ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಂಬಳ–ಗೋವಿನಕೊಪ್ಪ ಮಾರ್ಗ: ಆವರಿಸಿಕೊಂಡ ಮುಳ್ಳಿನ ಗಿಡಗಳು

Published 15 ಫೆಬ್ರುವರಿ 2024, 6:58 IST
Last Updated 15 ಫೆಬ್ರುವರಿ 2024, 6:58 IST
ಅಕ್ಷರ ಗಾತ್ರ

ಡಂಬಳ: ಪೇಠಾಲೂರ ಹಾಗೂ ಗೋವಿನಕೊಪ್ಪ ಗ್ರಾಮಗಳಿಂದ ಡಂಬಳ ಸಂಪರ್ಕಿಸುವ ಕಚ್ಚಾರಸ್ತೆ ಮಾರ್ಗವು ಸಂಕಷ್ಟದಿಂದ ಕೂಡಿದ್ದು, ರೈತರು ಹಾಗೂ ಕೃಷಿ ಕೂಲಿಕಾರರು ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಸುಸಜ್ಜಿತ ಡಾಂಬರ್‌ ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಕೃಷಿ ಚಟುವಟಿಕೆಗಾಗಿ ಮತ್ತು ಡಂಬಳಕ್ಕೆ ಹೋಗಿ ಬರುವುದಕ್ಕೆ ಮುಖ್ಯವಾಗಿ ರೈತರು ಹಾಗೂ ಕೃಷಿ ಕೂಲಿಕಾರರು ನಿತ್ಯ ಸಂಚರಿಸುತ್ತಾರೆ. ಕಾರುಗಳು ಸಂಚರಿಸಲು ಸಾಧ್ಯವಾಗದ ಕಾರಣ ಟ್ರ್ಯಾಕ್ಟರ್ ಮತ್ತು ಎತ್ತಿನ ಬಂಡಿಗಳು ಮಾತ್ರ ಈ ದಾರಿಯಲ್ಲಿ ಹೋಗುತ್ತವೆ. ರಸ್ತೆಯ ಎರಡು ಬದಿಯಲ್ಲಿ ಮುಳ್ಳುಕಂಠಿಗಳು ಬೆಳೆದಿವೆ ಮತ್ತು ಮಳೆಗಾಲದಲ್ಲಿ ರಸ್ತೆ ಕೆಸರುಗದ್ದೆಯಾಗಿ ಮಾರ್ಪಾಟಾಗುತ್ತದೆ. ಈ ಮಾರ್ಗದ ರಸ್ತೆಯನ್ನು ಡಾಂಬರೀಕರಣ ಮಾಡುವ ಮೂಲಕ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎನ್ನುವುದು ಜನರ ಬೇಡಿಕೆ.

ಡಂಬಳ ಮತ್ತು ಪೇಠಾಲೂರ ಗ್ರಾಮದ ಮಧ್ಯದಲ್ಲಿರುವ ಗೋವಿನಕೊಪ್ಪ ಗ್ರಾಮದಲ್ಲಿ ಹಲವು ದಶಕಗಳ ಮುಂಚೆ ಎರಡು ಗ್ರಾಮಸ್ಥರು ವಾಸ ಮಾಡುತ್ತಿದ್ದರು. ಆದರೆ ಹಲವು ಕಾರಣಾಂತರದಿಂದ ಕೆಲವು ಕುಟುಂಬಗಳು ಪೇಠಾಲೂರ ಮತ್ತು ಕೆಲವು ಕುಟುಂಬಗಳು ಡಂಬಳ ಗ್ರಾಮಕ್ಕೆ ವಲಸೆ ಹೋದರು. ಆದರೆ ಇಲ್ಲಿ ವಾಸ ಮಾಡುತ್ತಿದ್ದ ಎರಡು ಗ್ರಾಮಗಳ ಕುಟುಂಬಗಳ ನೂರಾರು ಎಕರೆ ಜಮೀನು ಇಲ್ಲೆ ಇದೆ. ಇದರಿಂದ ಕೃಷಿ ಚಟುವಟಿಕೆಗಾಗಿ ನಿತ್ಯ ಇದೆ ಮಾರ್ಗದಲ್ಲಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

‘ರಸ್ತೆ ತುಂಬಾ ಹದಗೆಟ್ಟಿದ್ದು ಬೈಕ್, ಟ್ರ್ಯಾಕ್ಟರ್ ಮತ್ತು ಚಕ್ಕಡಿ ಸಂಚರಿಸುವುದಕ್ಕೆ ತೊಂದರೆ ಅನುಭವಿಸುವ ಸ್ಥಿತಿ ಇದೆ. ಈ ಭಾಗದ ಶಾಸಕರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಲುದಾರಿಯನ್ನು ಪರಿಶೀಲನೆ ಮಾಡಿ ಸುಮಾರು 5 ಕಿಮೀ ಇರುವ ರಸ್ತೆಯಲ್ಲಿ ಡಾಂಬರಿಕರಣ ಮಾಡಬೇಕು‘ ಎಂದು ರೈತರಾದ ನಿಂಗಪ್ಪ ಮಾದರ ಮತ್ತು ನಾಗೇಶ ಧರ್ಮಾಧಿಕಾರಿ ಒತ್ತಾಯಿಸಿದರು.

ಬೆಳೆ ಕಟಾವು ಮಾಡಿರುವುದನ್ನು ಸಾಗಾಟ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಎರಡು ಗ್ರಾಮಗಳ ರೈತರು ಹರಸಾಹಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಎರಡು ಗ್ರಾಮಗಳ ನೂರಾರು ಎಕರೆ ಭೂಮಿ ಈ ಮಾರ್ಗದಲ್ಲಿದೆ. ಈ ಕಾಲುದಾರಿ ಮಾರ್ಗದಲ್ಲಿ ಎರಡು ಕಡೆ ದೊಡ್ಡ ಪ್ರಮಾಣದ ಹಳ್ಳಗಳಿವೆ. ಇದರಿಂದ ಮಳೆಗಾಲದಲ್ಲಿ ಭರ್ತಿಯಾಗಿ ಹರಿಯುವಾಗ ಸಂಚಾರ ಸ್ಥಗಿತವಾಗುತ್ತದೆ.

ಈ ಮಾರ್ಗದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣವಾದರೆ ಬಸ್, ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳು ಸಂಚಾರ ಮಾಡಬಹುದು. ಈ ಒಳಮಾರ್ಗದ ರಸ್ತೆಯಿಂದ ಪೇಠಾಲೂರ ಮತ್ತು ಡಂಬಳ ಗ್ರಾಮಕ್ಕೆ ಹೋಗಲು ತುಂಬಾ ಸಮೀಪವಾಗುತ್ತದೆ.

‘ನಮ್ಮ ಪೂರ್ವಜರು ಗೋವಿನಕೊಪ್ಪ ಗ್ರಾಮದಲ್ಲೆ ವಾಸ ಮಾಡುತ್ತಿದ್ದರು. ನೂರಾರು ಎಕರೆ ಜಮೀನುಗಳಿಗೆ ಪೇಠಾಲೂರ ಕೆರೆ ಮತ್ತು ಡಂಬಳ ಗ್ರಾಮದ ಕೆರೆಯಿಂದ ಕಾಲುವೆ ಮೂಲಕ ನೀರಾವರಿ ಸೌಲಭ್ಯವಿದೆ’ ಎನ್ನುತ್ತಾರೆ ಪೇಠಾಲೂರ ಗ್ರಾಮದ ರೈತ ಭರಮಪ್ಪ ಬಾರಕೇರ ಮತ್ತು ಗ್ಯಾನಪ್ಪ ವಿಠಲಾಪೂರ ಅವರು.

ನರೇಗಾ ಯೋಜನೆಯಡಿ ಹಲವು ಬಾರಿ ರಸ್ತೆ ಸುಧಾರಣೆ ಮಾಡಲಾಗಿದೆ. ಆದರೆ ಡಾಂಬರು ರಸ್ತೆ ಮಾಡಬೇಕು ಎನ್ನುವ ಒತ್ತಾಯವಿದ್ದು, ಈ ಬಗ್ಗೆ ರೈತರ ಸಮ್ಮುಖದಲ್ಲಿಯೇ ಶಾಸಕರಿಗೆ ಮನವಿ ಸಲ್ಲಿಸಲಾಗುವುದು
ಶಿವಲೀಲಾ ದೇವಪ್ಪ ಬಂಡಿಹಾ, ಅಧ್ಯಕ್ಷೆ, ಗ್ರಾಮ ಪಂಚಾಯಿತಿ, ಡಂಬಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT