ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯದು ಶಾಶ್ವತ ಗ್ಯಾರಂಟಿ, ಕಾಂಗ್ರೆಸ್‌ನದ್ದು ಬೋಗಸ್: ಬೊಮ್ಮಾಯಿ

‘ವಿಕಸಿತ ಭಾರತ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕೆ
Published 29 ಏಪ್ರಿಲ್ 2024, 4:53 IST
Last Updated 29 ಏಪ್ರಿಲ್ 2024, 4:53 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ ಜನರಿಗೆ ಶಾಶ್ವತ ಬದುಕನ್ನು ಕಟ್ಟಿಕೊಡುವಂತಹ ಗ್ಯಾರಂಟಿ. ಆದರೆ ಕಾಂಗ್ರೆಸ್‌ನದ್ದು ಬೋಗಸ್ ಗ್ಯಾರಂಟಿ' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ವಿಕಸಿತ ಭಾರತ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅಸಾಧ್ಯವಿರುವುದನ್ನು ಸಾಧ್ಯ ಮಾಡಿ ತೋರಿಸಿರುವ ಧೀಮಂತ ನಾಯಕ. ಯುಪಿಎ ಸರ್ಕಾರದ ಅವಧಿಯಲ್ಲಿ ಭಯೋತ್ಪಾದನೆ ತೊಲಗಿಸಲು ಅಸಾಧ್ಯವಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯ ತಾಣಕ್ಕೆ ಭೇಟಿ ನೀಡಿ ಸೈನಿಕರಿಗೆ ಧೈರ್ಯ ತುಂಬಿ ಧ್ವಂಸ ಮಾಡುವಂತೆ ಮಾಡುವ ಮೂಲಕ ಭಯೋತ್ಪಾದಕರಿಗೆ ಭಯ ಹುಟ್ಟಿಸಿದ ಧೀಮಂತ ನಾಯಕ’ ಎಂದು ಶ್ಲಾಘಿಸಿದರು.

‘ಮೋದಿ ಅವರು ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ್ದಾರೆ. ‘ಹರ್ ಘರ್ ಜಲ್’ ಅಡಿ 75 ಕೋಟಿಗೂ ಹೆಚ್ಚು ಮನೆಗಳಿಗೆ ನೀರು ಒದಗಿಸಿದ್ದಾರೆ. ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಏನು ಮಾಡಿದ್ದಾರೆ ಅಂತ ಕಾಂಗ್ರೆಸ್‌ನವರು ಕೇಳುತ್ತಿದ್ದಾರೆ. ಆಯುಷ್ಮಾನ್ ಭಾರತ್, ಸ್ಮಾರ್ಟ್ ಸಿಟಿ, ಮುದ್ರಾ, ಉಜ್ವಲ ಯೋಜನೆ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಕೊಟ್ಟಿದ್ದಾರೆ. ಈ ದೇಶವನ್ನು ಕೆಳಹಂತದಿಂದ ಅಭಿವೃದ್ಧಿ ಮಾಡಿದ್ದಾರೆ’ ಎಂದು ಹೇಳಿದರು. 

‘ಕೊರೊನಾ ಸಮಯದಲ್ಲಿ 3 ಬಾರಿ ಲಸಿಕೆ ಕೊಟ್ಟು, ಜನರ ಜೀವ ಉಳಿಸಿದ್ದಾರೆ. ಬಡವರಿಗೆ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಿ ಬಡವರ ಪ್ರಾಣ ಉಳಿಸಿದರು’ ಎಂದು ಹೇಳಿದರು.

ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಜಾರಿಗೆ ತಂದ ‘ಮುಖ್ಯಮಂತ್ರಿ ರೈತ ನಿಧಿ’ ಯೋಜನೆಯನ್ನು ಕಾಂಗ್ರೆಸ್‌ ನಿಲ್ಲಿಸಿದೆ. ಡೀಸೆಲ್ ಸಬ್ಸಿಡಿ, ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುತ್ತಿದ್ದ ₹4,000ವನ್ನು ನಿಲ್ಲಿಸಿದೆ. ಬಿಜೆಪಿ ಸರ್ಕಾರವಿದ್ದಾಗ ₹25,000ಕ್ಕೆ ಟಿಸಿ ಕೊಂಡುಕೊಳ್ಳಬಹುದಿತ್ತು. ಈಗ ₹ 2ಲಕ್ಷ ಖರ್ಚು ಬರುವಂತಾಗಿದೆ‌’ ಎಂದು ಹೇಳಿದರು

‘ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣವನ್ನು ವೈಯಕ್ತಿಕ ವಿಚಾರ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದು ಲವ್ ಜಿಹಾದ್ ಎಂದು ಗೃಹ ಮಂತ್ರಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮನೆಯಲ್ಲೇ ಇಂತಹ ಪ್ರಕರಣ ನಡೆದಿದ್ದರೆ ಹೀಗೆ ಮಾತನಾಡುತ್ತಿದ್ದರಾ ಎಂದು ಬಿ.ಸಿ.ಪಾಟೀಲ ಪ್ರಶ್ನಿಸಿದರು.

‘ರಾಹುಲ್‌ ಗಾಂಧಿಗೆ ಬುದ್ಧಿ ಇಲ್ಲ. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಹೆಸರು ಗೊತ್ತಿಲ್ಲ. ಅಂತವರು ಈ ದೇಶದ ಪ್ರಧಾನಿ ಆಗಲು ಹೊರಟ್ಟಿದ್ದಾರೆ’ ಎಂದು ಟೀಕಿಸಿದರು.

‘ಭದ್ರಾ ನಾಲೆಗಳ ಆಧುನೀಕರಣಕ್ಕೆ ಬಿಜೆಪಿ ಸರ್ಕಾರ ₹1,300 ಕೋಟಿ ಬಿಡುಗಡೆ ಮಾಡಿತು. ರೈತರು ನೆಮ್ಮದಿಯಿಂದ ಇರಲು ಬಿಜೆಪಿಯಿಂದ ಮಾತ್ರ ಸಾಧ್ಯ. ಸಂಸದರಿಗೆ ಕೊಂಡಜ್ಜಿ ಕೆರೆ ಗೊತ್ತಿಲ್ಲ  ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಟೀಕೆ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಕೆರೆ ನೆನಪಾಯಿತಾ’ ಎಂದು ಶಾಸಕ ಬಿ.ಪಿ. ಹರೀಶ್ ಪ್ರಶ್ನಿಸಿದರು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ರಾಜ್ಯದಲ್ಲಿರುವ ಸಿದ್ದರಾಮಯ್ಯ ಅವರ ಸರ್ಕಾರ ನಿಷ್ಕ್ರಿಯವಾಗಿದ್ದು, ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಸರ್ಕಾರದ ಖಜಾನೆಯೂ ಖಾಲಿಯಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದು, ರಾಜ್ಯದಲ್ಲಿ ಶೇ 60ರಿಂದ 70ರಷ್ಷು ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಬದಲಾವಣೆಯ ಗಾಳಿ ಬೀಸಿದ್ದು, ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮೋದಿ ಅವರ ಜೊತೆ ಆರಂಭದಲ್ಲಿ ಮುನಿಸಿಕೊಂಡರೂ ದೇಶದ ಅಭಿವೃದ್ಧಿಗೆ ಮೋದಿ ಅನಿವಾರ್ಯ ಎಂದು ಅವರೇ ಹೇಳಿದ್ದಾರೆ’ ಎಂದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹೇಳಿದರು.

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ‘ಹೆಣ್ಣು ಮಕ್ಕಳೆಂದರೆ ಶಕ್ತಿ ಸ್ವರೂಪ. ‘ನಾರಿಶಕ್ತಿ’ಗಾಗಿ ನರೇಂದ್ರ ಮೋದಿ ಅವರು ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಆದರೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ ನಾಯಕರು ನಾರಿಶಕ್ತಿಯನ್ನು ವಿರೋಧಿಸುತ್ತಿದ್ದು, ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ನಾನು ಸಂಸದನಾಗಿದ್ದ ಅವಧಿಯಲ್ಲಿ ಜಿಲ್ಲೆಗೆ ₹13 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ.

ಮಾಜಿ ಶಾಸಕರಾದ ಎಚ್.ವಿ. ರಾಮಚಂದ್ರ, ಮಾಡಾಳ್ ವಿರೂಪಾಕ್ಷಪ್ಪ, ಹಾವೇರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣ್‌ಕುಮಾರ್ ಪೂಜಾರ್ ಮಾತನಾಡಿದರು. ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಚಿವ ಎಸ್.ಎ.ರವೀಂದ್ರ ನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಎ.ಎಚ್.ಶಿವಯೋಗಿಸ್ವಾಮಿ, ಕರುಣಾಕರರೆಡ್ಡಿ, ಮಾಜಿ ಶಾಸಕರಾದ ಎಚ್.ಪಿ.ರಾಜೇಶ್, ಬಸವರಾಜನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಎಸ್‌.ವಿ.ಶಂಕನೂರು, ಭಾರತಿಶೆಟ್ಟಿ, ಗದಗ ಜಿಲ್ಲೆಯ ರಾಜು ಕುರುಡಗಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಚಿದಾನಂದಪ್ಪ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಬಿ.ಎಸ್.ಜಗದೀಶ್, ಅನಿಲ್ ಮೆಣಸಿನಕಾಯಿ ಇದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಾಜಶೇಖರ್ ಸ್ವಾಗತಿಸಿದರು.  

ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಹಾಗೂ ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಹಾಗೂ ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

‘ಗ್ಯಾರಂಟಿಗಳಿಗೆ ಮರುಳಾದರೆ ನಷ್ಟ’

‘ಪ್ರಜ್ಞಾವಂತ ಮತದಾರರಾಗಿ ಆಳವಾಗಿ ಯೋಚಿಸಿ ಮತ ನೀಡಬೇಕು. ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಕಾಂಗ್ರೆಸ್‌ನ ಗ್ಯಾರಂಟಿಗಳು ಮೇಲ್ಕೋಟಕ್ಕೆ ಸಿಹಿ ಎನಿಸಿದರೂ ತಾತ್ಕಾಲಿಕವಾಗಿ ಅದಕ್ಕೆ ಮರುಳಾದರೆ ಶಾಶ್ವತವಾದ ನಮ್ಮ ಭವಿಷ್ಯಕ್ಕೆ ನಷ್ಟವಾಗುತ್ತದೆ’ ಎಂದು ಸಂಸದೆ ಸುಮಲತಾ ಹೇಳಿದರು. ‘ರಾಮಾಯಣದಲ್ಲಿ ಶ್ರೀರಾಮನನ್ನು 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಿದರೆ ನಮ್ಮ ದೇಶದಲ್ಲಿ 500 ವರ್ಷ ವನವಾಸಕ್ಕೆ ಕಳುಹಿಸಲಾಗಿತ್ತು. ಜನ್ಮಸ್ಥಳಕ್ಕೆ ತಂದು ಕೂರಿಸಿದವರು ನರೇಂದ್ರ ಮೋದಿ. ನಮಗೆ ಇರುವುದು ಒಂದೇ ಆಯ್ಕೆ ಅದು ಬಿಜೆಪಿ’ ಎಂದು ಹೇಳಿದರು. ಸಿದ್ದೇಶ್ವರ ಆಶೀರ್ವದಿಸಿದರು:  ‘ದಾವಣಗೆರೆಯ ಹಲವು ನೆನಪುಗಳು ಇವೆ. ಅಂಬರೀಶ್‌ ಅವರೊಟ್ಟಿಗೆ ಬಂದಿದ್ದೇನೆ ದಾವಣಗೆರೆಯ ಬೆಣ್ಣೆದೋಸೆ ಅಂಬರೀಶ್ ಅವರಿಗೆ ಇಷ್ಟ. ಬೆಂಗಳೂರಿನಲ್ಲಿದ್ದರೂ ಬೆಣ್ಣೆದೋಸೆ ತಿನ್ನುತ್ತಿದ್ದರು. 5 ವರ್ಷಗಳ ಹಿಂದೆ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗಿ ಬಂದಾಗ ಸಂಸದ ಜಿ.ಎಂ. ಸಿದ್ದೇಶ್ವರ ಅವರು ನನಗೆ ಮೊದಲ ಬಾರಿ ಆಶೀರ್ವದಿಸಿದರು’ ಎಂದು ಸಂಸದೆ ಸುಮಲತಾ ಹೇಳಿದರು.

ಶಾಸ್ತ್ರೀ ಬಿಟ್ಟರೆ ನರೇಂದ್ರ ಮೋದಿ ಅಪ್ಪಟ ದೇಶಭಕ್ತ

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಂತರ ಅಪ್ಪಟ ದೇಶ ಭಕ್ತರೆಂದರೆ ಅವರು ನರೇಂದ್ರ ಮೋದಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಭಾಷಣದ ಮಧ್ಯೆ ಜನರು ‘ಮೋದಿ ಮೋದಿ’ ಎಂದು ಕೂಗುತ್ತಿದ್ದಾಗ ‘ದೇಶದ 130 ಕೋಟಿ ಜನರ ಮನಸ್ಸಿನಲ್ಲಿರುವುದೇ ‘ನರೇಂದ್ರ ಮೋದಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT