ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಲ್ಲಿ ಮುಧೋಳದ ಸಾವಯವ ಬೆಲ್ಲ

ನಾಲ್ಕು ಕಡೆ ಪ್ರತಿದಿನ ಒಟ್ಟು 80 ಕೆ.ಜಿ. ಮಾರಾಟ
Last Updated 12 ಮಾರ್ಚ್ 2015, 7:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ಇಟ್ಟುಕೊಂಡಿರುವ ಇಂದಿನ ಜನರು ಸಾವಯವ ಉತ್ಪನ್ನಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾವಯವ ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಧಾರವಾಡ ಕೃಷಿ ವಿಶ್ವ­ವಿದ್ಯಾಲ­ಯದಲ್ಲಿರುವ ಗ್ರಾಹಕರ ಸಹಕಾರಿ ಸೊಸೈಟಿ, ವಿದ್ಯಾಗಿರಿಯಲ್ಲಿರುವ ದೇಸಿ ಅಂಗಡಿಯಲ್ಲಿ ಸುಮಾರು ಎರಡು ತಿಂಗಳಿಂದ ಮಾರಾಟ ಮಾಡಲಾಗುತ್ತಿದೆ.

ಕುಮಾರೇಶ್ವರ ನಗರ ಮತ್ತು ಕೊಪ್ಪದಕೇರಿ ಹಾಪ್‌ಕಾಮ್ಸ್‌ನಲ್ಲಿ 20 ದಿನಗಳಿಂದ ಮಾರಾಟ ಮಾಡಲಾಗು­ತ್ತಿದ್ದು, ಪ್ರತಿದಿನ ಅಂದಾಜು 80 ಕೆ.ಜಿ.ಯಷ್ಟು ಸಾವಯವ ಬೆಲ್ಲ ಮಾರಾಟವಾಗುತ್ತಿದೆ. ‘ಒಂದು ಕೆ.ಜಿ. ಪೆಂಟಿ ಬೆಲ್ಲ ₹ 50 ಹಾಗೂ ಬೆಲ್ಲದ ಪುಡಿ  ₹ 70ಕ್ಕೆ ಮಾರಾಟವಾಗುತ್ತಿದೆ. ಹುಗ್ಗಿ, ಹೋಳಿಗೆ, ಸಜ್ಜಕ, ವಿವಿಧ ಉಂಡಿಗಳು, ಮಾದ್ಲಿಗಳಂಥ ಸಾಂಪ್ರದಾಯಿಕ ತಿನಿಸುಗಳನ್ನು ಈ ಬೆಲ್ಲದಿಂದ ಮಾಡಬಹುದು. ಇನ್ನು ಬೆಲ್ಲದ ಪುಡಿಯಿಂದ ಟೀ ಮತ್ತು ಕಾಫಿಯನ್ನು ತಯಾರಿಸಿಬಹುದು.

ಬೆಲ್ಲವನ್ನು ಆರು ತಿಂಗಳವರೆಗೆ, ಪುಡಿಯನ್ನು ಎರಡು ವರ್ಷದವರೆಗೆ ಇಟ್ಟರೂ ಕೆಡುವುದಿಲ್ಲ’ ಎನ್ನುತ್ತಾರೆ ಎಂದು ಮುಧೋಳ ಕೃಷಿ ಸಂಶೋಧನಾ ಕೇಂದ್ರದ ಸಾವಯವ ಬೆಲ್ಲ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥ ಡಾ. ಸಿ.ಪಿ. ಚಂದ್ರಶೇಖರ್‌. ಸಾವಯವ ಬೆಲ್ಲದಿಂದ ಕರದಂಟು, ಶೇಂಗಾ ಚಕ್ಕಿ, ರಾಜಗಿರಿ ಉಂಡಿಯನ್ನು ತಯಾರಿಸಬಹುದು.

ಮಾಮೂಲಿ ಬೆಲ್ಲದಲ್ಲಿ ಬೆಂಡೆ ಪುಡಿ, ಬಟ್ಟೆ ಸೋಡಾ, ಸೋಡಾ, ಬಿಳಿ ಬಣ್ಣ ನೀಡಲು ಬಣ್ಣ ಸೇರಿದಂತೆ ಶೇ 99ರಷ್ಟು ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ, ಸುಣ್ಣ ಮತ್ತು ಬೆಂಡೆಕಾಯಿ ಕಟ್ಟಿಗೆಯ ಲೋಳೆಯನ್ನು ಬಳಸಿ ಸಾವಯವ ಬೆಲ್ಲ ತಯಾರಿಸಲಾಗುತ್ತದೆ. ಮಾಮೂಲಿ ಬೆಲ್ಲದಲ್ಲಿ ಸವಳು ಹೆಚ್ಚಿದ್ದು, ರಾಸಾಯನಿಕಗಳನ್ನು ಬಳಸುವುದರಿಂದ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುತ್ತಾರೆ ಅವರು.

ಮುಧೋಳದಿಂದ ಧಾರವಾಡಕ್ಕೆ
ಬಾಗಲಕೋಟೆಯ ಮುಧೋಳ ಮತ್ತು ಬೆಳಗಾವಿಯ ಸಂಕೇಶ್ವರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ₹ 8 ಕೋಟಿ ವೆಚ್ಚದಲ್ಲಿ ಬೆಲ್ಲ ತಯಾರಿಕಾ ಘಟಕಗಳನ್ನು ನಿರ್ಮಿಸಲಾಗಿದೆ. ರೈತರು ಸಾವಯುವ ಕೃಷಿಯ ಮೂಲಕ ಕಬ್ಬು ಬೆಳೆದು ಘಟಕಕ್ಕೆ ಪೂರೈಸುತ್ತಾರೆ.

ಘಟಕ ತಾಂತ್ರಿಕ ನೆರವು ನೀಡುತ್ತಿದ್ದು, ಸಂಸ್ಕರಣಾ ಶುಲ್ಕವನ್ನು ಮಾತ್ರ ರೈತರಿಂದ ಪಡೆಯುತ್ತಿದೆ.  ಪ್ರತಿದಿನ ಮುಧೋಳದಲ್ಲಿ 1,500 ಕೆ.ಜಿ. ಬೆಲ್ಲ ತಯಾರಿಸಲಾಗುತ್ತಿದೆ. ಇಲ್ಲಿಂದ ಧಾರವಾಡ ಮತ್ತು ರಾಜ್ಯದ ವಿವಿಧ ಭಾಗಗಳಿಗೆ ಪೂರೈಸಲಾಗುತ್ತಿದೆ. ಸಂಕೇಶ್ವರದಲ್ಲಿ ಪ್ರತಿದಿನ 600 ಕೆ.ಜಿ. ಬೆಲ್ಲ ತಯಾರಿಸಲಾಗುತ್ತಿದ್ದು, ಇದನ್ನು ರಷ್ಯಾಕ್ಕೆ ರಫ್ತು ಮಾಡಲಾಗುತ್ತಿದೆ.

ಸಂಘ–ಸಂಸ್ಥೆಗಳಿಗೆ ಪೂರೈಕೆ
ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಸಾವಯವ ಬೆಲ್ಲ ಸ್ವಲ್ಪ ದುಬಾರಿ ಎನಿಸುತ್ತದೆ. ಇದನ್ನು ಆರೋಗ್ಯದ ದೃಷ್ಟಿಯಿಂದ ನೋಡಬೇಕು. ಅಲ್ಲದೇ ರೈತರಿಗೆ ಇದರ ಸಂಪೂರ್ಣ ಲಾಭ ಹೋಗುತ್ತದೆ. ರಾಜ್ಯದಾದ್ಯಂತ ವಿವಿಧ ಕಂಪೆನಿಗಳು ಮತ್ತು ಸಂಸ್ಥೆಗಳು ಸಾವಯವ ಬೆಲ್ಲಕ್ಕೆ  ಬೇಡಿಕೆ ಇಟ್ಟಿವೆ.

ಇದೇ ರೀತಿ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಸಂಘ–ಸಂಸ್ಥೆಗಳು ಸಗಟಾಗಿ ಖರೀದಿಸಿ ಮಾರಾಟ ಮಾಡಲು ಮುಂದಾದರೆ ಅವರಿಗೆ ಕಳುಹಿಸಿಕೊಡಲು ಸಿದ್ಧ. ಸಗಟಾಗಿ ಖರೀದಿಸಿದರೆ ಬೆಲೆಯಲ್ಲೂ ವಿನಾಯಿತಿ ಸಿಗಲಿದೆ. ರೈತರ ಬ್ಯಾಂಕ್‌ ಖಾತೆ ಸಂಖ್ಯೆಯನ್ನು ಅವರಿಗೆ ನೀಡುತ್ತೇವೆ. ಅವರೇ ರೈತರ ಖಾತೆಗೆ ಹಣ ತುಂಬಬಹುದು ಎನ್ನುತ್ತಾರೆ ಚಂದ್ರಶೇಖರ್‌.

ಮಾರಾಟಗಾರರ ಅಭಿಪ್ರಾಯ
‘ಎರಡು ತಿಂಗಳಿಂದ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮಾರಾಟ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಾವಯವ ಬೆಲ್ಲ ಕೊಂಡೊಯ್ಯುತ್ತಿದ್ದಾರೆ. ಮಾಮೂಲಿ ಬೆಲ್ಲಕ್ಕೆ ಹೋಲಿಸಿದರೆ ಬೆಲೆ ಸ್ವಲ್ಪ ದುಬಾರಿ ಅಷ್ಟೆ. ಪ್ರಚಾರ ಕೈಗೊಂಡರೆ ಸಾವಯವ ಬೆಲ್ಲಕ್ಕೆ ಖಂಡಿತ ಬೇಡಿಕೆ ಹೆಚ್ಚಾಗುತ್ತದೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗ್ರಾಹಕ ಸಹಕಾರಿ ಸಂಘದ ಅಧ್ಯಕ್ಷ ಡಾ. ಎ.ಡಿ. ನಾಯಕ್‌ ಹೇಳುತ್ತಾರೆ.

‘ಮೂರು ವರ್ಷಗಳಿಂದ ದೇಸಿ ಅಂಗಡಿಯಲ್ಲಿ ಸಾವಯ ಬೆಲ್ಲ ಮಾರಾಟ ಮಾಡುತ್ತಿದ್ದೇವೆ. ಕಿತ್ತೂರಿನ ಶಂಕರ ಲಂಗಟಿ ಎನ್ನುವವರು ಸಾವಯವ ಬೆಲ್ಲ ತಂದುಕೊಡುತ್ತಿದ್ದರು. ಈ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದಲೂ ಬೆಲ್ಲಕೊಡುತ್ತಿದ್ದಾರೆ. ವರ್ಷಕ್ಕೆ 150 ಕೆ.ಜಿ.ಯಷ್ಟು ಬೆಲ್ಲ ಮಾರಾಟ’ ಮಾಡುತ್ತಿದ್ದೇವೆ ಎನ್ನುತ್ತಾರೆ ದೇಸಿ ಅಂಗಡಿಯ ವ್ಯವಸ್ಥಾಪಕಿ ಸುನಂದಾ ಭಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT