ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಹಂತದಲ್ಲಿ ‘ಗ್ರಾಮ ಚರಿತ್ರೆ ಕೋಶ’

Last Updated 28 ಜನವರಿ 2014, 6:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಂದು ವರ್ಷದ ಹಿಂದೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಆರಂಭಿಸಿದ ‘ಕರ್ನಾಟಕ ಗ್ರಾಮ ಚರಿತ್ರೆ ಕೋಶ’ ಯೋಜನೆಯು ಅಂತಿಮ ಹಂತ ತಲುಪಿದ್ದು, ಹಳ್ಳಿ–ಹಳ್ಳಿಯ ಮಾಹಿತಿಯನ್ನು ಕಲೆಹಾಕುವ ಕಾರ್ಯವು ಭರದಿಂದ ಸಾಗಿದೆ.

ರಾಜ್ಯದಲ್ಲಿನ ಪ್ರತಿ ಹಳ್ಳಿಯ ಇತಿಹಾಸದ ಜೊತೆಗೆ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯ ಚಿತ್ರಣವನ್ನು ಕಟ್ಟಿಕೊಡು ವುದು ಇದರ ಉದ್ದೇಶ. ಪ್ರತಿ ಗ್ರಾಮಕ್ಕೆ ತೆರಳಿ ಅಲ್ಲಿ ಸಮೀಕ್ಷೆ ಕೈಗೊಂಡು ವರದಿ ಸಿದ್ಧಪಡಿಸಿ, ನಂತರ ಅದನ್ನು ಜಿಲ್ಲಾವಾರು ಗ್ರಂಥರೂಪದಲ್ಲಿ ಪ್ರಕಟಿಸುವ, ವೆಬ್‌ಸೈಟ್‌ ಮುಖೇನ ಅಂತರ್ಜಾಲದಲ್ಲಿ ಬಿತ್ತರಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ.

ಈ ಯೋಜನೆಯ ಮೊದಲ ಹಂತವಾಗಿ ಹಾವೇರಿ ಜಿಲ್ಲೆಯ 705 ಹಳ್ಳಿಗಳ ಸಮೀಕ್ಷೆ ಕಾರ್ಯವು ಮುಕ್ತಾಯಗೊಂಡಿದ್ದು, ವರದಿಯು ಪರಿಷ್ಕರಣೆಯ ಹಂತ ದಲ್ಲಿದೆ. ಇನ್ನೂ ಕೆಲವು ಜಿಲ್ಲೆಗಳ ಸಮೀಕ್ಷೆ ಸಹ ಮುಕ್ತಾಯ ಹಂತ ತಲುಪಿದೆ.

‘ಕಂದಾಯ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಸುಮಾರು 29,000 ಹಳ್ಳಿಗಳಿವೆ. ಆದರೆ ಒಂದು ಅಂದಾಜಿನಂತೆ ಕರ್ನಾಟಕದಲ್ಲಿ 59,000 ವಾಸಸ್ಥಳಗಳಿವೆ. ಇಷ್ಟೂ ಪ್ರದೇಶ ಗಳನ್ನು ಬಿಡಿಬಿಡಿಯಾಗಿ ಅಧ್ಯಯನ ಮಾಡಿ ವರದಿ ಸಿದ್ಧಪ ಡಿಸುವುದು. ಅಲ್ಲಿನ ಚರಿತ್ರೆಯನ್ನು ದಾಖಲಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ರಾಜ್ಯದಾದ್ಯಂತ 380 ಸ್ವಯಂ ಸೇವಕರು ಕಾರ್ಯ ನಿರತರಾಗಿದ್ದಾರೆ. ಇವರ ಉಸ್ತುವಾರಿಗಾಗಿ ಪ್ರತಿ ತಾಲ್ಲೂಕಿಗೆ ಇಬ್ಬರು ಕ್ಷೇತ್ರತಜ್ಞರು ಹಾಗೂ ಜಿಲ್ಲಾ ಮಟ್ಟದಲ್ಲಿ ಒಬ್ಬರು ಜಿಲ್ಲಾ ಸಂಪಾದಕರು ಕಾರ್ಯ ನಿರ್ವಹಿಸುತ್ತಿದ್ದಾರೆ.   ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವಾಲಯವು ನೆರವು ನೀಡುತ್ತಿದೆ. ಶೀಘ್ರದಲ್ಲಿಯೇ ಯೋಜನೆಯು ಮುಕ್ತಾಯ ಗೊಳ್ಳುವ ನಿರೀಕ್ಷೆ ಇದೆ’ ಎಂದು ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾ ಅಧಿಕಾರಿ ಕೆ. ಪ್ರೇಮಕುಮಾರ್‌ ತಿಳಿಸಿದರು.

‘ಕರ್ನಾಟಕದ ಹಳ್ಳಿಗಳ ವಿಶ್ವಕೋಶದಂತೆ ಈ ವರದಿ ಸಿದ್ಧವಾಗಲಿದೆ. ಸಾಮಾನ್ಯ ಜನರು ತಾವು ಬಯಸುವ ಗ್ರಾಮಗಳ ಮಾಹಿತಿಯನ್ನು

ಪಡೆಯುವುದರ ಜೊತೆಗೆ ವಿಶ್ವವಿದ್ಯಾಲಯಗಳಲ್ಲಿನ ಅಧ್ಯಯನಕ್ಕೆ, ಸರ್ಕಾರದ ಮಟ್ಟ ದಲ್ಲಿ ಯೋಜನೆಗಳನ್ನು ರೂಪಿಸಲು ಇದೂ ನೆರವಾಗ ಬಹುದು’ ಎನ್ನುವ ಆಶಯ ಅವರದ್ದು.

ಇದರೊಟ್ಟಿಗೆ ಕನ್ನಡ ಜಾನಪದ ನಿಘಂಟು ಸಿದ್ಧಪಡಿಸುವ ಕಾರ್ಯವೂ ಮುಂದು ವರಿದಿದೆ. ಒಂದು ಪದವನ್ನು ಅದರ ಪ್ರಯೋಗ ಸಹಿತ ವಿವರಿಸುವುದು ಈ ನಿಘಂಟಿನ ವಿಶೇಷ.

ವಿ.ವಿ. ಹೊರಗೂ ಅಧ್ಯಯನ ಕೇಂದ್ರ: ಗೊಟಗೋಡಿ ಯಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ಆಡಳಿತ ಹಾಗೂ ಶೈಕ್ಷಣಿಕ ಭವನಗಳ ನಿರ್ಮಾಣ ಕಾರ್ಯ ಮುಂದು ವರಿದಿದೆ. ಮತ್ತೊಂದೆಡೆ ವಿಶ್ವವಿದ್ಯಾಲಯವು ರಾಜ್ಯದ ವಿವಿಧ ಭಾಗಗಳಲ್ಲಿ ಕೇಂದ್ರಗಳನ್ನು ಆರಂಭಿಸುವ ಮೂಲಕ ತನ್ನ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳನ್ನು ವಿಸ್ತರಿಸುವಲ್ಲಿ ಕಾರ್ಯೋನ್ಮುಖವಾಗಿದೆ. ಬೀದರ್‌ ನಗರದಲ್ಲಿ ಪ್ರಾದೇಶಿಕ ಅಧ್ಯಯನ ಕೇಂದ್ರವನ್ನು ತೆರೆಯಲಾಗಿದೆ. ಚಾಮ ರಾಜ ನಗರದ ಮಲೈ ಮಹದೇಶ್ವರ ಬೆಟ್ಟದಲ್ಲೂ ಅಧ್ಯಯನ ಕೇಂದ್ರವು ಕಾರ್ಯಾರಂಭ ಮಾಡಿದೆ.  ಹಂತಹಂತವಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರಾದೇಶಿಕ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವನ್ನು ವಿಶ್ವವಿದ್ಯಾಲಯ ಹೊಂದಿದೆ.

ಇದರೊಟ್ಟಿಗೆ, ಹಾವೇರಿ, ಶಿಗ್ಗಾಂವಿ, ಸೋಮವಾರ ಪೇಟೆ, ರಾಮನಗರ ಮೊದಲಾದ ಪ್ರದೇಶಗಳ ಕಾಲೇಜುಗಳಿಗೆ, ವಿವಿಧ ಸಂಶೋಧನೆಗಳಿಗೆ ವಿಶ್ವವಿದ್ಯಾಲಯವು ಮಾನ್ಯತೆ ನೀಡಿದೆ. ಈ ಮೂಲಕ ಅಧ್ಯಯನ ಕ್ಷೇತ್ರವನ್ನು ವಿಸ್ತರಿಸುವ ಪ್ರಯತ್ನ ನಡೆದಿದೆ.

ಕ್ಯಾಂಪಸ್‌ಗೆ ಹೊಸ ಬಸ್‌

ಶಿಗ್ಗಾಂವಿಯಿಂದ ಗೊಟಗೋಡಿಗೆ ಓಡಾಡುವ ವಿದ್ಯಾರ್ಥಿ ಗಳಿಗೆ ಹಾಗೂ ಸಿಬ್ಬಂದಿಗೆ ಬಸ್‌ ಸೌಲಭ್ಯದ ತೊಂದರೆ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ವಿ.ವಿ.ಯು ಬ್ಯಾಂಕ್‌ ನೆರವಿನೊಂದಿಗೆ ಬಸ್‌ ಖರೀದಿಸಿದೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಕ್ಯಾಂಪಸ್‌–ಶಿಗ್ಗಾಂವಿ ನಡುವೆ ಈ ಹೊಸ ಬಸ್ ಸಂಚರಿಸಲಿದೆ. ಸದ್ಯ ವಿದ್ಯಾ ರ್ಥಿಗಳು ಪರೀಕ್ಷೆಯ ಮೂಡ್‌ನಲ್ಲಿದ್ದು, ಸ್ನಾತಕೋತ್ತರ ವಿಷಯಗಳ ಪರೀಕ್ಷೆಗಳು ಕ್ಯಾಂಪಸ್‌ನಲ್ಲಿ ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT