ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಕದಲ್ಲೇ ಕೃಷ್ಣೆ ಹರಿದರೂ ನೀರಿಗೆ ಬರ!

ಕೆ.ತ್ಯಾಗರಾಜ್ ಕೊತ್ತೂರು
Published 6 ಮೇ 2024, 7:04 IST
Last Updated 6 ಮೇ 2024, 7:04 IST
ಅಕ್ಷರ ಗಾತ್ರ

ಮುಳಬಾಗಿಲು: ರಾಜ್ಯದ ಕಟ್ಟಕಡೆಯ ಹಾಗೂ ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಮುಳಬಾಗಿಲು ತಾಲ್ಲೂಕು ಬಯಲು ಪ್ರದೇಶವಾಗಿದೆ. ಯಾವುದೇ ಶಾಶ್ವತ ನೀರಾವರಿ ಯೋಜನೆಗಳು ಇಲ್ಲದಿರುವುದರಿಂದ ಕೇವಲ ಮಳೆ ಹಾಗೂ ಕೊಳವೆ ಬಾವಿಗಳ ನೀರನ್ನೇ ಅವಲಂಬಿಸಿದೆ. ಹೀಗಾಗಿ ತಾಲ್ಲೂಕಿಗೆ ನದಿ ತಿರುವು ಅಥವಾ ಡ್ಯಾಮುಗಳನ್ನು ನಿರ್ಮಾಣ ಮಾಡುವ ಮೂಲಕ ಶಾಶ್ವತ ನೀರಾವರಿಯ ಅವಶ್ಯಕವಾಗಿದೆ.

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿರುವ ಮುಳಬಾಗಿಲು ತಾಲ್ಲೂಕಿನಲ್ಲಿ ಒಟ್ಟು 369 ಗ್ರಾಮಗಳಿದ್ದು ಎಲ್ಲಿಯೂ ನೀರಾವರಿ ಸೌಕರ್ಯಗಳಾಗಲಿ ಅಥವಾ ಯಾವುದೇ ನೀರಾವರಿ ಯೋಜನೆಗಳಾಗಲಿ ಇಲ್ಲ. ಹೀಗಾಗಿ ಕೇವಲ ಕೊಳವೆ ಬಾವಿಗಳಲ್ಲೋ ಅಥವಾ ಮಳೆಯನ್ನೋ ನಂಬಿಕೊಂಡು ಜನ ಮತ್ತು ರೈತರು ಜೀವನ ಸಾಗಿಸುತ್ತಿದ್ದಾರೆ. ತಾಲ್ಲೂಕಿಗೆ ಹೊಂದಿಕೊಂಡಿರುವ, ಕೇವಲ ಎರಡೇ ಕಿ.ಮೀ ದೂರದಲ್ಲಿರುವ ಕೃಷ್ಣಾ ನದಿಯ ನೀರನ್ನು ತಾಲ್ಲೂಕಿಗೂ ಹರಿಸಿದರೆ ಅಂತರ್ಜಲ ವೃದ್ಧಿಯ ಜೊತೆಗೆ ಶಾಶ್ವತ ಕುಡಿಯುವ ನೀರು ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಶಾಶ್ವತ ನೀರಿನ ಪರಿಹಾರ ಕಂಡುಕೊಳ್ಳಬಹುದು ಎಂಬುದು ಇಲ್ಲಿನ ಜನರ ದಶಕಗಳ ಬೇಡಿಕೆಯಾಗಿದೆ.

ಬಯಲು ಪ್ರದೇಶವಾಗಿರುವ ತಾಲ್ಲೂಕಿನಲ್ಲಿ ಯಾವುದೇ ನದಿ ಅಥವಾ ನಾಲೆಗಳ ಮೂಲಗಳು ಇಲ್ಲ. ಕನಿಷ್ಠ ಮಳೆ ಸೊಂಪಾಗಿ ಬರುವಂತಹ ವಾತಾವರಣವನ್ನು ಸೃಷ್ಟಿ ಮಾಡುವ ಅರಣ್ಯಗಳೂ ಸಹ ಇಲ್ಲ. ಹೀಗಾಗಿ ಈಗಾಗಲೇ ಐದು ವರ್ಷಗಳಿಂದ ಸರ್ಕಾರ ಮುಳಬಾಗಿಲನ್ನು ಬರಗಾಲದ ತಾಲ್ಲೂಕು ಎಂದು ಘೋಷಣೆ ಮಾಡಿದೆ. ಇದರಿಂದ ಉದ್ಯೋಗ ಸೃಷ್ಟಿಸುವ ಕಂಪನಿಗಳು, ಕಾರ್ಖಾನೆಗಳಾಗಲಿ ಇತ್ತ  ಬಂಡವಾಳ ಹೂಡಲು ಬರುತ್ತಿಲ್ಲ. ತಾಲ್ಲೂಕು ತೀರಾ ಹಿಂದುಳಿದಿದ್ದು ಕೃಷ್ಣಾ ನದಿಯಿಂದ ಶಾಶ್ವತ ನೀರಾವರಿ ಯೋಜನೆ ಅನುಕೂಲವಾದರೆ ತಾಲ್ಲೂಕು ಅರ್ಧ ಅಭಿವೃದ್ಧಿಯಾದಂತೆ ಎಂಬುದು ತಾಲ್ಲೂಕಿನ ಜನರ ವಾದ.

ಈಗಾಗಲೇ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಬಳಿಯಿರುವ ಯರಗೋಳ್ ಡ್ಯಾಮ್ ಮೂಲಕ ಜಿಲ್ಲೆಯ ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ತಾಲ್ಲೂಕಿನ ಪಟ್ಟಣಗಳು ಹಾಗೂ ಮೂರೂ ತಾಲ್ಲೂಕುಗಳ 45 ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ನೀರನ್ನು ಒದಗಿಸುವ ಯೋಜನೆ ಸಿದ್ಧವಾಗಿದೆ. ಇದೇ ರೀತಿಯಲ್ಲಿ ತಾಲ್ಲೂಕಿನಲ್ಲಿ ವಿಶಾಲವಾದ ನೀರು ಸಂಗ್ರಹ ಯೋಜನೆ ಅಥವಾ ನದಿಗಳ ತಿರುವು ಯೋಜನೆಯ ಮೂಲಕ ತಾಲ್ಲೂಕಿಗೆ ನೀರನ್ನು ಹರಿಸಿದರೆ ತಾಲ್ಲೂಕಿನ ಬರಗಾಲ ನಿವಾರಣೆಯಾಗಲಿದೆ.

ತಾಲ್ಲೂಕಿನಲ್ಲಿ ಈಗಾಗಲೇ ಕೆ.ಸಿ.ವ್ಯಾಲಿ ನೀರಾವರಿ ಮೂಲಕ ಕೆರೆಗಳಿಗೆ ನೀರನ್ನು ಹರಿಸುವ ಯೋಜನೆ ಜಾರಿಯಾಗಿದೆಯಾದರೂ ಇನ್ನೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಣ ಮಾಡಿ ಕೆರೆಗಳಿಗೆ ಹರಿಸುತ್ತಿರುವುದರಿಂದ ಕೆ.ಸಿ. ವ್ಯಾಲಿ ನೀರನ್ನು ನೇರವಾಗಿ ಕುಡಿಯಲು ಅಥವಾ ಕೃಷಿ ಚಟುವಟಿಕೆಗಳಿಗೆ ಬಳಸಲು ಆಗುತ್ತಿಲ್ಲ. ಕೆ.ಸಿ. ವ್ಯಾಲಿ ನೀರಿನ ಬಗ್ಗೆಯೇ ಸ್ಥಳೀಯರಲ್ಲಿ ಆಸಕ್ತಿ ಇಲ್ಲ.

ತಾಲ್ಲೂಕಿನಲ್ಲಿ ರೇಷ್ಮೆ, ಮಾವು, ಹಾಲು ಹಾಗೂ ತರಕಾರಿಗಳನ್ನು ಬೆಳೆಯುವುದು ಮುಖ್ಯ ಕಸುಬುಗಳಾಗಿದ್ದು, ನೀರಿನ ಕೊರತೆಯಿಂದ ಅಂತರ್ಜಲ ಸುಮಾರು 1,500 ಅಡಿಗಳಿಗಿಂತ ಆಳಕ್ಕೆ ಹೋಗಿದೆ. ಕೃಷಿಯಿಂದ ಬದುಕು ಕಟ್ಟಿಕೊಳ್ಳುತ್ತಿರುವ ಇಲ್ಲಿನ ರೈತರಿಗೆ ನೀರು ಅಗತ್ಯವಾಗಿದ್ದು, ನೀರಿಗಾಗಿ ಲಕ್ಷಾಂತರ ರೂಗಳ ವೆಚ್ಚದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ.  ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಇದ್ದರೂ ಸಾಲಸೋಲ ಮಾಡಿ ನೀರು ಸಿಗಬಹುದು ಎಂಬ ಆಸೆಯಿಂದ ಕೊಳವೆ ಬಾವಿಗಳ ನಿರ್ಮಾಣವಾಗುತ್ತಲೇ ಇದೆ. ಒಂದು ಕೊಳವೆ ಬಾವಿ ಕೊರೆಸಲು ಸುಮಾರು ₹ 4 ಲಕ್ಷ ವೆಚ್ಚ ತಗಲುತ್ತದೆ. ಇದರಿಂದ ರೈತರು ಸಾಲ ಮಾಡಿ ಲಕ್ಷಾಂತರ ರೂಪಾಯಿಗಳನ್ನು ನೀರಿಗಾಗಿ ವ್ಯಯಿಸುತ್ತಿದ್ದಾರೆ.ಈ ಕಷ್ಟ ನಿವಾರಣೆಗೆ ಶಾಶ್ವತ ನೀರಿನ ಯೋಜನೆಯೇ ಪರಿಹಾರ ಮಾರ್ಗವಾಗಿದೆ.

ಆಂಧ್ರಪ್ರದೇಶದ ನದಿ ತಿರುವಿನ ಯೋಜನೆ: ಆಂಧ್ರಪ್ರದೇಶದ ಕೃಷ್ಣಾ ನದಿಯಿಂದ ಅಥವಾ ಈಗಿನ ನಾಗಾರ್ಜುನ ಸಾಗರದಿಂದ ಸುಮಾರು 428 ಕಿಲೋಮೀಟರ್ ದೂರದಿಂದ ತೆರೆದ ಕಾಲುವೆಯ ಮೂಲಕ ನೀರನ್ನು ತಾಲ್ಲೂಕಿಗೆ ಸಮೀಪದ ಕೆಜಿಎಫ್ ಪಕ್ಕದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಪ್ರತಿನಿಧಿಸುವ ಕ್ಷೇತ್ರ ಕುಪ್ಪಂಗೆ ಹರಿಸಲಾಗುತ್ತಿದೆ. ಇನ್ನು ಈ ಯೋಜ‌ನೆ ತಾಲ್ಲೂಕಿನ ನಗವಾರ, ಬ್ಯಾಟನೂರು ಸಮೀಪದ ಗುಂಡಿಗಲ್ಲು ಮತ್ತು ಪಸಪತ್ತೂರು ಹಾಗೂ ಗಂಡ್ರಾಜುಪಲ್ಲಿ ಬಳಿಯಲ್ಲಿ ಹಾದು ಹೋಗಿದೆ. ಇದೇ ಮಾದರಿ ತಾಲ್ಲೂಕಿಗೆ ಯಾಕೆ ನೀರನ್ನು ಹರಿಸಲಾಗುವುದಿಲ್ಲ ಎಂಬುದು ಇಲ್ಲಿನ ಜನರ ಪ್ರಶ್ನೆಯಾಗಿದೆ.

ಶಾಶ್ವತ ನೀರಾವರಿಗೆ ನದಿ ತಿರುವು ಯೋಜನೆಯೊಂದೇ ಪರಿಹಾರ: ಕೃಷ್ಣಾ ನದಿ ಜಲಮಂಡಳಿ ವಾದದ ಪ್ರಕಾರವಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಡುವೆ ನೀರು ಹರಿಸುವ ಬಗ್ಗೆ ಈಗಾಗಲೇ ತೀರ್ಪು ನೀಡಲಾಗಿದೆ. ಈ ಪ್ರಕಾರ 177 ಟಿ.ಎಂ.ಸಿ ನೀರು ರಾಜ್ಯದ ಪಾಲಾಗಿದ್ದು, ಕೃಷ್ಣಾ ನದಿ ರಾಜ್ಯದಲ್ಲಿ 304 ಕಿಲೋಮೀಟರ್ ಹರಿದು ಹೋಗುತ್ತದೆ. ಈ ವ್ಯಾಪ್ತಿಯಲ್ಲಿ ಹರಿಯುವ ನೀರನ್ನು ತಾಲ್ಲೂಕಿಗೆ ತಿರುವು ಮಾಡಿದರೆ ಅಂತರ್ಜಲವೂ ಹೆಚ್ಚಾಗುತ್ತದೆ. ನೀರಿ‌ನ ಬವಣೆಯೂ ನೀಗುತ್ತದೆ.

ತಾಲ್ಲೂಕಿನಲ್ಲಿ ರೈತರು ನೀರಿಗಾಗಿ ಹವಣಿಸುತ್ತಿದ್ದಾರೆ. ಶಾಶ್ವತ ನೀರಾವರಿ ಮಾರ್ಗಗಳೇ ಇಲ್ಲ. ನಮ್ಮ ರಾಜ್ಯ ಸರ್ಕಾರವೂ ಆಂಧ್ರದ ಸರ್ಕಾರದಂತೆ ನೂರಾರು ಕಿಲೋಮೀಟರ್‌ಗಳ ದೂರದಿಂದ ಕುಪ್ಪಂಗೆ ಕೃಷ್ಣಾ ನೀರು ಹರಿಸಿರುವಂತೆ ತಾಲ್ಲೂಕಿಗೆ ಹರಿಸಿದ್ದರೆ ಒಳ್ಳೆಯದಿತ್ತು

-ಪ್ರಭಾಕರ್ ಯಲುವಹಳ್ಳಿ

ತಾಲ್ಲೂಕಿಗೆ ಕೇವಲ ಎರಡು ಕಿಲೋಮೀಟರ್ ಅಂತರದಲ್ಲಿ ಕೃಷ್ಣಾ ನದಿ ಹರಿಯುತ್ತಿದೆ. ಆಂಧ್ರಪ್ರದೇಶದ ಸರ್ಕಾರದೊಂದಿಗೆ ಚರ್ಚಿಸಿ ಇದೇ ಮಾರ್ಗವನ್ನು ತಾಲ್ಲೂಕಿಗೆ ತಿರುವು ಮಾಡಿದರೆ ಕೇವಲ ಎರಡೇ ಕಿಲೋಮೀಟರ್ ಅಂತರದಲ್ಲಿ ನೀರು ತಾಲ್ಲೂಕನ್ನು ಪ್ರವೇಶಿಸುತ್ತದೆ

-ಎಂ.ಗೊಲ್ಲಹಳ್ಳಿ ಪ್ರಭಾಕರ್ ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT