ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಯಾರಂಟಿ’ಗಳ ಸಮೀಕ್ಷೆಗೆ ಹಲವು ಅಡ್ಡಿ: ಅಂಗನವಾಡಿ, ಆಶಾ ಕಾರ್ಯಕರ್ತೆಯರ ಅಳಲು

Published 29 ಫೆಬ್ರುವರಿ 2024, 6:46 IST
Last Updated 29 ಫೆಬ್ರುವರಿ 2024, 6:46 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಗ್ಯಾರಂಟಿ’ ಯೋಜನೆಗಳ ಕುರಿತು ಸಮೀಕ್ಷೆ ನಡೆಸಲು ‘ಗ್ಯಾರಂಟಿ ಸ್ವಯಂ ಸೇವಕ’ರನ್ನಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ನೇಮಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈಚೆಗೆ ಆದೇಶ ಹೊರಡಿಸಿದೆ. ಆದರೆ, ಮೂಲ ಸೌಲಭ್ಯಗಳ ಕೊರತೆ ಮತ್ತು ಕಡಿಮೆ ಗೌರವಧನದ ಕಾರಣ ಸಮೀಕ್ಷೆಗೆ ತೆರಳಬೇಕಿರುವ ಕಾರ್ಯಕರ್ತೆಯರ ಅಸಮಾಧಾನಕ್ಕೆ ಕಾರಣವಾಗಿದೆ.

‘ಗೃಹಲಕ್ಷ್ಮಿ’, ‘ಶಕ್ತಿ’, ‘ಯುವನಿಧಿ’, ‘ಗೃಹಜ್ಯೋತಿ’ ಮತ್ತು ‘ಅನ್ನಭಾಗ್ಯ’ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪಿವೆಯೇ, ಫಲಾನುಭವಿಗಳಿಗೆ ಏನೆಲ್ಲ ಅನುಕೂಲವಾಗಿದೆ ಎಂಬುದನ್ನು ಅರಿಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ.‌

‌ಒಬ್ಬ ಕಾರ್ಯಕರ್ತೆಗೆ ಅಂದಾಜು 120–150 ಮನೆಗಳನ್ನು ಹಂಚಿಕೆ ಮಾಡಿದ್ದು, 10–15 ದಿನಗಳ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಡೇಟಾ ಕಾರ್ಯ ಒಳಗೊಂಡಂತೆ ಈ ಕೆಲಸಕ್ಕೆ ₹ 1,000 ಗೌರವಧನ ನಿಗದಿಪಡಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಮಾಡಿ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲು ಸೂಕ್ತ ಸಾಧನಗಳು ಇಲ್ಲದಿರುವುದು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಚಿಂತೆಗೀಡು ಮಾಡಿದೆ.

‘ಬೆಳಿಗ್ಗೆ 9.30ರಿಂದ ಸಂಜೆ 4ರವರೆಗೆ ಅಂಗನವಾಡಿಗೆ ಬರುವ ಮಕ್ಕಳ ಲಾಲನೆ–ಪಾಲನೆ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಊಟ, ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರ ಪೋಷಣ್‌ ಅಭಿಯಾನ್‌, ಮೂರನೇ ಶನಿವಾರ ಬಾಲ ವಿಕಾಸ ಸಮಿತಿ ಸಭೆಗೆ ಹಾಜರಾಗುವುದರ ನಡುವೆ ಇಲಾಖೆ ನಿಯೋಜಿಸುವ ಕೆಲಸಗಳನ್ನೂ ನಿರ್ವಹಿಸಬೇಕಿದೆ. ಮಾರ್ಚ್‌ 3ರಿಂದ ಪಲ್ಸ್‌ ಪೋಲಿಯೊ ಕಾರ್ಯಕ್ರಮ ಆರಂಭವಾಗಲಿದೆ. ಇಷ್ಟೆಲ್ಲ ಕೆಲಸಗಳ ನಡುವೆ ಗ್ಯಾರಂಟಿ ಯೋಜನೆ ಸಮೀಕ್ಷೆ ನಡೆಸುವಂತೆ ಸೂಚಿಸಿರುವುದರಿಂದ ಹೊರೆಯಾಗಲಿದೆ. ಇಲಾಖೆ ನೀಡಿರುವ ಸಾಧಾರಣ ಮೊಬೈಲ್‌ನಲ್ಲಿ ಸಮೀಕ್ಷೆ ನಡೆಸುವುದು ಕಷ್ಟ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ  ಯರು ಮತ್ತು ಸಹಾಯಕಿಯರ ಫೆಡರೇಷನ್‌ (ಎಐಟಿಯುಸಿ)ನ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಎಸ್‌.ಎಸ್‌.ಮಲ್ಲಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಮನೆಯಿಂದ ಐದೂ ಗ್ಯಾರಂಟಿಗಳ ಮಾಹಿತಿ ಕಲೆ ಹಾಕಲು ಅರ್ಧ ತಾಸಿಗೂ ಹೆಚ್ಚು ಸಮಯ ಬೇಕಾಗುತ್ತದೆ. ಮಲೆನಾಡು, ಕರಾವಳಿಯಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಮನೆಗಳು ದೂರವಿರುತ್ತವೆ. ಅಲ್ಲೆಲ್ಲ ಹೋಗಿಬರಲು ಸಾರಿಗೆ ವೆಚ್ಚ ಭರಿಸುವ ಬಗ್ಗೆ ಸರ್ಕಾರದ ಆದೇಶದಲ್ಲಿ ವಿವರವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅಂಗನವಾಡಿ ಮಕ್ಕಳ ಕಡೆ ಗಮನ ಹರಿಸುವುದು ಕಷ್ಟವಾಗುತ್ತದೆ. ‘ಅಂಗನವಾಡಿಗಳಲ್ಲಿ ಮಕ್ಕಳನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂಬ ದೂರು ಪಾಲಕರಿಂದ ಕೇಳಿಬರುತ್ತದೆ. ಹೆಚ್ಚುವರಿ ಕೆಲಸಗಳಿಂದ ಅಂಗನವಾಡಿಗಳ ಅಸ್ತಿತ್ವಕ್ಕೇ ಧಕ್ಕೆ ಎದುರಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರು ತಮ್ಮ ಸ್ವಂತ ಮೊಬೈಲ್‌ನಲ್ಲಿಯೇ ಆರೋಗ್ಯ ಮತ್ತು ಪೌಷ್ಟಿಕಾಂಶ ಕುರಿತ ಸಮೀಕ್ಷೆ ನಡೆಸಿದ್ದಾರೆ. ಅದೇರೀತಿ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲಿದ್ದಾರೆ.
ಡಾ.ಎಸ್.ಷಣ್ಮುಖಪ್ಪ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿ ದಾವಣಗೆರೆ
‘ಮೊದಲು ಬೇಡಿಕೆ ಈಡೇರಿಸಲಿ’
‘ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಗೌರವಧನವನ್ನು ಕಾರ್ಯಕರ್ತೆಯರಿಗೆ ₹ 15000 ಹಾಗೂ ಸಹಾಯಕಿಯರಿಗೆ ₹ 10000ಕ್ಕೆ ಹೆಚ್ಚಿಸುವ ಹಾಗೂ ನಿವೃತ್ತರಿಗೆ ₹ 3 ಲಕ್ಷ ಇಡುಗಂಟು ನೀಡುವ ಭರವಸೆಯನ್ನು ಕಾಂಗ್ರೆಸ್‌ ನೀಡಿತ್ತು. ಆದರೆ ಜಾರಿಯಾಗಿಲ್ಲ. ನಾವೂ ಈ ನಾಡಿನ ಪ್ರಜೆಗಳಾಗಿದ್ದು ಗ್ಯಾರಂಟಿ ಯೋಜನೆಯ ಭರವಸೆ ಈಡೇರಿಸಿದಂತೆ ನಮ್ಮ ಭರವಸೆಯನ್ನೂ ಈಡೇರಿಸಬೇಕಲ್ಲವೇ? ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲಿ’ ಎಂದು ಫೆಡರೇಷನ್‌ನ ಎಸ್‌.ಎಸ್‌.ಮಲ್ಲಮ್ಮ ಆಗ್ರಹಿಸಿದರು.
‘ಮೊಬೈಲ್‌ ಒದಗಿಸಿ ಪ್ರೋತ್ಸಾಹಧನ ಹೆಚ್ಚಿಸಿ’
ಇಲಾಖೆಯಿಂದ ಆಶಾ ಕಾರ್ಯಕರ್ತೆಯರಿಗೆ ಮೊಬೈಲ್‌ ಹಾಗೂ ಡಾಟಾ ನೀಡದೇ ಇರುವುದರಿಂದ ಸಮೀಕ್ಷೆ ಮಾಡುವುದು ಕಷ್ಟವಾಗಲಿದೆ. ಮೊಬೈಲ್‌ನಲ್ಲಿ ಸಮೀಕ್ಷೆ ಅಪ್‌ಲೋಡ್‌ ಮಾಡಲು ಬಾರದ ಕಾರ್ಯಕರ್ತೆಯರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಯುಟಿಯುಸಿ) ಜಿಲ್ಲಾ ಘಟಕದ ಅಧ್ಯಕ್ಷ ಅಣಬೇರು ತಿಪ್ಪೇಸ್ವಾಮಿ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT