ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಹೊರೆಯಾದ ಜಾನುವಾರು

ಧಾರವಾಡ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಗಂಭೀರ: ಕಡಿಮೆ ದರಕ್ಕೆ ಮಾರಾಟ
Published 4 ನವೆಂಬರ್ 2023, 6:05 IST
Last Updated 4 ನವೆಂಬರ್ 2023, 6:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಮಳೆ ನಿರೀಕ್ಷೆ ಹುಸಿಯಾಗಿದೆ. ಬೆಳೆ ನಷ್ಟವಾಗಿದೆ. ಇವೆಲ್ಲದರ ಪರಿಣಾಮ ಕೃಷಿಯ ಜೀವನಾಡಿಯದ ಜಾನುವಾರುಗಳು ರೈತರಿಗೆ ಹೊರೆಯಾಗಿ ಪರಿಣಮಿಸಿವೆ.

ಧಾರವಾಡ ಜಿಲ್ಲೆಯ ಎಲ್ಲ 8 ತಾಲ್ಲೂಕುಗಳೂ ‘ಬರ ಪೀಡಿತ’ ಎಂದು ಸರ್ಕಾರ ಘೋಷಿಸಿದೆ. ಬರ ಪರಿಸ್ಥಿತಿ ತೀವ್ರ ಸ್ವರೂಪ ಪಡೆಯುತ್ತಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ತಲೆದೋರಿದೆ.

ಸಮರ್ಪಕವಾಗಿ ಸಾಕಲಾಗದೇ ಮತ್ತು ಮೇವಿನ ಸಮಸ್ಯೆ ನಿರ್ವಹಿಸಲಾಗದೇ ಬಹುತೇಕ ರೈತರು ಕಡಿಮೆ ದರಕ್ಕೆ ಜಾನುವಾರುಗಳನ್ನು ಮಾರುವ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ಇನ್ನೂ ಕೆಲ ರೈತರು ಕೆಲ ದಿನಗಳ ಸಾಕಣೆಗೆ ಅವುಗಳನ್ನು ಪರಿಚಯಸ್ಥರಿಗೆ ನೀಡತೊಡಗಿದ್ದಾರೆ.

‘ಎರಡು ಎತ್ತು ಮತ್ತು ಒಂದು ಆಕಳು ಇದ್ದವು. ಮೇವಿಲ್ಲದೇ ಸಾಕಣೆ ಮಾಡುವುದು ಕಷ್ಟ. ಅದಕ್ಕೆ ₹80 ಸಾವಿರಕ್ಕೆ ಖರೀದಿಸಿದ್ದ ಜೋಡಿ ಎತ್ತುಗಳನ್ನು ₹60 ಸಾವಿರಕ್ಕೆ ಮಾರಿದ್ದೇನೆ. ಇನ್ನೂ ಕೆಲವು ದಿನಗಳು ಕಳೆದರೆ ಈ ದರವೂ ಸಿಗಲ್ಲ. ದಿನಗಳು ಕಳೆದಂತೆ ಪರಿಸ್ಥಿತಿ ಇನ್ನೂ ಭೀಕರವಾಗಲಿದೆ’ ಎಂದು ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿಯ ರೈತ ಬಸವರಾಜ ಯೋಗಪ್ಪನವರ ತಿಳಿಸಿದರು.

‍‘ನಾವು ಶೇಂಗಾ, ಹೆಸರು ಬೆಳೆಯುತ್ತೇವೆ. ಎರಡು ದನಗಳು ಒಂದು ವರ್ಷ ತಿನ್ನುವಷ್ಟು ಮೇವು ಸಿಗುತಿತ್ತು. ಆದರೆ, ಈ ಬಾರಿ ನಾಲ್ಕು ಎಕರೆ ಶೇಂಗಾ, ಹೆಸರು ಬೆಳೆಯಿಂದ ಎರಡು ದನಗಳು ಕೆಲವೇ ದಿನ ತಿನ್ನುವಷ್ಟು ಮಾತ್ರ ಮೇವು ಸಿಕ್ಕಿದೆ. ಕಳೆದ ಬಾರಿಯೂ ಅತಿವೃಷ್ಟಿಯಿಂದ ಸರಿಯಾಗಿ ಬೆಳೆ ಬಾರದೆ ಮೇವು ಹೆಚ್ಚು ಬಂದಿರಲಿಲ್ಲ’ ಎಂದರು.

‘ಎರಡು ಎತ್ತು, ಒಂದು ಹಸು, ಎರಡು ಕರು ಇದ್ದವು. ಮೇವಿನ ಕೊರತೆ ಕಾರಣ ಒಂದು ಹಸು ಬೇರೆಡೆ ಕಳುಹಿಸಿದ್ದೇವೆ. ನಮ್ಮಲ್ಲಿ ಇರುವ ಮೇವು ಮುಂದಿನ ಹದಿನೈದು ದಿನಕ್ಕೆ ಆಗಬಹುದು. ಮತ್ತೆ ಖರೀದಿಸಲು ಹಣದ ಸಮಸ್ಯೆ ಇದೆ. ಖರೀದಿಸಲು ಮೇವು ಸಿಗುವುದೂ ಕಷ್ಟವಿದೆ’ ಎಂದು ಉಪ್ಪಿನಬೆಟಗೇರಿ ರೈತ ಸುಭಾಸ್ ಸಂಕಷ್ಟ ತೋಡಿಕೊಂಡರು.

‘20 ವಾರಕ್ಕೆ ಆಗುವಷ್ಟು ಮೇವು’ ‘ಧಾರವಾಡ ಜಿಲ್ಲೆಯಲ್ಲಿ 2 ಲಕ್ಷ ಟನ್ ಮೇವು ಸಂಗ್ರಹ ಇದೆ. ಒಂದು ಜಾನುವಾರಿಗೆ ದಿನಕ್ಕೆ 6 ಕೆಜಿ ಅಂತ ಲೆಕ್ಕ ಹಾಕಿದರೂ ಸರಾಸರಿ 20 ವಾರಗಳಿಗೆ ಸಾಕಾಗುತ್ತದೆ’ ಎಂದು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ತಿಳಿಸಿದರು. ‘ಜಿಲ್ಲೆಯಲ್ಲಿ ಮೇವಿನ ಕೊರತೆ  ಇಲ್ಲ. ಕಳೆದ ಸಾಲಿನಲ್ಲಿ ಉತ್ಪಾದನೆ ಆದ ಮೇವು ಸಂಗ್ರಹವಿದೆ. ಈ ಬಾರಿಯ ಬರ ಕಾರಣ ಶೇ 100ರಷ್ಟು ಮೇವು ಉತ್ಪಾದನೆ ಆಗದಿದ್ದರೂ ಶೇ 70–80ರಷ್ಟು ಉತ್ಪಾದನೆ ಆಗುತ್ತದೆ. ತೇವಾಂಶದ ಕೊರತೆಯಿಂದ ಅದರ ಗುಣಮಟ್ಟ ತಗ್ಗಬಹುದು. ಬರ ಪರಿಹಾರ ನಿಧಿಯಿಂದ ಜಾನುವಾರುಗಳಿಗೆ ಪೂರಕ ಪೌಶ್ಟಿಕಾಂಶಗಳನ್ನು ಪೂರೈಸುವ ಯೋಜನೆಯಿದೆ’ ಎಂದರು. ‘ನಮ್ಮಲ್ಲಿ ಅಂದಾಜು 45 ಸಾವಿರ ಕೊಳವೆಬಾವಿ ಮತ್ತು ನೀರಾವರಿ ಪಂಪ್‌ಸೆಟ್ ಹೊಂದಿದ ರೈತರು ಇದ್ದಾರೆ. ಅವರಿಗೆ ಮೇವಿನ ಬೀಜ ವಿತರಿಸಿ ಹೊಲದ ಬದು ಖಾಲಿ ಜಮೀನಿನಲ್ಲಿ ಬಿತ್ತಿ ಮೇವು ಬೆಳೆಯಲು ಪ್ರೋತ್ಸಾಹಿಸುತ್ತೇವೆ. ಸಂಭವನೀಯ ಕೊರತೆ ನೀಗಿಸಲು ಪ್ರಯತ್ನಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT