ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮನೆಯ ಮಹಿಳೆಯರು ಕಾಂಗ್ರೆಸ್ ಪರ: ಸಚಿವ ಎಚ್.ಕೆ. ಪಾಟೀಲ

Published 29 ಏಪ್ರಿಲ್ 2024, 15:46 IST
Last Updated 29 ಏಪ್ರಿಲ್ 2024, 15:46 IST
ಅಕ್ಷರ ಗಾತ್ರ

ಗದಗ: ‘ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡಜನರ ಆರ್ಥಿಕ ಸ್ಥಿತಿಯು ಸುಧಾರಿಸಿದ್ದು, ಮಹಿಳೆಯರು ಕೈಗಡ ಸಾಲ ಮಾಡುವುದನ್ನು ನಿಲ್ಲಿಸಿದ್ದಾರೆ. ಪ್ರತಿಮನೆಯ ಮಹಿಳೆಯರು ಕಾಂಗ್ರೆಸ್ ಪರವಾಗಿದ್ದಾರೆ. ಮನೆ ಯಜಮಾನ ಯಾವ ಪಕ್ಷಕ್ಕೆ ಮತ ಹಾಕಿದರೂ, ಮಹಿಳೆಯರು ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವುದಾಗಿ ತಿಳಿಸುತ್ತಿದ್ದಾರೆ. ಕಾಂಗ್ರೆಸ್ ಪರ ಹೊಸ ಅಲೆಯೊಂದು ಆರಂಭವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ 18ನೇ ವಾರ್ಡ್‍ನ ಜವಳಗಲ್ಲಿಯ ಮುಬಾರಕ್ ಮುಸ್ಲಿಂ ಜಮಾತ್ ಸಭಾಂಗಣದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪ್ರಚಾರಾರ್ಥವಾಗಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದರು.

‘ಕಾಂಗ್ರೆಸ್‍ ಸರ್ಕಾರ ನುಡಿದಂತೆ ನಡೆದಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಐದು ಕಾರ್ಯಕ್ರಮಗಳನ್ನು ನೀಡುವುದಾಗಿ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೆವು. ಚುನಾವಣೆಯ ನಂತರ ಸಿಎಂ ಸಿದ್ದರಾಯ್ಯ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಕೆಲವೇ ತಿಂಗಳುಗಳಲ್ಲಿ ಬಜೆಟ್‍ನಲ್ಲಿ ಅನುದಾನ ಮೀಸಲಿರಿಸಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಯಿತು. ಅಲ್ಲದೇ, ಗ್ಯಾರಂಟಿ ಯೋಜನೆಗಳಿಂದ ಯಾವುದೇ ಫಲಾನುಭವಿ ವಂಚಿತವಾಗಬಾರದು ಎಂದು ನಿಗಾ ವಹಿಸಲಾಗಿದೆ. ಜಿಲ್ಲೆಯಲ್ಲಿ ಪಂಚ ಗ್ಯಾರಂಟಿಗಳು ಶೇ 97ರಷ್ಟು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗಿದೆ’ ಎಂದು ಹೇಳಿದರು.

‘18ನೇ ವಾರ್ಡ್‌ನಲ್ಲಿ 2013ರಲ್ಲಿ 456 ಮತಗಳ ಲೀಡ್, 2018ರಲ್ಲಿ 535, 2019ರಲ್ಲಿ 642 ಹಾಗೂ 2023ರಲ್ಲಿ 840 ಲೀಡ್ ಕೊಟ್ಟಿದ್ದು, ಚುನಾವಣೆಯಿಂದ ಚುನಾವಣೆಗೆ ನಮ್ಮ ಮೇಲೆ ಆಶೀರ್ವಾದ ಹೆಚ್ಚಿಸುತ್ತ ಬಂದಿದ್ದೀರಿ. ಮುಂದೆಯೂ ವಾರ್ಡ್‌ನ ಒಂದು ಮತವೂ ಬೇರೆ ಪಕ್ಷಕ್ಕೆ ಹೋಗದ ರೀತಿಯಲ್ಲಿ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ‘ಮಹಿಳೆಯರಿಗೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿದೆ. ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಗೊಂಡಿರುವುದು ಪ್ರಪಂಚದಲ್ಲಿಯೇ ಇತಿಹಾಸ ನಿರ್ಮಾಣವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಮನೆಗೆ ಕಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಮನೆಗೆ ಕಳುಹಿಸುವ ಮೂಲಕ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

18ನೇ ವಾರ್ಡ್‌ನ ಸದಸ್ಯ ಜೂನಸಾಬ್ ನಮಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, 2024ರ ಲೋಕಸಭಾ ಚುನಾವಣೆಯ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಅತ್ಯಧಿಕ ಮತಗಳ ಲೀಡ್ ಕೊಡವುದಾಗಿ ಭರವಸೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಮೌಲಾನಾ, ಇಮಾಮಸಾಬ್ ಕಾಗದಗಾರ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT