ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ವೈದ್ಯರ ಕೊರತೆ: ಬೇಕಿದೆ ಚುಚ್ಚುಮದ್ದು!

ಪ್ರಾಥಮಿಕ, ಕಲಬುರಗಿ ನಗರ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆಯೂ ದ್ವಿಗುಣ
Published 7 ಆಗಸ್ಟ್ 2023, 6:29 IST
Last Updated 7 ಆಗಸ್ಟ್ 2023, 6:29 IST
ಅಕ್ಷರ ಗಾತ್ರ

ಕಲಬುರಗಿ: ಚೊಚ್ಚಲ ಹೆರಿಗೆ ಸಂಭ್ರಮ ಅನುಭವಿಸಬೇಕಿದ್ದ ಮಹಿಳೆಯ ಹೃದಯ ಭಾರವಾಗಿತ್ತು. ಸಂತಸ ತರಬೇಕಿದ್ದ ಕಂದ ಕಮಲಾಪುರ ಆಸ್ಪತ್ರೆಯಲ್ಲಿ ಶವವಾಗಿ ಮಲಗಿದ್ದ...

ಕಮಲಾಪುರ ತಾಲ್ಲೂಕಿನ ಗೊಬ್ಬರವಾಡಿಯಲ್ಲಿ ಕಲುಷಿತ ನೀರು ಕುಡಿದವರಿಗೆ ಸರಿಯಾಗಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದರು. ಜೇವರ್ಗಿಯ ಮಂದೆವಾಲದಲ್ಲೂ ಕಲುಷಿತ ನೀರಿನಿಂದ ಜನರ ಸಾವು ತಪ್ಪಿಸಲಾಗಲಿಲ್ಲ.

ಇವು ಒಂದೆರಡು ಉದಾಹರಣೆ ಮಾತ್ರ. ಇಂತಹ ಘಟನೆಗಳು ಜಿಲ್ಲೆಯಲ್ಲಿ ಸಾಕಷ್ಟು ನಡೆದಿವೆ. ಜನರ ಆಕ್ರೋಶ, ಪ್ರತಿಭಟನೆ, ನೋವು ಕಟ್ಟೆಯೊಡೆದಿವೆ. ಆದರೂ ಸುಧಾರಣೆ ಮಾತ್ರ ಆಗಬೇಕಾದಷ್ಟು ಆಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಉಪಕರಣ ಹಾಗೂ ಆಂಬುಲೆನ್ಸ್‌ ಸೇವೆ ಸಮರ್ಪಕವಾಗಿ ಇದ್ದಿದ್ದರೆ ಆ ಮಗು, ಜನರ ಜೀವ ಉಳಿಯುತ್ತಿತ್ತು. 

ಸಾಮಾನ್ಯ ಕಾಯಿಲೆಯಿಂದ ಬಳಲುವ ಜನರು ಬಹುತೇಕ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಎಡತಾಕುತ್ತಾರೆ. ಆದರೆ, ಅಲ್ಲಿ ಚಿಕಿತ್ಸೆ ಸಿಗದೇ ನಿತ್ರಾಣ ಆಗುತ್ತಿರುವುದು ಕಣ್ಣಮುಂದೆ ನಡೆಯುತ್ತಲೇ ಇದೆ.

ಇನ್ನೂ ಕೆಲವು ಕಡೆಗಳಲ್ಲಿ ರಾತ್ರಿ ವೇಳೆ ಯಾವುದೇ ಚಿಕಿತ್ಸೆ ಸಿಗದೇ ಸಾವನ್ನಪ್ಪುವ ಇಲ್ಲವೇ ಖಾಸಗಿ ಆಸ್ಪತ್ರೆಯ ದಾರಿ ತೋರಿಸುವ ಕೆಲಸ ನಡೆಯುತ್ತಲೇ ಇದೆ. ಈಗ ಜಿಲ್ಲೆಯಲ್ಲಿ ಮಳೆಗಾಲ ತುಸು ನಿಂತು ಬಿಸಿಲು ಆರಂಭವಾಗಿದೆ. ಮದ್ರಾಸ್‌ ಐ ಹಾಗೂ ವಾಂತಿಭೇದಿ ಪ್ರಕರಣಗಳು ಅಲ್ಲಲ್ಲಿ ಹೆಚ್ಚಾಗುತ್ತಲಿವೆ. ಆದರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯ ಹಾಗೂ ವೈದ್ಯಕೀಯ ಸೇವೆಗಳು ಹೆಚ್ಚಾಗುವ ಬದಲು ಕ್ಷೀಣಿಸಿವೆ.

ಕಲಬುರಗಿಯ ಹೀರಾಪುರ ಹಾಗೂ ಬ್ರಹ್ಮಪುರದಲ್ಲಿ ನಗರ ಆರೋಗ್ಯ ಕೇಂದ್ರಗಳು ತುಸು ಚೆನ್ನಾಗಿವೆ. ಆದರೆ, ಅಗತ್ಯ ಚಿಕಿತ್ಸೆ ಹಾಗೂ ಔಷಧಗಳು ಸಿಗುತ್ತಿಲ್ಲ ಎಂಬ ಆರೋಪ ನಿತ್ಯವೂ ಇದೆ.

ಪಾಣೇಗಾಂವ್ ಗ್ರಾಮದಲ್ಲಿ ಉದ್ಘಾಟನೆಗೊಂಡು ನಾಲ್ಕು ವರ್ಷ ಕಳೆದರೂ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಕೆಯಾಗದೇ ಹಲವು ಸೌಲಭ್ಯಗಳಿಂದ ವಂಚಿತವಾಗಿದೆ ಎಂಬ ಆರೋಪ ಇದೆ.

ಹೊನ್ನ ಕಿರಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಉಪ ಆರೋಗ್ಯ ಕೇಂದ್ರಕ್ಕೆ, ಸರಿಯಾದ ಸೌಲಭ್ಯ, ವೈದ್ಯಕೀಯ ಸಿಬ್ಬಂದಿಗಳಿಲ್ಲ. ಹೊಸ ಕಟ್ಟಡ ಇದ್ದೂ ಇಲ್ಲದಂತಾಗಿದೆ. ಸ್ವಚ್ಛತೆಯೂ ಮರಿಚಿಕೆಯಾಗಿದೆ ಎನ್ನುತ್ತಾರೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಶನ್ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಪಾಣೇಗಾಂವ್.

ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಅಡಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕಲಬುರಗಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ 88 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 15 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 330 ಉಪ ಕೇಂದ್ರಗಳು ಇವೆ. ಕಲಬುರಗಿ ನಗರದಲ್ಲಿ 13 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆಯುವ ಈ ಕೇಂದ್ರಗಳು ಪ್ರತಿ 10 ಸಾವಿರ ಜನಸಂಖ್ಯೆಗೆ ಒಂದು ಇರಬೇಕು ಎಂಬ ನಿಯಮ ಇದೆ. ಆದರೆ, ‘ಕಲ್ಯಾಣ’ದ ಕೇಂದ್ರವಾದ ಜಿಲ್ಲೆಯಲ್ಲಿ 25 ಸಾವಿರ ಇಲ್ಲವೇ ಕೆಲವು ಕಡೆಗಳಲ್ಲಿ 20 ಸಾವಿರ ಜನಸಂಖ್ಯೆಗೆ ಒಂದು ಇದೆ. ನಗರದಲ್ಲಿ 38 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕು ಎಂಬ ನಿಯಮ ಇದೆ. ಆದರೆ, ಆ ಸಂಖ್ಯೆ 60 ಸಾವಿರ ದಾಟಿದೆ.

ಜಿಲ್ಲೆಯಲ್ಲಿ ಹಾಸಿಗೆ–ಜನಸಂಖ್ಯೆಯ ಅನುಪಾತವು ತುಂಬಾ ಕಡಿಮೆಯಾಗಿದೆ. ಜಿಲ್ಲೆಯ ಪ್ರತಿ ಲಕ್ಷ ಜನರಿಗೆ ಶೇ 79 ಇದೆ ಎಂದು ಆರೋಗ್ಯ ಮಿಷನ್‌ ವರದಿಯೇ ಹೇಳಿದೆ. ಔಷಧ ಹಾಗೂ ಇತರೆ ಸೌಲಭ್ಯಗಳ ಅಸಮರ್ಪಕ ಲಭ್ಯತೆಯಿಂದಾಗಿ ಹಾಸಿಗೆಯ ಲಭ್ಯತೆಯ ಪ್ರಮಾಣ ಶೇ 25ರಷ್ಟು ಕಡಿಮೆ ಇದೆ.

ಪ್ರಾಥಮಿಕ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಮಂಜೂರಾದ ಒಟ್ಟು 266 ಹುದ್ದೆಗಳ ಪೈಕಿ ಕೇವಲ 149ರಲ್ಲಿ ಮಾತ್ರ ಸಿಬ್ಬಂದಿ ಇದ್ದಾರೆ. ಶೇ 44ರಷ್ಟು ಹುದ್ದೆಗಳು ಖಾಲಿ ಇವೆ.

ಪ್ರಾಥಮಿಕ ಕೇಂದ್ರಗಳಲ್ಲಿ ಆರೈಕೆ, ಕುಟುಂಬ ಯೋಜನೆ, ತಾಯಿ-ಮಗುವಿನ ಆರೋಗ್ಯ, ಸುರಕ್ಷಿತ ನೀರು ಸರಬರಾಜು ಮತ್ತು ನೈರ್ಮಲ್ಯ, ಸ್ಥಳೀಯ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ, ಜಾಗೃತಿ ಕೆಲಸವನ್ನು ಮಾಡಲಾಗುತ್ತಿದೆ. ಆದರೆ, ಇದಕ್ಕೆಲ್ಲ ವೈದ್ಯರ ಕೊರತೆ ಸಾಕಷ್ಟು ಕಾಡುತ್ತಿದೆ. ಈ ಕೊರತೆಯು ಸಮಯದಾಯದಲ್ಲಿ ಆರೋಗ್ಯ ಕಾಪಾಡಲು ಸವಾಲಾಗಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್‌ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬರು ವೈದ್ಯಾಧಿಕಾರಿ, ಅದರಲ್ಲಿ ಕನಿಷ್ಠ ಒಬ್ಬ ಮಹಿಳಾ ವೈದ್ಯರು, ಆಯುರ್ವೇದ, ಯೋಗ, ಹೋಮಿಯೋಪತಿ ವೈದ್ಯರು, ಒಬ್ಬರು ಔಷಧ ವಿತರಕರು, ನರ್ಸಗಳು, ಹಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು, ಆರೋಗ್ಯ ಶಿಕ್ಷಕರು, ಪ್ರಯೋಗಾಲಯ ಸಿಬ್ಬಂದಿ, ಲೆಕ್ಕ ಪತ್ರ ನಿರ್ವಾಹಕರು, ಗುಮಾಸ್ತರು, ವಾಹನ ಚಾಲಕರು ಹಾಗೂ ಆಶಾ ಕಾರ್ಯಕರ್ತೆಯರು ಇರಬೇಕು. ಆದರೆ, ಈ ಕೊರತೆ ಜಿಲ್ಲೆಯಲ್ಲಿ ಜಾಸ್ತಿಯಿದೆ. ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ.

ಗ್ರಾಮೀಣ ಪ್ರದೇಶಗಳಲ್ಲಿ ಜನರ ಆರೋಗ್ಯ ಕಾಪಾಡುವುದು ದೊಡ್ಡ ಸವಾಲು. ಇದಕ್ಕೆ ವೈದ್ಯರ ನಿಯೋಜನೆಯೇ ಮದ್ದು. ಇದನ್ನು ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಡಬೇಕಿದೆ. ಸೂಕ್ಷ್ಮ ಹಾಗೂ ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯವಾಗಿಡುವ ಕೆಲಸ ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಹೆಚ್ಚಾಗಬೇಕಿದೆ ಎನ್ನುತ್ತಾರೆ ಜನರು.

ಪೂರಕ ಮಾಹಿತಿ: ವೆಂಕಟೇಶ ಹರವಾಳ, ಮಲ್ಲಿಕಾರ್ಜುನ ಎಂ.ಎಚ್, ಸಿದ್ದರಾಜ ಎಸ್. ಮಲಕಂಡಿ,  ಶಿವಾನಂದ ಹಸರಗುಂಡಗಿ, ಜಗನ್ನಾಥ ಶೇರಿಕಾ

ಕಲಬುರಗಿಯ ಆಶೋಕ ನಗರದ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಆರೋಗ್ಯ ತಪಾಸಣೆಯಲ್ಲಿ ತೊಡಗಿರುವುದು  –ಪ್ರಜಾವಾಣಿ ಚಿತ್ರ /ತಾಜುದ್ದೀನ್‌ ಆಜಾದ್‌
ಕಲಬುರಗಿಯ ಆಶೋಕ ನಗರದ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಆರೋಗ್ಯ ತಪಾಸಣೆಯಲ್ಲಿ ತೊಡಗಿರುವುದು  –ಪ್ರಜಾವಾಣಿ ಚಿತ್ರ /ತಾಜುದ್ದೀನ್‌ ಆಜಾದ್‌
ಕಲಬುರಗಿಯ ಆಶೋಕ ನಗರದ ಆರೋಗ್ಯ ಕೇಂದ್ರ    ಪ್ರಜಾವಾಣಿ ಚಿತ್ರ /ತಾಜುದ್ದೀನ್‌ ಆಜಾದ್‌
ಕಲಬುರಗಿಯ ಆಶೋಕ ನಗರದ ಆರೋಗ್ಯ ಕೇಂದ್ರ    ಪ್ರಜಾವಾಣಿ ಚಿತ್ರ /ತಾಜುದ್ದೀನ್‌ ಆಜಾದ್‌
ಕಲಬುರಗಿಯ ಆಶೋಕ ನಗರದ ಆರೋಗ್ಯ ಕೇಂದ್ರದಲ್ಲಿ ಹಸಿರು ವನ          ಪ್ರಜಾವಾಣಿ ಚಿತ್ರ /ತಾಜುದ್ದೀನ್‌ ಆಜಾದ್‌
ಕಲಬುರಗಿಯ ಆಶೋಕ ನಗರದ ಆರೋಗ್ಯ ಕೇಂದ್ರದಲ್ಲಿ ಹಸಿರು ವನ          ಪ್ರಜಾವಾಣಿ ಚಿತ್ರ /ತಾಜುದ್ದೀನ್‌ ಆಜಾದ್‌
ಡಾ. ಬಾಬು ಚವಾಣ್‌
ಡಾ. ಬಾಬು ಚವಾಣ್‌
ಜೇವರ್ಗಿ ತಾಲ್ಲೂಕಿನ ಆಸ್ಪತ್ರೆಗಳಿಗೆ ಸರಿಯಾಗಿ ಔಷಧ ಹಾಗೂ ವೈದ್ಯಕೀಯ ಉಪಕರಣ ಸರಬರಾಜು ಮಾಡಲಾಗುತ್ತಿದೆ. ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಕೊರತೆ ಇಲ್ಲ
ಡಾ.ಸಿದ್ದು ಪಾಟೀಲ ತಾಲ್ಲೂಕು ಆರೋಗ್ಯ ಅಧಿಕಾರಿ
ಸರ್ಕಾರ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು. ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸಬೇಕು. ಸೋರುತ್ತಿರುವ ಆಸ್ಪತ್ರೆಗಳನ್ನು ದುರಸ್ತಿ ಮಾಡಬೇಕು
ಶಿವುಕುಮಾರ ಶರ್ಮಾ ಹೋರಾಟಗಾರರು

ಚಿತ್ರ ಇದೆ (ಮಗ್‌ ಶಾಟ್‌–ಡಾ. ಬಾಬು ಚವಾಣ್‌) ತಾಯಿ ಮಗು ಆರೈಕೆಗೆ ಒತ್ತು ಗ್ರಾಮೀಣ ಆಸ್ಪತ್ರೆಗಳಿಗಿಂತ ಕಲಬುರಗಿ ನಗರದಲ್ಲಿರುವ ‘ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ಗಳು ತುಸು ಭಿನ್ನವಾಗಿ ಕೆಲಸ ಮಾಡುತ್ತಿವೆ. ಕಲಬುರಗಿಯ ಅಶೋಕ ನಗರ ತಾರಫೈಲ್‌ ಸೇಂಟ್ ಜಾನ್ಸ್‌ ಎನ್‌.ಆರ್‌. ನಗರ ಖಾನಾಪುರ ತಾಜ್‌ ನಗರ ಮುಕ್ತಾಂಪುರ ಶಿವಾಜಿನಗರ ಶಹಬಾದ್ ಮಾಣಿಕ್ಕೇಶ್ವರಿ ನಗರ ಹಾಗೂ ಹೀರಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಇವುಗಳಲ್ಲಿ ತಾರಪೈಲ್‌ ಹಾಗೂ ತಾಜ್‌ನಗರ ಕೇಂದ್ರಗಳಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಮಾಡುವ ಸೌಲಭ್ಯ ಇದೆ. ಆದರೆ ಇನ್ನಿತರ ಕೇಂದ್ರಗಳಲ್ಲಿ ಆ ವ್ಯವಸ್ಥೆ ಇಲ್ಲ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅಶೋಕ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಮುಖ್ಯ ವೈದ್ಯಾಧಿಕಾರಿ ಡಾ. ಬಾಬು ಚವಾಣ್‌ ‘ಕೋವಿಡ್ ನಂತರ ನಗರದ ಆಸ್ಪತ್ರೆಗಳ ಸ್ವರೂಪ ಬದಲಾಗಿದೆ. ಇಲ್ಲಿ ಉತ್ತಮ ವೈದ್ಯರು ಹಾಗೂ ಸಿಬ್ಬಂದಿ ನೀಡಲಾಗಿದೆ. 12 ವರ್ಷಗಳ ಹಿಂದೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರಗಳು ಇದ್ದವು. ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಡಳಿತಕ್ಕೆ ಒಳಪಟ್ಟಿವೆ. ಈ ಆಸ್ಪತ್ರೆಗಳಲ್ಲಿ ತಾಯಿ ಮಗುವಿನ ಆರೈಕೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ನಂತರ ಇತರ ಕಾಯಿಲೆಗಳ ಕುರಿತು ಎಚ್ಚರವಹಿಸಲಾಗುತ್ತದೆ’ ಎಂದರು. ‘ಸ್ನೇಹ ಕ್ಲಿನಿಕ್‌ ಮುಖಾಂತರ ಹದಿಹರೆಯದವರ ಜತೆ ಚರ್ಚೆ ಗ್ಯಾರೇಜ್‌ ಹೋಟೆಲ್‌ ಸಿಬ್ಬಂದಿಯ ಆರೋಗ್ಯ ಪರಿಶೀಲನೆ ಕ್ಷಯ ರೋಗ ಗರ್ಭಿಣಿ ಸ್ತ್ರೀಯರ ಅರೋಗ್ಯ ತಪಾಸಣೆ ನಿತ್ಯವೂ ಮಾಡಲಾಗುತ್ತದೆ. ಕೆಲ ಕೇಂದ್ರಗಳಲ್ಲಿ ವಾರಕ್ಕೊಮ್ಮೆ ಮೂಳೆ ಕೀಲು ತಜ್ಞರ ಭೇಟಿ ನಿತ್ಯವೂ ನಡೆಯುತ್ತದೆ. ವಿಶೇಷ ತಜ್ಞ ವೈದ್ಯರ ಭೇಟಿಗೂ ಅವಕಾಶ ಮಾಡಿಕೊಡಲಾಗುತ್ತಿದೆ. ನಗರದ ಕೇಂದ್ರಗಳಿಗೆ ದಿನಕ್ಕೆ ಕಡಿಮೆ ಎಂದರೂ 80ರಿಂದ 100 ಜನರು ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುತ್ತಾರೆ’ ಎಂದು ಮಾಹಿತಿ ನೀಡಿದರು.

ಸೋರುವ ಪ್ರಾಥಮಿಕ ಅರೋಗ್ಯ ಉಪಕೇಂದ್ರ ವಾಡಿ: ನಾಲವಾರ ಲಾಡ್ಲಾಪುರ ಹಾಗೂ ಹಲಕರ್ಟಿ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಉಪಕೇಂದ್ರಗಳು ನಿರ್ವಹಣೆ ಕೊರತೆಯಿಂದ ಸೋರುತ್ತಿವೆ. ಮೂರು ಗ್ರಾಮಗಳು ಜನಸಂಖ್ಯೆ ದೃಷ್ಟಿಯಿಂದ ದೊಡ್ಡದಿದ್ದು ಆರೋಗ್ಯ ಕೇಂದ್ರಗಳು ಮಾತ್ರ ಮಳೆಗಾಲದಲ್ಲಿ ಹನಿ ತೊಟ್ಟಿಕ್ಕುತ್ತವೆ. ಲಾಡ್ಲಾಪುರ ಗ್ರಾಮದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರದ ಬಳಿಯೇ ಸಿಬ್ಬಂದಿ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಮಾಡಲಾಗಿದೆ. ಆದರೆ ಸಿಬ್ಬಂದಿ ಉಳಿದುಕೊಳ್ಳದ ಕಾರಣ ಪಾಳು ಬೀಳುವ ಸ್ಥಿತಿಗೆ ತಲುಪಿದೆ. ನಾಲವಾರ ಗ್ರಾಮದ ಸೋರುವ ಕಟ್ಟಡದಲ್ಲೇ ಸದ್ಯ ಕೆಲಸ ಕಾರ್ಯಗಳು ನಡೆಯುತ್ತಿವೆ. ಹೊಸ ಕಟ್ಟಡ ಕಟ್ಟಲಾಗಿದೆ. ಆದರೆ ಕಳಪೆ ಕಾಮಗಾರಿಯಿಂದ ಅರೋಗ್ಯ ಇಲಾಖೆ ಆ ಕಟ್ಟಡವನ್ನು ಬಳಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದೆ.

ಮೂಲ ಸೌಲಭ್ಯ ವಂಚಿತ ಆರೋಗ್ಯ ಕೇಂದ್ರ ಅಫಜಲಪುರ: ತಾಲ್ಲೂಕಿನಲ್ಲಿ 10 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು 2 ಸಮುದಾಯ ಆರೋಗ್ಯ ಕೇಂದ್ರಗಳಿದ್ದು ಅತನೂರ ಗೊಬ್ಬುರ ಕಟ್ಟಡಗಳು ಸೋರುತ್ತಿವೆ. ಆಸ್ಪತ್ರೆಗಳ ನಿರ್ವಹಣಾ ಅಧಿಕಾರಿ ಹುದ್ದೆ 2 ವರ್ಷಗಳಿಂದ ಖಾಲಿಯಿದೆ. ಅ ಕೆಲಸವನ್ನು ಮಾಶಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರವಿಕಿರಣ ನೋಡಿಕೊಳ್ಳುತ್ತಾರೆ. ಉಡಚಾಣ ಅತನೂರ ಗೊಬ್ಬುರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ. ನಿರ್ವಹಣೆ ಕೊರತೆ ಕಮಲಾಪುರ: ತಾಲ್ಲೂಕಿನಲ್ಲಿ ಕಮಲಾಪುರ ಮಹಾಗಾಂವ ಸೊಂತ ಡೊಂಗರಗಾಂವ ವಿ.ಕೆ.ಸಲಗರ್ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಎಲ್ಲ ಕಡೆಗಳಲ್ಲಿ ಕಟ್ಟಡಗಳನ್ನು ಈಚೆಗೆ ನಿರ್ಮಿಸಲಾಗಿದ್ದು ಸುಸಜ್ಜಿತವಾಗಿವೆ. ಇವುಗಳ ನಿರ್ವಹಣೆ ಕೊರತೆ ಇದೆ. ಶೌಚಾಲಯ ಸ್ನಾನದ ಕೋಣೆ ದುರ್ಗಂಧ ಬೀರುತ್ತಿವೆ. ಈ ಎಲ್ಲ ಕಡೆಗಳಲ್ಲಿ ಒಬ್ಬರೇ ವೈದ್ಯರಿದ್ದಾರೆ. ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಕಮಲಾಪುರದಲ್ಲಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆಯ ಅಗತ್ಯವಿದೆ. ರಾಷ್ಟ್ರೀಯ ಹೆದ್ದಾರಿ ಇಲ್ಲಿಯೇ ಹಾದುಹೋಗುವುದರಿಂದ ಅಪಘಾತಗಳ ಸಂಖ್ಯೆಯೂ ಜಾಸ್ತಿ. ಪ್ರಥಮ ಚಿಕಿತ್ಸೆಯ ಸಮಸ್ಯೆ ಇದೆ. ಹೆರಿಗೆ ಸಂದರ್ಭದಲ್ಲೂ ಅವಾಂತರಗಳಾಗಿವೆ. ವರ್ಷದಲ್ಲಿ ಮೂರ್ನಾಲ್ಕು ಶಿಶುಗಳು ಮೃತಪಟ್ಟಿವೆ.

- ‘ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆಗೆ ಆದ್ಯತೆ’ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿ ಒಟ್ಟು ಹನ್ನೆರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಯಡ್ರಾಮಿ ಮತ್ತು ನೆಲೋಗಿಯಲ್ಲಿ ಎರಡು ಕಡೆ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಜೇವರ್ಗಿ ತಾಲ್ಲೂಕಿನ ಕೂಡಿ ಮತ್ತು ಆಂದೋಲಾ ಗ್ರಾಮಗಳಲ್ಲಿ ಹೊಸದಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಎಲ್ಲಾ ಪ್ರಾಥಮಿಕ ಕೇಂದ್ರಗಳು ಹಾಗೂ ಸಮುದಾಯ ಕೇಂದ್ರಗಳಲ್ಲಿ ಹೆರಿಗೆ ಸೌಲಭ್ಯ ಕಲ್ಪಿಸಲಾಗಿದೆ. ತುರ್ತು ಸಂದರ್ಭದಲ್ಲಿ ಜೇರಟಗಿ ಯಡ್ರಾಮಿ ನೆಲೋಗಿ ಹಾಗೂ ಜೇವರ್ಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ ತುರ್ತು ಆರೋಗ್ಯ ಸೇವೆ ಒದಗಿಸಲು ಆಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ‘ಜೇವರ್ಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಒಂಬತ್ತು ತಜ್ಞ ವೈದ್ಯಾಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ದಿನದ 24 ಗಂಟೆಗಳ ಕಾಲ ಸೇವೆ ಒದಗಿಸಲಾಗುತ್ತಿದೆ. ಎಲ್ಲಾ ಆಸ್ಪತ್ರೆಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ‘ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸಿದ್ದು ಪಾಟೀಲ ತಿಳಿಸಿದ್ದಾರೆ.

ಚಿಂಚೋಳಿ: ನರ್ಸಗಳೇ ಡಾಕ್ಟರ್ ಚಿಂಚೋಳಿ: ತಾಲ್ಲೂಕಿನಲ್ಲಿ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 4 ಆರೋಗ್ಯ ವಿಸ್ತರಣಾ ಕೇಂದ್ರಗಳಿವೆ. ಎಲ್ಲಾ ಕಡೆಯೂ ರಾತ್ರಿ ವೇಳೆ ವೈದ್ಯರು ಕೇಂದ್ರಗಳಲ್ಲಿ ಚಿಕಿತ್ಸೆಗೆ ಲಭಿಸುವುದಿಲ್ಲ. ಇದರಿಂದ ರಾತ್ರಿ ವೇಳೆ ನರ್ಸಗಳೇ ವೈದ್ಯರಾಗುವ ಸ್ಥಿತಿ ಇದೆ. 4 ಆರೋಗ್ಯ ವಿಸ್ತರಣಾ ಕೇಂದ್ರಗಳ ಪೈಕಿ ಧರ್ಮಾಸಾಗರ ಮತ್ತು ಭೂಂಯಾರ ಕೆ ಗ್ರಾಮದಲ್ಲಿನ‌ ವೈದ್ಯರ ಹುದ್ದೆಗಳು ಖಾಲಿ ಇವೆ. ಸಾಲೇಬೀರನಹಳ್ಳಿಯಲ್ಲಿ ಪ್ರಯೋಗಾಲಯ ತಂತ್ರಜ್ಞ ಹುದ್ದೆ ಖಾಲಿಯಿದೆ. ಔಷಧ ವಿತರಕ ಹುದ್ದೆಗಳು ಸುಲೇಪೇಟ ನಿಡಗುಂದಾ ಸಾಲೇಬೀರನಹಳ್ಳಿ ಐನಾಪುರದಲ್ಲಿ ಖಾಲಿಯಿವೆ. ಆದರೆ ಐನಾಪುರ ರುದ್ನೂರು ಚಿಮ್ಮನಚೋಡ ರಟಕಲ್ ಮಿರಿಯಾಣ ಕಟ್ಟಡ ದುರಸ್ತಿಯ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT