ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಬೆತ್ತದ ಲಾಠಿಗೆ ಹೆಚ್ಚಾದ ಬೇಡಿಕೆ

ಗುಡಿ ಕೈಗಾರಿಕೆಯ ಕೋಲೇ ಪೊಲೀಸರಿಗೆ ಇಷ್ಟ!
Last Updated 20 ಏಪ್ರಿಲ್ 2020, 19:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕಿಗೆ ಜನ ಅಂಜದೇ ಹೋದರೂ ಪೊಲೀಸರ ಲಾಠಿ ಏಟಿಗೆ ಪೇರಿ ಕೀಳುವುದು ಗ್ಯಾರಂಟಿ. ಲಾಠಿ ಏಟಿನ ರುಚಿ ಬಲ್ಲವರಿಗಷ್ಟೇ ಗೊತ್ತು. ಅಂತಹ ಗಟ್ಟಿ ಲಾಠಿಗಳನ್ನು ತಯಾರಿಸುವಲ್ಲಿ ನ್ಯೂ ಮೇದಾರ ಓಣಿಯ ಕುಮಾರ್‌ ನಿಸ್ಸೀಮರು.

ಲಾಕ್‌ಡೌನ್‌ ಅವಧಿಯಲ್ಲಿ ಸುಖಾಸುಮ್ಮನೆ ಓಡಾಡಿದ ಅದೆಷ್ಟೋ ಮಂದಿ ಲಾಠಿ ರುಚಿ ಕಂಡಿದ್ದಾರೆ. ಜನ ಹಾಗೂ ವಾಹನ ಸಂಚಾರ ನಿಯಂತ್ರಿಸಲು ಪೊಲೀಸರೊಂದಿಗೆ ವಿವಿಧ ಇಲಾಖೆ ಅಧಿಕಾರಿಗಳೂ ಲಾಠಿ ಹಿಡಿದು ಬೀದಿಗೆ ಇಳಿದಿದ್ದಾರೆ. ಅವರಿಗೆಲ್ಲಾ ಲಾಠಿ ಪೂರೈಸುವಲ್ಲಿ ಕುಮಾರ್‌ ನಿರತರಾಗಿದ್ದಾರೆ.

‘ಲಾಕ್‌ಡೌನ್‌ ಅವಧಿಯಲ್ಲಿ ಪ್ರತಿ ಠಾಣೆಯಿಂದ ಕರೆ ಮಾಡಿ 10–15 ಲಾಠಿ ನೀಡುವಂತೆ ಕೇಳುತ್ತಾರೆ. ಜನರಿಗಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ಕನಿಷ್ಠ ಬೆಲೆಯಲ್ಲಿ ಲಾಠಿ ತಯಾರಿಸಿ ಪೂರೈಸುತ್ತಿದ್ದೇನೆ’ ಎನ್ನುತ್ತಾರೆ ಕುಮಾರ್‌.

‘ಫೈಬರ್‌ ಲಾಠಿಗಳು ಬೇಗನೇ ಮುರಿಯುವುದರಿಂದ ಪೊಲೀಸರು ಬೆತ್ತದ ಲಾಠಿ ಇಷ್ಟಪಡುತ್ತಾರೆ. ಅರಣ್ಯ ಇಲಾಖೆಯಿಂದ 12 ಅಡಿ ಉದ್ದದ ಬೆತ್ತದ ಗಿಡ ಖರೀದಿಸಲು ₹250 ಪಾವತಿಸುತ್ತೇವೆ. ಅಂಕು ಡೊಂಕಿದ್ದರೆ ಅದರನ್ನು ನೇರವಾಗಿಸಿ, ಲಾಠಿ ತಯಾರಿಸುತ್ತೇನೆ. ಸಣ್ಣ ಲಾಠಿ ₹100, ನಾಲ್ಕೂವರೆ ಅಡಿ ಉದ್ದದ ಲಾಠಿ ₹120ರಂತೆ ಮಾರಾಟ ಮಾಡುತ್ತೇನೆ. ಅಜ್ಜನ ಕಾಲದಿಂದಲೇ ಲಾಠಿ ತಯಾರಿಕೆ ರೂಢಿಸಿಕೊಂಡು ಬಂದಿದ್ದೇವೆ. ಇದರಿಂದಲೇ ಬದುಕಿನ ಬಂಡಿಯೂ ಸಾಗುತ್ತಿದೆ. ಆದರೆ, ಇತ್ತೀಚೆಗೆ ಗುಡಿಕೈಗಾರಿಕೆ ಲಾಠಿಗಳಿಗೆ ಬೇಡಿಕೆ ಅಷ್ಟಾಗಿ ಕಾಣಸಿಗುತ್ತಿಲ್ಲ’ ಎಂದು ಕುಮಾರ್‌ ಅಳಲು ತೋಡಿಕೊಂಡರು.

ಹುಬ್ಬಳ್ಳಿ, ಧಾರವಾಡದ ಪೊಲೀಸ್‌ ಠಾಣೆಗಳಲ್ಲದೇ ಗದಗ, ಹಾವೇರಿ ಜಿಲ್ಲೆಯ ಠಾಣೆಗಳಿಂದಲೂ ಲಾಠಿಗೆ ಬೇಡಿಕೆ ಬರುತ್ತಿದೆ ಎಂದು ಹೇಳಿದರು.

ಬಿದಿರು ಹಾಗೂ ಇತರೆ ಮರದ ಪೀಠೋಪಕರಣ ತಯಾರಿಸುವ ಇವರಿಗೆ ನವೋದ್ಯಮಿ ಪ್ರಶಸ್ತಿಯೂ ಸಂದಿದೆ. ಧಾರವಾಡ ಕೃಷಿ ಮೇಳ, ಗದಗ ಉತ್ಸವದಲ್ಲಿ ಪಾಲ್ಗೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT