ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ | ರಜೆ, ಮದುವೆ: ಬಸ್‌ಗಳಲ್ಲಿ ಭಾರಿ ದಟ್ಟಣೆ

ಚುನಾವಣೆಗೆ ಬಸ್‌ಗಳ ನಿಯೋಜನೆ... ಪ್ರಯಾಣ ಮುಂದೂಡಿದರೆ ಒಳಿತು...
Published 30 ಏಪ್ರಿಲ್ 2024, 6:12 IST
Last Updated 30 ಏಪ್ರಿಲ್ 2024, 6:12 IST
ಅಕ್ಷರ ಗಾತ್ರ

ಹರಿಹರ: ‘ಬಸ್‌ಗಳಲ್ಲಿ ನಿಲ್ಲಲೂ ಜಾಗವಿಲ್ಲದಂತಾಗಿದ್ದು, ನಾನೀಗ ಬಸ್ ಬಿಟ್ಟು ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ’... ದಾವಣಗೆರೆಯಿಂದ ಹರಿಹರಕ್ಕೆ ನಿತ್ಯ ಸಂಚರಿಸುವ ಹರಿಹರದ ಸರ್ಕಾರಿ ಕಾಲೇಜೊಂದರ ಪ್ರಾಧ್ಯಾಪಕರೊಬ್ಬರ ಮಾತುಗಳಿವು.

ಶಾಲೆ, ಕಾಲೇಜುಗಳಿಗೆ ಬೇಸಿಗೆ ರಜೆ. ಮದುವೆ ಸೀಜನ್, ಮಹಿಳೆಯರಿಗೆ ಉಚಿತ ಪ್ರಯಾಣ, ಚುನಾವಣಾ ಕಾರ್ಯಕ್ಕೆ ಬಸ್‌ಗಳ ಬಳಕೆ... ಈ ಎಲ್ಲಾ ಕಾರಣಗಳಿಂದಾಗಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣ ಮಾಡುವುದೇ ದುಸ್ತರವಾಗಿದೆ.

ಬೇಸಿಗೆ ರಜೆ ಘೋಷಣೆಯಾಗಿದ್ದರೂ, ಉನ್ನತ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಪಾಠ, ಪ್ರವಚನ, ಪರೀಕ್ಷೆಗಳಿನ್ನೂ ನಡೆಯುತ್ತಿದ್ದು ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಈಗಲೂ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ನೌಕರರು ಅನಿವಾರ್ಯವಾಗಿ ಹೌಸ್‌ಫುಲ್ ಆಗಿರುವ ಸರ್ಕಾರಿ ಬಸ್‌ಗಳನ್ನು ಅವಲಂಬಿಸಬೇಕಿದೆ.

ರಾಜ್ಯದ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮೈಸೂರು, ಧರ್ಮಸ್ಥಳ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಶಿವಮೊಗ್ಗ, ಹರಪನಹಳ್ಳಿ, ಹೊಸಪೇಟೆ, ಹಾವೇರಿ, ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು, ಹಿರೇಕೆರೂರು, ಶಿಕಾರಿಪುರ ಮತ್ತಿತರ ಕಡೆ ತೆರಳುವವರಿಗೆ ಜಂಕ್ಷನ್‌ನಂತಿದ್ದು, ಹಗಲು ಮತ್ತು ರಾತ್ರಿ ವೇಳೆಯಲ್ಲೂ ಪ್ರಯಾಣಿಕರಿಂದ ತುಂಬಿರುತ್ತದೆ. ನಿಲ್ದಾಣದ ಆವರಣದೊಳಕ್ಕೆ ಬರುವ ಬಸ್‌ಗಳನ್ನು ಪ್ಲಾಟ್‌ಫಾರಂನಲ್ಲಿ ನಿಲ್ಲಲೂ ಬಿಡದೆ ಸೀಟು ಹಿಡಿಯಲು ಜನ ಮುಗಿ ಬೀಳುತ್ತಿದ್ದಾರೆ.

ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗೆ ಮುಗಿಬಿದ್ದಿರುವ ಪ್ರಯಾಣಿಕರು
ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗೆ ಮುಗಿಬಿದ್ದಿರುವ ಪ್ರಯಾಣಿಕರು

ಎರಡನೇ ಹಂತದ ಚುನಾವಣೆ ಮೇ 7ಕ್ಕೆ ಇದ್ದು ಮತ್ತೆ ಮೂರೂ ಡಿಪೊಗಳ ಬಸ್‌ಗಳನ್ನು ಎರಡು ದಿನಗಳ ಕಾಲ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಆಗಲೂ ಬಸ್‌ಗಳ ಕೊರತೆ ಎದುರಾಗಿ, ಪ್ರಯಾಣ ಮತ್ತಷ್ಟು ಕಷ್ಟಮಯವಾಗಲಿದೆ ಎಂದು ಅಂದಾಜಿಸಲಾಗಿದೆ.



‘ದಾವಣಗೆರೆಯ ಎರಡು ಹಾಗೂ ಹರಿಹರದ್ದೊಂದು ಘಟಕ ಸೇರಿ ದಾವಣಗೆರೆ ವಿಭಾಗದಲ್ಲಿ ವೋಲ್ವೊ, ನಾನ್ ಏಸಿ, ಎಲೆಕ್ಟ್ರಿಕಲ್ ಬಿಟ್ಟು 346 ಎಕ್ಸ್‌ಪ್ರೆಸ್ ಹಾಗೂ ಸಾಧಾರಣ ಬಸ್‌ಗಳಿವೆ. ಚುನಾವಣಾ ಕಾರ್ಯಕ್ಕೆ ಮೇ 6, 7ರಂದು 163 ಬಸ್‌ಗಳನ್ನು ನೀಡಲಾಗಿದೆ. ಪ್ರಯಾಣಿಕರ ಒತ್ತಡ ಇರುವ ಮಾರ್ಗಗಳಿಗೆ ಹೆಚ್ಚು ಒತ್ತಡ ಇಲ್ಲದ ಮಾರ್ಗಗಳ ಬಸ್‌ ಬಿಟ್ಟು ಮ್ಯಾನೇಜ್ ಮಾಡುತ್ತಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗೀಯ ಸಂಚಾರ ಅಧಿಕಾರಿ ಫಕ್ರುದ್ದೀನ್ ತಿಳಿಸಿದರು.

ಮೇ 6 ಮತ್ತು 7ರಂದು ಇಡೀ ರಾಜ್ಯದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಕಡಿಮೆಯಾಗಲಿದ್ದು, ಆ ಎರಡು ದಿನಗಳ ಕಾಲ ಪ್ರಯಾಣ ಮಾಡುವುದನ್ನು ಮುಂದೂಡಿದರೆ ಪ್ರಯಾಣದ ಸಮಸ್ಯೆಯಿಂದ ಪಾರಾಗಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT