ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿದ ಬಾರ್‌ಗಳು: ಕೆಲಸಗಾರರು ಅತಂತ್ರ

Last Updated 21 ಆಗಸ್ಟ್ 2017, 5:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿಯ 500 ಮೀಟರ್‌ ವ್ಯಾಪ್ತಿಯಲ್ಲಿ ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ಬಂದ್‌ ಮಾಡಿ ಒಂದೂವರೆ ತಿಂಗಳಾಗಿದೆ. ಇವುಗಳನ್ನೇ ನೆಚ್ಚಿ ನಗರದಲ್ಲಿ ಕೆಲಸ ಮಾಡುತ್ತಿದ್ದ ಸಾವಿರಕ್ಕೂ ಹೆಚ್ಚು ನೌಕರರ ಬದುಕು ಇದೀಗ ಅತಂತ್ರವಾಗಿದೆ. ಬಹುತೇಕ ಮಂದಿ ಕೆಲಸ ಕಳೆದು­ಕೊಂಡು ಊರಿನತ್ತ ಮರಳಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ರೆಸ್ಟೋರೆಂಟ್‌ಗಳಲ್ಲಿ ಉಳಿದು­ಕೊಂಡಿದ್ದಾರೆ.

ನಗರದಲ್ಲಿ ಹಾದು ಹೋಗಿರುವ ಹುಬ್ಬಳ್ಳಿ–ವಿಜಯಪುರ, ಅಂಕೋಲಾ– ಗೂಟಿ (ಆಂಧ್ರಪ್ರದೇಶ) ಹೆದ್ದಾರಿ ವ್ಯಾಪ್ತಿಯಲ್ಲಿ ಇದ್ದ 71 ಬಾರ್‌ಗಳು ಜುಲೈ 1ರಿಂದ ಮುಚ್ಚಿವೆ. ಬಾರ್‌ ಸಂಪೂರ್ಣ ಮುಚ್ಚಿರುವುದರಿಂದ ಅದರೊಟ್ಟಿಗೆ ಇದ್ದ ರೆಸ್ಟೋರೆಂಟ್‌ಗಳು ವ್ಯಾಪಾರ ಇಲ್ಲದ ಕಾರಣ ಕೆಲವೆಡೆ ಮುಚ್ಚಲಾಗಿದೆ. ಸದಾ ಗ್ರಾಹಕರಿಂದ ಗಿಜಿಗುಡುತ್ತಿದ್ದ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು ಇದೀಗ ಗ್ರಾಹಕರಿಲ್ಲದೇ ಬಣಗುಡುತ್ತಿವೆ.

‘ಒಂದೂವರೆ ತಿಂಗಳಿಂದ ಕೆಲಸ ಇಲ್ಲ. ರೆಸ್ಟೋರೆಂಟ್‌ ಇಲ್ಲವೇ ಹೋಟೆ­ಲ್‌­ನಲ್ಲಾದರೂ ಕೆಲಸ ಸಿಗುತ್ತದೆ ಎಂದು ಹುಡುಕುತ್ತಿದ್ದೇನೆ. ಆದರೂ ಸಿಕ್ಕಿಲ್ಲ. ಮತ್ತೆ ಊರಿಗೆ ಹೋಗುವ ಯೋಚನೆ ಇದೆ’ ಎಂದು ಬಾರ್‌ವೊಂದರ ಸಪ್ಲೆಯರ್‌ ರಾಜು ಗೋಕಾಕ ಆತಂಕದಿಂದ ನುಡಿದರು.

‘ಉತ್ತರ ಪ್ರದೇಶದಿಂದ ಹುಬ್ಬಳ್ಳಿಗೆ ಬಂದು ಸಪ್ಲೆಯರ್‌ ಕೆಲಸ ಮಾಡುತ್ತಿದ್ದೆ. ಇದೀಗ ಬಾರ್ ಬಂದ್‌ ಆದಾಗಿನಿಂದ ದಿನದ ಖರ್ಚಿಗೂ ಕುತ್ತು ಬಂದಿದೆ. ಗ್ರಾಹಕರು ನೀಡುತ್ತಿದ್ದ ಟಿಪ್ಸ್‌, ವೇತನ ಸೇರಿ ತಿಂಗಳಿಗೆ ₹ 10 ಸಾವಿರ ದುಡಿದು ಅದರಲ್ಲಿ ಅರ್ಧ ಹಣವನ್ನು ಮನೆಗೆ ಕಳುಹಿಸುತ್ತಿದ್ದೆ.

ಇದೀಗ ಕೈಗೆ ಕೆಲಸ ಇಲ್ಲವಾಗಿದೆ. ಸಂಜೆ ಹೊತ್ತಿಗೆ ರೆಸ್ಟೋ­ರೆಂಟ್‌ ಮಾತ್ರ ನಡೆಯುತ್ತಿದ್ದು, ಗ್ರಾಹ­ಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಹೀಗಾಗಿ, ಟಿಪ್ಸ್‌ ಸಹ ಸಿಗುತ್ತಿಲ್ಲ. ಮುಂದೇನು ಮಾಡಬೇಕೆಂದು ತೋಚು­ತ್ತಿಲ್ಲ’ ಎಂದು ಕೋರ್ಟ್‌ ವೃತ್ತದ ಬಳಿ ಇರುವ ಗ್ರೀನ್‌ ಗಾರ್ಡನ್‌ ರೆಸ್ಟೋ­ರೆಂಟ್‌ನ ಸಪ್ಲೆಯರ್‌ ರಾಜೇಶ್ ತಿಳಿಸಿದರು.

ನಗರದ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಮಂದಿಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದವರ ಪೈಕಿ ಬಹುತೇಕ ಮಂದಿ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯದವರೇ ಹೆಚ್ಚಿದ್ದಾರೆ.

‘ಜನನಿಬಿಡ ಪ್ರದೇಶದಲ್ಲಿ ಇರುವ ಬಾರ್‌ಗೆ ನಿತ್ಯ ನೂರಾರು ಮಂದಿ ಗ್ರಾಹಕರು ಬಂದು ಹೋಗುತ್ತಿದ್ದರು. ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಇದೀಗ ಒಂದೂವರೆ ತಿಂಗಳಿನಿಂದ ಬಾರ್‌ ಮುಚ್ಚಲಾಗಿದ್ದು, ರೆಸ್ಟೋರೆಂಟ್‌ ಮಾತ್ರ ನಡೆಸಲಾಗುತ್ತಿದೆ. ಸಂಜೆ ಹೊತ್ತು ಬೆರಳೆಣಿಕೆಯಷ್ಟು ಮಾತ್ರ ಗ್ರಾಹಕರು ಬರುತ್ತಿದ್ದಾರೆ.

ಬಾರ್‌ ಅಂಡ್‌ ರೆಸ್ಟೋರೆಂಟ್‌ನಿಂದ ನಿತ್ಯ ₹ 1 ಲಕ್ಷಕ್ಕೂ ಮಿಕ್ಕಿ ವ್ಯಾಪಾರ ಆಗುತ್ತಿತ್ತು. ಆದರೆ, ಈಗ ₹ 500 ವ್ಯಾಪಾರ ಆಗುವುದು ಕಷ್ಟವಾಗಿದ್ದು, ಇರುವ ನಾಲ್ಕೈದು ಮಂದಿಗೆ ವೇತನ ಕೊಡಲು ಅದು ಸಾಕಾಗುತ್ತಿಲ್ಲ’ ಎಂದು ಸ್ಟೇಷನ್‌ ರಸ್ತೆಯ ರೇಣುಕಾ ಬಾರ್‌ ಅಂಡ್‌ ರೆಸ್ಟೋರೆಂಟ್‌ ವ್ಯವಸ್ಥಾಪಕ ಶ್ರೀಕಾಂತ ಫಕ್ಕೀರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಇವರು ಏನಂತಾರೆ?

‘ಬಾರ್‌ ಕೆಲಸ ಬಿಟ್ಟು ಬೇರೆ ಗೊತ್ತಿಲ್ಲ’
ಬಾರ್‌ ಕೌಂಟರ್‌ನಲ್ಲಿ ಕೆಲಸ ಮಾಡುವುದು ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಹೆಚ್ಚು ಕಲಿತಿಲ್ಲ. ಬೇರೆ ಕ್ಷೇತ್ರಕ್ಕೆ ಹೋಗಬೇಕೆಂದರೆ ಅನುಭವ ಕೇಳುತ್ತಾರೆ. ಬಾರ್‌ ನಡೆಯುತ್ತಿದ್ದಾಗ ಕೈನಲ್ಲಿ ಕಾಸು ಓಡಾಡುತ್ತಿತ್ತು. ಇದೀಗ ದಿನದ ಕೂಲಿಗೂ ಕಷ್ಟವಾಗಿದೆ. ಮುಂದೇನು ಮಾಡಬೇಕೆಂದು ಗೊತ್ತಿಲ್ಲ
–ಅಮೃತ ಹಬೀಬ್‌,
ಕೆಲಸಗಾರ, ರೇಣುಕಾ ರೆಸ್ಟೋರೆಂಟ್‌

‘ಬಸ್‌ ಟಿಕೆಟ್‌ಗೂ ಕಾಸಿಲ್ಲ’
ಗ್ರಾಹಕರಿಂದ ನಿತ್ಯ ₹ 300  ಟಿಪ್ಸ್‌ ಬರುತ್ತಿತ್ತು. ಇದೀಗ ಅದು ಬರುತ್ತಿಲ್ಲ. ನೇಕಾರನಗರದಿಂದ ಕೆಲಸಕ್ಕೆ ಬರಲು ಬಸ್‌ ಟಿಕೆಟ್‌ಗೂ ಹಣ ಇಲ್ಲವಾಗಿದೆ. ತಿಂಗಳಿಗೆ ₹ 3 ಸಾವಿರ ಪಗಾರ ನೀಡುತ್ತಾರೆ. ಇದರಿಂದ ಸಂಸಾರ ನಡೆಸುವುದು ಕಷ್ಟ
ರಾಮಸಾಬ್ ದಲಬಂಜನ,
ಸಪ್ಲೈಯರ್‌, ರೇಣುಕಾ ರೆಸ್ಟೋರೆಂಟ್‌

‘ಕುಟುಂಬ ಬೀದಿಗೆ ಬೀಳಲಿದೆ’
ಬಾರ್ ಕೆಲಸವಿದ್ದಾಗ ಬಿಡುವೇ ಇರುತ್ತಿರಲಿಲ್ಲ. ಒಂದೂವರೆ ತಿಂಗಳಿಂದ ಕೆಲಸವೇ ಇಲ್ಲವಾಗಿದೆ. ರೆಸ್ಟೋರೆಂಟ್‌ಗೆ ಸಂಜೆ ವೇಳೆಗೆ ಕೆಲವೇ ಮಂದಿ ಮಾತ್ರ ಗ್ರಾಹಕರು ಬರುತ್ತಿದ್ದು, ಅವರಿಗೆ ಖಾದ್ಯಗಳನ್ನು ಸಿದ್ಧಪಡಿಸುತ್ತಿದ್ದೇನೆ. ಬಾರ್‌ ಪುನರಾರಂಭಗೊಳ್ಳಿದ್ದರೆ ಕೋಲ್ಕತ್ತದಿಂದ ಕೆಲಸವನ್ನೇ ನಂಬಿ ಬಂದಿರುವ ನನ್ನ ಕುಟುಂಬ ಬೀದಿಗೆ ಬೀಳಲಿದೆ
–ಮಹೇಶ್‌ ದಾಸ್‌,
ಬಾಣಸಿಗ, ಗ್ರೀನ್‌ ಗಾರ್ಡನ್‌ ರೆಸ್ಟೋರೆಂಟ್‌

‘ಮನೆಗೆ ಹಣ ಕಳಿಸಲಾಗಿಲ್ಲ’
ಆರು ವರ್ಷದಿಂದ ಬಾರ್‌ಗಳಲ್ಲಿ ಸಪ್ಲೆಯರ್‌ ಕೆಲಸ ಮಾಡುತ್ತಿದ್ದೇನೆ. ಮನೆಯಲ್ಲಿ ಇಬ್ಬರು ಸಹೋದರಿಯರು, ಅಪ್ಪ–ಅಮ್ಮ ಇದ್ದಾರೆ. ಅವರಿಗೆ ಪ್ರತಿ ತಿಂಗಳು ತಪ್ಪದೇ ಹಣ ಕಳುಹಿಸುತ್ತಿದ್ದೆ. ಒಂದೂವರೆ ತಿಂಗಳಿನಿಂದ ಹಣ ಕಳಿಸಿಲ್ಲ
–ಮರಿಸ್ವಾಮಿ ದೇವರಮನಿ,
ಸಪ್ಲೈಯರ್‌

* * 

ಬಾರ್‌ ಬಂದ್ ಆಗಿರುವು­ದರಿಂದ ಹುಬ್ಬಳ್ಳಿಯಲ್ಲಿ ಎರಡು ಸಾವಿರ ಕೆಲಸಗಾರರ ಪೈಕಿ ಅರ್ಧದಷ್ಟು ಮಂದಿ ನೌಕರಿ ಕಳೆದುಕೊಂಡಿದ್ದಾರೆ
ಟಿ.ಎಂ. ಮೆಹರವಾಡೆ
ಅಧ್ಯಕ್ಷರು, ಹುಬ್ಬಳ್ಳಿ ಮದ್ಯ ಮರಾಟಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT