ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕೃತವಲ್ಲದ ಅರ್ಜಿ ಸಲ್ಲಿಸಲು ಸಾಲು

ನಿವೇಶನ, ಆಶ್ರಯ ಮನೆಗಾಗಿ ಪಾಲಿಕೆಗೆ ದೌಡಾಯಿಸಿದ ಆಕಾಂಕ್ಷಿಗಳು
Last Updated 23 ಜನವರಿ 2019, 16:00 IST
ಅಕ್ಷರ ಗಾತ್ರ

ದಾವಣಗೆರೆ: ಪಾಲಿಕೆ ಆವರಣದಲ್ಲಿ ವಾರದಿಂದ ಜನವೋ ಜನ. ಕೂಲಿ ಕಾರ್ಮಿಕರು, ನಿರಾಶ್ರಿತರು ಅರ್ಜಿ ಸಲ್ಲಿಸಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ...

ನಿವೇಶನ, ವಸತಿಗಾಗಿ ಬಡವರು, ಕೊಳೆಗೇರಿಯ ನಿವಾಸಿಗಳು, ನಿರಾಶ್ರಿತರು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಪಾಲಿಕೆ ಸ್ವೀಕರಿಸುತ್ತಿರುವ ಅರ್ಜಿ ಅಧಿಕೃತವಲ್ಲ! ಆದರೂ ಅರ್ಜಿ ಗುಜರಾಯಿಸುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ!!

ಮೌಖಿಕ ಆದೇಶ ತೆರವಿಗೆ ಕಾರಣ
ಪ್ರತಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸ್ಪಂದನಾ ಸಭೆ ನಡೆಯುತ್ತದೆ. ವಸತಿಗಾಗಿ ಅರ್ಜಿ ಸಲ್ಲಿಸುವರ ಸಂಖ್ಯೆಯೇ ಇಲ್ಲಿ ಹೆಚ್ಚಿರುತ್ತಿತ್ತು. ಮನೆ ಇಲ್ಲದ ಬಡವರು ‘ನಮಗೆ ನಿವೇಶನ ನೀಡಿ, ಆಶ್ರಯ ಮನೆ ಕಟ್ಟಿಸಿಕೊಡಿ. ಪಾಲಿಕೆ ಅಧಿಕಾರಿಗಳು ನಮ್ಮ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ’ ಎಂದು ದೂರುತ್ತಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ‘ಆಶ್ರಯ ಮನೆ ಬೇಕಾದವರು ಅರ್ಜಿ ಸಲ್ಲಿಸಲಿ. ಕೂಡಲೇ ಸ್ವೀಕೃತಿ ಕೇಂದ್ರ ತೆರೆಯಿರಿ’ ಎಂದು ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಅವರಿಗೆ ಮೌಖಿಕ ಆದೇಶ ನೀಡಿದ್ದರು.

ಜಿಲ್ಲಾಧಿಕಾರಿ ಆದೇಶದಂತೆ ಪಾಲಿಕೆ ಆವರಣದಲ್ಲಿ ಕೌಂಟರ್‌ ಆಯುಕ್ತರು ತೆರವು ಮಾಡಿದರು. ಇದನ್ನು ಸರಿಯಾಗಿ ತಿಳಿದುಕೊಳ್ಳದ ಕೆಲವರು ವಾಟ್ಸ್‌ಅಫ್‌, ಫೇಸ್‌ಬುಕ್‌ನಲ್ಲಿ ಆಶ್ರಯ ಮನೆಗಾಗಿ ಪಾಲಿಕೆಯಲ್ಲಿ ಅರ್ಜಿ ಕೊಡುತ್ತಿದ್ದಾರೆ ಎಂದು ಪೋಸ್ಟ್‌ಗಳನ್ನು ಹಾಕಿದರು. ಹೀಗಾಗಿ, ಬಡವರು, ನಿರಾಶ್ರಿತರು ಪಾಲಿಕೆ ಆವರಣದಲ್ಲಿ ತೆರೆದಿರುವ ಕೌಂಟರ್‌ನಲ್ಲಿ ಸರತಿ ಸಾಲಿನಲ್ಲಿ ನಿಂತು ಅರ್ಜಿ ಹಾಕಲು ಮುಂದಾಗಿದ್ದಾರೆ. ಪಾಲಿಕೆ ಆಹ್ವಾನ ಮಾಡದಿದ್ದರೂ ಸ್ವಯಂ ಘೋಷಣೆಯ ಅರ್ಜಿ ಸಲ್ಲಿಸಲು ಫಲಾನುಭವಿಗಳು ಮುಗಿಬೀಳಿತ್ತಿದ್ದಾರೆ.

ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದ್ದಂತೆ ಮಧ್ಯವರ್ತಿಗಳೂ ಹುಟ್ಟಿಕೊಂಡಿದ್ದಾರೆ. ‘ನಾವು ನಿಮಗೆ ನಿವೇಶನ, ಮನೆ ಕೊಡಿಸುತ್ತೇವೆ. ನಮ್ಮಲ್ಲಿ ಅರ್ಜಿ ಸಿಗುತ್ತದೆ’ ಎಂದು ₹ 1 ಜೆರಾಕ್ಸ್‌ ಬೆಲೆಯ ಸ್ವ ಅರ್ಜಿಯನ್ನು ₹ 30ಕ್ಕೆ ಮಾರುವವರು ಪಾಲಿಕೆ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವರು ₹ 100, ₹ 150ಕ್ಕೂ ಅರ್ಜಿ ಮಾರಾಟ ಮಾಡಿದ್ದಾರೆ.

ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ನಾಗರಿಕರು ಸಲ್ಲಿಸುತ್ತಿದ್ದಾರೆ. ಈ ದಾಖಲೆಗಳ ಪ್ರತಿಗಳನ್ನು ಮಾಡಿಸಿಕೊಳ್ಳುವುದಕ್ಕಾಗಿ ಜೆರಾಕ್ಸ್‌ ಅಂಗಡಿಗಳಿಗೆ ಜನ ಮುಗಿ ಬೀಳುತ್ತಿದ್ದಾರೆ. ಹೀಗಾಗಿ, ಪಾಲಿಕೆ ಸುತ್ತಲಿನ ಜೆರಾಕ್ಸ್‌ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿವೆ.

‘ನಮಗೆ ಸ್ವಂತ ಸೂರಿಲ್ಲ. ನಿವೇಶನ ನೀಡಿ, ಮನೆ ಕಟ್ಟಿಸಿಕೊಡುವಂತೆ ಇದುವರೆಗೆ ಹತ್ತು ಬಾರಿ ಅರ್ಜಿ ಸಲ್ಲಿಸಿದ್ದೇನೆ. ಆದರೆ, ನಮಗೆ ಮನೆ ಸಿಕ್ಕೇ ಇಲ್ಲ. ಪಾಲಿಕೆ ಅಧಿಕೃತವಾಗಿ ಆಹ್ವಾನಿಸಿ ಅರ್ಜಿ ಸ್ವೀಕರಿಸುತ್ತಿಲ್ಲ ಎಂದು ಗೊತ್ತಿದೆ. ಆದರೂ ಈ ಅರ್ಜಿಗಳನ್ನೇ ಅಧಿಕೃತ ಎಂದು ಪರಿಗಣಿಸಿಬಿಟ್ಟರೆ ಎಂಬ ಆತಂಕದಿಂದ ಮತ್ತೆ ಅರ್ಜಿ ಸಲ್ಲಿಸತ್ತಿದ್ದೇನೆ. ಈಗಲಾದರೂ ಪಾಲಿಕೆ ಆಶ್ರಯ ಮನೆ ಮಂಜೂರು ಮಾಡಲಿ’ ಎಂದು ಕೆಟಿಜೆ ನಗರದ ದುಗ್ಗಮ್ಮ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT