ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಹಸಿರು ಪ್ರಿಯರ ಜೀವಾಳ ನೃಪತುಂಗ ಬೆಟ್ಟ

ಹುಬ್ಬಳ್ಳಿಯ ಎರಡು ಮಗ್ಗಲುಗಳನ್ನು ತೆರೆದಿಡುವ ಶಿಖರ: ಎಲ್ಲ ವಯೋಮಾನದವರಿಗೂ ಆಪ್ತ
Published 21 ಜುಲೈ 2023, 6:47 IST
Last Updated 21 ಜುಲೈ 2023, 6:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಿಜಿಗುಡುವ ಮಾರುಕಟ್ಟೆ, ದೂಳು, ಎಂದಿಗೂ ಮುಗಿಯದ ರಸ್ತೆ ಕಾಮಗಾರಿಯ ಆಚೆಗೂ ಹುಬ್ಬಳ್ಳಿ ಮಂದಿಯ ಬದುಕನ್ನು ಒಂದಷ್ಟು ಸಹನೀಯಗೊಳಿಸುವ ತಾಣ ನೃಪತುಂಗ ಬೆಟ್ಟ. ಇಲ್ಲಿನ ಜನರ ಪಾಲಿಗೆ ಅಚ್ಚುಮೆಚ್ಚಿನ ‘ಬೆಟ್ಟ’.

ಇಡೀ ಹುಬ್ಬಳ್ಳಿಯ ನೋಟವನ್ನು ಒಂದೇ ಕಡೆಯಿಂದ ಕಣ್ತುಂಬಿಕೊಳ್ಳಲು ಈ ಬೆಟ್ಟವನ್ನು ಏರಬೇಕು. ಬೆಟ್ಟದ ಮೇಲಿಂದ ಸುತ್ತೆಲ್ಲ ಕಣ್ಣಾಡಿಸಿದರೆ ವಾಣಿಜ್ಯ ನಗರಿಯ ಎರಡು ಮಗ್ಗಲು ತೆರೆದುಕೊಳ್ಳುತ್ತವೆ.

ಒಂದೆಡೆ ಅಭಿವೃದ್ಧಿಯನ್ನು ಸಾಕ್ಷೀಕರಿಸುವ ಬಗೆಬಗೆ ಬಣ್ಣದ ಕಾಂಕ್ರೀಟ್ ಕಟ್ಟಡಗಳು, ವಿಮಾನ ನಿಲ್ದಾಣ, ಆಟದ ಮೈದಾನಗಳು. ಇನ್ನೊಂದೆಡೆ, ಹುಬ್ಬಳ್ಳಿಯು ಸಂಪೂರ್ಣವಾಗಿ ಗ್ರಾಮೀಣ ಸಂಪರ್ಕ ಕಡಿದುಕೊಂಡಿಲ್ಲ ಎಂದು ತೋರಿಸುವ ರೈತಾಪಿ ಬದುಕಿನ ಜೀವಾಳವಾದ ಕಪ್ಪು ಮಣ್ಣಿನ ವಿಶಾಲ ಹೊಲಗದ್ದೆಗಳು.

ನಗರದ ಸಾರಿಗೆಯ ಜೀವನಾಡಿಗಳಾದ ರೈಲು, ಬಸ್‌ ಸೇರಿದಂತೆ ಬಗೆಬಗೆಯ ವಾಹನಗಳು ಚಲಿಸುವ ಪುಟಾಣಿ ಆಟಿಕೆಗಳಂತೆ ಕಂಡರೆ, ಪ್ರದೇಶದ ಹೆಗ್ಗುರುತಾದ ಹೊಸ ಕೋರ್ಟ್ ಸಂಕೀರ್ಣ, ಉಣಕಲ್ ಕೆರೆ ಅಂದವಾಗಿ ಕಾಣುತ್ತವೆ.

ಬೆಟ್ಟದ ಕಮಾನು ದ್ವಾರದ ಬಳಿ ನಿಂತರೆ, ಮಧ್ಯಭಾಗಕ್ಕೆ ತೆರಳಲು ಎರಡು ದಾರಿಗಳಿವೆ. ಬಲಗಡೆಯ ಮೆಟ್ಟಿಲುಗಳ ಮೇಲೆ ಹೆಜ್ಜೆ ಹಾಕಿದರೆ, ಮೊದಲಿಗೆ ವಜ್ರಗುಡ್ಡ ಷಣ್ಮುಖ ದೇವರ ದರ್ಶನವಾಗುತ್ತದೆ. ನಂತರ ಗಣಪತಿ, ಈಶ್ವರನ ಪುಟ್ಟ ಪುಟ್ಟ ಗುಡಿಗಳಿವೆ. ದತ್ತ ಮಂದಿರ, ನಾಗದೇವತೆ ಗುಡಿ, ಸಂತ ರೇವುಮಾತಾ ಮಂದಿರ, ಕಾಲೇಪೀರ ಫೀರಜಾದೆ ದರ್ಗಾ ಕೂಡ ಇಲ್ಲಿವೆ. ಬೆಟ್ಟವು ಇನ್ನೊಂದರ್ಥದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀಯರ ಸಮನ್ವಯದ ಶಿಖರವೂ ಹೌದು.

ಬೆಳ್ಳಂಬೆಳಿಗ್ಗೆ ಹಸಿರು, ಆಹ್ಲಾದಕರ ಗಾಳಿಯ ಸ್ವಚ್ಛಂದ ವಾತಾವರಣದಲ್ಲಿ ಸ್ಥಳೀಯರು ವಾಯುವಿಹಾರ ಮಾಡುತ್ತಾರೆ. ಯೋಗ, ಧ್ಯಾನ, ಮೈ ಹುರಿಗೊಳಿಸುವ ಜಿಮ್ ಮಾಡುವವರೂ ಕಾಣಸಿಗುತ್ತಾರೆ. ಬಿಸಿಲೇರಿದಂತೆ ಬೆಟ್ಟಕ್ಕೆ ಯುವಜನರು, ಜೋಡಿಗಳು, ಮಕ್ಕಳು ಬರತೊಡಗುತ್ತಾರೆ. ಪರಿಸರದ ತುಂಬೆಲ್ಲ ಸಾಕಷ್ಟು ಮರಗಳು, ಗಿಡಗಂಟಿಗಳು ಇರುವುದರಿಂದ ಮನಸ್ಸಿಗೆ ಮುದ ನೀಡುತ್ತದೆ. ಇಡೀ ಆವರಣ ಸುತ್ತಾಡುವುದು ಖುಷಿ ಕೊಡುತ್ತದೆ.

ಹಚ್ಚ ಹಸಿರಿನ ಜೊತೆಗೆ ತಂಗಾಳಿ, ಬಗೆ ಬಗೆ ಬಣ್ಣಗಳ ಹೂಗಳಿಂದ ಬೆಟ್ಟ ಹಿತವೆನಿಸುತ್ತದೆ. ಬೇವು, ನೀಲಗಿರಿ, ಶ್ರೀಗಂಧ, ಜಾಲಿ, ಕಾಡು ಜಾತಿಯ ಸಾವಿರಾರು ಮರಗಳು ಬೆಟ್ಟದ ತುಂಬೆಲ್ಲ ಹರಡಿಕೊಂಡಿವೆ. ಸಾಕಷ್ಟು ಹಣ್ಣುಗಳ ಮರಗಳೂ ಇರುವ ಕಾರಣ ವಿವಿಧ ಜಾತಿಯ ಪಕ್ಷಿಗಳಿಗೆ ಆವಾಸ ಸ್ಥಾನವಾಗಿದೆ. ಹಕ್ಕಿಗಳ ಚಿಲಿಪಿಲಿ ನಿರಂತರ ಇರುತ್ತದೆ.

ಮಕ್ಕಳ ಉದ್ಯಾನ: ಬೆಟ್ಟದ ಮಧ್ಯೆಭಾಗದಲ್ಲಿನ ಉದ್ಯಾನವು ಮಕ್ಕಳಿಗೆ ಹೆಚ್ಚು ಆಕರ್ಷಿಸುತ್ತದೆ. ಗರಿಬಿಚ್ಚಿದ ನವಿಲು, ಕೊಳದ ಬಳಿ ನೀರು ಅರಸಿ ಬಂದ ಹುಲಿರಾಯ, ಸೊಂಡಿಲಿನಲ್ಲಿ ಜಾರುಬಂಡಿ ಎತ್ತಿ ಹಿಡಿದ ಆನೆ, ಜೋಕಾಲಿ ಎಲ್ಲವೂ ಮಕ್ಕಳಿಗೆ ಆಟವಾಡಲು ಹುರಿದುಂಬಿಸುತ್ತವೆ. ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಜಿಮ್ ವ್ಯವಸ್ಥೆಯೂ ಇದೆ.

ಕೂರಲು, ವಿರಮಿಸಲು ಸಾಕಷ್ಟು ಬೆಂಚುಗಳಿವೆ. ಊಟ–ಉಪಾಹಾರ ಮಾಡಲೆಂದೇ ಪುಟಾಣಿ ಗುಡಿಸಲುಗಳನ್ನು ನಿರ್ಮಿಸಲಾಗಿದೆ. ಬೆಟ್ಟದ ಹಸಿರ ಸಿರಿಯ ನಡುವೆ ಅಲ್ಲಲ್ಲಿ ವಿವಿಧ ಪ್ರಾಣಿ, ಪಕ್ಷಿಗಳ ಕುರಿತು ಮಾಹಿತಿ ನೀಡುವ ಫಲಕಗಳಿವೆ. ಬೆಟ್ಟದ ಮಧ್ಯಭಾಗದಲ್ಲಿ ಸಣ್ಣದೊಂದು ವೇದಿಕೆ, ವ್ಯೂವ್ ಪಾಯಿಂಟ್, ಶುದ್ಧ ನೀರಿನ ಘಟಕ ಇದೆ. ಸುತ್ತಾಡಿ ಸುಸ್ತಾದರೆ ಅಥವಾ ಹಸಿವಾದರೆ, ‘ಬೆಟ್ಟ ಕ್ಯಾಂಟೀನ್’ ಆಹಾರ ಸಿಗುತ್ತದೆ.

ಸಾರಿಗೆ ಸೌಲಭ್ಯ ಬೇಕು: ‘ನೃಪತುಂಗ ಬೆಟ್ಟಕ್ಕೆ ಬರಲು ಖಾಸಗಿ ವಾಹನಗಳು, ಆಟೊ ಅವಲಂಬಿಸಬೇಕು. ಬಸ್ ಸೌಲಭ್ಯ ಕಲ್ಪಿಸಿದರೆ ಅನುಕೂಲ. ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗುತ್ತದೆ. ಬ್ಯಾಟರಿ ಚಾಲಿತ ವಾಹನದ ಕಾರ್ಯಾಚರಣೆಯೂ ಸಮರ್ಪಕವಾಗಿಲ್ಲ. ಅದು ನಿರಂತರ ಸೇವೆಗೆ ಲಭ್ಯವಾಗಬೇಕಿದೆ’ ಎಂದು ಪ್ರವಾಸಿಗರು ತಿಳಿಸಿದರು.

ಶುಚಿಯಿರಲಿ: ‘ಬೆಟ್ಟದ ತುಂಬೆಲ್ಲ ಕಸದ ಬುಟ್ಟಿಗಳನ್ನು ಅಳವಡಿಸಲಾಗಿದ್ದರೂ ಕೆಲ ಪ್ರವಾಸಿಗರು ಎಲ್ಲೆಂದರಲ್ಲಿ ನೀರಿನ ಬಾಟಲಿಗಳನ್ನು ಎಸೆಯುತ್ತಾರೆ. ಗುಂಪು ಗುಂಪಾಗಿ ಇಲ್ಲಿ ಬಂದು ಊಟ, ಉಪಾಹಾರ ಮಾಡುವುದರಿಂದ ತಟ್ಟೆ,  ಲೋಟಗಳನ್ನು ಎಲ್ಲಿ ಬೇಕೆಂದಲ್ಲಿ ಬಿಸಾಕುತ್ತಾರೆ. ಇದರಿಂದ ಪರಿಸರವು ಮಲಿನವಾಗುತ್ತದೆ. ಆವರಣವು ಗಲೀಜು ಕಾಣುವುದರಿಂದ ಕಿರಿಕಿರಿಯಾಗುತ್ತದೆ. ಬೆಟ್ಟಕ್ಕೆ ಬರುವವರು ಶುಚಿತ್ವ ಕಾಯ್ದುಕೊಳ್ಳುವುದು ಸೂಕ್ತ’ ಎಂದು ಪ್ರವಾಸಿ ಬಸವರಾಜ ಕಲ್ಲಾಪುರ ತಿಳಿಸಿದರು.

ಚನ್ನು ಹೊಸಮನಿ
ಚನ್ನು ಹೊಸಮನಿ
ನೃಪತುಂಗ ಬೆಟ್ಟದ ಪ್ರವೇಶದ್ವಾರ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದ ಪ್ರವೇಶದ್ವಾರ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ನೃಪ‍ತುಂಗ ಬೆಟ್ಟದಿಂದ ಕಾಣಸಿಗುವ ಉಣಕಲ್ ಕೆರೆಯ ವಿಹಂಗಮ ನೋಟ –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ನೃಪ‍ತುಂಗ ಬೆಟ್ಟದಿಂದ ಕಾಣಸಿಗುವ ಉಣಕಲ್ ಕೆರೆಯ ವಿಹಂಗಮ ನೋಟ –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದ ‘ಹಸಿರು ಪಥ’ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದ ‘ಹಸಿರು ಪಥ’ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದಿಂದ ಕಾಣುವ ಹುಬ್ಬಳ್ಳಿಯ ನೋಟ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದಿಂದ ಕಾಣುವ ಹುಬ್ಬಳ್ಳಿಯ ನೋಟ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದ ಮಕ್ಕಳ ಉದ್ಯಾನದಲ್ಲಿರುವ ಆನೆ ಸೊಂಡಿಲಿನ ಜಾರುಬಂಡಿ –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದ ಮಕ್ಕಳ ಉದ್ಯಾನದಲ್ಲಿರುವ ಆನೆ ಸೊಂಡಿಲಿನ ಜಾರುಬಂಡಿ –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದಲ್ಲಿ ಯುವತಿಯರ ಸೆಲ್ಫಿ ಸಂಭ್ರಮ –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದಲ್ಲಿ ಯುವತಿಯರ ಸೆಲ್ಫಿ ಸಂಭ್ರಮ –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದ ಮಕ್ಕಳ ಉದ್ಯಾನದ ಬಳಿಯಿರುವ ಕೃತಕ ಜಲಪಾತ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದ ಮಕ್ಕಳ ಉದ್ಯಾನದ ಬಳಿಯಿರುವ ಕೃತಕ ಜಲಪಾತ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದ ಮೆಟ್ಟಿಲುಗಳ ಬಳಿ ಬೆಳಗಿನ ವೇಳೆ ಆರೋಗ್ಯಕರ ಪೇಯವೂ ಲಭ್ಯ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ನೃಪತುಂಗ ಬೆಟ್ಟದ ಮೆಟ್ಟಿಲುಗಳ ಬಳಿ ಬೆಳಗಿನ ವೇಳೆ ಆರೋಗ್ಯಕರ ಪೇಯವೂ ಲಭ್ಯ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಬೆಟ್ಟದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಮೀಸಲಿದೆಯೆಂದು ಅನ್ನಿಸುತ್ತದೆ. ಆದರೆ ವಾಸ್ತವವಾಗಿ ಶೇ 40ರಷ್ಟು ಹಣ ಮಾತ್ರ ಬೆಟ್ಟದ ಅಭಿವೃದ್ಧಿಗೆ ಖರ್ಚಾದಂತೆ ಭಾಸವಾಗುತ್ತದೆ. ಇನ್ನಷ್ಟು ಕೆಲಸ ಆಗಬೇಕಿದೆ.
ಚನ್ನು ಹೊಸಮನಿ ‘ನೃಪತುಂಗ ಗ್ರೀನ್ಸ್’ ಸದಸ್ಯ
2020ರ ಏಪ್ರಿಲ್ ನಂತರ ಬೆಟ್ಟದ ಹೊಣೆ ಅರಣ್ಯ ಇಲಾಖೆಗೆ ನೀಡಲಾಗಿದೆ. 800 ರಿಂದ 1000 ಗಿಡಗಳನ್ನು ನೆಟ್ಟಿದ್ದೇವೆ. ನಿರ್ವಹಣೆಗೆಂದು ಒಂದು ಕುಟುಂಬವನ್ನು ನಿಯೋಜಿಸಲಾಗಿದೆ.
ಶ್ರೀಧರ ತೆಗ್ಗಿನಮನಿ ವಲಯ ಅರಣ್ಯಾಧಿಕಾರಿ ಹುಬ್ಬಳ್ಳಿ ವಲಯ

‘ನೃಪತುಂಗ ಗ್ರೀನ್ಸ್’ ಕಾಳಜಿ ಬೆಳಗಿನ ವಾಯುವಿಹಾರಕ್ಕೆ ಬರುವವರು ನೃಪತುಂಗ ಬೆಟ್ಟದ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. 15 ವರ್ಷಗಳಿಂದ ‘ನೃಪತುಂಗ ಗ್ರೀನ್ಸ್’ ಎಂಬ ಸಂಘ ಕಟ್ಟಿಕೊಂಡು ಕೆಲವರು ಬೆಟ್ಟದಲ್ಲಿ ಗಿಡ ನೆಡುವ ಮತ್ತು ಪೋಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ‘ನೃಪತುಂಗ ಬೆಟ್ಟವು ಹುಬ್ಬಳ್ಳಿ ಜನರಿಗೆ ದೇವರು ಕೊಟ್ಟ ವರ. ಬೆಟ್ಟದ ಸಂರಕ್ಷಣೆಯೇ ನಮ್ಮ ಗುರಿ ಮತ್ತು ಉದ್ದೇಶ. ನಿವೃತ್ತ ರೈಲ್ವೆ ಉದ್ಯೋಗಿ ಗೋಪಾಲಯ್ಯ ಡಾ. ಮಹಾಂತೇಶ ತಪಶೆಟ್ಟಿ ಹಾಗೂ ನೃಪತುಂಗ ಗ್ರೀನ್ಸ್ ಸದಸ್ಯರು ವಿದ್ಯಾರ್ಥಿಗಳು ಸೇರಿ ಅಂದಾಜು 500 ಜನರು ಬೆಟ್ಟದ ಅಭಿವೃದ್ಧಿಗೆ ಕೆಲಸ ಮಾಡುತ್ತಾರೆ. ಅರಣ್ಯ ಇಲಾಖೆಯಿಂದ ನಮಗೆ ಸಹಕಾರ ಸಿಗಬೇಕಿದೆ’ ಎಂದು ನೃಪತುಂಗ ಗ್ರೀನ್ಸ್ ಸದಸ್ಯ ಚನ್ನು ಹೊಸಮನಿ ತಿಳಿಸಿದರು. ‘ನೃಪತುಂಗ ಗ್ರೀನ್ಸ್’ ಪ್ರಮುಖ ಬೇಡಿಕೆ * ಬೆಟ್ಟದ ರಕ್ಷಣೆಗೆ ಸದೃಢ ಕಾಂಪೌಂಡ್ ನಿರ್ಮಾಣ * ನವಿಲು ಸೇರಿ ವಿವಿಧ ಪಕ್ಷಿಗಳ ರಕ್ಷಣೆಗೆ ಆದ್ಯತೆ * ಹಂದಿಗಳ ಉಪಟಳಕ್ಕೆ ಸಂಪೂರ್ಣ ತಡೆ * ಪ್ರವೇಶ ನಿರ್ಗಮನಕ್ಕೆ ಒಂದು ಕಡೆ ಅವಕಾಶವಿರಲಿ * ಅರಣ್ಯ ಸಂರಕ್ಷಣೆಗೆಂದೇ 10 ಸಿಬ್ಬಂದಿ ಅವಶ್ಯ * ಬೆಟ್ಟದಲ್ಲಿ ಯಾರೂ ವಾಸ್ತವ್ಯ ಮಾಡಬಾರದು. * ಅಡುಗೆ ಮಾಡಲು ಮುಸುರೆ ಸುರಿಯಲು ಅವಕಾಶ ಬೇಡ * 100 ಸದಸ್ಯರು ಏಕಕಾಲಕ್ಕೆ ಯೋಗ ಮಾಡಲು ಸ್ಥಳ * 80 ರಿಂದ 100 ಅಡಿ ಎತ್ತರದ ವ್ಯೂವ್ ಪಾಯಿಂಟ್ * ಅರಣ್ಯ ಇಲಾಖೆಯಿಂದ ಹಾಲ ಬಸರಿ ಮತ್ತಿತರ ಸಸಿಗಳ ವಿತರಣೆ * ವಿವಿಧ ಸಸಿಗಳನ್ನು ನೆಡಲು ಪೋಷಿಸಲು ಪ್ರಾಶಸ್ತ್ಯ * ‘ಜಿಪ್ ವೇ ಅಥವಾ ರೋಪ್ ವೇ’ ಬೆಟ್ಟಕ್ಕೆ ಸೂಕ್ತವಲ್ಲ * ಬೆಟ್ಟದ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಸಹಕಾರ

ಕುಗ್ಗಿದ ಬೆಟ್ಟದ ವರ್ಚಸ್ಸು ‘ಮೊದಲೆಲ್ಲ ₹10 ಶುಲ್ಕ ಇದ್ದರೂ ವಾರಾಂತ್ಯಕ್ಕೆ ₹20 ಸಾವಿರದಿಂದ ₹25 ಸಾವಿರ ಆದಾಯ ಸಂಗ್ರಹ ಆಗುತ್ತಿತ್ತು. ಆದರೆ ಸ್ಮಾರ್ಟ್ ಸಿಟಿ ಯೋಜನೆಯಡಿ ತೋಳನಕೆರೆ ಅಭಿವೃದ್ಧಿಯಾದ ಕಾರಣ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಈಗ ವಾರಾಂತ್ಯದಲ್ಲಿ ₹10 ಸಾವಿರದಿಂದ ₹12 ಸಾವಿರ ಆದಾಯ ಸಂಗ್ರಹ ಕಷ್ಟ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು. ಸದ್ಯ ಬೆಟ್ಟದ ಪ್ರವೇಶಕ್ಕೆ ಹಿರಿಯರಿಗೆ ₹20 ಮತ್ತು 12 ವರ್ಷಕ್ಕಿಂತ ಚಿಕ್ಕವರಿಗೆ ₹10 ಶುಲ್ಕ ಇದೆ.  ಕಾರು ಪಾರ್ಕಿಂಗ್‌ಗೆ ₹10 ಮತ್ತು ಬೈಕ್ ಪಾರ್ಕಿಂಗ್‌ಗೆ ₹5 ಶುಲ್ಕವಿದೆ. ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಬೆಟ್ಟಕ್ಕೆ ಪ್ರವೇಶಾವಕಾಶವಿದೆ. ಉಣಕಲ್‌ನ ‍ಪ್ರೆಸಿಡೆಂಟ್ ಹೋಟೆಲ್ ಮಾರ್ಗ ಸಾಯಿನಗರ ಮಾರ್ಗದ ಮೂಲಕ ಅಥವಾ ರಾಜ್ ನಗರದಿಂದ ಬೆಟ್ಟಕ್ಕೆ ತಲುಪಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT