೊಂದರಲ್ಲಿಯೇ 18 ಮಂದಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಸರ್ಕಾರ ಅಂಗವಿಕಲರ ಜತೆ ಚರ್ಮವ್ಯಾಧಿಗೆ ಒಳಗಾದವರು, ಕ್ಯಾನ್ಸರ್ ಪೀಡಿತರು ಹಾಗೂ ಎಂಡೋಸಲ್ಫಾನ್ ಸಂಬಂಧಿ ಇನ್ನಿತರೆ ಕಾಯಿಲೆಗಳಿಗೆ ತುತ್ತಾಗಿರುವವರನ್ನು ಗುರ್ತಿಸಿ ಪರಿಹಾರ ನೀಡಲಿ. ಸರ್ಕಾರದ ಪರಿಹಾರ ನೀತಿ ಬದಲಾದಲ್ಲಿ ಹಾಗೂ ವೈದ್ಯಕೀಯ ನೆರವು ದೊರೆತಲ್ಲಿ ಇತರರಿಗೂ ಆಸ್ಪತ್ರೆ ಬಿಲ್ ಕಟ್ಟಲು ಪರದಾಡುವ ಪರಿಸ್ಥಿತಿ ಬರಲಾರದು ಎಂದು ಹೇಳುತ್ತಾರೆ.

ಆಯೋಗ ನಿರ್ಲಕ್ಷ್ಯ ಆರೋಪ: ಎಂಡೋಸಲ್ಫಾನ್ ಪೀಡಿತರು ಹಾಗೂ ಅದರಿಂದ ಸಾವನ್ನಪ್ಪಿದವರ ಪ್ರಕರಣ ಕಂಡುಬಂದಲ್ಲಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದಾಗಿ ಈ ಹಿಂದೆ ಹೇಳಿದ್ದ ರಾಜ್ಯ ಮಾನವ ಹಕ್ಕು ಆಯೋಗ ಈಗ ದಿವ್ಯ ನಿರ್ಲಕ್ಷ್ಯ ತಾಳಿದೆ. ಈವರೆಗೆ ಯಾವುದೇ ಸ್ವಯಂ ಪ್ರೇರಿತ ದೂರು ದಾಖಲಾಗಿಲ್ಲ ಹಾಗೂ ಮಾನವ ಹಕ್ಕು ಆಯೋಗದ ಅಧ್ಯಕ್ಷರೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ವೇದಿಕೆ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT