ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿಗಳ ಭರಾಟೆಯಲ್ಲಿ ಆರ್ಥಿಕ ಸ್ಥಿತಿ ದಿವಾಳಿ

ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪುರ್
Published 30 ಏಪ್ರಿಲ್ 2024, 6:34 IST
Last Updated 30 ಏಪ್ರಿಲ್ 2024, 6:34 IST
ಅಕ್ಷರ ಗಾತ್ರ

ದಾವಣಗೆರೆ: ‘ಕಾಂಗ್ರೆಸ್‌ನವರಿಗೆ ತಮ್ಮ ಗ್ಯಾರಂಟಿಗಳ ಮೇಲೆ ವಿಶ್ವಾಸ ಹೋಗಿದ್ದು, ಹಳ್ಳಿಗಳಲ್ಲಿ ಮೋದಿ ಅವರ ಜನಪ್ರಿಯತೆ ಬಗ್ಗೆ ಚರ್ಚೆಯಾಗುತ್ತಿದೆ. ಗ್ಯಾರಂಟಿಗಳು ಕೆಲಸ ಮಾಡುವುದಿಲ್ಲ ಎಂಬುದು ಕಾಂಗ್ರೆಸ್‌ ನಾಯಕರಿಗೆ ಮನವರಿಕೆಯಾಗಿ ಈಗ ಕೇಂದ್ರದ ವಿರುದ್ಧ ಗೂಬೆ ಕೂರಿಸಲು ಚೊಂಬನ್ನು ತಂದಿದ್ದಾರೆ’ ಎಂದು ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪುರ್ ಆರೋಪಿಸಿದರು.

‘ಬರಗಾಲ, ಅತಿವೃಷ್ಟಿ ಸಂಭವಿಸಿದಾಗ ಕೇಂದ್ರ ಸರ್ಕಾರ ಬರಪರಿಹಾರ ನೀಡುವುದು ಒಂದು ಕಡೆ. ಆದರೆ 135 ಶಾಸಕರನ್ನೊಳಗೊಂಡ ಸುಭದ್ರ ಸರ್ಕಾರವಿರುವಾಗ ನಿಮ್ಮ ಸರ್ಕಾರ ದಿವಾಳಿಯಾಗಿದೆಯಾ, ನಿಮ್ಮ ಸರ್ಕಾರದಿಂದಲೇ ಪರಿಹಾರ ಪರಿಹಾರ ನೀಡಿ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದರು.

‘ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಾಲ ಮನ್ನಾ ಮಾಡಿ ಎಂದು ರೈತರು ಕೇಳದಿದ್ದರೂ ಅವರ ಸಂಕಷ್ಟ ಮನಗಂಡು ₹25,000 ಕೋಟಿ ಸಾಲ ಮನ್ನಾ ಮಾಡಿದರು. ಆಗ ಅವರು ಕೇಂದ್ರ ಸರ್ಕಾರದಿಂದ ತಂದಿದ್ದೇವಾ. ರೈತರು ಸಂಕಷ್ಟದಲ್ಲಿರುವಾಗ ರಾಜ್ಯದ ಬೊಕ್ಕಸದಿಂದ ಹಣ ಏಕೆ ನೀಡಬಾರದು ಎಂದು ಪ್ರಶ್ನಿಸಿದರು.

‘ರಾಜ್ಯದ ಆರ್ಥಿಕ ಸ್ಥಿತಿ ಕೆಟ್ಟಿದ್ದು, ಇವರು ನೀಡುವ ₹50 ಸಾವಿರ ಕೋಟಿಯಲ್ಲಿ ಕಳೆದ 1.09 ಲಕ್ಷ ಕೋಟಿ ಸಾಲ ಮಾಡಿದ್ದಾರೆ.  ಕಿಸಾನ್ ಸಮ್ಮಾನ್ ಯೋಜನೆಯಡಿ ಬಿಜೆಪಿ ಆಡಳಿತದ ಅವಧಿಯಲ್ಲಿ ನೀಡುತ್ತಿದ್ದ ₹ 4000ವನ್ನು ನಿಲ್ಲಿಸಲಾಗಿದೆ. ರೈತರ ಹಣ ಕಡಿತಗೊಳಿಸಿ ಮಹಿಳೆಯರಿಗೆ ನೀಡಲಾಗುತ್ತಿದೆ. ಗ್ಯಾರಂಟಿಗಳ ಮಧ್ಯದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ’ ಎಂದು ಆರೋಪಿಸಿದರು.

ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ‘ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿರುವುದರಿಂದ ಏನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ, ‘ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ ₹15,996 ಕೋಟಿ ಬರ ಪರಿಹಾರ ನೀಡಿದೆ. ಆದರೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ರಾಜ್ಯಕ್ಕೆ ₹3654 ಕೋಟಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ವೇತಪತ್ರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್ ರಾಜ್ಯದ ಜನರಿಗೆ ಚೊಂಬು ಕೊಟ್ಟಿದೆ. ಜನರಿಗೆ ಕುಡಿಯುವ ನೀರನ್ನು ಒದಗಿಸದ ಬೇಜವಾಬ್ದಾರಿ ಸರ್ಕಾರ ಇದು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 659 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಹಣವನ್ನು ಅಲ್ಪಸಂಖ್ಯಾತರಿಗೆ ನೀಡಿದೆ’ ಎಂದು ಆರೋಪಿಸಿದರು.

ಮುಖಂಡರಾದ ಕಲ್ಲೇರುದ್ರೇಶ್, ನಾಗೇಶ್ವರರಾವ್, ಬಸವರಾಜ್, ಗಣೇಶ್ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಐರಣಿ ಅಣ್ಣೇಶ್, ಕೊಳೇನಹಳ್ಳಿ ಬಿ.ಎಂ.ಸತೀಶ್, ರಘುನಂದನ್ ಅಂಬರ್‌ಕರ್, ಶಿವಮೂರ್ತ್ಯಪ್ಪ, ಐಗೂರು ತಿಪ್ಪೇಸ್ವಾಮಿ, ಗುಡ್ಡೇಶ್  ಇದ್ದರು.

ಸಿದ್ದರಾಮಯ್ಯ ಸ್ಥಾನಕ್ಕೆ ಕುತ್ತು ಬಾರದು

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯದೇ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬುದು ಸುಳ್ಳು. ಇದು ವಿಧಾನಸಭೆ ಚುನಾವಣೆಯಲ್ಲ. ಯಾರಾದರೂ ಶಾಸಕರು ಸಚಿವರು ಕೈಕೊಟ್ಟರೆ ಅವರ ಸ್ಥಾನಕ್ಕೆ ಕುತ್ತು ಬರಬಹುದು ಅಷ್ಟೇ’ ಎಂದು ಕಾಶೆಂಪುರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT