ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಇಚ್ಛಾಶಕ್ತಿ ಕೊರತೆ; ದುರಸ್ತಿ ಕಾಣದ ಭದ್ರಾ ನಾಲೆ

Published 15 ಜನವರಿ 2024, 6:16 IST
Last Updated 15 ಜನವರಿ 2024, 6:16 IST
ಅಕ್ಷರ ಗಾತ್ರ

ದಾವಣಗೆರೆ: ಗಿಡ, ಮುಳ್ಳಿನ ಕಂಟಿಗಳಿಂದ ತುಂಬಿರುವ ಕಾಲುವೆಗಳು, ಕಿತ್ತುಹೋಗಿರುವ ಕಾಂಕ್ರೀಟ್‌ ತಡೆಗೋಡೆಗಳು, ಒಡೆದ ಮೆಟ್ಟಿಲುಗಳು, ಕಂದಕಗಳು, ಶಿಥಿಲಗೊಂಡಿರುವ ಸೇತುವೆಗಳು...

ದಾವಣಗೆರೆ ಮತ್ತು ಮಲೇಬೆನ್ನೂರು ವಿಭಾಗದ ಭದ್ರಾ ಅಚ್ಚುಕಟ್ಟು ಪ್ರದೇಶದ ನಾಲೆಗಳ ದುಃಸ್ಥಿತಿ ಇದು. 2004-2005ನೇ ಸಾಲಿನಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಭದ್ರಾ ನಾಲೆಯ ಆಧುನೀಕರಣ ಕಾಮಗಾರಿ ನಡೆದಿತ್ತು. ನಂತರದಲ್ಲಿ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ಭದ್ರಾ ನಾಲೆ ಆಧುನೀಕರಣ ಕಾಮಗಾರಿ ಕೈಗೊಂಡಿಲ್ಲ. ಭದ್ರಾ ನಾಲೆಯ ತಡೆಗೋಡೆಗಳು ಮತ್ತು ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ನೀರು ಹರಿಸಿದಾಗ ವ್ಯರ್ಥವಾಗುವುದರಿಂದ ರೈತರು ನೀರಿನ ತೊಂದರೆ ಎದುರಿಸುವಂತಾಗಿದೆ.

‘ಜಿಲ್ಲೆಯಲ್ಲಿ ಭದ್ರಾ ಬಲದಂಡೆ ನಾಲೆಗಳು ಹಾಗೂ ಸೇತುವೆಗಳ ಸ್ಥಿತಿ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ತಿಳಿದಿದ್ದರೂ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿಲ್ಲ. ಕಾಲುವೆಗಳಲ್ಲಿ ಬೆಳೆದಿರುವ ಗಿಡ–ಗಂಟಿ ತೆರವುಗೊಳಿಸಿಲ್ಲ. ಹಲವೆಡೆ ನಾಲೆಗಳಲ್ಲಿ ಹೂಳು ತುಂಬಿರುವುದರಿಂದ ಮುಚ್ಚಿ ಹೋಗಿವೆ. ನೀರು ನಿಲ್ಲಿಸಿದ ಸಂದರ್ಭದಲ್ಲಿ ದುರಸ್ತಿ ಮಾಡಿಸುವ ಇಚ್ಛಾಶಕ್ತಿ ತೋರದ ಕಾರಣ ನೀರು ಬಿಡುವ ವೇಳೆ ನಿತ್ಯ ಹರಿಸುವ 2,650 ಕ್ಯುಸೆಕ್‌ನಲ್ಲಿ 1,000 ಕ್ಯುಸೆಕ್‌ನಷ್ಟಾದರೂ ನೀರು ಪೋಲಾಗುತ್ತಿದೆ’ ಎಂದು ಕೊಳೇನಹಳ್ಳಿ ಬಿ.ಎಂ.ಸತೀಶ್‌ ಬೇಸರ ವ್ಯಕ್ತಪಡಿಸಿದರು.

‘ದಾವಣಗೆರೆ ತಾಲ್ಲೂಕಿನ ಕುಕ್ಕವಾಡ, ಕೊಳೇನಹಳ್ಳಿ, ಕೈದಾಳೆ, ಬಾಡ, ಮಳಲಕೆರೆ, ರಾಮಗೊಂಡನಹಳ್ಳಿ ಗ್ರಾಮಗಳ ಬಳಿ ಭದ್ರಾ ಕಾಲುವೆಗೆ ನಿರ್ಮಿಸಿರುವ ಸೇತುವೆಗಳು ಸಂಪೂರ್ಣ ಹಾಳಾಗಿವೆ. ಸಂತೇಬೆನ್ನೂರು ಸಮೀಪದ ಬೆಳ್ಳಿಗನೂಡು, ಹಿರೇಕೋಗಲೂರು ಬಳಿ ನಿರ್ಮಿಸಿರುವ ಸೂಪರ್‌ ಪ್ಯಾಸೇಜ್‌ (ಬೃಹತ್‌ ಸೇತುವೆ) ದುರಸ್ತಿಯಲ್ಲಿ ಇರುವುದರಿಂದ ನೀರು ಪೋಲಾಗುತ್ತಿದೆ. ಈ ನೀರು ಸಮೀಪದ ಕೆರೆಗೆ ಹರಿದು ಕೋಡಿ ಬೀಳುತ್ತದೆ. ಇದರಿಂದ ನಾಲೆಯ ಕೊನೆ ಭಾಗದ ಗ್ರಾಮಗಳಾದ ಹೂವಿನಮಡು, ಮತ್ತಿ, ಗೋಣಿವಾಡ, ಹೊನ್ನಮರಡಿ, ಕುಕ್ಕವಾಡ, ನಾಗರಸನಹಳ್ಳಿ ಮುಂತಾದ ಗ್ರಾಮದ ಭತ್ತದ ಗದ್ದೆಗಳಿಗೆ ನೀರಿನ ಕೊರತೆ ಉಂಟಾಗುತ್ತಿದೆ. ರೈತರ ಕೂಗಿಗೆ ಜಿಲ್ಲಾ ಆಡಳಿತ ಸ್ಪಂದಿಸುತ್ತಿಲ್ಲ. ಅಮೂಲ್ಯವಾದ ನೀರನ್ನು ನಿರ್ವಹಿಸುವ ಇಚ್ಛಾಶಕ್ತಿ ತೋರುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಭದ್ರಾ ನಾಲೆಗಳು ಹಾಗೂ ಸೇತುವೆಗಳ ದುರಸ್ತಿ ಕೈಗೊಳ್ಳುವ ಮೂಲಕ ನೀರಿಗಾಗಿ ಗೋಗೆರೆಯುವ ರೈತರ ಸಂಕಷ್ಟಕ್ಕೆ ಧಾವಿಸಬೇಕು’ ಎಂದು ಆಗ್ರಹಿಸಿದರು.

ಜಾಣಕುರುಡು ಪ್ರದರ್ಶಿಸುತ್ತಿರುವ ಅಧಿಕಾರಿಗಳು

ಎಚ್.ವಿ. ನಟರಾಜ್

ಚನ್ನಗಿರಿ: ತಾಲ್ಲೂಕಿನ ಕಸಬಾ, ಬಸವಾಪಟ್ಟಣ ಹಾಗೂ ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಭದ್ರಾ ನಾಲೆ ಹಾದು ಹೋಗಿದೆ. 16 ವರ್ಷಗಳಿಂದ ನಾಲೆಗಳು ದುರಸ್ತಿ ಭಾಗ್ಯ ಕಂಡಿಲ್ಲ.

ತಾಲ್ಲೂಕಿನ ಭದ್ರಾ– 2ರ ಉಪ ನಾಲೆಗೆ ನಿರ್ಮಿಸಿರುವ ಹತ್ತಾರು ಸೇತುವೆಗಳು ಶಿಥಿಲಗೊಂಡು ಬೀಳುವ ಹಂತ ತಲುಪಿವೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಇದುವರೆಗೂ ಯಾವೊಬ್ಬ ಜನಪ್ರತಿನಿಧಿಗಳೂ ನಾಲೆಗಳನ್ನು ದುರಸ್ತಿ ಮಾಡಿಸಲು ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ವಿಫಲವಾಗಿದ್ದಾರೆ ಎಂದು ಚಿಕ್ಕಕೋಗಲೂರು ಗ್ರಾಮದ ರೈತ ಬಿ. ಉಮೇಶ್ ಕುಮಾರ್ ತಿಳಿಸಿದರು. ತಾಲ್ಲೂಕಿನ ಹಿರೇಮಳಲಿ ಗ್ರಾಮದ ಬಳಿ ನಾಲೆಯ ಎರಡೂ ಬದಿಗಳಲ್ಲಿ ಯಥೇಚ್ಛ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದು ನಿಂತು ನಾಲೆಯೇ ಕಾಣದಂತಾಗಿದೆ. ನಾಲೆಯುದ್ದಕ್ಕೂ ಒಮ್ಮೆ ಕಣ್ಣು ಹಾಯಿಸಿದರೆ ಕಾಡಿನ ರೂಪದಲ್ಲಿ ಗಿಡಗಂಟಿಗಳು ಬೆಳೆದು ನಿಂತಿರುವುದನ್ನು ಕಾಣಬಹುದಾಗಿದೆ. ಈ ಗಿಡ–ಗಂಟಿಗಳ ಬೇರುಗಳು ನಾಲೆಯ ತಡೆಗೋಡೆಯೊಳಗೆ ಇಳಿದು ತಡೆಗೋಡೆಗಳು ಬಿರುಕು ಬಿಡಲು ಪ್ರಾರಂಭಿಸಿವೆ. ಆದರೆ ನೀರಾವರಿ ಇಲಾಖೆಯ ಅಧಿಕಾರಿಗಳು ‘ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎನ್ನುವಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ತಕ್ತಪಡಿಸಿದರು.

ಜಾಲಿ ಪೊದೆಗಳಲ್ಲಿ ಅವಿತ ಭದ್ರಾ ನಾಲೆ

ಕೆ.ಎಸ್‌.ವೀರೇಶ್‌ ಪ್ರಸಾದ್‌/ ಎನ್‌.ವಿ.ರಮೇಶ್‌

ಸಂತೇಬೆನ್ನೂರು: ರೈತರ ಜೀವನಾಡಿಯಾಗಿರುವ ಭದ್ರಾ ನಾಲೆಗಳು ನಿರ್ವಹಣೆ ಇಲ್ಲದೆ ಕಮರಿವೆ. ದಶಕದ ಹಿಂದೆ ಭದ್ರಾ ನಾಲೆ ದಡದ ಒಳ ಮಗ್ಗುಲಿಗೆ ಸಿಮೆಂಟ್ ಲೈನಿಂಗ್, ತಳಭಾಗದಲ್ಲಿ ಸಿಮೆಂಟ್ ಬೆಡ್ ನಿರ್ಮಿಸಿ ನೀರು ಪೋಲಾಗದಂತೆ ತಡೆಯಲಾಗಿತ್ತು. ಕ್ರಮೇಣ ಲೈನಿಂಗ್ ಸಿಮೆಂಟ್ ಬಿರುಕು ಬಿಟ್ಟು ಕುಸಿದಿದೆ. ಅಲ್ಲಲ್ಲಿ ದಡದಲ್ಲಿ ದೊಡ್ಡ ಕಮರಿಗಳು ಕಾಣಿಸುತ್ತಿವೆ. ಕುಸಿದ ಮಣ್ಣು ಹೂಳಿನ ರೂಪದಲ್ಲಿ ದಡ ಸೇರಿದೆ. ಕಾಶೀಪುರ ಭಾಗದಲ್ಲಿ ಮೂರು ಮೀಟರ್ ವ್ಯಾಪ್ತಿಯಲ್ಲಿಯೇ 5ರಿಂದ 6 ಕಡೆ ದಡ ಕುಸಿದಿದೆ ಎಂದು ಹಾಲೇಶ್ ನಾಯ್ಕ ತಿಳಿಸಿದರು.

ನಾಲೆಯ ಎರಡೂ ದಡಗಳಲ್ಲಿ ದೈತ್ಯ ಜಾಲಿ ಗಿಡಗಳು ಬೆಳೆದು, ಸರ್ವೀಸ್ ರಸ್ತೆಗೆ ಚಾಚಿವೆ. ನಾಲೆಯ ಮೇಲ್ಭಾಗಕ್ಕೂ ಚಾಚಿಕೊಂಡಿವೆ. ಸೂಪರ್ ಪ್ಯಾಸೇಜ್‌ಗಳ ನಿರ್ವಹಣೆ ಸಮರ್ಪಕವಾಗಿಲ್ಲ. ತೋಪೇನಹಳ್ಳಿ-ಯಕ್ಕೆಗೊಂದಿ ನಡುವಿನ ಸೇತುವೆ ಬಿರುಕು ಬಿಟ್ಟಿದೆ ಎಂದು ಯಕ್ಕೆಗೊಂದಿ ಗಣೇಶ್ ಮಾಹಿತಿ ನೀಡಿದರು.

ಬಸವಾಪಟ್ಟಣ ಹೋಬಳಿಯಲ್ಲಿ 400 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತಿದೆ. ತೋಟದ ಬೆಳೆಗಳಿಗೂ ಭದ್ರಾ ಕಾಲುವೆಯಿಂದ ನೀರನ್ನು ಹಾಯಿಸಲಾಗುತ್ತಿದೆ. ನಾಲೆಗಳ ದುರಸ್ತಿ ಮಾಡದ್ದರಿಂದ ಸೋರಿಕೆ ಹೆಚ್ಚಿ ನೀರು ಸಾಕಾಗುತ್ತಿಲ್ಲ. ಮರಬನಹಳ್ಳಿ ಸಮೀಪದಲ್ಲಿ ಉಪಕಾಲುವೆಗಳು ಕಾಣದಂತೆ ಗಿಡ–ಗಂಟಿಗಳು ಬೆಳೆದಿವೆ ಎಂದು ಗ್ರಾಮದ ರೈತರಾದ ಜಿ.ಎಂ.ಚನ್ನಬಸಪ್ಪ, ರುದ್ರಪ್ಪ, ನಾಗರಾಜ್‌ ದೂರಿದರು. ಭದ್ರಾ ಮುಖ್ಯನಾಲೆಯ ಒಳಭಾಗದಲ್ಲಿ ಬೆಳೆದಿರುವ ಗಿಡ– ಪೊದೆಗಳಿಂದ ನಾಲೆ ಸಡಿಲಗೊಳ್ಳುತ್ತಿದೆ. ಇದರಿಂದ ನೀರು ನಾಲೆಯ ಬದಲಾಗಿ ಅಕ್ಕಪಕ್ಕದಲ್ಲಿ ಹರಿಯುವುದರಿಂದ ಜಮೀನುಗಳಿಗೆ ಅಗತ್ಯವಾದ ನೀರು ದೊರೆಯುತ್ತಿಲ್ಲ. ಅಲ್ಲದೇ ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಿರುವ ನಾಲೆಯ ಮೆಟ್ಟಿಲುಗಳು ಸಹ ಹಾಳಾಗಿದ್ದು, ಕೂಡಲೇ ದುರಸ್ತಿಗೆ ಮುಂದಾಗಬೇಕು ಎಂದು ಸಾಗರಪೇಟೆ ಮತ್ತು ಹರೋಸಾಗರದ ರೈತರಾದ ರುದ್ರೇಶ್‌, ಹಾಲೇಶ್‌, ವೀರಪ್ಪ, ಬಸವರಾಜಪ್ಪ ಒತ್ತಾಯಿಸಿದ್ದಾರೆ.

ಭದ್ರಾ ಮುಖ್ಯನಾಲೆ ಆಧುನೀಕರಣಗೊಳ್ಳಲಿ

ಎಂ.ನಟರಾಜನ್‌

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ಭದ್ರಾ ಮುಖ್ಯನಾಲೆ ಹಾಳಾಗಿದ್ದು ಇನ್ನೊಂದು ಸುತ್ತಿನ ಆಧುನೀಕರಣಕ್ಕೆ ಕಾದಿದೆ. ಮಲೇಬೆನ್ನೂರು ವಿಭಾಗದ ಮುಖ್ಯನಾಲೆ, 18ಕ್ಕೂ ಹೆಚ್ಚು ಉಪನಾಲೆ, ಕಾಲುವೆ, ಡ್ರಾಪ್‌, ಪೈಪ್‌ ಔಟ್ಲೆಟ್‌, ಹೊಲಗಾಲುವೆ ಬಹುತೇಕ ಭಾಗದಲ್ಲಿ ಹಾಳಾಗಿವೆ.

ಈಗಾಗಲೇ ನಾಲೆ ಮೂರ್ನಾಲ್ಕು ಬಾರಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆಧುನೀಕರಣಗೊಂಡಿದ್ದರೂ ಕಾಂಕ್ರೀಟ್‌ ಲೈನಿಂಗ್‌ ಕಾಮಗಾರಿ ಕಳಪೆಯಾಗಿದೆ ಎಂದು ರೈತರು ದೂರಿದ್ದಾರೆ. ನಾಲೆಗಳು ಹಾಳಾಗಲು ಮುಖ್ಯ ಕಾರಣ ಪಾಲನೆ ಅನುಪಾಲನೆ ಇಲ್ಲದಿರುವುದು. ಎಲ್ಲ ಕೆಲಸ ಹೊರಗುತ್ತಿಗೆ ನೌಕರರೇ ನಿರ್ವಹಿಸುತ್ತಿರುವುದು. ಇನ್ನೊಂದೆಡೆ ನಾಲೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಹೋರಾಟ ನಡೆಸಿ ನೀರು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಬೆಳೆ ಪರಿವರ್ತನೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಭದ್ರಾ ಜಲಾಶಯ ನೀರು ಬಳಕೆದಾರರ ಸಂಘದ ಅಧ್ಯಕ್ಷ ವೈ.ದ್ಯಾವಪ್ಪ ರೆಡ್ಡಿ ತಿಳಿಸಿದರು. ನೀರಾವರಿ ನಿಗಮದಿಂದ ಕಾಮಗಾರಿಗೆ ಅನುದಾನ ಮಂಜೂರಾಗಿಲ್ಲ. ಎಂಜಿನಿಯರ್‌ಗಳು, ವರ್ಕ್‌ ಇನ್‌ಸ್ಪೆಕ್ಟರ್‌ರಗಳು ಇನ್ನಿತರ ಸಿಬ್ಬಂದಿ ಕೊರತೆ ಇದೆ.

ಪಿಕಪ್‌ ಡ್ಯಾಮ್‌ಗೆ ಜಲಸಸ್ಯ ಸಮಸ್ಯೆ: ಭದ್ರಾ ಬಸಿ ನೀರನ್ನು ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ನಿರ್ಮಿಸಿದ ಸಮೀಪದ ದೇವರಬೆಳಕೆರೆ ಪಿಕಪ್‌ ಜಲಾಶಯಕ್ಕೆ ಅಳವಡಿಸಿರುವ ಕ್ರೆಸ್ಟ್‌ ಗೇಟ್‌ಗಳಿಗೆ ಜಲಸಸ್ಯ ಅಡ್ಡಲಾಗಿ ನಿಂತು ಸಮಸ್ಯೆ ಸೃಷ್ಟಿಸಿದೆ.

ಬಿರುಕು ಮೂಡಿದ್ದ ಪಿಕಪ್‌ ಜಲಾಶಯವನ್ನು ಡ್ರಿಪ್‌ ಯೋಜನೆ ಅಡಿ ದುರಸ್ತಿ ಮಾಡಲಾಗಿದೆ. ಡಿ.ಸಿ, ಎ.ಸಿ, ಮುಖ್ಯ, ಅಧೀಕ್ಷಕ, ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸಮಸ್ಯೆ ತಿಳಿದಿದೆ. ಗೇಟ್‌ ತೆರವು ಮಾಡಲು ಅನುದಾನವೂ ಮಂಜೂರಾಗಿದೆ. ಆದರೆ ಕಾರ್ಯಗತವಾಗಿಲ್ಲ. ನೀರು ಸರಾಗವಾಗಿ ಹರಿಯದ ಕಾರಣ ಸಂಕ್ಲೀಪುರ, ಗುಳದಹಳ್ಳಿ, ಮುದಹದಡಿ ಭಾಗದ ಭತ್ತದ ಗದ್ದೆ, ತೋಟಗಳು, ರಸ್ತೆಗಳು ಜಲಾವೃತವಾಗುತ್ತಿವೆ ಎಂದು ರೈತ ಮುಖಂಡ ನಾಗೇಂದ್ರಪ್ಪ ತಿಳಿಸಿದ್ದಾರೆ.

ಬೇಸಿಗೆ ಕಾಲದಲ್ಲಿ ದುರಸ್ತಿ ಕೈಗೊಳ್ಳಲು ಎಂಜಿನಿಯರ್‌ಗಳು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕೊನೆಯಭಾಗದವರಿಗೂ ನೀರು ಒದಗಿಸಿ

ನಾಗೇಂದ್ರಪ್ಪ ವಿ.

ಕಡರನಾಯ್ಕನಹಳ್ಳಿ: ಈ ಭಾಗದ ರೈತರಿಗೆ ಭದ್ರಾ ಕಾಲುವೆಗಳೇ ಜೀವನಾಧಾರವಾಗಿವೆ. ಆದರೆ, ಕಾಲುವೆಯಲ್ಲಿ ನೀರು ಸಮರ್ಪಕವಾಗಿ ಸರಬರಾಜು ಆಗದೆ ಹಿಂಗಾರಿನಲ್ಲಿ ಭತ್ತದ ಫಸಲು ನೂರಾರು ಎಕರೆಯಷ್ಟು ಪ್ರದೇಶದಲ್ಲಿ ಒಣಗಿದೆ. ಮೆಕ್ಕೆಜೋಳ ಫಸಲಿಗೆ ನೀರಿಲ್ಲದೆ ರೈತರು ಬೆಳೆ ನೆಲಸಮ ಮಾಡಿದರು. ಆದರೂ ಭದ್ರಾ ಮುಖ್ಯ ಕಾಲುವೆ ಮತ್ತು ಉಪಕಾಲುವೆಗಳ ದುರಸ್ತಿಗೆ ಸಂಬಂಧಿಸಿದವರು ಮನಸು ಮಾಡುತ್ತಿಲ್ಲ.

ಮುಖ್ಯಕಾಲುವೆಯಲ್ಲಿ 11 ಮತ್ತು 12ನೇ ಉಪ ಕಾಲುವೆಯ ಬಳಿ ಸುಮಾರು 3 ಅಡಿ ಎತ್ತರದ ಸಿಮೆಂಟ್ ಒಡ್ಡು ನಿರ್ಮಿಸಲಾಗಿದೆ. ಇದರಿಂದ ಮುಖ್ಯಕಾಲುವೆಯಲ್ಲಿ ಪೂರೈಕೆಯಾದ ನೀರು ಅರ್ಧದಷ್ಟು ಅಲ್ಲಿಯೇ ಉಳಿಯುತ್ತದೆ. ಉಳಿದ 13, 14, 15, 16, 17ನೇ ಉಪಕಾಲುವೆಗಳಿಗೆ ನೀರು ತಲುಪದೆ ರೈತರು ಬೆಳೆ ಬೆಳೆಯುವುದೇ ಕಷ್ಟವಾಗಿದೆ. 13, 14, 15, 16, 17ನೇ ಉಪಕಾಲುವೆಯಲ್ಲಿ ಹತ್ತು ಅಡಿಗಳಷ್ಟು ಎತ್ತರ ಗಿಡ ಗಂಟಿಗಳು ಬೆಳೆದು ನಿಂತಿವೆ. 16ನೇ ಉಪಕಾಲುವೆಯಲ್ಲಿ ಗಿಡ– ಗಂಟಿಗಳ ಜೊತೆಗೆ ಹೂಳು ತುಂಬಿದ್ದು, ಅದರ ಮೇಲೆ ಹುಲ್ಲು ಬೆಳೆದಿದೆ. ಯಲವಟ್ಟಿ, ಕಡರನಾಯ್ಕನಹಳ್ಳಿ, ಪಾಳ್ಯ, ಸಿರಿಗೆರೆ, ಯಳೆಹೊಳೆ, ಕಮಲಾಪುರ, ಲಕ್ಕಶೆಟ್ಟಿಹಳ್ಳಿ, ಭಾನುವಳ್ಳಿ, ಹೊಸಳ್ಳಿ, ದೂಳೆಹೊಳೆ, ಬಿಳಸನೂರು, ವಾಸನ, ಹಿಂಡಸಘಟ್ಟ, ಕೊಕ್ಕನೂರು, ಹಳ್ಳಿಹಾಳ್, ಕಂಬತ್ತನಹಳ್ಳಿ ಮುಂತಾದ ಗ್ರಾಮಗಳು ಈ ಕಾಲುವೆಗಳಿಗೆ ಅವಲಂಬಿತವಾಗಿದ್ದು, ಸಂಕಷ್ಟ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಭಾಗದ ಕಾಲುವೆಗಳ ಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಬೆಳೆಗಳಿಗೆ ಸಮರ್ಪಕವಾಗಿ ನೀರು ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಿರಿಗೆರೆ ಗ್ರಾಮ ಪಂಚಾಯಿತಿ ಸದಸ್ಯ ಹೊಸಳ್ಳಿ ನಾಗಪ್ಪ, ಕುಂದೂರು ಮಂಜಪ್ಪ, ರೈತ ಸಂಘದ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷ  ಎಚ್‌.ಬಿ.ಕೊಟ್ರೇಶ್ ಮುಂತಾದವರು ಮನವಿ ಮಾಡಿದ್ದಾರೆ.

ಡಿ.ಬಿ.ಕಾಲುವೆ: ಅವಾಂತರಗಳೇ ಹೆಚ್ಚು

ಇನಾಯತ್‌ ಉಲ್ಲಾ ಟಿ.

ಹರಿಹರ: ತಾಲ್ಲೂಕಿನ ಬನ್ನಿಕೋಡು, ಕೆ.ಬೇವಿನಹಳ್ಳಿ, ಶೇರಾಪುರ, ಮಹಜೇನಹಳ್ಳಿ, ಅಮರಾವತಿ ಸುತ್ತಲಿನ 13,000 ಹೆಕ್ಟೇರ್‌ ಪ್ರದೇಶದ ಮಳೆಯಾಶ್ರಿತ ಜಮೀನುಗಳಿಗೆ ನೀರುಣಿಸಲು ದೇವರಬೆಳೆಕೆರೆ ಪಿಕ್‌ಅಪ್‌ ಜಲಾಶಯದಿಂದ ಕಾಲುವೆ ನಿರ್ಮಿಸಿದ್ದು, ನಿರ್ವಹಣೆ ಇಲ್ಲದಂತಾಗಿದೆ. ಜಮೀನುಗಳಿಗೆ ನೀರಂತೂ ಸಿಗಲಿಲ್ಲ. ಆದರೆ, ಈ ಕಾಲುವೆ ಮಳೆಗಾಲದಲ್ಲಿ ನಗರದಲ್ಲಿ ಸೃಷ್ಟಿಸುವ ಅವಾಂತರ ಹೇಳತೀರದು. ಹೂಳು ತುಂಬಿರುವ ಕಾಲುವೆಗೆ ಮಳೆ ನೀರು ಸೇರಿ ಆ ನೀರು ಕಾಳಿದಾಸ ನಗರ, ಬೆಂಕಿ ನಗರ ಬಡಾವಣೆಗಳ ಮನೆಗಳಿಗೆ ನುಗ್ಗುತ್ತದೆ. ಕಾಲುವೆ ಪಕ್ಕದ ರಸ್ತೆ ಜಲಾವೃತವಾಗಿ ಈ ಭಾಗದ ಜನಜೀವನಕ್ಕೆ ಅಡ್ಡಿ ಉಂಟುಮಾಡುತ್ತದೆ. ಉಳಿದ ದಿನಗಳಲ್ಲಿ ದುರ್ವಾಸನೆ ಬೀರುತ್ತದೆ. ಈ ಕಾಲುವೆ ಸುಸ್ಥಿತಿಗೆ ಬಂದರೆ ರೈತರ ಜಮೀನುಗಳಿಗೆ ನೀರು ಹರಿಯುವುದರ ಜೊತೆಗೆ ನಗರದಲ್ಲಿ ಪ್ರವಾಹ ಉಂಟಾಗುವುದು ತಪ್ಪುತ್ತದೆ ಎಂದು ರೈತ ಮುಖಂಡ ಚಂದ್ರಪ್ಪ ಕುರುವತ್ತಿ ತಿಳಿಸಿದರು. ಅನುದಾನವಿಲ್ಲದ ಕಾರಣ ಜಂಗಲ್ ತೆರವು, ಸೈಡ್ ವಾಲ್ ದುರಸ್ತಿ ಸಾಧ್ಯವಾಗಿಲ್ಲ ಎಂದು ಜಲಸಂಪನ್ಮೂಲ ಇಲಾಖೆ ಎಇಇ ಧನಂಜಯ್ ಪಿ. ಹೇಳಿದರು.

ಕಿತ್ತು ಬಂದಿರುವ ಸೇತುವೆ ಗೋಡೆ ಕಲ್ಲು

ಮಂಜುನಾಥ್‌ ಎಸ್‌.ಎಂ.

ಮಾಯಕೊಂಡ: ಸಮೀಪದ ಅಣಬೇರು, ಶಂಕರನಹಳ್ಳಿ, ಬಾಡ, ರಾಮಗೊಂಡನಹಳ್ಳಿ, ಕಬ್ಬೂರು, ತೊಗಲೇರಿ, ಕುರ್ಕಿ ಗ್ರಾಮಗಳಲ್ಲಿ ಭದ್ರಾ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳ ಸ್ಥಿತಿ ಹೇಳತೀರದಾಗಿದೆ.

ಕೆಲವು ಸೇತುವೆ ಗೋಡೆಗಳ ಸೈಜು ಕಲ್ಲುಗಳು ಕಿತ್ತು ಬಂದಿವೆ. ಕಾಲುವೆಗಳ ಗೋಡೆಗಳ ಕಾಂಕ್ರೀಟ್ ಕಿತ್ತು ಮಣ್ಣು ಕೊರೆಯುವ ಹಂತಕ್ಕೆ ತಲುಪಿವೆ. ಕಾಲುವೆಯ ಎರಡೂ ಬದಿಗಳಲ್ಲಿ ದೊಡ್ಡ ದೊಡ್ಡ ಮರಗಳು ತಲೆ ಎತ್ತಿ ನಿಂತಿದ್ದು, ಕಾಲುವೆ ಹಾಳಾಗಲು ಇದು ಒಂದು ಪ್ರಮುಖ ಕಾರಣವಾಗಿದೆ. ಕಾಲುವೆಗಳಲ್ಲಿ ಹೂಳು ತುಂಬಿದ್ದು ಇಲ್ಲಿಯವರೆಗೂ ತೆಗೆಯುವ ಕೆಲಸ ಆಗಿಲ್ಲ.

ಕಾಲುವೆಯಲ್ಲಿ ನೀರು ಹರಿಸಿದಾಗ ಮತ್ತು ಮಳೆ ಬಂದಾಗ ತಗ್ಗಿನ ಗದ್ದೆಗಳಿಗೆ ನೀರು ನುಗ್ಗಿ ನಾಟಿ ಮಾಡಿದ ಭತ್ತದ ಸಸಿಗಳು ಕೊಚ್ಚಿ ಹೋದ ಉದಾಹರಣೆಗಳಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶೀಘ್ರವೇ ಭದ್ರಾ ಕಾಲುವೆಯಲ್ಲಿ ಬೆಳೆದಿರುವ ಗಿಡ–ಗಂಟಿ ತೆರವುಗೊಳಿಸಿ, ಕಿತ್ತು ಹೋಗಿರುವ ಕಾಂಕ್ರೀಟ್ ಹಾಕಿದಲ್ಲಿ ಮಾತ್ರ ನೀರು ವ್ಯರ್ಥವಾಗದೆ ರೈತರ ಗದ್ದೆಗಳಿಗೆ ತಲುಪುತ್ತದೆ‌ ಎಂದು ಅಣಬೇರು ಗ್ರಾಮ ಪಂಚಾಯಿತಿ ಸದಸ್ಯ ಅನಿಲ್‌ಕುಮಾರ್, ರಾಮಗೊಂಡನಹಳ್ಳಿ ಯುವ ರೈತ ಅವಿನಾಶ್ ತಿಳಿಸಿದ್ದಾರೆ.

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿರುವ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಶಿಥಿಲಗೊಂಡ ಕಾಲುವೆ ಸೇತುವೆಗಳನ್ನು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದ್ದೇನೆ. ಇವುಗಳ ದುರಸ್ತಿ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಮನವಿ ಮಾಡುತ್ತೇನೆ.
ಕೆ.ಎಸ್. ಬಸವಂತಪ್ಪ ಶಾಸಕ
ಭದ್ರಾ ಅಚ್ಚುಕಟ್ಟು ಪ್ರದೇಶದ ನಾಲೆಗಳು ಮತ್ತು ಸೇತುವೆಗಳ ದುರಸ್ತಿಗೆ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನೀರಿನ ಸದ್ಬಳಕೆಗೆ ಯೋಜನೆ ರೂಪಿಸುವ ತುರ್ತು ಇದೆ. ಕೊಳೇನಹಳ್ಳಿ.
ಬಿ.ಎಂ.ಸತೀಶ್‌. ಎಪಿಎಂಸಿ ಮಾಜಿ ಅಧ್ಯಕ್ಷ
ಜಲಸಂಪನ್ಮೂಲ ಇಲಾಖೆ ಅನುದಾನದೊಂದಿಗೆ ಹಾಗೂ ಮನರೇಗಾ ಅಡಿ ಭದ್ರಾ ಕಾಲುವೆಗಳ ದುರಸ್ತಿ ಕೈಗೊಳ್ಳುವಂತೆ ಎಂಜಿನಿಯರ್‌ಗಳಿಗೆ ಐಸಿಸಿ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಈ ಕುರಿತು ಪರಾಮರ್ಶೆ ನಡೆಯಲಿದೆ.
ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ, ದಾವಣಗೆರೆ
ಸಂತೇಬೆನ್ನೂರು ಸಮೀಪದ ಹಿರೇಕೋಗಲೂರು ಗೋಮಾಳ ರಸ್ತೆ ಬಳಿ ಭದ್ರಾ ನಾಲೆ ಸೂಪ್‌ ಪ್ಯಾಸೇಜ್‌ ದುರಸ್ತಿಯಲ್ಲಿರುವ ಕಾರಣ ನೀರು ಹರಿಸಿದಾಗ ಪೋಲಾಗುವ ನೀರು ಸಮೀಪದ ಕೆರೆಗೆ ಹರಿಯುವ ದೃಶ್ಯ
ಸಂತೇಬೆನ್ನೂರು ಸಮೀಪದ ಹಿರೇಕೋಗಲೂರು ಗೋಮಾಳ ರಸ್ತೆ ಬಳಿ ಭದ್ರಾ ನಾಲೆ ಸೂಪ್‌ ಪ್ಯಾಸೇಜ್‌ ದುರಸ್ತಿಯಲ್ಲಿರುವ ಕಾರಣ ನೀರು ಹರಿಸಿದಾಗ ಪೋಲಾಗುವ ನೀರು ಸಮೀಪದ ಕೆರೆಗೆ ಹರಿಯುವ ದೃಶ್ಯ
ಮಲೇಬೆನ್ನೂರು ಸಮೀಪದ ದೇವರಬೆಳಕೆರೆ ಜಲಾಶಯದ ಗೇಟಿಗೆ ಅಡ್ಡಲಾಗಿ ನಿಲ್ಲುವ ಜಲ ಸಸ್ಯ
ಮಲೇಬೆನ್ನೂರು ಸಮೀಪದ ದೇವರಬೆಳಕೆರೆ ಜಲಾಶಯದ ಗೇಟಿಗೆ ಅಡ್ಡಲಾಗಿ ನಿಲ್ಲುವ ಜಲ ಸಸ್ಯ
ಬಸವಾಪಟ್ಟಣ ಸಮೀಪದ ಮರಬನಹಳ್ಳಿ ಬಳಿಯ ಭದ್ರಾನಾಲೆಯ ಎರಡೂ ಬದಿಯಲ್ಲಿ ಬೆಳೆದಿರುವ ಗಿಡ ಮತ್ತು ಪೊದೆಗಳು
ಬಸವಾಪಟ್ಟಣ ಸಮೀಪದ ಮರಬನಹಳ್ಳಿ ಬಳಿಯ ಭದ್ರಾನಾಲೆಯ ಎರಡೂ ಬದಿಯಲ್ಲಿ ಬೆಳೆದಿರುವ ಗಿಡ ಮತ್ತು ಪೊದೆಗಳು
ಕಡರನಾಯ್ಕನಹಳ್ಳಿ ಸಮೀಪದ 14ನೇ ಉಪಕಾಲುವೆಯಲ್ಲಿ ಬೆಳೆದು ನಿಂತ ಗಿಡಗಂಟಿಗಳು
ಕಡರನಾಯ್ಕನಹಳ್ಳಿ ಸಮೀಪದ 14ನೇ ಉಪಕಾಲುವೆಯಲ್ಲಿ ಬೆಳೆದು ನಿಂತ ಗಿಡಗಂಟಿಗಳು
ಹರಿಹರ ನಗರದ ಕಾಳಿದಾಸನಗರ ಪಕ್ಕದಲ್ಲಿ ದಶಕಗಳಿಂದ ಹೂಳು ತುಂಬಿ ನಿರುಪಯುಕ್ತವಾಗಿರುವ ದೇವರಬೆಳೆಕೆರೆ ಕಾಲುವೆ
ಹರಿಹರ ನಗರದ ಕಾಳಿದಾಸನಗರ ಪಕ್ಕದಲ್ಲಿ ದಶಕಗಳಿಂದ ಹೂಳು ತುಂಬಿ ನಿರುಪಯುಕ್ತವಾಗಿರುವ ದೇವರಬೆಳೆಕೆರೆ ಕಾಲುವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT