ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರೇಶ್ವರ ಸ್ವಾಮಿಗೆ ವಜ್ರ ಕಿರೀಟ

Last Updated 10 ಡಿಸೆಂಬರ್ 2017, 9:27 IST
ಅಕ್ಷರ ಗಾತ್ರ

ಹರಿಹರ: ಇತಿಹಾಸ ಪ್ರಸಿದ್ಧ ಹರಿಹರೇಶ್ವರ ಮೂರ್ತಿಗೆ ಡಿ.12ರಂದು ವಜ್ರಖಚಿತ ಚಿನ್ನದ ಕಿರೀಟಧಾರಣೆಗೆ ಮೂಹೂರ್ತ ನಿಗದಿಪಡಿಸಲಾಗಿದೆ. ಕಿರೀಟ ತಯಾರಿಯ ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗಿದೆ.

ಹರಿಹರೇಶ್ವರ ಸ್ವಾಮಿಯ ಸಾಲಿಗ್ರಾಮದ ಎಂಟು ಅಡಿಯ ಮೂಲಮೂರ್ತಿಗಿರುವ ಕಿರೀಟದ ಮಾದರಿಯಲ್ಲೇ ₹ 64 ಲಕ್ಷ ಮೌಲ್ಯದ ಚಿನ್ನದ ಕಿರೀಟ ನಿರ್ಮಾಣವಾಗುತ್ತಿದೆ. ಮೊದಲ ಹಂತದಲ್ಲಿ ದೇವಸ್ಥಾನ ಅರ್ಚಕರಿಂದ ವಿಗ್ರಹದ ಕಿರೀಟದ ಮೇಣದ ಮಾದರಿಯನ್ನು ಸಂಗ್ರಹಿಸಲಾಯಿತು.

ಬಲಭಾಗದಲ್ಲಿ ಶಿವನ ಜಟಾಜೂಟ, ಅದರಲ್ಲಿ ಚಂದ್ರ ಹಾಗೂ ಎಡಭಾಗದಲ್ಲಿ ವಿಷ್ಣುವಿನ ಕೀರಿಟದ ಮಾದರಿ. ಕೆಳ ಅಂಚಿನ ಎಡ ಭಾಗದಲ್ಲಿ ಎಂಟು ಶಿವ ಸಾಲಿಗ್ರಾಮ ಹಾಗೂ ಬಲ ಭಾಗದಲ್ಲಿ ಎಂಟು ವಿಷ್ಣು ಸಾಲಿಗ್ರಾಮದ ಮಾದರಿಯೊಂದಿಗೆ ಕಿರೀಟ ಸಿದ್ಧವಾಗುತ್ತಿದೆ.

ದೇಗುಲದ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು, ತಹಶೀಲ್ದಾರ್ ಅಧ್ಯಕ್ಷತೆಯಲ್ಲಿರುವ ಮುಜರಾಯಿ ಇಲಾಖೆಯ ಖಾತೆಯಲ್ಲಿ ಜಮಾ ಮಾಡಲಾಗುತ್ತಿದೆ. ಹೀಗೆ ಸಂಗ್ರಹವಾದ ಮೊತ್ತ ಸುಮಾರು ₹ 1.30 ಕೋಟಿ ಇದೆ. ಈ ಖಾತೆಯಿಂದ ₹ 64 ಲಕ್ಷ ಮೊತ್ತವನ್ನು ಕಿರೀಟ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ.

ಎರಡು ಕೆಜಿ ತೂಕದ ವಜ್ರಖಚಿತ ಚಿನ್ನದ ಕಿರೀಟ ತಯಾರಿಯ ಜವಾಬ್ದಾರಿಯನ್ನು ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ನಗರದ ನವರತ್ನ ಜುವೆಲರ್ಸ್‌ಗೆ ವಹಿಸಲಾಗಿದೆ. ಸಂಸ್ಥೆಯ ಕುಶಲಕರ್ಮಿಗಳು 10 ದಿನಗಳಿಂದ ಪಾಳಿ ಆಧಾರದಲ್ಲಿ ದಿನದ 24 ಗಂಟೆಯೂ ಇದರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

‘20 ವರ್ಷಗಳ ಹಿಂದೆ ನನ್ನ ತಂದೆ ಎಚ್.ಶಿವಪ್ಪ ಅವಧಿಯಲ್ಲಿ ವಿಗ್ರಹದ ಸುಸ್ಥಿತಿಗೆ ವಜ್ರಲೇಪನ ಕಾರ್ಯ ನಡೆದಿತ್ತು. ನನ್ನ ಅವಧಿಯಲ್ಲಿ ಸರ್ಕಾರದ ಸಹಕಾರದಿಂದ ಹರಿಹರೇಶ್ವರ ಸ್ವಾಮಿಗೆ ಅಷ್ಟಬಂಧ, ಹೋಮ ಹಾಗೂ ಬಂಗಾರದ ಕಿರೀಟ ಧಾರಣೆ ಕಾರ್ಯಕ್ರಮ ನಡೆಯುತ್ತಿರುವುದು ಭಾಗ್ಯವೆನ್ನಬೇಕು’ ಎಂದು ಶಾಸಕ ಎಚ್.ಎಸ್.ಶಿವಶಂಕರ್ ಅಭಿಪ್ರಾಯಪಟ್ಟರು.

‘ಧಾರಣೆಗೆ ಸಿದ್ಧಗೊಳ್ಳುತ್ತಿರುವ ಕಿರೀಟವು ಹರಳು, ಪಚ್ಚೆ ಹಾಗೂ ವಜ್ರಗಳನ್ನು ಸೇರಿ ಒಟ್ಟು ಎರಡು ಕೆ.ಜಿ. ತೂಗಲಿದೆ. 4.5 ಕ್ಯಾರೆಟ್ ವಜ್ರ, 30 ಕ್ಯಾರೆಟ್ ಮಾಣಿಕ್ಯ ಹಾಗೂ ಪಚ್ಚೆಯ ಹರಳುಗಳನ್ನು ಕಿರೀಟದ ಅಲಂಕಾರಕ್ಕಾಗಿ ಬಳಸಲಾಗುತ್ತಿದೆ. ಮುಜರಾಯಿ ಇಲಾಖೆ ಕಿರೀಟ ನಿರ್ಮಾಣಕ್ಕಾಗಿ ಡಿ.1ರಂದು ಹಣ ಬಿಡುಗಡೆ ಮಾಡಿದೆ. ಕಿರೀಟ ನಿರ್ಮಾಣಕ್ಕೆ ಕನಿಷ್ಠ 60 ದಿನಗಳ ಕಾಲಾವಕಾಶ ಅಗತ್ಯವಿತ್ತು. ಆದರೆ, ಶಾಸಕ ಶಿವಶಂಕರ ಹಾಗೂ ಅಧಿಕಾರಿಗಳ ಮನವಿಯ ಮೇರೆಗೆ 10 ದಿನಗಳ ನಿರಂತರ ಶ್ರಮದಿಂದ ಸುಂದರ ಕಿರೀಟ ಸಿದ್ಧಗೊಂಡಿದೆ’ ಎನ್ನುತ್ತಾರೆ ನವರತ್ನ ಜುವೆಲರ್ಸ್‌ ಪಾಲುದಾರ ಆರ್.ಟಿ.ಚಂದ್ರಕಾಂತ್.

ಕಿರೀಟ ತಯಾರಿಕೆಗೆ ಅಗತ್ಯವಾದ ಮಾದರಿ, ವಿನ್ಯಾಸ, ಹರಳುಗಳ ಅಲಂಕಾರ ಸೇರಿದಂತೆ ವಿವಿಧ ಕುಶಲ ಕಾರ್ಯಗಳನ್ನು ಐದು ವಿಭಾಗಗಳಾಗಿ ವಿಂಗಡಿಸಿದ್ದೇವೆ. ಇದರಿಂದ ಕಡಿಮೆ ಸಮಯದಲ್ಲಿ ವೇಗವಾಗಿ ಕಿರೀಟ ಸಿದ್ಧಪಡಿಸಲು ಸಾಧ್ಯವಾಗಿದೆ. ಕಿರೀಟದ ತಯಾರಿ ಪೂರ್ಣಗೊಂಡಿದ್ದು, ಅಂತಿಮ ಹಂತದ ಕುಶಲ ಕಾರ್ಯಗಳು, ವಜ್ರ, ಮಾಣಿಕ್ಯ, ಹರಳು ಜೋಡಣೆ ಕಾರ್ಯ ನಡೆಯುತ್ತಿದೆ. ಭಾನುವಾರ (ಡಿ.10) ಸಂಜೆ ಕಿರೀಟವನ್ನು ದೇವಸ್ಥಾನ ಮಂಡಳಿ ವಶಕ್ಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ನಗರದ ಕಸಬಾ ಗ್ರಾಮದೇವತೆಗೆ 500 ಗ್ರಾಂ ಚಿನ್ನದ ಕಿರೀಟ ಹಾಗೂ ಹಲವಾರು ದೇವಸ್ಥಾನಗಳಿಗೆ ಬೆಳ್ಳಿಯ ಕಿರೀಟ ಮಾಡಿಕೊಟ್ಟಿರುವ ಅನುಭವ, ವಜ್ರಖಚಿತ ಚಿನ್ನದ ಕಿರೀಟ ನಿರ್ಮಾಣಕ್ಕೆ ಸಹಕಾರಿಯಾಯಿತು. ಲಾಭದ ನಿರೀಕ್ಷೆ ಇಲ್ಲದೇ, ದೇವರ ಆಶೀರ್ವಾದಕ್ಕಾಗಿ ಕಿರೀಟ ತಯಾರಿಕೆ ಒಪ್ಪಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಸಿದ್ಧತೆ: ಕಿರೀಟಧಾರಣೆಗೆ ಪೂರ್ವವಾಗಿ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ 4 ರಾಜ್ಯಗಳ 200ಕ್ಕೂ ಹೆಚ್ಚು ವಟುಗಳು, ಪುರೋಹಿತರ ಹಾಗೂ ವಿದ್ವಾಂಸರು ಧಾರ್ಮಿಕ ಪೂಜೆ, ಯಾಗ, ಯಜ್ಞಗಳನ್ನು ನಡೆಸುತ್ತಿದ್ದಾರೆ. ಡಿ.11 ರಂದು ನಗರದ ಗ್ರಾಮದೇವತೆ ದೇವಸ್ಥಾನದಿಂದ ನಗರದ ಮುಖ್ಯ ಬೀದಿಗಳಲ್ಲಿ ಕಿರೀಟದ ಮೆರವಣಿಗೆ ನಡೆಯಲಿದೆ.

* * 

ಭಕ್ತರ ಕಾಣಿಕೆ ಖಜಾನೆಗೆ ಸೇರುವ ಬದಲು, ದೇವರ ಕಾರ್ಯಕ್ಕೆ ಬಳಕೆಯಾಗುತ್ತಿರುವುದು ಸಂತಸ ನೀಡಿದೆ. ನನ್ನ ಅವಧಿಯ ಅಭಿವೃದ್ಧಿ ಕಾರ್ಯಗಳಿಗೆ ಈ ದೈವ ಕಾರ್ಯ ಕಳಸಪ್ರಾಯವಾಗಿದೆ.
ಎಚ್.ಎಸ್.ಶಿವಶಂಕರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT