ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಪಘಾತ: ಸಾವಿನ ಸಂಖ್ಯೆ ಇಳಿಮುಖ

Last Updated 15 ಡಿಸೆಂಬರ್ 2017, 9:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಆದರೆ, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುವ ಪ್ರಮಾಣ ಹೆಚ್ಚಾಗಿದ್ದು, ನ್ಯಾಯಾಲಯಕ್ಕೂ ಹೆಚ್ಚು ದಂಡವನ್ನು ಭರಿಸಲಾಗಿದೆ.

ಅವಳಿ ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂತೆಯೇ, ಸಂಚಾರ ನಿಯಮಗಳ ಬಗ್ಗೆ ಅರಿವು ಜನರಲ್ಲಿ ಅಷ್ಟಕಷ್ಟೇ. ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು ಎಂಬ ನಿಯಮ ಇದ್ದರೂ ಅದನ್ನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚು. ಸಂಚಾರ ಪೊಲೀಸರ ಎದುರೇ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೇ ರಾಜಾರೋಷವಾಗಿ ಅಡ್ಡಾಡುತ್ತಾರೆ.

ಚನ್ನಮ್ಮ ವೃತ್ತ, ಕೋರ್ಟ್‌ ವೃತ್ತ, ಹಳೇ ಬಸ್‌ ನಿಲ್ದಾಣ, ರೈಲು ನಿಲ್ದಾಣಗಳ ಬಳಿ ಸಂಚಾರ ಪೊಲೀಸರು ನಿತ್ಯ ಕಡ್ಡಾಯವಾಗಿ ವಾಹನಗಳ ತಪಾಸಣೆ ಮಾಡಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರೂ ದಂಡ ಕಟ್ಟುವವರ ಸಂಖ್ಯೆ ಕಡಿಮೆ ಆಗಿಲ್ಲ.

ಹೆಲ್ಮೆಟ್‌ ಧರಿಸದೇ ನಿಯಮ ಉಲ್ಲಂಘನೆ: ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದ ದ್ವಿಚಕ್ರ ವಾಹನ ಸವಾರರ ವಿರುದ್ಧ 2015ನೇ ಸಾಲಿನಲ್ಲಿ ಒಟ್ಟು 46,667 ಕೇಸುಗಳನ್ನು ದಾಖಲಿಸಲಾಗಿತ್ತು. 2016ನೇ ಸಾಲಿನಲ್ಲಿ ಕೇಸುಗಳ ಪ್ರಮಾಣ ದುಪ್ಪಟ್ಟಾಗಿ 1.11 ಲಕ್ಷ ಕೇಸುಗಳನ್ನು ದಾಖಲಿಸಿದ್ದರು. ಪ್ರಸಕ್ತ ಸಾಲಿನ ಅ.25ರವರೆಗೆ ಒಟ್ಟು 99,658 ಕೇಸುಗಳು ದಾಖಲು ಮಾಡಿ ಪ್ರಕರಣವೊಂದಕ್ಕೆ ₹100ರಂತೆ ದಂಡ ವಸೂಲಿ ಮಾಡಲಾಗಿದೆ.

ಪಾರ್ಕಿಂಗ್ ದೊಡ್ಡ ಸಮಸ್ಯೆ: ಅವಳಿ ನಗರದಲ್ಲಿ ಪಾರ್ಕಿಂಗ್‌ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾಂಪ್ಲೆಕ್ಸ್‌ಗಳು ಮತ್ತು ದೊಡ್ಡ ಕಟ್ಟಡಗಳಲ್ಲಿ ವಾಹನಗಳ ನಿಲುಗಡೆಗೆ ಪಾರ್ಕಿಂಗ್‌ ಸೆಲ್ಲಾರ್‌ಗಳೇ ಇಲ್ಲ. ಹೀಗಾಗಿ, ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.


ಕಾಂಪ್ಲೆಕ್ಸ್‌ಗಳಲ್ಲಿ ಕಡ್ಡಾಯವಾಗಿ ಪಾರ್ಕಿಂಗ್‌ ಸೆಲ್ಲಾರ್‌ಗಳನ್ನು ನಿರ್ಮಿಸಬೇಕು ಎಂಬ ನಿಯಮವನ್ನು ಕೆಲ ಕಟ್ಟಡ ಮಾಲೀಕರು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಲು ಕಟ್ಟಡ ಮಾಲೀಕರಿಗೆ ಸಂಬಂಧಪಟ್ಟ ಅಧಿಕಾರಿಗಳು ಈವರೆಗೂ ನೋಟಿಸ್‌ ಜಾರಿ ಮಾಡಿಲ್ಲ.

ಸಾವಿನ ಸಂಖ್ಯೆಯಲ್ಲಿ ಇಳಿಮುಖ: ಅವಳಿ ನಗರದಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ವರ್ಷದಿಂದ ವರ್ಷಕ್ಕೆ ಸಾವಿನ ಸಂಖ್ಯೆ ಇಳಿಮುಖವಾಗಿದೆ. 2015ನೇ ಸಾಲಿನಲ್ಲಿ ರಸ್ತೆ ಅಪಘಾತದಲ್ಲಿ ಒಟ್ಟು 114 ಜನ ಮೃತಪಟ್ಟಿದ್ದರು. 2016ನೇ ಸಾಲಿನಲ್ಲಿ ಈ ಪ್ರಮಾಣ ಕಡಿಮೆಯಾಗಿ , 104 ಮಂದಿ ಮೃತಪಟ್ಟಿದ್ದರು. ಪ್ರಸಕ್ತ ಸಾಲಿನ ಅ.25ರವರೆಗೆ ನಡೆದ ಅಪಘಾತ ಪ್ರಕರಣಗಳಲ್ಲಿ ಒಟ್ಟು 63 ಮಂದಿ ಮೃತಪಟ್ಟಿದ್ದಾರೆ.

ಅಂತೆಯೇ ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆಯೂ ಕಳೆದ ಮೂರು ವರ್ಷಗಳಲ್ಲಿ ಕಡಿಮೆಯಾಗಿದೆ. 2015ನೇ ಸಾಲಿನಲ್ಲಿ 399 ಮಂದಿ ಅಪಘಾತಗಳಲ್ಲಿ ಗಾಯಗೊಂಡಿದ್ದರು. 2016ನೇ ಸಾಲಿನಲ್ಲಿ ಈ ಪ್ರಮಾಣ ಕಡಿಮೆಯಾಗಿ, 344 ಮಂದಿ ಗಾಯಗೊಂಡಿದ್ದರು. ಪ್ರಸಕ್ತ ಸಾಲಿನ ಅ.25ರವರೆಗೆ ಒಟ್ಟು 216 ಮಂದಿ ಮೃತಪಟ್ಟಿದ್ದಾರೆ.

ಡಿ.ಡಿ. ಕೇಸುಗಳು ಗಣನೀಯ ಇಳಿಮುಖ: ಮದ್ಯ ಸೇವಿಸಿ ವಾಹನ ಚಾಲನೆ (ಡಿ.ಡಿ. ಪ್ರಕರಣ) ಮಾಡುವುದು ಸಂಚಾರ ನಿಯಮ ಉಲ್ಲಂಘನೆ ಮಾಡಿದಂತೆ. ಕುಡಿದು ಬೇಕಾಬಿಟ್ಟಿ ವಾಹನ ಚಲಾಯಿಸಿದ್ದರಿಂದ ಸಾವು–ನೋವು ಸಹ ಸಂಭವಿಸಿದೆ. ಅದನ್ನು ತಪ್ಪಿಸುವ ಸಲುವಾಗಿ ಪೊಲೀಸರು ರಾತ್ರಿ ಹೊತ್ತು ವಾಹನಗಳ ತಪಾಸಣೆ ಮಾಡಿ, ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಕುಡಿದು ವಾಹನ ಚಾಲನೆ ಮಾಡುವ ಪ್ರಕರಣಗಳು ಸಹ ಕಡಿಮೆಯಾಗಿವೆ. 2015ನೇ ಸಾಲಿನಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಸಂಚಾರ ಪೊಲೀಸರು ಒಟ್ಟು 4,478 ಕೇಸುಗಳನ್ನು ದಾಖಲು ಮಾಡಿ ದಂಡ ವಿಧಿಸಿದ್ದರು. 2016ನೇ ಸಾಲಿನಲ್ಲಿ ಡಿ.ಡಿ ಕೇಸುಗಳ ಪ್ರಮಾಣ ಕಡಿಮೆಯಾಗಿ 3,734 ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಪ್ರಸಕ್ತ ಸಾಲಿನಲ್ಲಿ ಈ ಕೇಸುಗಳು 3,132 ಮಾತ್ರ ದಾಖಲಾಗಿದ್ದು, ಎರಡು ವರ್ಷಗಳಿಗೆ ಹೋಲಿಸಿದಲ್ಲಿ ಪ್ರಕರಣ ಸಂಖ್ಯೆ ಕಡಿಮೆ ಆಗಿದೆ.

ದಂಡ ವಸೂಲಿ ಪೊಲೀಸರ ಉದ್ದೇಶವಲ್ಲ’

‘ಸಂಚಾರ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ನಿರಂತರವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಆದರೂ, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿಯಮಗಳನ್ನು ಉಲ್ಲಂಘನೆ ಮಾಡುವುದರಿಂದ ಆಗುವ ಪರಿಣಾಮಗಳನ್ನು ವಾಹನ ಸವಾರರೇ ಎದುರಿಸಬೇಕಾಗುತ್ತದೆ. ಅಲ್ಲದೆ ಇತರರ ಪ್ರಾಣ ಹಾನಿಯೂ ಆಗುತ್ತದೆ. ಹೀಗಾಗಿ, ಸಂಚಾರ ನಿಯಮಗಳನ್ನು ಉಲ್ಲಂಘಿಸದೇ ಪಾಲಿಸುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳಬೇಕು’ ಎಂದು ಡಿಸಿಪಿ (ಅಪರಾಧ–ಸಂಚಾರ) ಬಿ.ಎಸ್‌. ನೇಮಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಲ್ಮೆಟ್‌ ಧರಸಿದೇ ವಾಹನ ಚಾಲನೆ, ಟ್ರಿಪಲ್‌ ರೈಡಿಂಗ್‌, ವಾಹನ ಚಾಲನೆ ಮಾಡುವಾಗ ಮೊಬೈಲ್‌ ಬಳಕೆ ಮತ್ತು ಸಿಗ್ನಲ್‌ ಜಂಪ್‌ ಪ್ರಕರಣಗಳು ಹೆಚ್ಚು ದಾಖಲಾಗುತ್ತವೆ. ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಲಾಗುತ್ತದೆ. ಆದರೆ, ದಂಡ ವಸೂಲಿ ಮಾಡುವುದು ಪೊಲೀಸರ ಉದ್ದೇಶವಲ್ಲ. ಜನರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಬರಬೇಕು. ದಂಡ ವಸೂಲಿ ಪ್ರಮಾಣ ಕಡಿಮೆ ಆಗಬೇಕು’ ಎಂದು ಹೇಳಿದರು.

‘ಡಿಸೆಂಬರ್‌ ತಿಂಗಳನ್ನು ಅಪರಾಧ ತಡೆ ಮಾಸಾಚರಣೆಯಾಗಿ ಆಚರಿಸಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಮತ್ತು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಜೊತೆಗೆ ಸಂಚಾರ ನಿಯಮಗಳ ಬಗ್ಗೆಯೂ ತಿಳಿವಳಿಕೆ ಮೂಡಿಸಲಾಗುತ್ತದೆ. ಈಗಾಗಲೇ ಕರಪತ್ರಗಳನ್ನು ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಹಂಚಲಾಗುತ್ತಿದೆ’ ಎಂದು ವಿವರಿಸಿದರು.

* * 

ಹೆಲ್ಮೆಟ್‌ ಧರಿಸದೇ ಮೂರನೇ ಬಾರಿ ಸಿಕ್ಕಿಬಿದ್ದವರ ಚಾಲನಾ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ತಿಯೆಗೆ ಚಾಲನೆ ನೀಡಲು  ಚಿಂತನೆ ನಡೆದಿದೆ
ಬಿ.ಎಸ್‌. ನೇಮಗೌಡ,
ಡಿಸಿಪಿ (ಅಪರಾಧ–ಸಂಚಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT