ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿಗೆ ಅಂಗನವಾಡಿ ಮಕ್ಕಳು ಹೈರಾಣ: ಕೆಲ ಜಿಲ್ಲೆಗಳಲ್ಲಿ ಸಮಯ ಬದಲಾವಣೆ

ಹಾವೇರಿ ಜಿಲ್ಲೆಗೂ ವಿಸ್ತರಣೆಗೆ ಒತ್ತಾಯ
ಎಸ್‌.ಎಸ್‌.ನಾಯಕ
Published 14 ಏಪ್ರಿಲ್ 2024, 5:17 IST
Last Updated 14 ಏಪ್ರಿಲ್ 2024, 5:17 IST
ಅಕ್ಷರ ಗಾತ್ರ

ಕುಮಾರಪಟ್ಟಣ: ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚುತ್ತಿದ್ದು, ಜನರು, ಜಾನುವಾರು, ಮಕ್ಕಳು ಬಿಸಿಲಿನ ಬೇಗೆಗೆ ಬೇಯುವಂತಾಗಿದೆ. ಇದಕ್ಕೆ ಅಂಗನವಾಡಿ ಮಕ್ಕಳ ಪರಿಸ್ಥಿತಿಯು ಹೊರತಾಗಿಲ್ಲ. ಹಾವೇರಿ ಜಿಲ್ಲೆಯಲ್ಲಿಯೂ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಲಿನ ಝಳಕ್ಕೆ ಮಕ್ಕಳು, ಕಾರ್ಯಕರ್ತೆಯರು ಅಕ್ಷರಶಃ ನಲಗುವಂತಾಗಿದೆ.

ರಾಜ್ಯ ಸರ್ಕಾರ ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆ ಮಾಡಿದೆ. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 4 ಗಂಟೆವರೆಗೆ ನಿಗದಿಪಡಿಸಿದ್ದ ಸಮಯವನ್ನು ಏಪ್ರಿಲ್‌ ಮತ್ತು ಮೇ ತಿಂಗಳಿಗೆ ಅನ್ವಯವಾಗುವಂತೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ನಡೆಸುವಂತೆ ಸಮಯ ಬದಲಾಯಿಸಿ ಆದೇಶ ಹೊರಡಿಸಿದೆ. ಇದೇ ಆದೇಶವನ್ನು ಹಾವೇರಿ ಜಿಲ್ಲೆಗೂ ವಿಸ್ತರಿಸಬೇಕು ಎಂದು ಸ್ವಾ–ಕರವೇ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಒತ್ತಾಯಿಸಿದ್ದಾರೆ.

‘ಮಕ್ಕಳನ್ನು ಮಧ್ಯಾಹ್ನದ ವೇಳೆ ಸಂತೈಸುವುದು ಸವಾಲಿನ ಕೆಲಸವಾಗಿದೆ. ಬಿಸಿಲಿನ ಬೇಗೆ ತಾಳಲಾರದೆ ಮನೆಗೆ ಕಳಿಸುವಂತೆ ಮಕ್ಕಳು ಹಠ ಹಿಡಿಯುತ್ತಾರೆ. ಅವರನ್ನು ಸುಧಾರಿಸುವುದೇ ಕಠಿಣ ಕೆಲಸವಾಗಿದೆ’ ಎಂದು ನಲವಾಗಲ ಅಂಗನವಾಡಿ ಕಾರ್ಯಕರ್ತೆ ಫಕ್ಕೀರಮ್ಮ ಕರೂರು ಅಳಲು ತೋಡಿಕೊಂಡರು.

ಪೋಷಕರ ಹಿಂದೇಟು: ‘ಬಿಸಿಲಿನ ತಾಪದಿಂದ ಮಕ್ಕಳು ಬೆಳಿಗ್ಗೆಯಿಂದ ಸಂಜೆಯವರೆಗೆ ಅಂಗನವಾಡಿಗಳಲ್ಲಿ ಕುಳಿತುಕೊಳ್ಳಲು ಕಷ್ಟಪಡುತ್ತಿದ್ದಾರೆ. ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ ಕೂಡ ಇಳಿಮುಖವಾಗಿದೆ. ನಮ್ಮ ಅಂಗನವಾಡಿಯಲ್ಲಿ ಒಟ್ಟು 23 ಮಕ್ಕಳು ದಾಖಲಾಗಿದ್ದು, ಕೇವಲ 15-16 ಮಕ್ಕಳು ಹಾಜರಾಗುತ್ತಿದ್ದಾರೆ’ ಎಂದು ಹನುಮನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಸುನೀತಾ ಮಾಹಿತಿ ನೀಡಿದರು.

ಬೇಡವಾದ ಉಪ್ಪಿಟ್ಟು: ‘ಬೇಸಿಗೆಯಲ್ಲಿ ಮಕ್ಕಳಿಗೆ ಪ್ರತಿನಿತ್ಯ ಊಟಕ್ಕೆ ಉಪ್ಪಿಟ್ಟು ಬಡಿಸಲಾಗುತ್ತಿದೆ. ಈ ಕಾರಣದಿಂದಾಗಿ ಅನೇಕ ಮಕ್ಕಳು ಅಜೀರ್ಣ, ವಾಂತಿ ಭೇದಿ ಹಾಗೂ ಉದರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಸಿರು ತರಕಾರಿ ಇಲ್ಲದ ಉಪ್ಪಿಟ್ಟು ಮಕ್ಕಳಿಗೆ ಬೇಡವೇ ಬೇಡ. ಕೆಲವೆಡೆ ಶುದ್ಧ ಕುಡಿಯುವ ನೀರು ಒದಗಿಸಲು ಮುಂದಾಗುತ್ತಿಲ್ಲ’ ಎಂದು ರಾಣೆಬೆನ್ನೂರು ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟದ ಅಧ್ಯಕ್ಷೆ ನಾಗಮ್ಮ ಮುದುಕಣ್ಣನವರ ಅಸಮಾಧಾನ ವ್ಯಕ್ತಪಡಿಸಿದರು.

ಆರೋಗ್ಯ ಸಮಸ್ಯೆ: ಅಂಗನವಾಡಿ ಮಕ್ಕಳು ಮತ್ತು ಕಾರ್ಯಕರ್ತೆಯರು ಅಧಿಕ ತಾಪಮಾನದಿಂದ ಬಳಲುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಮಕ್ಕಳು ಅಸ್ವಸ್ತರಾಗುತ್ತಿದ್ದಾರೆ. ಕೆಲವು ಕಡೆ ಮಕ್ಕಳ ಆರೋಗ್ಯ ಸಮಸ್ಯೆಗೆ ಅಂಗನವಾಡಿ ಕಾರ್ಯಕರ್ತೆಯರೇ ಕಾರಣ ಎಂದು ಪೋಷಕರು ದೂರುತ್ತಿದ್ದಾರೆ. ಹೀಗಾಗಿ ಕಾರ್ಯಕರ್ತೆಯರು ಕೂಡ ಹಿಂಸೆ ಅನುಭವಿಸುವಂತಾಗಿದೆ. ಸರ್ಕಾರ ಅಂಗನವಾಡಿಗಳಿಗೆ ಒಂದು ತಿಂಗಳು ರಜೆ ನೀಡಬೇಕು ಎಂದು ಆಗ್ರಹಿಸಿದರು.

ಬದಲಾದ ಸಮಯ: ನಾಳೆಯಿಂದ ಜಾರಿ

‘ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಬೆ.8ರಿಂದ ಮಧ್ಯಾಹ್ನ 12ಗಂಟೆವರೆಗೆ ಅಂಗನವಾಡಿಗಳನ್ನು ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಏ.15ರಿಂದ ಜಿಲ್ಲೆಯಾದ್ಯಂತ ಜಾರಿಯಾಗಲಿದೆ’ ಎಂದು ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ ಅಲದರ್ತಿ ತಿಳಿಸಿದರು.

‘ಅನ್ನ ಮತ್ತು ಸಾಂಬಾರ ಬದಲಿಗೆ ನಿರಂತರವಾಗಿ ಮಕ್ಕಳಿಗೆ ಉಪ್ಪಿಟ್ಟಿನ ರವೆ ನೀಡುತ್ತಿದ್ದು, ಕೆಲವು ಕಡೆ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಕೆಲವೆಡೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಸ್ಥಳೀಯ ಗ್ರಾಮ ಪಂಚಾಯ್ತಿ ಸಹಕಾರ ಪಡೆದು ಕ್ರಮವಹಿಸುವಂತೆ ತಾಲ್ಲೂಕು ಸಿಡಿಪಿಒಗಳಿಗೆ ಸೂಚಿಸುತ್ತೇನೆ‘ ಎಂದು ಪ್ರಜಾವಾಣಿಗೆ ತಿಳಿಸಿದರು.

ಬಾಣಂತಿ, ಗರ್ಭಿಣಿಯರ ನಿರಾಸಕ್ತಿ
ತಾಯಿ ಮಗುವಿನ ಆರೋಗ್ಯ ಸುಧಾರಣೆಗೆಂದು ಸರ್ಕಾರದ ಮಾತೃಪೂರ್ಣ ಯೋಜನೆಯನ್ನು ಪಡೆಯಲು ಬಾಣಂತಿಯರು, ಗರ್ಭಿಣಿಯರು ಬಿಸಿಲಿನ ತಾಪಕ್ಕೆ ಹೆದರಿ ಅಂಗನವಾಡಿ ಕೇಂದ್ರಗಳಿಗೆ ಬರಲು ನಿರಾಸಕ್ತಿ ತೋರುತ್ತಿದ್ದಾರೆ. ಕೊಡಿಯಾಲದ ಮೂರನೇ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿ ಮತ್ತು ಗರ್ಭಿಣಿಯರು ಸೇರಿ 20 ಮಂದಿ ಇದ್ದಾರೆ. ಇವರ ಪೈಕಿ ಕೇವಲ 4-5 ಮಂದಿ ಮಾತ್ರ ಕೇಂದ್ರಕ್ಕೆ ಬರುತ್ತಾರೆ. ನಮಗೆ ಮೊಟ್ಟೆ ಮತ್ತು ರೇಷನ್‌ ಮನೆಗೆ ಕೊಡಿ ಬಿಸಿಲಿನಲ್ಲಿ ಬರಲಿಕ್ಕೆ ಆಗುವುದಿಲ್ಲ ಎನ್ನುತ್ತಾರೆ ಎಂದು ಕೊಡಿಯಾಲದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.
ತರಕಾರಿ ಇಲ್ಲದ ಉಪ್ಪಿಟ್ಟು ಮಕ್ಕಳು ತಿನ್ನುವುದಿಲ್ಲ. ಉಪ್ಪಿಟ್ಟು ರವೆ ಜೊತೆಗೆ ಹಸಿರು ತರಕಾರಿ, ಅನ್ನ, ಸಾಂಬಾರ ಹಾಗೂ ಗುಣಮಟ್ಟದ ಕಾರದ ಪುಡಿ ಮತ್ತು ಮಸಾಲೆ ಪದಾರ್ಥಗಳನ್ನು ಕೊಡಬೇಕು
– ನಾಗಮ್ಮ ಮುದುಕಣ್ಣನವರ, ಎಐಟಿಸಿ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷೆ, ರಾಣೆಬೆನ್ನೂರು
ಅಂಗನವಾಡಿಗಳಿಗೆ ಬೇಸಿಗೆ ರಜೆ ನೀಡಬೇಕು. ಚಿಕ್ಕ ಮಕ್ಕಳ ಮೇಲೆ ಒತ್ತಡ ಹಾಕುವುದು ಸರಿಯಲ್ಲ. ಮಕ್ಕಳು ಮನೆಯಲ್ಲಿ ಪೋಷಕರೊಂದಿಗೆ ಸಮಯ ಕಳೆಯುತ್ತಾರೆ
ಶಿವಕುಮಾರ್‌ ಗೋಣೆಮ್ಮನವರ, ಪೋಷಕರು, ಕವಲೆತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT