ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿದೀಪ ನಿರ್ವಹಣೆ: ‘ಸ್ಮಾರ್ಟ್’ ಆಗದ ಅವಳಿನಗರ

Published 21 ಆಗಸ್ಟ್ 2023, 6:28 IST
Last Updated 21 ಆಗಸ್ಟ್ 2023, 6:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರವು ‘ಸ್ಮಾರ್ಟ್ ಸಿಟಿ’ ಗರಿ ಹೊತ್ತು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಆದರೆ ಬೀದಿದೀಪ ಅಳವಡಿಕೆ, ನಿರ್ವಹಣೆಯ ವಿಚಾರದಲ್ಲಿ ಇನ್ನೂ ಸಾಕಷ್ಟು ‘ಸ್ಮಾರ್ಟ್’ ಆಗುವ ಅಗತ್ಯವಿದೆ.

ಅವಳಿ ನಗರ ಹಾಗೂ ಧಾರವಾಡ ಜಿಲ್ಲೆಯಾದ್ಯಂತ ಹಲವೆಡೆ ರಾತ್ರಿ ವೇಳೆ ಬೀದಿದೀಪಗಳು ಉರಿಯದೇ ಸಮಸ್ಯೆ ಉಂಟಾಗಿದೆ. ಕೆಲವು ಕಡೆ ಹಗಲಿನಲ್ಲೂ ಬೀದಿದೀಪ ಉರಿಯುವುದು ಆಡಳಿತಕ್ಕೆ ತಲೆನೋವಾಗಿದೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆಯಾದರೂ ಬೀದಿದೀಪ ನಿರ್ವಹಣೆ ಸರಿದಾರಿಗೆ ಬಂದಿಲ್ಲ.

ಇದ್ದಕ್ಕಿದ್ದಂತೆ ವೋಲ್ಟೇಜ್ ವ್ಯತ್ಯಯ ಉಂಟಾಗುವುದು, ಗಾಳಿ–ಮಳೆ ಹಾಗೂ ಕಾರ್ಬನ್ ಕಟ್ಟಿಕೊಳ್ಳುವುದು ಇನ್ನಿತರ ಕಾಣಗಳಿಂದ ವಿದ್ಯುದ್ದೀಪಗಳು ಕೆಡುತ್ತಿವೆ. ವಾಣಿಜ್ಯ ನಗರಿಯ ಕೆಲವು ಕಡೆಗಳಲ್ಲಿ ಬೀದಿದೀಪ ಮಂದ ಬೆಳಕು ಚೆಲ್ಲುವುದರಿಂದ ಅವು ಇದ್ದೂ ಇಲ್ಲದಂತಾಗಿವೆ. ಹೊಸೂರು ಬಸ್ ನಿಲ್ದಾಣ ಪಕ್ಕದ ಕುಬಸದ ಲೇಔಟ್‌ನಲ್ಲಿನ ಆಟೊ ಕ್ಲಸ್ಟರ್ ಅಕ್ಕ ಪಕ್ಕ ಓಡಾಡಲೂ ಭಯವಾಗುವಷ್ಟು ಕಗ್ಗತ್ತಲು ಆವರಿಸಿರುತ್ತದೆ. ತೋಳನ ಕೆರೆ ಹಿಂಭಾಗದ ಮಾನಸಗಿರಿ ಲೇಔಟ್‌ನಲ್ಲಿ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಎತ್ತರಕ್ಕೆ ಬೆಳೆದುನಿಂತಿವೆ. ಇಲ್ಲಿ ಬೀದಿದೀಪಗಳು ಬೆಳಗುವುದು ಅಪರೂಪ. ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳ ನಡುವೆ ವಿಷಜಂತುಗಳು ಅಡಗಿದ್ದರೂ ಗೊತ್ತಾಗುವುದಿಲ್ಲ.

ಶಿರೂರು ಪಾರ್ಕ್‌ನಿಂದ ತೋಳನ ಕೆರೆ ಸಂಪರ್ಕಿಸುವ ಟೆಂಡರ್ ಶೂರ್ ರಸ್ತೆಯ ವಿಭಜಕಗಳ ನಡುವೆ ಬೀದಿದೀಪಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಇವುಗಳಲ್ಲಿ ಒಂದು ಸಾಲಿನ ದೀಪ ಮಾತ್ರ ಬೆಳಗುತ್ತವೆ. ದ್ವಿಚಕ್ರ ವಾಹನಗಳ ಬೆಳಕು ಕಡಿಮೆ ಇರುವ ಕಾರಣ ರಾತ್ರಿವೇಳೆ ರಸ್ತೆಯಲ್ಲಿ ದನಗಳು ಮಲಗಿರುವುದು ಗೊತ್ತೇ ಆಗುವುದಿಲ್ಲ. ಹುಬ್ಬಳ್ಳಿ–ಧಾರವಾಡ ಸಂಪರ್ಕಿಸುವ ಚಿಗರಿ ಮಾರ್ಗದಲ್ಲೇ ಕೆಲವೊಮ್ಮೆ ಬೀದಿದೀಪಗಳು ಬಂದ್ ಆಗಿ ಕತ್ತಲೆ ತುಂಬಿರುತ್ತದೆ. ಹಳೇ ಹುಬ್ಬಳ್ಳಿ ಭಾಗದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಧಾರವಾಡದ ಟೋಲ್‌ನಾಕಾ ಸೇರಿದಂತೆ ಕೆಲವೆಡೆ ಬೀದಿದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಅನುಮತಿ ಇಲ್ಲ: ‘ಹೆಚ್ಚಿನ ಬೀದಿದೀಪ ಘಟಕಗಳು ಹಳೆಯದಾಗಿವೆ. ಹೊಸ ಘಟಕ ಅಳವಡಿಸಲು ಅನುಮತಿ ಇಲ್ಲ. ಇದರಿಂದಾಗಿ ಸಮರ್ಪಕವಾಗಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಬೀದಿದೀಪ ನಿರ್ವಹಣೆ ಏಜನ್ಸಿ ಗುತ್ತಿಗೆದಾರ ಆಸೀಫ್.

‘ನಾವು ಸಮಯಕ್ಕೆ ಸರಿಯಾಗಿ ನಿರ್ವಹಣೆ ಮಾಡುತ್ತೇವೆ. ಆದರೆ ಗಾಳಿ ಮತ್ತಿತರ ಕಾರಣಗಳಿಂದ ವಿದ್ಯುತ್ ತಂತಿಗಳು ಒಂದಕ್ಕೊಂದು ತಗುಲುವುದರಿಂದ ಸಮಸ್ಯೆ ಎದುರಾಗುತ್ತದೆ. ಅದರಿಂದಾಗಿ ಹಗಲಲ್ಲೂ ಬೀದಿದೀಪ ಉರಿಯುತ್ತಿದೆ, ರಾತ್ರಿ ಉರಿಯುವದಿಲ್ಲ ಎಂಬ ದೂರುಗಳು ಬರುತ್ತವೆ’ ಎಂದು ನಿರ್ವಹಣೆ ಗುತ್ತಿಗೆ ಪಡೆದ ಮತ್ತೊಂದು ಏಜೆನ್ಸಿಯ ವಿಜಯ ಪಾಟೀಲ ತಿಳಿಸುತ್ತಾರೆ.

ಪ್ರತಿ ವಲಯಕ್ಕೆ ಒಂದೊಂದು ವಾಹನ ನೀಡಲಾಗಿದ್ದು, ಅದರಲ್ಲಿ ತಲಾ ಒಬ್ಬ ಚಾಲಕ, ಮೇಲ್ವಿಚಾರಕ ಮತ್ತು ಎಲೆಕ್ಟ್ರೀಶಿಯನ್ ಇರುತ್ತಾರೆ. ನಿಯಂತ್ರಣ ಕೊಠಡಿಯವರು ತಿಳಿಸುವ ದೂರಿನ ಅನ್ವಯ ಇವರು ವಾರ್ಡ್‌ಗಳಲ್ಲಿ ದುರಸ್ತಿ ಮಾಡುತ್ತಾರೆ. ಅದರ ಹೊರತಾಗಿ ನೇರವಾಗಿ ಇವರಿಗೂ ಸಾರ್ವಜನಿಕರು ಕರೆ ಮಾಡುತ್ತಾರೆ. ದೂರುಗಳು ಬಂದು 24 ಗಂಟೆಗಳ ಒಳಗಾಗಿ ದುರಸ್ತಿ ಮಾಡಬೇಕು ಎಂಬ ನಿಯಮ ಇದೆ.

‘ತಕ್ಷಣ ದುರಸ್ತಿಗೆ ಕ್ರಮ’

ಉಪ್ಪಿನಬೆಟಗೇರಿ: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 851 ಬೀದಿದೀಪದ ಕಂಬಗಳಿದ್ದು, ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಹೈಮಾಸ್ಟ್ ದೀಪಗಳನ್ನು ಬಳಸಲಾಗುತ್ತಿದ್ದು, ಪ್ರಕಾಶಮಾನವಾದ ಬೆಳಕು ಚೆಲ್ಲುತ್ತವೆ.

‘ಬೀದಿದೀಪ ಹಾಳಾಗಿರುವ ಕುರಿತು ದೂರ ಬಂದರೆ ತಕ್ಷಣವೇ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮ ಪಂಚಾಯ್ತಿಯ ಮೂವರು ಸಿಬ್ಬಂದಿಯೇ ದೀಪ ಬೆಳಗಿಸುವುದು, ಬಂದ್ ಮಾಡುವ ಕೆಲಸ ಮಾಡುತ್ತೇವೆ’ ಎಂದು ಕಾಶೀನಾಥ ದೊಡಮನಿ ಮಾಹಿತಿ ನೀಡಿದರು.

ಮಂದ ಬೆಳಕು

ಗುಡಗೇರಿ: ಗ್ರಾಮೀಣ ಪ್ರದೇಶದಲ್ಲಿ ಬೀದಿ ದೀಪಗಳು ಹೆಸರಿಗೆಷ್ಟೇ ಎಂಬಂತಾಗಿದೆ. 15 ವ್ಯಾಟ್‌ನ ಬಲ್ಬ್‌ಗಳನ್ನು ಕಂಬಕ್ಕೆ ಅಳವಡಿಸುತ್ತಿರುವುದರಿಂದ ಕಂಬದ ಬುಡಕ್ಕಷ್ಟೇ ಬೆಳಕು ಬೀಳುತ್ತದೆ.

‘ಮಂದ ಬೆಳಕಿನಿಂದಾಗಿ ನಾವು ಮೊಬೈಲ್ ಬೆಳಕಿನಲ್ಲಿ ನಡೆದಾಡಬೇಕಿದೆ. ವಿದ್ಯುದ್ದೀಪಗಳು ಕೆಟ್ಟರೆ ದೂರು ನೀಡಿದರೂ ವಾರಗಟ್ಟಲೆ ದುರಸ್ತಿ ಮಾಡುವುದಿಲ್ಲ’ ಎಂದು ದೂರುತ್ತಾರೆ ನಾಗರಿಕರು.

ಗುಡಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 1,100 ವಿದ್ಯುತ್ ಕಂಬಗಳಿವೆ. ಎಲ್‌ಇಡಿ ಬಲ್ಬ್ ಅಳವಡಿಸಿದ್ದರಿಂದ ವಿದ್ಯುತ್ ಬಳಕೆ ತಗ್ಗಿದೆ. ಅಲ್ಲದೆ, ಕಂಬಗಳಿಗೆ ಟೈಮರ್ ಅಳವಡಿಸಿದ್ದರಿಂದ, ಬಲ್ಬ್‌ಗಳು ಸಂಜೆ ಹೊತ್ತಿಕೊಂಡು ಬೆಳಿಗ್ಗೆ ಬಂದ್ ಆಗುತ್ತವೆ. ಇದರಿಂದ ವಿದ್ಯುಚ್ಛಕ್ತಿ ಪೋಲಾಗುವುದು ತಪ್ಪಿದೆ.

‘ನಿರ್ವಹಣೆ ಉತ್ತಮ’

ಅಣ್ಣಿಗೇರಿ: ‘ಪಟ್ಟಣದಲ್ಲಿ 765 ವಿದ್ಯುತ್ ಕಂಬಗಳಿಗೆ ಬೀದಿದೀಪ ಅಳವಡಿಸಲಾಗಿದ್ದು, ಎಲ್ಲ 23 ವಾರ್ಡ್‌ಗಳಲ್ಲಿ ಬೀದಿದೀಪ ನಿರ್ವಹಣೆ ಉತ್ತಮವಾಗಿದೆ’ ಎಂದು ಬೀದಿದೀಪಗಳ ನಿರ್ವಹಣೆ ಅಧಿಕಾರಿ ಅಶೋಕ ದೊಡ್ಡಮನಿ ತಿಳಿಸಿದರು.

‘ಬೀದಿ ದೀಪಗಳ ಸಮಸ್ಯೆ ಕಂಡು ಬಂದರೆ ಸ್ಥಳೀಯರು ಕರೆ ಮಾಡಿ ತಿಳಿಸಲು ಸಹಾಯವಾಣಿ (08380–222740) ತೆರೆಯಲಾಗಿದೆ. ಇದರ ನಿರ್ವಹಣೆಗಾಗಿ ನಾಲ್ಕು ಜನರಿದ್ದಾರೆ’ ಎಂದು ಅವರು ತಿಳಿಸಿದರು.

‘ನಿರ್ವಹಣೆ ತೃಪ್ತಿಕರ’

ಅಳ್ನಾವರ: ಪಟ್ಟಣದ ಬೀದಿದೀಪ ವ್ಯವಸ್ಥೆಯನ್ನು ಪಟ್ಟಣ ಪಂಚಾಯ್ತಿ ನಿರ್ವಹಿಸುತ್ತಿದ್ದು, ಬೆಳೆಯುತ್ತಿರುವ ಪಟ್ಟಣಕ್ಕೆ ಇನ್ನಷ್ಟು ಬೀದಿದೀಪ ಅಳವಡಿಕೆ ಅಗತ್ಯವಿದೆ. ಎಪಿಎಂಸಿ ಆವರಣ ಹಾಗೂ ಕಾಶೇನಟ್ಟಿ ರಸ್ತೆಯಲ್ಲಿ, ಖಾಸಗಿ ಕಾಲೇಜು ರಸ್ತೆಯಲ್ಲಿ ಬೀದಿದೀಪ ಅಳವಡಿಕೆ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆ.

ಬೀದಿದೀಪದ ತೊಂದರೆ ಕುರಿತು ಪಟ್ಟಣ ಪಂಚಾಯ್ತಿಗೇ ದೂರು ನೀಡಬಹುದಾಗಿದೆ.

ವರ್ಷದೊಳಗೇ ಕೆಟ್ಟ ‘ಹೈಮಾಸ್ಟ್’

ಕುಂದಗೋಳ: ತಾಲ್ಲೂಕಿನ ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ‌ಬೀದಿದೀಪ ನಿರ್ವಹಣೆ ವ್ಯತ್ಯಯ ಸಾಮಾನ್ಯವಾಗಿದೆ.

‘ಕುಂದಗೋಳ, ಸಂಶಿ ಸೇರಿದಂತೆ ಕೆಲವು ಕಡೆ ಹೈ ಮಾಸ್ಟ್ ಅಳವಡಿಸಲಾಗಿದ್ದು, ಕೆಲವು ಕಡೆಗಳಲ್ಲಿ ವರ್ಷದೊಳಗೇ ದುರಸ್ತಿಗೆ ಬಂದಿವೆ’ ಎನ್ನುತ್ತಾರೆ ರೈತ ಮುಂಖಡ ಶಂಕರಗೌಡ ದೊಡ್ಡಮನಿ.

ತಾಲ್ಲೂಕಿನ ಸಂಶಿ, ಯರಗುಪ್ಪಿ, ಚಾಕಲಬ್ಬಿ, ಹಿರೇನೆರ್ತಿ, ಚಿಕ್ಕನೇರ್ತಿ, ಯರೇಬೂದಿಹಾಳ, ಹರಕುಣಿ, ಭರದ್ವಾಡ ಹೀಗೆ ಅನೇಕ ಗ್ರಾಮಗಳಲ್ಲಿ ವಿದ್ಯುರ್ ತಂತಿಗಳು ಕೆಳ ಮಟ್ಟದಲ್ಲಿ ಇವೆ, ಕೆಲವು ವಿದ್ಯುತ್ ಕಂಬಗಳು ವಾಲಿಕೊಂಡಿವೆ’ ಎನ್ನುತ್ತಾರೆ ಚಾಕಲಬ್ಬಿ ಗ್ರಾಮದ ‌ನಿವಾಸಿ ಗುಳ್ಳಪ್ಪ ಕಟಗಿ.

ಪೂರಕ ಮಾಹಿತಿ: ಧನ್ಯಪ್ರಸಾದ್ ಬಿ.ಜೆ., ಜಗದೀಶ ಗಾಣಿಗೇರ, ವಾಸುದೇವ ಮುರಗಿ, ರಮೇಶ ಓರಣಕರ, ರಾಜಶೇಖರ ಸುಣಗಾರ, ಅಬ್ದುಲ್‌ರಜಾಕ್ ನದಾಫ್, ಗಿರೀಶ ಘಾಟಗೆ,

ಹುಬ್ಬಳ್ಳಿಯ ಬಿವಿಬಿ ಕಾಲೇಜು ಎದುರು ಹಗಲಲ್ಲೂ ಉರಿಯುತ್ತಿದ್ದ ಚಿಗರಿ ಮಾರ್ಗದ ಬೀದಿದೀಪ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಬಿವಿಬಿ ಕಾಲೇಜು ಎದುರು ಹಗಲಲ್ಲೂ ಉರಿಯುತ್ತಿದ್ದ ಚಿಗರಿ ಮಾರ್ಗದ ಬೀದಿದೀಪ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಮಾರ್ವೆಲ್ ಆರ್ಟಿಜಾ ಮಾಲ್ ಎದುರು ಬೆಳಗದೇ ಉಳಿದ ಚಿಗರಿ ಮಾರ್ಗದ ಒಂದು ಬದಿಯ ಬೀದಿದೀಪಗಳು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಮಾರ್ವೆಲ್ ಆರ್ಟಿಜಾ ಮಾಲ್ ಎದುರು ಬೆಳಗದೇ ಉಳಿದ ಚಿಗರಿ ಮಾರ್ಗದ ಒಂದು ಬದಿಯ ಬೀದಿದೀಪಗಳು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಯಿಂದ ಗೋಕುಲರಸ್ತೆ ಸಂಪರ್ಕಿಸುವ ರಸ್ತೆ ಕತ್ತಲಿನಿಂದ ಆವರಿಸಿದ್ದು ರಾತ್ರಿ ವೇಳೆ ನಡೆದಾಡಲು ಭಯವಾಗುವಂತಿದೆ
ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಯಿಂದ ಗೋಕುಲರಸ್ತೆ ಸಂಪರ್ಕಿಸುವ ರಸ್ತೆ ಕತ್ತಲಿನಿಂದ ಆವರಿಸಿದ್ದು ರಾತ್ರಿ ವೇಳೆ ನಡೆದಾಡಲು ಭಯವಾಗುವಂತಿದೆ
ಗುಡಗೇರಿ ಗ್ರಾಮದಲ್ಲಿ ಮಂದವಾಗಿ ಬೆಳಗುವ ಸೋಲಾರ್ ಬೀದಿದೀಪ
ಗುಡಗೇರಿ ಗ್ರಾಮದಲ್ಲಿ ಮಂದವಾಗಿ ಬೆಳಗುವ ಸೋಲಾರ್ ಬೀದಿದೀಪ
ಹುಬ್ಬಳ್ಳಿಯ ಗೋಕುಲ ರಸ್ತೆ ಹಿಂಭಾಗದ ಕೈಗಾರಿಕಾ ಪ್ರದೇಶದಲ್ಲಿ ಬೀದಿದೀಪಗಳು ಬಂದ್ ಆಗಿ ಕತ್ತಲೆ ಆವರಿಸಿದೆ
ಹುಬ್ಬಳ್ಳಿಯ ಗೋಕುಲ ರಸ್ತೆ ಹಿಂಭಾಗದ ಕೈಗಾರಿಕಾ ಪ್ರದೇಶದಲ್ಲಿ ಬೀದಿದೀಪಗಳು ಬಂದ್ ಆಗಿ ಕತ್ತಲೆ ಆವರಿಸಿದೆ
ಹುಬ್ಬಳ್ಳಿಯ ದೇಶಪಾಂಡೆ ನಗರದ ಐಬಿ ಬಳಿಯ ವೃತ್ತದಲ್ಲಿ ಬೀದಿದೀಪ ಬೆಳಗದ ಕಾರಣ ಕತ್ತಲು ಆವರಿಸಿದೆ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ದೇಶಪಾಂಡೆ ನಗರದ ಐಬಿ ಬಳಿಯ ವೃತ್ತದಲ್ಲಿ ಬೀದಿದೀಪ ಬೆಳಗದ ಕಾರಣ ಕತ್ತಲು ಆವರಿಸಿದೆ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಹೆಗ್ಗೇರಿ ರುದ್ರಭೂಮಿ ಬಳಿ ಇರುವ ಬೀದಿದೀಪಗಳಲ್ಲಿ ಒಂದು ಮಾತ್ರ ಬೆಳಗುತ್ತಿದೆ –ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಹೆಗ್ಗೇರಿ ರುದ್ರಭೂಮಿ ಬಳಿ ಇರುವ ಬೀದಿದೀಪಗಳಲ್ಲಿ ಒಂದು ಮಾತ್ರ ಬೆಳಗುತ್ತಿದೆ –ಪ್ರಜಾವಾಣಿ ಚಿತ್ರ: ಗುರು ಹಬೀಬ

ಪಾಲಿಕೆ ವ್ಯಾಪ್ತಿ ಬೀದಿದೀಪಗಳ ಮಾಹಿತಿ * 64,824– ಸದ್ಯ ಇರುವ ಒಟ್ಟು ಬೀದಿದೀಪಗಳು * 67,587– ಸದ್ಯ ಇರುವ ಒಟ್ಟು ವಿದ್ಯುತ್ ಕಂಬಗಳು * 18,000– ಸದ್ಯ ಇರುವ ಎಲ್ಇಡಿ ಬಲ್ಬ್‌ಗಳು * 11,000– ಬೀದಿದೀ‍ಪ ಅಳವಡಿಕೆ ಆಗದ ಕಂಬಗಳು * 18.95 ಲಕ್ಷ ಯೂನಿಟ್– ಬೀದಿದೀಪ ಉದ್ದೇಶಕ್ಕಾಗಿ ತಿಂಗಳಿಗೆ ಬಳಕೆ ಆಗುವ ವಿದ್ಯುತ್ * ₹20 ಕೋಟಿ– ಪಾಲಿಕೆಯು ಹೆಸ್ಕಾಂಗೆ ಪಾವತಿಸುವ ವಾರ್ಷಿಕ ವಿದ್ಯುತ್ ಶುಲ್ಕ * ₹3.92 ಕೋಟಿ– ನಿರ್ವಹಣೆ ಕಾರ್ಯಕ್ಕೆ ಏಜೆನ್ಸಿಗಳಿಗೆ ವಾರ್ಷಿಕ ಪಾವತಿಸುವ ಮೊತ್ತ * 82778 03778– ದೂರು ಸಲ್ಲಿಸುವ ನಿಯಂತ್ರಣ ಕೊಠಡಿ ಸಂಖ್ಯೆ * 200– ನಿಯಂತ್ರಣ ಕೊಠಡಿಗೆ ನಿತ್ಯ ಬರುವ ದೂರುಗಳು

ಎಲ್‌ಇಡಿ ಬಲ್ಬ್ ಅಳವಡಿಕೆ ಯೋಜನೆ ₹50 ಕೋಟಿಗಿಂತ ಹೆಚ್ಚಿನ ಮೊತ್ತದ್ದಾದ ಕಾರಣ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಸಿಗಬೇಕಿದೆ. ಪ್ರಸ್ತಾವ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ಟೆಂಡರ್ ಕರೆಯಲಾಗುವುದು
ಎಸ್.ಎನ್. ಗಣಾಚಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಎಲೆಕ್ಟ್ರಿಕಲ್ ವಿಭಾಗ ಹು–ಧಾ ಮಹಾನಗರ ಪಾಲಿಕೆ
ಚೇತನಾ ಸರ್ಕಲ್‌ನಿಂದ ತತ್ವದರ್ಶಿ ಆಸ್ಪತ್ರೆ ಮಾರ್ಗವಾಗಿ ರಾತ್ರಿ ಓಡಾಡಲು ಭಯ ಪಡುವಂತಾಗಿದೆ. ರಾತ್ರಿ ಸಮಯದಲ್ಲಿ ಕೆಲಸ ಮುಗಿಸಿ ಮನೆ ತೆರಳಲು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ
ಮಂಜುಳಾ ಎಚ್. ಸ್ಥಳೀಯ ನಿವಾಸಿ

ಅನುಷ್ಠಾನವಾಗದ ಎಲ್ಇಡಿ ಪ್ರಾಜೆಕ್ಟ್ ಎಲ್ಲ ಬೀದಿದೀಪಗಳನ್ನು ಎಲ್‌ಇಡಿ ಬಲ್ಬ್‌ಗೆ ಬದಲಾಯಿಸುವ ಯೋಜನೆ ಪಾಲಿಕೆ ವ್ಯಾಪ್ತಿಯಲ್ಲಿ ತಾಂತ್ರಿಕ ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿದೆ. ಸ್ಮಾರ್ಟ್ ಸಿಟಿ ವತಿಯಿಂದ ಈ ಯೋಜನೆ ಅನುಷ್ಠಾನಕ್ಕೆ ಬರಬೇಕಿತ್ತು. ಆದರೆ ಏಳು ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ಆಸಕ್ತಿ ವಹಿಸಿಲ್ಲ. ವರ್ಷದ ಹಿಂದೆ ಈ ಹೊಣೆ ಪಾಲಿಕೆ ಹೆಗಲೇರಿದೆ. ಪಾಲಿಕೆಯು ಸಮೀಕ್ಷೆ ನಡೆಸಿ ಟೆಂಡರ್ ಕರೆದಿತ್ತಾದರೂ ತಾಂತ್ರಿಕ ತೊಡಕುಗಳಿಂದ ಅದು ಮುಂದುವರಿಯಲಿಲ್ಲ. ಇದೀಗ ಸರ್ಕಾರದ ಮಟ್ಟದಲ್ಲಿ ಅನುಮೋದನೆಗಾಗಿ ಪಾಲಿಕೆ ಕಾಯುತ್ತಿದೆ. ತಕ್ಷಣವೇ ಅನುಮತಿ ಸಿಕ್ಕರೂ ಯೋಜನೆ ಅನುಷ್ಠಾನಕ್ಕೆ ಬರಲು ಕನಿಷ್ಠ ಇನ್ನೂ ಮೂರು ತಿಂಗಳು ಬೇಕಾಗುತ್ತದೆ. ಏನಿದು ಯೋಜನೆ?: ಈ ಯೋಜನೆ ಪ್ರಕಾರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್‌ಇಡಿ ದೀಪ ಅಳವಡಿಸಲಾಗುತ್ತದೆ. ಸದ್ಯ ಬೀದಿದೀಪ ಉದ್ಧೇಶಕ್ಕಾಗಿ ವಾರ್ಷಿಕ 2.27 ಕೋಟಿ ಯೂನಿಟ್ ವಿದ್ಯುತ್ ಬಳಕೆ ಆಗುತ್ತಿದೆ. ಎಲ್‌ಇಡಿ ಬೀದಿದೀಪ ಬಳಕೆಗೆ ಬಂದರೆ ಇದು ಅರ್ಧದಷ್ಟು ತಗ್ಗುತ್ತದೆ. ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಯೋಜನೆ ಅನುಷ್ಠಾನಕ್ಕೆ ತರಲು ಪಾಲಿಕೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಪಾಲಿಕೆಯು ಯಾವುದೇ ರೀತಿಯಲ್ಲಿ ಹಣ ವ್ಯಯಿಸುವುದಿಲ್ಲ. ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಯೇ ಅವಳಿ ನಗರದಾದ್ಯಂತ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುತ್ತದೆ. ಏಳು ವರ್ಷದವರೆಗೆ ನಿರ್ವಹಣೆ ಹೊಣೆಯೂ ಅವರದ್ದೇ. ವಿದ್ಯುತ್ ಬಳಕೆಯಲ್ಲಿ ಉಳಿತಾಯ ಆಗುವ ಮೊತ್ತದಿಂದ ಗುತ್ತಿಗೆದಾರರಿಗೆ ಕಂತಿನ ರೂಪದಲ್ಲಿ ಹಣ ಪಾವತಿಸಲಾಗುತ್ತದೆ. ಅತ್ಯಾಧುನಿಕ ನಿಯಂತ್ರಣ ಕೊಠಡಿ: ‘ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಸಿಎಂಎಸ್) ಅಡಿ ಒಂದು ಕೊಠಡಿಯಲ್ಲಿ ಕುಳಿತು ಇಡೀ ಪಾಲಿಕೆ ವ್ಯಾಪ್ತಿಯ ಬೀದಿದೀಪ ವ್ಯವಸ್ಥೆ ನಿಯಂತ್ರಿಸುವ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೊಳ್ಳಲಾಗುವುದು. ಮೊಬೈಲ್ ಸಿಮ್ ಮಾದರಿಯ ಸಿಮ್ ಸಹಾಯದಿಂದ ಎಲ್ಲಿ ದೀಪ ಹಾಳಾಗಿದೆ ಎಷ್ಟು ವಿದ್ಯುತ್ ಬಳಕೆ ಆಗುತ್ತಿದೆ ಎಂಬೆಲ್ಲ ಮಾಹಿತಿ ತಿಳಿಯುತ್ತದೆ. ಇದು ಬೀದಿದೀಪ ನಿರ್ವಹಣೆ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ತರಲಿದೆ’ ಎನ್ನುತ್ತಾರೆ ಪಾಲಿಕೆ ಎಲೆಕ್ಟ್ರಿಕಲ್ ವಿಭಾಗದ ಸಹಾಯಕ ಎಂಜಿನಿಯರ್ ರಮೇಶ ಕುರಹಟ್ಟಿ.

ನಿರ್ವಹಣೆ ಕೊರತೆ ನವಲಗುಂದ: ನಗರದಲ್ಲಿ ನಿರ್ವಹಣೆ ಕೊರತೆಯಿಂದ ಬೀದಿದೀಪಗಳು ಬೆಳಗದ ಸ್ಥಿತಿಯಲ್ಲಿವೆ. ಮುಖ್ಯ ರಸ್ತೆಗಳಲ್ಲೇ ನಿರ್ವಹಣೆ ಕಳಪೆಯಾಗಿದೆ. ಹಲವು ಬೀದಿದೀಪಗಳು ಎರಡು ದಶಕಗಳಷ್ಟು ಹಳೆಯದಾಗಿವೆ. ಕೆಲವೊಂದು ಬೀದಿದೀಪಗಳ ಸಂಪರ್ಕ ಜಾಲ ಸರಿಪಡಿಸಲಾಗದಷ್ಟು ಹದಗೆಟ್ಟಿವೆ. ಪರಿಣಾಮವಾಗಿ ಗುತ್ತಿಗೆದಾರರು ಸಮರ್ಪಕ ನಿರ್ವಹಣೆ ಮಾಡಲು ತೊಡಕುಂಟಾಗಿದೆ. ‘ಮಳೆ ಬಂದರೆ ಗಾಳಿ ಇದ್ದರೆ ಬೆಳಕು ಹತ್ತಲ್ಲ. ಪುರಸಭೆಯವರಿಗೆ ಹೇಳಿ ಹೇಳಿ ಸಾಕಾಗಿದೆ. ಕತ್ತಲಲ್ಲಿ ಅಡ್ಡಾಡುವುದೇ ಆಗಿದೆ’ ಎಂದು ದೂರುತ್ತಾರೆ ನಗರದ ನಿವಾಸಿ ಶಿವು ಲಕ್ಕುಂಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT