ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಣದ ಹಲ್ಮಿಡಿ ಗ್ರಾಮ

ಕನ್ನಡ ಭಾಷಾಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಹಲ್ಮಿಡಿ ಶಾಸನ
Last Updated 1 ನವೆಂಬರ್ 2016, 9:25 IST
ಅಕ್ಷರ ಗಾತ್ರ

ಬೇಲೂರು: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ, ಮಾನ ದೊರಕಿಸಿಕೊಡಲು ನಿರ್ಣಾಯಕ ಪಾತ್ರ ವಹಿಸಿದ್ದು ‘ಹಲ್ಮಿಡಿ ಶಾಸನ’. ಕನ್ನಡ ಭಾಷೆಗೆ ಪ್ರಾಚೀನತೆಯ ಮೆರಗು ತಂದು ಕೊಟ್ಟ ಹಲ್ಮಿಡಿ ಗ್ರಾಮ ಇಂದಿಗೂ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅವಕೃಪೆಗೆ ಒಳಗಾಗಿದೆ. ಕರ್ನಾಟಕ ಏಕೀಕರಣವಾಗಿ 60 ವರ್ಷ ಪೂರೈಸಿದ್ದರೂ ಹಲ್ಮಿಡಿ ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡದಿರುವುದು ವಿಪರ್ಯಾಸ.

ಕನ್ನಡ ಭಾಷೆಯ ಅಧ್ಯಯನ ವಿಷಯ ಬಂದಾಗ  ‘ಹಲ್ಮಿಡಿ ಶಾಸನ’ದ ಪ್ರಸ್ತಾಪ ವಾಗುತ್ತದೆ.  20ನೇ ಶತಮಾನದ ಆರಂಭದ ತನಕ ಯಾರ ಅರಿವಿಗೂ ಬಾರದೆ ತೆರೆಮರೆಯಲ್ಲಿ ಕಲ್ಲುಗಳೊಂದಿಗೆ ಕಲ್ಲಾಗಿ, ಮಣ್ಣಿನ ದೂಳನ್ನು ಹೊದ್ದು ಊರಿನ ಮೂಲೆಯಲ್ಲಿ ಶತಮಾನಗಳನ್ನು ಕಂಡ ಈ ಶಾಸನವನ್ನು ಕೊನೆಗೊಮ್ಮೆ ಊರಿನವರು ತಂದು ದೇವಾಲಯದ ಮುಂದಿರಿಸಿದರು.   ಶಾಸನ ಸಂಶೋಧಕ ಡಾ.ಎಂ.ಎಚ್‌.ಕೃಷ್ಣ ಅವರು ಇದನ್ನು ಸಮರ್ಥವಾಗಿ ಗುರುತಿಸಿದ್ದು   ನಿರ್ಣಾಯಕ ಹಂತ.

‘ಹಲ್ಮಿಡಿ ಶಾಸನ’ ಗುರುತಿಸಲ್ಪಡುವ ಮುನ್ನ ಕನ್ನಡ ಭಾಷೆಯ ಪ್ರಾಚೀನತೆ ಕ್ರಿ.ಶ. 5–6ನೇ ಶತಮಾನಕ್ಕೆ ಸೀಮಿತ ವಾಗಿತ್ತು. ಹಲ್ಮಿಡಿ ಶಾಸನವು ಕದಂಬರ ಕಾಕುತ್ಸವರ್ಮನ ಸಮಕಾಲೀನ ವಾದುದು. ಗುರುತಿಸಲ್ಪಟ್ಟ ನಂತರ ಕನ್ನಡ ಭಾಷೆಯ ಪ್ರಾಚೀನತೆ ಕದಂಬರ ಕಾಲಕ್ಕೆ ಅಂದರೆ ಕ್ರಿ.ಶ. 450ರ ಸುಮಾ ರಿಗೆ ನಿರ್ಣಾಯಕವಾಗಿದೆ. ಇದರಿಂದಾಗಿ ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಹಿಂದೆ ಉಗಮಿಸಿದೆ ಎಂಬುದ ನ್ನು ವಿದ್ವಾಂಸರು ಸ್ಪಷ್ಟೀಕರಿಸಿದ್ದಾರೆ. 

ಹಲ್ಮಿಡಿ ಶಾಸನಗಳಲ್ಲಿ ಬಳಕೆ ಗೊಂಡಿರುವ ಧಾತುಗಳು, ಪದ ಪ್ರಯೋಗ, ವ್ಯಾಕರಣ, ಮುಂತಾದ ಭಾಷಾ ಸ್ವರೂಪವನ್ನು ಪೂರ್ವದ ಹಳಗನ್ನಡ ಎಂದೇ ಗುರುತಿಸಲಾಯಿತು.

ಇದರಿಂದ ಕದಂಬರ ಕಾಲದಲ್ಲಿ ಕನ್ನಡ ಜನರು ಆಳುತ್ತಿದ್ದ ಕನ್ನಡದ ಖಚಿತ ಸ್ವರೂಪವನ್ನು ನಿರ್ಧರಿಸಲು ಸಾಧ್ಯವಾಯಿತು. ಇಂದು ಕನ್ನಡ ಭಾಷಾ ಅಧ್ಯಯನಶೀಲರು ಕನ್ನಡ ಭಾಷೆಯ ಅತಿ ಪ್ರಾಚೀನ ಸ್ವರೂಪವನ್ನು ಅಧಿಕೃತವಾಗಿ ಕಾಣಬಹುದಾದರೆ, ಅದು ‘ಹಲ್ಮಿಡಿ ಶಾಸನ’ದಲ್ಲಿ ಮಾತ್ರ ಎಂದು ಇಲ್ಲಿನ ಸಾಹಿತಿ ಸಂಶೋಧಕ ಡಾ.ಶ್ರೀವತ್ಸ ಎಸ್‌.ವಟಿ ಅಭಿಪ್ರಾಯಪಡುತ್ತಾರೆ.

ಬೇಲೂರು ತಾಲ್ಲೂಕು ಹಲ್ಮಿಡಿ ಶಾಸನಕ್ಕೆ ತವರು. ಎಚ್‌.ಬಿ. ಮದನ್‌ಗೌಡ ಅವರು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ‘ಹಲ್ಮಿಡಿ ಶಾಸನ’ವು ಅಧ್ಯಯನಶೀಲರಿಗೆ ತನ್ನ ತವರಿನಲ್ಲಿ ಅಲಭ್ಯವಾಗಿದ್ದ ಪರಿಸ್ಥಿತಿಯನ್ನು ಮನಗಂಡು ಶಾಸನದ ನಿಖರ ಪ್ರತಿಕೃತಿಯನ್ನೇ ಸರ್ಕಾರದ ಸಹಕಾರದೊಂದಿಗೆ ಹಲ್ಮಿಡಿ ಗ್ರಾಮದಲ್ಲಿ ಸ್ಥಾಪಿಸುವಲ್ಲಿ ಶ್ರಮಿಸಿದರು. 

ಇಂತಹ ಐತಿಹಾಸಿಕ ಶಾಸನವನ್ನು ಕೊಟ್ಟ ಹಲ್ಮಿಡಿ ಗ್ರಾಮ ಇಂದಿಗೂ ಕುಗ್ರಾಮವಾಗಿಯೇ ಇದೆ. ಜಿಲ್ಲೆಯ ಕಟ್ಟಕಡೆಯ ಗ್ರಾಮವೆನಿಸಿರುವ ಈ ಊರಿನಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಕುಡಿಯುವ ನೀರು, ರಸ್ತೆ, ಬೀದಿದೀಪ, ಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT