ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡು ಕ್ರೈಸ್ತರ ಪ್ರಾರ್ಥನೆಗೆ ಹೊಸ ಮೆರುಗು

ಅರೇಹಳ್ಳಿಯ ಸಂತ ಯೋವಾನ್ನರ ದೇವಾಲಯಕ್ಕೆ ಆಧುನಿಕ ಸ್ಪರ್ಶ
Last Updated 2 ಜೂನ್ 2019, 10:05 IST
ಅಕ್ಷರ ಗಾತ್ರ

ಬೇಲೂರು: ಈ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಅರೇಹಳ್ಳಿ ಮಲೆನಾಡು ಪ್ರದೇಶ. ಈ ಊರಿನಲ್ಲಿ ಹೊಸದಾಗಿ ನಿರ್ಮಿಸಿರುವ ಸಂತ ಯೋವಾನ್ನರ ದೇವಾಲಯವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ.

ನೋಡುಗರ ಮನಸೆಳೆಯುವ ಈ ಚರ್ಚ್‌ನ್ನು ವಿಶಾಲವಾಗಿ ಕಟ್ಟಲಾಗಿದೆ. ಕೊರೆಂಥಿಯನ್‌ ಶೈಲಿಯಲ್ಲಿ ಚಿತ್ರಿಸಿರುವ ಚಿತ್ರಪಟಗಳು ಗಮನಸೆಳೆಯುತ್ತವೆ. ಹೋಬಳಿ ಕೇಂದ್ರದಲ್ಲಿ ಭವ್ಯವಾದ ಚರ್ಚ್‌ ನಿರ್ಮಿಸಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

1979ರಲ್ಲಿ ನಿರ್ಮಿಸಿದ್ದ ಸಂತ ಯೋವಾನ್ನರ ದೇವಾಲಯವು ಶಿಥಿಲವಾಗಿತ್ತು. ಅರೇಹಳ್ಳಿಯಲ್ಲಿ ಸದಾ ಸುರಿಯುವ ಜಡಿಮಳೆಗೆ ಕಟ್ಟಡ ಸೋರುತ್ತಿತ್ತು. ಮಳೆಗಾಲದಲ್ಲಿ ಇಲ್ಲಿ ಪ್ರಾರ್ಥನೆ ಮಾಡುವುದು ಅಸಾಧ್ಯವಾಗಿತ್ತು. ಅಲ್ಲದೆ ಕೇವಲ 3,000 ಚದರ ಅಡಿ ವಿಸ್ತೀರ್ಣದಲ್ಲಿದ್ದ ಈ ದೇವಾಲಯವು ಕಿರಿದಾಗಿತ್ತಲ್ಲದೆ ಕೇವಲ 250 ಜನರು ಕುಳಿತು ಪ್ರಾರ್ಥನೆ ಮಾಡಬಹುದಾಗಿತ್ತು. ಇವೆಲ್ಲವನ್ನು ಮನಗಂಡ ಚರ್ಚ್‌ನ ಹಾಲಿ ಧರ್ಮಗುರು ಫಾದರ್ ವಿನ್ಸೆಂಟ್‌ ಮಾರ್ಷಲ್‌ ಪಿಂಟೋ ಹೊಸ ಚರ್ಚ್‌ನ್ನು ನಿರ್ಮಿಸಬೇಕೆಂದು ಪಣ ತೊಟ್ಟರು.

ಅದನ್ನು ಸಾಕಾರಗೊಳಿಸಲು ಅದಕ್ಕೆ ಕಾರ್ಯಪ್ರವೃತ್ತರಾಗಿ ₹ 2.5 ಕೋಟಿ ವೆಚ್ಚದಲ್ಲಿ ಚರ್ಚ್‌ ನಿರ್ಮಿಸಲು ನೀಲ ನಕ್ಷೆ ತಯಾರಿಸಿ ಅದಕ್ಕೆ ಪಾಲನಾ ಸಮಿತಿಯ ಒಪ್ಪಿಗೆ ಪಡೆದು 2006ರ ಮೇ ತಿಂಗಳಿನಲ್ಲಿ ಚರ್ಚ್‌ ನಿರ್ಮಾಣಕ್ಕೆ ಚಾಲನೆ ನೀಡಿದರು. ಅರೇಹಳ್ಳಿ ಕ್ರೈಸ್ತ ಸಮೂಹದ ಸಹಕಾರದಿಂದ ಚರ್ಚ್‌ ಪೂರ್ಣಗೊಂಡು ಮೇ 22ರಂದು ಹೊಸ ಚರ್ಚ್‌ನ್ನು ಲೋಕಾರ್ಪಣೆ ಮಾಡಲಾಯಿತು.

ಹಲವು ವಿಶೇಷಗಳ ಚರ್ಚ್‌: ಸಂತ ಯೋವಾನ್ನರ ದೇವಾಲಯವು ಹಲವು ವಿಶೇಷಗಳಿಗೆ ಪಾತ್ರವಾಗಿದೆ. ಸುಮಾರು ಏಳು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಈ ಚರ್ಚ್‌ನಲ್ಲಿ ಒಂದೇ ಬಾರಿ 750 ಜನರು ಕುಳಿತು ಪ್ರಾರ್ಥನೆ ಮಾಡಬಹುದಾಗಿದೆ.

ಚರ್ಚ್‌ ಆವರಣದ ಸುತ್ತ 17 ಕಂಬಗಳಿದ್ದು ಅವುಗಳ ಕೆಳಭಾಗದಲ್ಲಿ ಕಮಲದ ವಿನ್ಯಾಸವನ್ನು ಮಾಡಲಾಗಿದೆ. ಕಮಲದ ಹೂವು ಹಿಂದೂ ದೇವರು ಲಕ್ಷ್ಮಿಗೆ ಪ್ರಿಯವಾದ ಹೂವಾಗಿದ್ದು ಚರ್ಚ್‌ ಆವರಣದ ಕಂಬಗಳಲ್ಲಿ ಕಮಲದ ವಿನ್ಯಾಸ ಮಾಡುವ ಮೂಲಕ ಧರ್ಮ ಸಾಮರಸ್ಯಕ್ಕೂ ಕಾರಣವಾಗಿದ್ದಾರೆ.

ಸಾಮಾನ್ಯವಾಗಿ ಚರ್ಚ್‌ಗಳನ್ನು ನಿರ್ಮಾಣ ಮಾಡುವಾಗ ನಿಪುಣ ಕಟ್ಟಡ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುವುದು ಸಾಮಾನ್ಯ. ಆದರೆ ಈ ಚರ್ಚ್‌ನ್ನು ಸ್ಥಳೀಯ ಕಾರ್ಮಿಕರೇ ಕೆಲಸ ಮಾಡಿಸಿರುವುದು ವಿಶೇಷವಾಗಿದೆ.

ಕೊರೆಂಥಿಯನ್‌ ಶೈಲಿಯ ಚಿತ್ರ ರಚನೆ: ಚರ್ಚ್‌ಗಳಲ್ಲಿ ಕೊರೆಂಥಿಯನ್‌ ಶೈಲಿಯ ಚಿತ್ರಗಳನ್ನು ಬಿಡಿಸುವುದು ವಿಶೇಷ. ಅರೇಹಳ್ಳಿಯ ಸಂತ ಯೋವಾನ್ನರ ದೇವಾಲಯದ ಬಲಿಪೀಠದ ಹಿಂಭಾಗದಲ್ಲಿಯೂ ಕೊರೆಂಥಿಯನ್‌ ಶೈಲಿಯ ಆಕರ್ಷಕ ಚಿತ್ರ ಬಿಡಿಸಲಾಗಿದೆ.

ಬೈಬಲ್‌ ಗ್ರಂಥದಲ್ಲಿ ಕಾಣುವ ಸಂತ ಪೌಲರು ಗ್ರೀಕ್‌ ದೇಶದ ಕೊರಿಂಥ ಎಂಬ ಪ್ರದೇಶಕ್ಕೆ ತೆರಳಿ ಏಸುವಿನ ಬಗ್ಗೆ ಬೋಧಿಸುತ್ತಾರೆ. ಅಲ್ಲಿನ ಜನರು ಏಸುವಿನಲ್ಲಿ ವಿಶ್ವಾಸವನ್ನಿರಿಸಿ ಕ್ರೈಸ್ತನ ಅನುಯಾಯಿಗಳಾಗಿ ಜನರನ್ನು ಆಕರ್ಷಿಸಲು ಏಸುವಿನ ಚಿತ್ರಗಳನ್ನು ಬಿಡಿಸುತ್ತಾರೆ. ಅವರು ಬಿಡಿಸುತ್ತಿದ್ದ ಚಿತ್ರಗಳ ವಿನ್ಯಾಸದ ತುಣುಕುಗಳನ್ನು ಅರೇಹಳ್ಳಿಯ ಚರ್ಚ್‌ನಲ್ಲೂ ಚಿತ್ರಿಸಲಾಗಿದೆ.

ಕೇರಳದಿಂದ ಬಂದಿದ್ದ ಕಲಾವಿದ ಜೋಸೆಫ್‌ ನೇತೃತ್ವದ 12 ಶಿಲ್ಪಿಗಳ ತಂಡ 45 ದಿನಗಳ ಕಾಲ ಚರ್ಚ್‌ನ ಬಲಿಪೀಠ ಹಾಗೂ ಹಿಂಭಾಗದ ಗೋಡೆಯ ಮೇಲೆ ಗ್ರೀಕ್‌ನಲ್ಲಿ ಪ್ರಚಲಿತದಲ್ಲಿದ್ದ ಕೊರೆಂಥಿಯನ್‌ ಮಾದರಿಯ ಕಲಾಕೃತಿಗಳನ್ನು ಇಲ್ಲಿ ವಿಶೇಷವಾಗಿ ರಚಿಸಿದ್ದಾರೆ.

ಅಧ್ಯಾತ್ಮದ ಬೆಳವಣಿಗೆಗೆ ಹೊಸ ಚರ್ಚ್‌ ಪೂರಕ
‘ಅರೇಹಳ್ಳಿಯ ಕ್ರೈಸ್ತ ಧರ್ಮ ಕೇಂದ್ರದಲ್ಲಿ ಹಿಂದೆ 130 ಕುಟುಂಬಗಳಿದ್ದವು. ಇಂದು 175 ಕುಟುಂಬಗಳು ಚರ್ಚ್‌ನ ವ್ಯಾಪ್ತಿಯಲ್ಲಿವೆ. ಅವರಿಗೆ ಹಳೆಯ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಲು ಸ್ಥಳ ಸಾಕಾಗುತ್ತಿರಲಿಲ್ಲ. ಇದನ್ನು ಮನಗಂಡು ವಿಶಾಲವಾದ ಚರ್ಚ್‌ ನಿರ್ಮಿಸಲಾಗಿದೆ. ಹಿಂದಿನ ಧರ್ಮಗುರುಗಳ ಅವಧಿಯಲ್ಲಿ ಚರ್ಚ್‌ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಲಾಗಿತ್ತು. ತಮ್ಮ ಅವಧಿಯಲ್ಲಿ ಅದಕ್ಕೆ ಚಾಲನೆ ದೊರಕಿ ಪೂರ್ಣಗೊಂಡಿದೆ. ಮಲೆನಾಡಿನ ಸುಂದರ ಪರಿಸರದಲ್ಲಿ ದೇವಾಲಯ ನಿರ್ಮಾಣಗೊಂಡಿರುವುದು ಸಂತಸ ಉಂಟು ಮಾಡಿದೆ. ಕ್ರೈಸ್ತರ ಅಧ್ಯಾತ್ಮದ ಬೆಳವಣಿಗೆಗೆ ಹೊಸ ಚರ್ಚ್‌ ಪೂರಕವಾಗಲಿದೆ’ ಸಂತ ಯೋವಾನ್ನರ ದೇವಾಲಯದ ಧರ್ಮಗುರು ಫಾದರ್ ವಿನ್ಸೆಂಟ್‌ ಮಾರ್ಷಲ್‌ ಪಿಂಟೋ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT