ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ತಾಂಡಾ ಮಕ್ಕಳಿಗೆ ಕಲಿಕೆಯ ನಂಟು

Published 5 ಸೆಪ್ಟೆಂಬರ್ 2023, 7:12 IST
Last Updated 5 ಸೆಪ್ಟೆಂಬರ್ 2023, 7:12 IST
ಅಕ್ಷರ ಗಾತ್ರ

‘ಎದ್ದೇಳಿ’ ಎಂದರೆ ಆ ವಿದ್ಯಾರ್ಥಿಗಳಿಗೆ ಅರ್ಥವಾಗದು. ‘ಉಟ್ರೆ’ ಎಂದರೆ ಮಾತ್ರವೇ ಏಳುವುದು. ‘ಗಲಾಟೆ ಮಾಡಬೇಡಿ’ ಎಂದರೆ ಮಾತು ಕೇಳುವುದಿಲ್ಲ. ‘ಚುಪ್ರೆ’ ಎಂದರೆ ಮಾತ್ರವೇ ಸುಮ್ಮನಿರುವುದು. ಹೀಗೆ ಪ್ರತಿಯೊಂದು ಪದಗಳನ್ನೂ ಅವರ ಭಾಷೆಯಲ್ಲೇ ಸಂವಹನಿಸುತ್ತ ಕನ್ನಡ ಭಾಷೆಯ ನಂಟನ್ನು, ಪ್ರೀತಿಯನ್ನೂ ತಾಂಡಾ ಮಕ್ಕಳಿಗೆ ಪಸರಿಸುತ್ತಿದ್ದಾರೆ ಶಿಕ್ಷಕಿ ಸರೋಜಮ್ಮ.

ದಾವಣಗೆರೆ ಉತ್ತರ ವಲಯದ ಓಬಜ್ಜಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಾಂಡಾ ಮಕ್ಕಳಲ್ಲಿ ಅಕ್ಷರದ ಬೀಜ ಬಿತ್ತುತ್ತಿರುವ ಸಹಶಿಕ್ಷಕಿ ಸರೋಜಮ್ಮ ಡಿ, ಹಲವು ಪ್ರಯೋಗಗಳ ಮೂಲಕ ಕನ್ನಡ, ಇಂಗ್ಲಿಷ್, ಗಣಿತವನ್ನು ವಿದ್ಯಾರ್ಥಿಗಳಿಗೆ ಸುಲಲಿತ ಮಾಡಿದ್ದಾರೆ.

ಮಗ್ಗಿಗಳು, ಇಂಗ್ಲಿಷ್‌ ಪದಗಳು, ಕನ್ನಡ ಪದ್ಯಗಳು ತಾಂಡಾ ವಿದ್ಯಾರ್ಥಿಗಳ ಬಾಯಲ್ಲಿ ಸದಾ ನಲಿದಾಡುವಂತೆ ಮಾಡಿದ್ದಾರೆ. ಹಲವು ಪ್ರಯೋಗಗಳಿಂದಲೇ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುತ್ತಿದ್ದಾರೆ. ಬಡ ಕುಟುಂಬಗಳೇ ಹೆಚ್ಚಿರುವ ತಾಂಡಾದ ಕೆಲ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಸಮವಸ್ತ್ರ, ಪುಸ್ತಕವನ್ನು ಇವರೇ ಒದಗಿಸುತ್ತಾರೆ. ಕೋವಿಡ್‌ ಸಮಯದಲ್ಲಿ ಮನೆ, ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಕೊರತೆಯನ್ನು ನೀಗಿಸಿದ್ದರು.

ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ವಾರಕ್ಕೊಮ್ಮೆ ರಸಪ್ರಶ್ನೆ, ವಿವಿಧ ಸ್ಪರ್ಧೆಗಳನ್ನು ತರಗತಿಯಲ್ಲಿ ಆಯೋಜಿಸುತ್ತಾರೆ. ಗೆದ್ದ ವಿದ್ಯಾರ್ಥಿಗಳಿಗೆ ತಮ್ಮ ಹಣದಲ್ಲೇ ಪೆನ್‌, ಪೆನ್ಸಿಲ್‌ ಅಥವಾ ಚಾಕೊಲೆಟ್‌ ಉಡುಗೊರೆಯಾಗಿ ನೀಡಿ ಇತರ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಾರೆ. ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಇನ್ನಿತರ ಆಧುನಿಕ ಗ್ಯಾಜೆಟ್‌ಗಳನ್ನು ವಿದ್ಯಾರ್ಥಿಗಳ ಕಲಿಕೆಗೆ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ ಸರೋಜಮ್ಮ. ಪಾಠಗಳಲ್ಲಿ ಬರುವ ಜಾನಪದ ಕಲೆಗಳು, ದಸರಾ, ಸಂಪ್ರದಾಯಿಕ ಆಚರಣೆಗಳು, ಚಂದ್ರಯಾನ ಹೀಗೆ ಹಲವು ವಿಷಯಗಳ ಬಗ್ಗೆ ಜಾಲತಾಣದಲ್ಲಿ ಲಭ್ಯವಿರುವ ಚಿತ್ರ, ವಿಡಿಯೊಗಳನ್ನು ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸುತ್ತಾರೆ.

ತಾಂಡಾದ ಯಾವ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತವಾಗದಂತೆ ಎಚ್ಚರ ವಹಿಸುತ್ತಿದ್ದಾರೆ. ಶಾಲೆಗೆ ಬರದ ವಿದ್ಯಾರ್ಥಿಗಳ ಮನೆಗೆ ಭೇಟಿ ಕೊಟ್ಟು, ಮಗುವಿನ, ಪೋಷಕರ ಮನವೊಲಿಸಿ ಶಾಲೆಗೆ ಕರೆತರುತ್ತಾರೆ. ಸಹೋದ್ಯೋಗಿಗಳ, ಮುಖ್ಯಶಿಕ್ಷಕರ ಸಹಕಾರದಿಂದ ಓಬಜ್ಜಿಹಳ್ಳಿಯ ವಿದ್ಯಾರ್ಥಿಗಳ, ಪೋಷಕರ ಮನಗೆದ್ದಿದ್ದಾರೆ, ಎಲ್ಲರ ಪ್ರೀತಿಗೆ, ಅಕ್ಕರೆಗೆ ಪಾತ್ರರಾಗಿದ್ದಾರೆ ಸರೋಜಮ್ಮ.

ಬರೋಬ್ಬರಿ 31 ವರ್ಷಗಳ ಸೇವಾ ಅನುಭವ ಹೊಂದಿರುವ ಅವರು ಶಿಸ್ತು, ಸಮಯ ಪಾಲನೆಗೆ ಹೆಸರುವಾಸಿ, ಮಕ್ಕಳಲ್ಲೂ ಅದೇ ಭಾವನೆಯನ್ನು ಸದ್ದಿಲ್ಲದೇ ಬಿತ್ತುತ್ತಿದ್ದಾರೆ. ಬಡ ಕುಟುಂಬದಿಂದ ಬಂದ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಅಕ್ಷರ ಕ್ರಾಂತಿಯ ದೀಪ ಬೆಳಗಿಸುತ್ತಿದ್ದಾರೆ.

ಶಾಲೆಯ ಅಂದಗೊಳಿಸುವ ಶಿಕ್ಷಕ

ಸರ್ಕಾರಿ ಶಾಲೆ ಎಂದರೆ ಥಟ್ಟನೆ ನೆನಪಾಗುವುದು ಶಿಥಿಲ ಕೊಠಡಿಗಳು, ಮಳೆ ಬಂದರೆ ಸೋರುವ ಚಾವಣಿಗಳು, ಬಣ್ಣ ಮಾಸಿಕೊಂಡು ನಿಂತಿರುವ ಕಟ್ಟಡಗಳು. ಶಾಲೆಗಳ ಸ್ಥಿತಿ ನೋಡಿಯೇ ಬಹುತೇಕ ಪೋಷಕರು ಕಷ್ಟವಾದರೂ ಸರಿಯೇ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ.

ಪೋಷಕರ ಈ ಮನೋಭಾವವನ್ನು ದೂರ ಮಾಡುವ ನಿಟ್ಟಿನಲ್ಲಿ ಶಾಲೆಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ ದಾವಣಗೆರೆ ದಕ್ಷಿಣ ವಲಯದ ಚಿಕ್ಕತೊಗಲೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಈ.

ತಾವು ಕಾರ್ಯ ನಿರ್ವಹಿಸಿದ ಎಲ್ಲ ಶಾಲೆಗಳನ್ನು ಸರ್ಕಾರ ಹಾಗೂ ಇನ್ನಿತರ ಸಂಘ, ಸಂಸ್ಥೆಗಳು, ಗ್ರಾಮಸ್ಥರ ಸಹಾಯ ಪಡೆದು ಶಾಲೆಗಳ ಮೂಲ ಸೌಲಭ್ಯಕ್ಕೆ ಒತ್ತು ನೀಡುತ್ತ, ಖಾಸಗಿ ಶಾಲೆಗಳನ್ನೂ ನಾಚಿಸುವಂತೆ ಅಭಿವೃದ್ಧಿ ಮಾಡಿದ್ದಾರೆ. ಆ ಮೂಲಕ ಸರ್ಕಾರಿ ಶಾಲೆಗಳ ದಾಖಲಾತಿ ಗಣನೀಯ ಏರಿಕೆ ಕಾಣುವಂತೆ ಮಾಡಿದ್ದಾರೆ. ಶಾಲೆಯಲ್ಲಿ ಮೌಲ್ಯಯುತ ಶಿಕ್ಷಣಕ್ಕೂ ಒತ್ತು ನೀಡುತ್ತಿದ್ದಾರೆ.

ಅವರ ಈ ಅವಿರತ ಶ್ರಮದ ಫಲವಾಗಿ ಪ್ರಸಕ್ತ ಸಾಲಿನ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಾಲೆಯ ಗೋಡೆಗಳ ಮೇಲೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಮಾಹಿತಿ, ಚಿತ್ರಗಳನ್ನು ಸ್ವತಃ ಬರೆಯುವ ಅವರು ವಿದ್ಯಾರ್ಥಿಗಳಿಗೆ ಅವುಗಳನ್ನು ಗಮನಿಸುವಂತೆ, ಕಲಿಯುವಂತೆ ಪ್ರೇರೇಪಿಸುತ್ತಾರೆ. ಬೋಧನೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸುತ್ತಿದ್ದಾರೆ.

ಶಾಲೆ ಬಿಟ್ಟ ವಿದ್ಯಾರ್ಥಿಗಳು ಹಾಗೂ ನಿರಂತರ ಗೈರಾಗುವ ಮಕ್ಕಳನ್ನು ಶಾಲೆಗೆ ಕರೆತಂದು ಕಲಿಕೆಯಲ್ಲಿ ಆಸಕ್ತಿ ಮೂಡಿಸುತ್ತಿದ್ದಾರೆ. ಅವರು ಕಾರ್ಯ ನಿರ್ವಹಿಸಿದ ಈ ಹಿಂದಿನ ಕೊಡಗನೂರು ಕ್ಲಸ್ಟರ್‌ನ ಬೊಮ್ಮೇನಹಳ್ಳಿ, ದಾವಣಗೆರೆ ದಕ್ಷಿಣ ವಲಯದ ಚಟ್ಟೋಬನಹಳ್ಳಿ ಶಾಲೆಗಳನ್ನೂ ಅಭಿವೃದ್ಧಿಗೊಳಿಸಿದ್ದಾರೆ.

ಚಿಕ್ಕತೊಗಲೇರಿ ಗ್ರಾಮದ ಶಾಲೆಯಲ್ಲಿ ಕಂಪ್ಯೂಟರ್‌, ಸಿಸಿಟಿವಿ ಕ್ಯಾಮೆರಾ, ಮ್ಯೂಸಿಕ್‌ ಸಿಸ್ಟಂ ಅಳವಡಿಸಲಾಗಿದೆ. ಗ್ರಾಮ ಪಂಚಾಯಿತಿ ನೆರವಿನಿಂದ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಸರ್ಕಾರದ ಅನುದಾನದಿಂದ ಹೊಸ ಕೊಠಡಿ ನಿರ್ಮಾಣ ಮಾಡಲಾಗಿದೆ.

29 ವರ್ಷಗಳ (1994) ಸೇವಾ ಅನುಭವ ಹೊಂದಿರುವ ಜಗಳೂರು ತಾಲ್ಲೂಕು ಚಿಕ್ಕಮಲ್ಲನಹೊಳೆ ಗ್ರಾಮದ ಬಸವರಾಜ ಅವರು ಕಡು ಬಡತನದಿಂದ ಬೆಳೆದವರು.

‘ನಾನೂ ಒಬ್ಬ ಶಾಲೆ ಬಿಟ್ಟ ವಿದ್ಯಾರ್ಥಿಯಾಗಿದ್ದೆ. ನನ್ನ ಅತ್ಯಂತ ಬಡತನದ ದಿನಗಳಲ್ಲಿ ಶಿಕ್ಷಕರು, ಉಪನ್ಯಾಸಕರು, ಹೊಟ್ಟೆಗೆ ಅನ್ನ, ಮೈಗೆ ಬಟ್ಟೆ, ತಲೆಗೆ ಎಣ್ಣೆ, ಕಲಿಯಲು ಪೆನ್ನು, ನೋಟ್‌ಬುಕ್‌ ಎಲ್ಲ ಕೊಟ್ಟು ನನ್ನನ್ನೊಬ್ಬ ಸಾಕ್ಷರನನ್ನಾಗಿ ಮಾಡಿದ್ದಾರೆ. ಅವರೆಲ್ಲರ ಋಣ ತೀರಿಸಲು ಆಗದು. ಹೀಗಾಗಿ, ನನ್ನ ವಿದ್ಯಾರ್ಥಿಗಳಿಗೆ ಒಂದಷ್ಟು ಅಕ್ಷರ ಕಲಿಸಿ, ಮೌಲ್ಯಯುತ ಶಿಕ್ಷಣ ನೀಡುತ್ತ ಸಾಕ್ಷರರನ್ನಾಗಿ ಮಾಡುವ ಮೂಲಕ ಅವರ ಋಣ ತೀರಿಸುತ್ತಿರುವೆ’ ಎನ್ನುವರು ಶಿಕ್ಷಕ ಬಸವರಾಜ.

ವಿದ್ಯಾರ್ಥಿಗಳಿಗೆ ಪೆನ್‌ ನೀಡಿ ಖುಷಿಪಡಿಸಿದ ಶಿಕ್ಷಕಿ ಸರೋಜಮ್ಮ
ವಿದ್ಯಾರ್ಥಿಗಳಿಗೆ ಪೆನ್‌ ನೀಡಿ ಖುಷಿಪಡಿಸಿದ ಶಿಕ್ಷಕಿ ಸರೋಜಮ್ಮ
ಶಿಕ್ಷಕ ಬಸವರಾಜ ಈ
ಶಿಕ್ಷಕ ಬಸವರಾಜ ಈ
ಸುಸಜ್ಜಿತ ಚಿಕ್ಕತೊಗಲೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಸುಸಜ್ಜಿತ ಚಿಕ್ಕತೊಗಲೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಗೋಡೆ ಬರಹದಲ್ಲಿ ನಿರತರಾಗಿರುವ ಶಿಕ್ಷಕ ಬಸವರಾಜ
ಗೋಡೆ ಬರಹದಲ್ಲಿ ನಿರತರಾಗಿರುವ ಶಿಕ್ಷಕ ಬಸವರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT