ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ | ಹೆಚ್ಚದ ತೆಂಗಿನ ದರ; ರೈತರಿಗೆ ದಕ್ಕದ ಲಾಭ

ಯುಗಾದಿ, ಹಬ್ಬ, ಜಾತ್ರೆ ವೇಳೆಯೂ ಸೂಕ್ತ ಬೆಲೆ ದೊರೆಯಲಿಲ್ಲ
ಎನ್‌.ವಿ. ರಮೇಶ್
Published 30 ಏಪ್ರಿಲ್ 2024, 6:10 IST
Last Updated 30 ಏಪ್ರಿಲ್ 2024, 6:10 IST
ಅಕ್ಷರ ಗಾತ್ರ

ಬಸವಾಪಟ್ಟಣ: ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವಾಗ, ನಿತ್ಯ ಬಳಕೆಯ ತೆಂಗಿನಕಾಯಿಯ ದರ ಮಾತ್ರ ಇದ್ದಲ್ಲಿಯೇ ಇದ್ದು, ತೆಂಗು ಬೆಳೆಗಾರರನ್ನು ಕಂಗೆಡಿಸಿದೆ.

‘ಇಂತಹ ಸುಡು ಬೇಸಿಗೆಯಲ್ಲಿಯೂ ಗಾತ್ರದ ಆಧಾರದಲ್ಲಿ ತೆಂಗಿನಕಾಯಿಯ ದರ ₹ 10ರಿಂದ ₹ 20ರವರೆಗೆ ಇದೆ. ಸಾಮಾನ್ಯವಾಗಿ ಸಾಲು ಹಬ್ಬಗಳ ಮಾಸಗಳಾದ ಶ್ರಾವಣದಿಂದ ಮಾರ್ಗಶಿರದವರೆಗೆ ತೆಂಗಿನಕಾಯಿಯ ಬಳಕೆ ಹೆಚ್ಚಾಗಿ,  ದರವೂ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ದರ ಮಾತ್ರ ಇದ್ದಷ್ಟೇ ಇತ್ತು. ಶಿವರಾತ್ರಿ, ಯುಗಾದಿ ಹಬ್ಬಕ್ಕೂ ಇದೇ ಪರಿಸ್ಥಿತಿ ಮುಂದುವರಿಯಿತು. ‘ನಷ್ಟಕ್ಕೆ ದಾರಿ ಮಾಡುವ ತೆಂಗನ್ನು ಏಕೆ ಬೆಳೆಯಬೇಕು’ ಎಂಬುದು ರೈತ ಶಿವಲಿಂಗಪ್ಪ ಅವರ ಪ್ರಶ್ನೆ.

ಈ ಬಾರಿ ಫೆಬ್ರುವರಿ ತಿಂಗಳಿನಿಂದಲೇ ಬಿರುಬಿಸಿಲು ಆರಂಭವಾಗಿದ್ದು, ಎಳನೀರಿಗೆ ಬೇಡಿಕೆ ಹೆಚ್ಚಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಎಳನೀರಿಗೆ ₹ 30 ಇದ್ದರೆ, ನಗರ ಪ್ರದೇಶಗಳಲ್ಲಿ ₹ 40 ಇದೆ. ಎಳನೀರಿಗೆ ಇರುವ ಬೆಲೆ ತೆಂಗಿಗೆ ಇಲ್ಲದಂತಾಗಿದೆ. ಬಹುಪಾಲು ರೈತರು ಈಗ ತಮ್ಮ ತೆಂಗಿನ ತೋಟಗಳನ್ನು ಎಳನೀರಿನ ವ್ಯಾಪಾರಿಗಳಿಗೆ ಕೇಣಿ ಕೊಡುತ್ತಿದ್ದಾರೆ. ಇದರಿಂದ ತೆಂಗಿನಕಾಯಿಯ ಕೊರತೆಯಾದರೂ ಬೆಲೆ ಮಾತ್ರ ಏರಿಕೆ ಕಂಡಿಲ್ಲ ಎಂದು ರೈತ ಅಣ್ಣೋಜಿರಾವ್‌ ತಿಳಿಸಿದರು.

‘ತೆಂಗಿನ ಮರಗಳಿಂದ ಬಲಿತ ಕಾಯಿಗಳನ್ನು ಕಿತ್ತು ರಾಶಿ ಹಾಕಿದರೆ ಕೆಲವು ತಿಂಗಳಲ್ಲಿ ಒಣಗಿ ಒಳ್ಳೆಯ ಒಣಕೊಬ್ಬರಿ ಆಗುತ್ತದೆ. ಒಣಗಿದ ಕಾಯಿಗಳನ್ನು ಸುಲಿದು ಕೊಬ್ಬರಿ ಮಾರಾಟ ಮಾಡೋಣವೆಂದರೆ ಅದರ ದರವೂ ಪಾತಾಳ ಕಂಡಿದೆ. ಈಗ ಒಣ ಕೊಬ್ಬರಿಯ ದರ ಕ್ವಿಂಟಲ್‌ಗೆ ಸರಾಸರಿ ₹ 8,000 ಇದೆ. ಅಂದರೆ, ಸಗಟು ದರದಲ್ಲಿ ಒಂದು ಕಿಲೋ ಕೊಬ್ಬರಿಗೆ ಕೇವಲ ₹ 80 ಮಾತ್ರ. ಸ್ಥಳೀಯ ಒಣ ಕೊಬ್ಬರಿ ವ್ಯಾಪಾರಿಗಳು ಕೊಬ್ಬರಿಯಾಗಿರುವ ಒಣ ಕಾಯಿಗಳನ್ನು ಕೇವಲ ₹ 8ರಿಂದ ₹ 10ಕ್ಕೆ ಒಂದರಂತೆ ಕೊಡಿ. ಅದಕ್ಕಿಂತ ಹೆಚ್ಚು ಕೊಡಲಾಗುವುದಿಲ್ಲ ಎನ್ನುತ್ತಿದ್ದಾರೆ. ಒಣಕೊಬ್ಬರಿ ಮಾರಾಟದಿಂದಲೂ ರೈತರಿಗೆ ಭಾರಿ ನಷ್ಟವಾಗುತ್ತಿದೆ’ ಎಂದು ಬೆಳೆಗಾರ ಹಾಲೇಶಪ್ಪ ಮಾಹಿತಿ ನೀಡಿದರು.

‘ನಮ್ಮ ಕಾಲದಲ್ಲಿ ಹಸಿ ಕೊಬ್ಬರಿ ಇಲ್ಲದೇ ಅಡುಗೆ ಆಗುತ್ತಿರಲಿಲ್ಲ. ಈಗ ಸಿದ್ಧಪಡಿಸಿದ ಸಾಂಬಾರ್‌ ಪುಡಿ, ವಿವಿಧ ರೀತಿಯ ಅಡುಗೆ ಪದಾರ್ಥಗಳು ಮಾರುಕಟ್ಟೆಗೆ ಬಂದಿವೆ. ಅಂತಯೆಯೇ ಹಸಿಕೊಬ್ಬರಿ ಇಲ್ಲದೇ ಅಡುಗೆ ಮಾಡಲಾಗುತ್ತಿದೆ. ಸಾವಿರಾರು ಜನ ಸೇರುವ ಸಮಾರಂಭಗಳಲ್ಲಿಯೂ ಅಡುಗೆಗೆ ತೆಂಗಿನಕಾಯಿ ಬಳಕೆ ಇಲ್ಲವಾಗಿರುವುದರಿಂದ ತೆಂಗಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಗೃಹಿಣಿ ಜಯಮ್ಮ ತಿಳಿಸಿದರು.

ದಾವಣಗೆರೆ ಜಿಲ್ಲೆಯ ಬಹುತೇಕ ಭತ್ತದ ಗದ್ದೆಗಳು ಈಗ ಅಡಿಕೆ ತೋಟಗಳಾಗುತ್ತಿವೆ. ಇದರೊಂದಿಗೆ ರೈತರು ತಾವು ಬೆಳೆಸಿದ ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗಿನ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಅದರ ಬದಲಾಗಿ ಅಡಿಕೆ  ಬೆಳೆಯುತ್ತಿದ್ದರೂ ತೆಂಗಿಗೆ ಬೇಡಿಕೆ ಇಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT