ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕ್ರಿಸ್‌ಮಸ್‌ ಆಚರಣೆಗೆ ಭರದ ಸಿದ್ಧತೆ

ಕಾಲೊನಿ, ಚರ್ಚ್‌ಗಳಲ್ಲಿ ವಿದ್ಯುತ್‌ ದೀಪಗಳ ಅಲಂಕಾರ
Published 23 ಡಿಸೆಂಬರ್ 2023, 4:49 IST
Last Updated 23 ಡಿಸೆಂಬರ್ 2023, 4:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕ್ರಿಸ್‌ಮಸ್‌ ಎಂದಾಗ ನೆನಪಾಗುವುದು ನಕ್ಷತ್ರದ ಬೆಳಕಿನಲ್ಲಿ ಮಿನುಗುವ ಮನೆ, ಚರ್ಚ್‌. ವಿವಿಧ ತಿಂಡಿಗಳ ಪರಿಮಳದಲ್ಲಿ ಮುಳುಗೇಳುವ ವಾತಾವರಣ, ಇಂಪಾದ ಕ್ಯಾರಲ್ಸ್‌ ಗೀತೆಗಳ ಗಾಯನ.

ಡಿಸೆಂಬರ್‌ ತಿಂಗಳು ಬಂತೆಂದರೆ ಕ್ರೈಸ್ತರಲ್ಲಿ ಸಂಭ್ರಮ ಮೂಡುತ್ತದೆ. ಹಬ್ಬದ ಆಚರಣೆಗೆ ಇನ್ನೂ ಎರಡು ವಾರ ಇರುವಾಗಲೇ, ಸಿದ್ಧತೆ ಆರಂಭವಾಗುತ್ತದೆ. 

ಕ್ರಿಸ್‌ಮಸ್‌ ಆಚರಣೆಗೆ (ಡಿ.25) ಎರಡೇ ದಿನ ಬಾಕಿ ಇದ್ದು, ಕೇಕ್‌ ತಯಾರಿ, ಸ್ನೇಹಿತರಿಗೆ ಸಿಹಿ ವಿತರಣೆಗೆ ಸಿದ್ಧತೆ ನಡೆದಿದೆ. ಹಬ್ಬದ ಪ್ರಯುಕ್ತ ಮನೆ, ಮನೆಗಳಲ್ಲಿ ಕ್ರಿಸ್‌ಮಸ್‌ ಟ್ರೀ, ವಿದ್ಯುದೀಪಗಳಿಂದ ಸಿಂಗರಿಸಲಾಗುತ್ತದೆ. ಮನೆಯ ಒಳಗೆ, ಹೊರಗೆ ದೀಪಗಳ ಅಲಂಕಾರ, ಮನೆಯ ಮುಂದೆ ಗೋದಲಿಗಳ ತಯಾರು ಆಗುತ್ತಿದೆ.

ಚರ್ಚ್‌ಗಳು ಹಾಗೂ ಮನೆಗಳು ಸುಣ್ಣ ಬಣ್ಣ ಕಂಡು, ವಿಶೇಷ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ನಕ್ಷತ್ರ ದೀಪಗಳು ಮನೆಮನೆಗಳಲ್ಲಿ ಬೆಳಗುತ್ತಿವೆ.

ಕ್ಯಾರೋಲ್ ಗೀತೆಗಳು: ಪ್ರತಿ ವರ್ಷ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕ್ಯಾರೋಲ್‌ (ಭಜನೆ ಅಥವಾ ಸೌಹಾರ್ದ ಸಂದೇಶ ಸಾರುವ  ಕ್ರಿಸ್‌ಮಸ್ ಹಾಡುಗಳು) ಗೀತೆಗಳನ್ನು ಹಾಡುವ ಸಂಪ್ರದಾಯ ಸಮುದಾಯದಲ್ಲಿದೆ.

ಹಬ್ಬಕ್ಕಿಂತ ಮೊದಲೇ ಆರಂಭವಾಗುವ ಈ ಸಂಪ್ರದಾಯದಲ್ಲಿ ಯುವಕ, ಯುವತಿಯರು ತಂಡವಾಗಿ ತಮ್ಮ ಕಾಲೊನಿಗಳ ಮನೆ ಮನೆಗಳಿಗೆ ಸಂಜೆ ತೆರಳಿ ಕ್ಯಾರೋಲ್‍ಗಳನ್ನು ಹಾಡುತ್ತಾರೆ. ನಗರದಲ್ಲಿ ಎಲ್ಲ ಚರ್ಚ್‌ನವರು ಮನೆ ಮನೆಗೆ ತೆರಳಿ ಗೀತೆಗಳನ್ನು ಹಾಡಲು ಈಗಾಗಲೇ ಆರಂಭಿಸಿದ್ದಾರೆ. 

‘ಯೇಸು ಕ್ರಿಸ್ತನು ಈ ಮನೆಯಲ್ಲಿ ಹುಟ್ಟಿದ್ದಾನೆ, ಈ ಮನೆಯಲ್ಲಿ ಜೀವಿಸುತ್ತಾನೆ’ ಎಂದು ಸಾರುತ್ತಾ ಜನರಲ್ಲಿ ಪವಿತ್ರ ಭಾವನೆ ಮೂಡಿಸುವುದು ಈ ಭಜನೆಯ ಉದ್ದೇಶ. ಹಾರ್ಮೋನಿಯಂ, ಕಾಂಗೊ, ಝಾಲರಿ, ಕೀಬೋರ್ಡ್‌ ಸೇರಿ ವಿವಿಧ ಸಂಗೀತ ಸಾಧನಗಳ ನೆರವಿನಿಂದ ಸುಶ್ರಾವ್ಯವಾಗಿ ಗೀತೆಗಳನ್ನು ಹಾಡುತ್ತಾರೆ.

ಭರ್ಜರಿ ವ್ಯಾಪಾರ: ಈ ವರ್ಷವೂ ಅದ್ಧೂರಿ ಆಚರಣೆಗೆ ಸಿದ್ಧತೆ ನಡೆದಿದ್ದು, ನಗರದಾದ್ಯಂತ ಹಬ್ಬದ ಖರೀದಿ ಜೋರಾಗಿದೆ. ಅಂಗಡಿಗಳಲ್ಲಿ ವಿವಿಧ ಗಾತ್ರದ ಕ್ರಿಸ್‌ಮಸ್‌ ಟ್ರೀ, ಬೇರೆ ಬೇರೆ ವಿನ್ಯಾಸದ ನಕ್ಷತ್ರ ದೀಪಗಳು, ಶುಭ ಸಂಕೇತದ ಗಂಟೆ, ರಿಬ್ಬನ್, ಬಣ್ಣದ ಕ್ಯಾಲೆಂಡರ್‌ಗಳು, ಅಲಂಕಾರಿಕ ದೀಪಗಳು ನಳನಳಿಸುತ್ತಿವೆ. ಈ ವರ್ಷ ಉತ್ತಮವಾಗಿ ವ್ಯಾಪಾರ ನಡೆಯುತ್ತಿದೆ ಎಂದು ದುರ್ಗದ ಬೈಲ್‌ನಲ್ಲಿರುವ ಅಂಗಡಿಗಳ ಮಾಲೀಕರು ಹೇಳಿದರು.

ಕ್ರಿಸ್‌ಮಸ್ ಅಂಗವಾಗಿ ಹುಬ್ಬಳ್ಳಿ ಹಳೆ ಬಸ್ ಸ್ಟಾಂಡ್ ಹತ್ತಿರದ ಮಿಷನ್ ಕಾಂಪೌಂಡ್ ಅನ್ನು ಶುಕ್ರವಾರ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು –ಪ್ರಜಾವಾಣಿ ಚಿತ್ರ
ಕ್ರಿಸ್‌ಮಸ್ ಅಂಗವಾಗಿ ಹುಬ್ಬಳ್ಳಿ ಹಳೆ ಬಸ್ ಸ್ಟಾಂಡ್ ಹತ್ತಿರದ ಮಿಷನ್ ಕಾಂಪೌಂಡ್ ಅನ್ನು ಶುಕ್ರವಾರ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು –ಪ್ರಜಾವಾಣಿ ಚಿತ್ರ

ಮೋಂಬತ್ತಿ ಬೆಳಕಿನಲ್ಲಿ ಸಂಭ್ರಮಾಚರಣೆ

ಹುಬ್ಬಳ್ಳಿ ನಗರದ ಬಹುತೇಕ ಚರ್ಚ್‌ಗಳಲ್ಲಿ ಕ್ರೈಸ್ತರು ಶ್ವೇತವಸ್ತ್ರಧರಿಸಿ ಶುಕ್ರವಾರ ಸಂಜೆ ಮೋಂಬತ್ತಿ ಬೆಳಕಿನಲ್ಲಿ ಯೇಸುವನ್ನು ಪ್ರಾರ್ಥಿಸಿದರು.  ತಮ್ಮ ಇಡೀ ಬದುಕನ್ನು ಜನರ ಒಳಿತಿಗಾಗಿಯೇ ಸವೆಸಿ ಬೆಳಕು ಕೊಟ್ಟವರು ಯೇಸುಕ್ರಿಸ್ತ. ಇದರ ಪ್ರತೀಕವಾಗಿ ಮೋಂಬತ್ತಿ ಬೆಳಗಿಸಲಾಗುತ್ತದೆ.  ‌‘ಪಾಪ ‌ಅಂಧಕಾರವ ಕಳೆದು ಹೊಸ ಬೆಳಕಿನ ಬದುಕಿನತ್ತ ನಡೆಸು’ ಸ್ವಾಮಿ ಎಂದು ನೂರಾರು ಜನ ಪ್ರಾರ್ಥಿಸಿದರು.

ಮನೆಗಳಲ್ಲಿ ಪ್ರಾರ್ಥನೆ

‘ಡಿ.12ರಿಂದ ಹಬ್ಬದ ಸಿದ್ಧತೆ ಆರಂಭಗೊಂಡಿದ್ದು ಸಮುದಾಯದವರ ಮನೆಮನೆಗಳಿಗೆ ತೆರಳಿ ಹಬ್ಬದ ಶುಭಾಶಯ ಕೋರುತ್ತೇವೆ. ಈ ವೇಳೆ ಹೊಸ ವರ್ಷದ ಕ್ಯಾಲೆಂಡರ್‌ ಕೊಡುತ್ತೇವೆ. ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. ಸಾಂಟಾಕ್ಲಾಸ್ ವೇಷಧಾರಿಯೊಂದಿಗೆ ಚರ್ಚ್‌ ಫಾದರ್‌ಗಳು ಜೊತೆಗಿದ್ದು ಶುಭಾಶಯ ಸಂದೇಶ ತಿಳಿಸುತ್ತೇವೆ. ಆಚರಣೆಯ ಅಂಗವಾಗಿ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ’ ಎಂದು ನಗರದ ಗಾಂಧಿವಾಡದ ಎಬಿಎಂ ತೆಲಗು ಬಾಪಿಸ್ಟ್‌ ಚರ್ಚ್‌ನ ಕಾರ್ಯದರ್ಶಿ ಡಿ.ಸ್ಯಾಮುವೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT