ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಕಾಮಗಾರಿಗೆ ಯಂತ್ರ ಬಳಕೆ ಆರೋಪ

ಗ್ರಾ.ಪಂ. ಪಾಸ್‌ವರ್ಡ್‌ ಬಂದ್‌; ಕೆಲಸಕ್ಕಾಗಿ ಪೀಕಲಾಟ
Last Updated 26 ಮಾರ್ಚ್ 2014, 6:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿ ಕಲಘಟಗಿ ತಾಲ್ಲೂಕಿನ ತಬಕದ ಹೊನ್ನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಯಾರಿಗೂ ಉದ್ಯೋಗ ನೀಡಿಲ್ಲ ಎಂದು ಗ್ರಾಮಸ್ಥರು ದೂರು­ತ್ತಾರೆ.

‘ಉದ್ಯೋಗ ಅರಸಿ ಗ್ರಾಮಸ್ಥರು ಗುಳೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ನರೇಗಾ ಅಡಿಯಲ್ಲಿ ಕೆಲಸ ನೀಡುವಂತೆ ಗ್ರಾಮಸ್ಥರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಅಧಿಕಾ­ರಿಗಳಿಗೆ ಮನವಿ ಮಾಡಿದರೂ ಉಪ­ಯೋಗವಾಗಿಲ್ಲ. ಈಗ ಲೋಕಸಭಾ ಚುನಾವಣೆ ನೀತಿ ಸಂಹಿತೆಯನ್ನು ಅಧಿಕಾರಿಗಳು ಮುಂದಿಡುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮಸ್ಥ ಚನ್ನಪ್ಪ ಫಕೀರಪ್ಪ ಸಾಲಿ.

ಸುಮಾರು 4000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಶೇಕಡಾ 70ಕ್ಕೂ ಹೆಚ್ಚು ಮಂದಿ ಕೂಲಿ ನಂಬಿ ಬದುಕು ಸಾಗಿಸುತ್ತಿದ್ದಾರೆ. ‘ಈ ಯೋಜನೆಯಡಿ ಜನರಿಂದ ಕೆಲಸ ಮಾಡಿಸಬೇಕು. ಆದರೆ ಯಂತ್ರಗಳನ್ನು ಬಳಸಿ ಬದು ನಿರ್ಮಾಣ, ಕೆರೆ ಹೂಳೆ­ತ್ತುವುದು, ಚರಂಡಿ, ಕೃಷಿ ಹೊಂಡ ನಿರ್ಮಾಣ ಕಾಮಗಾರಿ ಕೈಗೊಂಡಿ­ದ್ದಾರೆ. ಇದನ್ನು ಪ್ರಶ್ನಿಸಿದರೆ ಕಾರ್ಮಿ­ಕರು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳುವ ಅಧಿಕಾರಿಗಳು ರಾತ್ರೋರಾತ್ರಿ ಕಾಮಗಾರಿ ನಡೆಸು­ತ್ತಿದ್ದಾರೆ’ ಎಂದು ಅವರು ಆರೋಪಿ­ಸುತ್ತಾರೆ.

‘ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಶಾಸಕ ಸಂತೋಷ ಲಾಡ್‌ ನಮ್ಮೂರಿಗೆ ಭೇಟಿ ನೀಡಿರುವುದೇ ನೆನಪಿಲ್ಲ. ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗಾದರೂ ಶಾಸಕರು ಬರುತ್ತಾರೆ ಎಂದು ಭಾವಿಸಿದ್ದೆವು. ಅದಕ್ಕೂ ಅವರು ಬರಲಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನ ಅವರನ್ನು ಟಿವಿಯಲ್ಲಿ ನೋಡಿದ್ದೆವು’ ಎಂದು ಗ್ರಾಮಸ್ಥರು ತೀವ್ರ ಅಸ­ಮಾಧಾನ ವ್ಯಕ್ತಪಡಿಸಿದರು.

ಪಾಸ್‌ವರ್ಡ್‌ ಬಂದ್‌: ‘ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿ­ಯಲ್ಲಿ 25,000 ಮಾನವ ದಿನಗಳ ಕೆಲಸ ಪೂರ್ಣಗೊಂಡಿಲ್ಲ. ಮಿತಿಮೀರಿ ನರೇಗಾ ಜಾರಿಗೊಳಿಸಲಾಗುತ್ತದೆ ಎಂಬ ಕಾರಣಕ್ಕೆ ರಾಜ್ಯದಾದ್ಯಂತ ಹಲವು ಗ್ರಾಮ ಪಂಚಾಯ್ತಿಗಳ ಕಂಪ್ಯೂಟರಿನ ಪಾಸ್‌ವರ್ಡ್‌ ಅನ್ನು ಫೆಬ್ರುವರಿ 27ರಂದು ಕಮಿಷನರೇಟ್‌ನಿಂದಲೇ ಬಂದ್‌ ಮಾಡಲಾಗಿದೆ. ಅಲ್ಲದೇ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹೊಸ ಕಾಮಗಾರಿಗಳಿಗೆ ಚಾಲನೆ ನೀಡ­ಲಾಗಿಲ್ಲ’ ಎಂದು ತಬಕದ ಹೊನ್ನಳ್ಳಿ ಪಿಡಿಒ ನಾಗರಾಜ ಗಂಬ್ಯಾಪುರ ಹೇಳು­ತ್ತಾರೆ.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸಂಬಂಧ ಮೇಲಾಧಿಕಾರಿಗಳಿಗೆ ಪಂಚಾ­ಯಿತಿಯ ಸ್ಥಿತಿ ಮನವರಿಕೆ ಮಾಡಿಕೊ­ಡ­ಲಾಗಿದೆ. ಏಪ್ರಿಲ್‌ ಮೊದಲ ವಾರದಲ್ಲಿ ಪಾಸ್‌ವರ್ಡ್‌ ಮುಕ್ತ ಮಾಡುವ ಭರವಸೆ ಸಿಕ್ಕಿದೆ. ಆ ನಂತರ ಚುನಾವಣೆ ಘೋಷಣೆಗೂ ಮುನ್ನ ಆರಂಭಿಸಿದ್ದ ಕೆಲಸಗಳನ್ನು ಪೂರ್ಣಗೊಳಿಸ­ಲಾಗು­ವುದು ಎಂದರು.

ಗ್ರಾಮದಲ್ಲಿ ಸುಮಾರು 600 ಉದ್ಯೋಗ ಕಾರ್ಡ್‌ಗಳಿದ್ದು, ವಿವಿಧ ಕಾಮಗಾ­ರಿಗಳಲ್ಲಿ ದುಡಿದ­ವರಿಗೆ ಸುಮಾರು ₨ 35 ಲಕ್ಷ ಕೊಡ­ಬೇಕಿದೆ. ಪಾಸ್‌ವರ್ಡ್‌ ಮುಕ್ತಗೊಳಿಸಿದ ನಂತರ ಹಣವನ್ನು ಸಂಬಂಧ ಪಟ್ಟ ಕಾರ್ಮಿಕರ ಖಾತೆಗೆ ಜಮಾ ಮಾಡ­ಲಾಗುವುದು ಎಂದು ಅವರು ತಿಳಿಸಿದರು.

‘ನಾನು ಇಲ್ಲಿ ವರ್ಗವಾಗಿ ಬಂದು ಕೇವಲ ಒಂದು ತಿಂಗಳು ಆಗಿದೆ. ಕೆಲವು ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರ ನಡುವೆ ಹಿಂದಿನಿಂದಲೂ ಇಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅಲ್ಲದೇ ಬಹುತೇಕರು ಚರಂಡಿ, ಬದು ನಿರ್ಮಾಣ ಮಾಡಲು ಒಪ್ಪುವುದಿಲ್ಲ. ಬದಲಾಗಿ ಕೆರೆಗಳ ಹೂಳೆತ್ತುವ ಕೆಲಸ­ವನ್ನೇ ನೀಡಬೇಕು ಎಂದು ಒತ್ತಾಯ ಮಾಡುತ್ತಾರೆ. ಆದರೆ ಒಂದೇ ಕೆಲಸ ಮಾಡಿಸಲು ಆಗುವುದಿಲ್ಲ’ ಎನ್ನುತ್ತಾರೆ ನಾಗರಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT