ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಸಿರಿಧಾನ್ಯಕೆ ಮೌಲ್ಯವ ಬೆರೆಸಿ...

Published 8 ಮಾರ್ಚ್ 2024, 6:59 IST
Last Updated 8 ಮಾರ್ಚ್ 2024, 6:59 IST
ಅಕ್ಷರ ಗಾತ್ರ

12 ವರ್ಷಗಳ ಹಿಂದೆ ಭತ್ತದ ನಾಡಲ್ಲಿ ಸಿರಿಧಾನ್ಯ ಬಿತ್ತಿ ಬೆಳೆದ ಸರೋಜಾ ಅವರಿಗೆ ಅದನ್ನು ಹೇಗೆ ಕಟಾವು ಮಾಡಬೇಕು, ಹೇಗೆ ಶುಚಿಗೊಳಿಸಬೇಕು, ಮಾರುಕಟ್ಟೆ ವ್ಯವಸ್ಥೆ ಏನು? ಎಂಬ ಬಗ್ಗೆ ಲವಲೇಶವೂ ಇರಲಿಲ್ಲ. ಆದರೀಗ ಅವರ ಕೈಯಲ್ಲಿ ತಯಾರಾದ ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ‘ತದ್ವನಂ’ ಹೆಸರಿನಲ್ಲಿ ತಯಾರಾದ ಸಿರಿಧಾನ್ಯ ಉತ್ಪನ್ನಗಳಿಗೆ ರಾಜ್ಯ, ರಾಷ್ಟ್ರ, ಆನ್‌ಲೈನ್‌ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ.

ತಾವೇ ಬೆಳೆದ ಬೆಳೆಗೆ ಮೌಲ್ಯವರ್ಧನೆ ಮಾಡಿ, ಮಾರುಕಟ್ಟೆ ಸೃಷ್ಟಿಸಿಕೊಂಡು ಕೈತುಂಬಾ ಆದಾಯ ಗಳಿಸುತ್ತಿರುವ ಹರಿಹರ ಸಮೀಪದ ಪುಟ್ಟ ಗ್ರಾಮ ನಿಟ್ಟೂರಿನ ಸರೋಜಾ ಎನ್‌. ಪಾಟೀಲ್‌ ಅವರ ಯಶೋಗಾಥೆಯಿದು.

ಕೃಷಿಯೆಡೆಗಿನ ಒಲವು, ಪ್ರಯೋಗಶೀಲತೆಯ ತುಡಿತ ಅವರನ್ನು ಕ್ರಿಯಾತ್ಮಕವಾಗಿ ತೊಡಗಿಕೊಳ್ಳಲು ಪ್ರೇರೇಪಿಸಿತು. ಈ ಪ್ರೇರೇಪಣೆಯೇ ಅವರನ್ನು ಸಾಧಕಿಯರ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಉದ್ಯೋಗದಾತೆಯಾಗಿ ಹಲವರ ಬದುಕಿಗೂ ಆಸರೆಯಾಗಿದ್ದಾರೆ ಸರೋಜಾ.

45 ಬಗೆಯ ಬೇಳೆ, ಕಾಳು, ಸಿರಿಧಾನ್ಯ ಬಳಸಿ ಅವರು ತಯಾರಿಸುವ ‘ಎನರ್ಜಿ ಮಿಕ್ಸ್’ಗೆ ಬಲು ಬೇಡಿಕೆ. ಅವರೇ ಹೇಳುವಂತೆ ‘ದೆಹಲಿಗೆ ಕೃಷಿ ಸಂಬಂಧಿತ ಕಾರ್ಯಾಗಾರಕ್ಕೆ ಹೋದಾಗ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್‌ ನಾನು ತಯಾರಿಸಿದ ಎನರ್ಜಿ ಮಿಕ್ಸ್‌ ಸವಿದು ಖುಷಿ ಪಟ್ಟಿದ್ದರು. ಜತೆಗೆ ವಿದೇಶಕ್ಕೆ ಕಳುಹಿಸಲು ನಮ್ಮ ಉತ್ಪನ್ನವನ್ನು ಆರ್ಡರ್‌ ಮಾಡಿ ತರಿಸಿಕೊಂಡಿದ್ದರು’ ಎಂದು ಖುಷಿಯಿಂದ ಹೇಳಿದರು.

ಇದಲ್ಲದೆ, ನವಣೆ ಬಿಸಿಬೇಳೆ ಬಾತ್‌ ಪುಡಿ, ರಾಗಿ ಮಾಲ್ಟ್‌, ವಿವಿಧ ಸಿರಿಧಾನ್ಯಗಳ ಶಾವಿಗೆ (ಊದಲು, ಸಾಮೆ, ಕೊರಲೆ, ನವಣೆ, ರಾಗಿ, ಅಕ್ಕಿ, ಗೋಧಿ, ಸಜ್ಜೆ), ಊದಲು, ಸಾಮೆ ಇಡ್ಲಿ ಮಿಕ್ಸ್‌, ವಿವಿಧ ಬಗೆಯ ಹಪ್ಪಳ, ನುಗ್ಗೆ ಸೊಪ್ಪು ಚಟ್ನಿ ಪುಡಿ, ಅಗಸೆ ಚಟ್ನಿ ಪುಡಿ, ಪಲ್ಯದ ಪುಡಿ, ತಿಳಿ ಸಾಂಬಾರ್‌ ಪುಡಿ, ವಡ್ರಾಗಿ ಹಿಟ್ಟು, ಡ್ರೈಫ್ರೂಟ್ಸ್‌ ಲಡ್ಡು, ರಾಗಿ ಮಾಲ್ದಿ, ಉಪ್ಪಿನ ಕಾಯಿ, ಸಿರಿಧಾನ್ಯದ ರೊಟ್ಟಿ, ಸಿರಿಧಾನ್ಯದ ಸ್ನ್ಯಾಕ್ಸ್‌… ಹೀಗೆ ಸಿರಿಧಾನ್ಯಕ್ಕೆ ಮೌಲ್ಯವರ್ಧನೆ ಮಾಡುವ ಕಾಯಕ ನಿರಂತರವಾಗಿ ನಡೆಯುತ್ತಲೇ ಇದೆ.

ಬೆಂಗಳೂರಿನ ಸಹಜ ಸಮೃದ್ಧಿ, ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಇವರ ಉತ್ಪನ್ನಗಳು ಮಾರಾಟವಾಗುತ್ತಿವೆ. ‘ತದ್ವನಂ’ ಬ್ರಾಂಡ್‌ ಅಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ನೋಂದಣಿ ಹೊಂದಿದ್ದಾರೆ.

ಸ್ಥಿತಿವಂತರಾದ ಸರೋಜಾ ಅವರದ್ದು ಸದಾ ಕ್ರಿಯಾಶೀಲ ವ್ಯಕ್ತಿತ್ವ. ಯಾವ ಕ್ಷೇತ್ರದಲ್ಲಾದರೂ ಪ್ರಯೋಗಶೀಲವಾಗಿ ತೊಡಗಿಕೊಳ್ಳಬೇಕೆಂದು ಯೋಚಿಸುತ್ತಿರುವಾಗ ಅವರನ್ನು ಸೆಳೆದದ್ದು ಕೃಷಿ ಕ್ಷೇತ್ರ. ತಮ್ಮ 21 ಎಕರೆ ಜಮೀನಿನಲ್ಲಿ ಪತಿಯ ಸಹಕಾರದೊಂದಿಗೆ ವಿವಿಧ ಭತ್ತದ ತಳಿ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತರು. ಕೃಷಿ ಇಲಾಖೆ, ಕೃಷಿ ವಿಜ್ಞಾನಿಗಳ ಮಾರ್ಗದರ್ಶನ ಪಡೆದು ಹಲವು ಪ್ರಯೋಗಗಳಿಗೆ ತೆರೆದುಕೊಂಡರು. ಭತ್ತದ ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸಿದರು. ಅವರ ನಿರಂತರ ಪ್ರಯೋಗದಿಂದ ಅವರೊಬ್ಬ ಭತ್ತ ತಳಿ ತಜ್ಞೆಯಾಗಿ, ಮಾರ್ಗದರ್ಶಕಿಯಾಗಿ ಹೊರಹೊಮ್ಮಿದರು.

ಬಳಿಕ ಕೃಷಿ ತಜ್ಞರ ಸಲಹೆಯಂತೆ ಸಿರಿಧಾನ್ಯ ಬೆಳೆಯ ಪ್ರಯೋಗಕ್ಕೂ ತಮ್ಮನ್ನು ಒಡ್ಡಿಕೊಂಡರು. ಸಿರಿಧಾನ್ಯದ ಬಗ್ಗೆ ಏನೂ ಅರಿಯದಿದ್ದರೂ ತಮ್ಮ ಅಡಿಕೆ ತೋಟದಲ್ಲಿ ಬಿತ್ತನೆ ಮಾಡಿ ತಕ್ಕಷ್ಟು ಬೆಳೆ ತೆಗೆದರು. ಆದರೆ ಅದಕ್ಕೆ ಮಾರುಕಟ್ಟೆ ಸೃಷ್ಟಿಸಲು ಹರಸಾಹಸ ಪಡಬೇಕಾಯಿತು. ಅದನ್ನೇ ಸವಾಲಾಗಿ ಸ್ವೀಕರಿಸಿದ ಸರೋಜಾ ಅವರು ಸಿರಿಧಾನ್ಯ ಬೆಳೆಗಳ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಹಲವು ಪ್ರಯೋಗಗಳಿಗೆ ಇಳಿದರು. ಅದರಲ್ಲಿ ಯಶಸ್ವಿಯೂ ಆದರು.

ಅವರ ಈ ಪ್ರಯೋಗಾತ್ಮಕತೆಗೆ ರಾಜ್ಯ ಸರ್ಕಾರದ ಕೃಷಿ ಜೀವವೈವಿಧ್ಯ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಅರವತ್ತೈದರ ಇಳಿ ವಯಸ್ಸಲ್ಲೂ ಅದಮ್ಯ ಕನಸು ಹೊತ್ತು ನಿರಂತರ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಲೇ ಇದ್ದಾರೆ ಸರೋಜಾ. 

ಸರೋಜಾ ಅವರ ನಿವಾಸದಲ್ಲಿ ಸಿರಿಧಾನ್ಯದ ಉತ್ಪನ್ನಗಳನ್ನು ತಯಾರಿಸುತ್ತಿರುವ ಮಹಿಳೆಯರು
ಸರೋಜಾ ಅವರ ನಿವಾಸದಲ್ಲಿ ಸಿರಿಧಾನ್ಯದ ಉತ್ಪನ್ನಗಳನ್ನು ತಯಾರಿಸುತ್ತಿರುವ ಮಹಿಳೆಯರು
ಸರೋಜಾ ಅವರ ನಿವಾಸದಲ್ಲಿ ಸಿರಿಧಾನ್ಯದ ಉತ್ಪನ್ನಗಳನ್ನು ತಯಾರಿಸುತ್ತಿರುವ ಮಹಿಳೆಯರು
ಸರೋಜಾ ಅವರ ನಿವಾಸದಲ್ಲಿ ಸಿರಿಧಾನ್ಯದ ಉತ್ಪನ್ನಗಳನ್ನು ತಯಾರಿಸುತ್ತಿರುವ ಮಹಿಳೆಯರು

Cut-off box - ಸ್ಥಳೀಯವಾಗಿ ಮಾರುಕಟ್ಟೆ ಲಭಿಸುತ್ತಿಲ್ಲ ನಮ್ಮ ಉತ್ಪನ್ನಗಳಿಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಾರುಕಟ್ಟೆ ಲಭಿಸುತ್ತಿದೆ. ಆದರೆ ಸ್ಥಳೀಯವಾಗಿ ಮಾರುಕಟ್ಟೆ ಲಭಿಸುತ್ತಿಲ್ಲ. ರಾಜ್ಯ ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್‌ ನೀಡುವ ಯೋಜನೆಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ. ಆದರೆ ಇಂತಹ ಯೋಜನೆಗಳಿಗೆ ಸ್ಥಳೀಯರ ಉತ್ಪನ್ನಗಳನ್ನು ಬಳಸಿಕೊಂಡರೆ ಯೋಜನೆ ಸಾಕಾರವಾದೀತು. ಏಕೆಂದರೆ ಸ್ಥಳೀಯವಾಗಿ ಉದ್ಯೋಗಸೃಷ್ಟಿಗೂ ಇದು ದಾರಿಯಾಗುತ್ತದೆ. ಸಣ್ಣ ಪುಟ್ಟ ಉದ್ದಿಮೆಗಳನ್ನೂ ಪ್ರೋತ್ಸಾಹಿಸಿದಂತಾಗುತ್ತದೆ. -ಸರೋಜಾ ಎನ್‌. ಪಾಟೀಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT