ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ನಿತ್ಯ ಹಾಡು, ಇದು ಬದುಕಿನ ಪಾಡು; ಅಂಧ ಮಕ್ಕಳ ಭವಿಷ್ಯಕ್ಕೆ ಕಲಾವಿದರಿಂದ ನೆರವು

Published 17 ಜೂನ್ 2023, 23:30 IST
Last Updated 17 ಜೂನ್ 2023, 23:30 IST
ಅಕ್ಷರ ಗಾತ್ರ

ಕೊಪ್ಪಳ: ‘ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ, ನನ್ನಾಣೆ ನನ್ನ ಮಾತು ಸುಳ್ಳಲ್ಲ...’ –ಹೀಗೆ ಮಧುರವಾಗಿ ಗಟ್ಟಿಧ್ವನಿಯಲ್ಲಿ ನಗರದ ಬಸ್‌ ನಿಲ್ದಾಣದ ಮುಂಭಾಗ, ಅಶೋಕ ಸರ್ಕಲ್‌ ಸಮೀಪ, ಬಸವೇಶ್ವರ ಸರ್ಕಲ್‌ ಸೇರಿ ವಿವಿಧ ಸ್ಥಳಗಳಲ್ಲಿ ಹಾಡುತ್ತಿದ್ದ ಅಂಧ ಕಲಾವಿದರ ಸುತ್ತಲೂ ಜನ ನೆರೆದು ಚಪ್ಪಾಳೆ ತಟ್ಟುತ್ತಿದ್ದರು.

ಈ ಎಲ್ಲಾ ಕಲಾವಿದರು ರಾಜ್ಯದ ವಿವಿಧ ಊರುಗಳಿಂದ ಬಂದವರು. ಹೊಸಪೇಟೆಯಲ್ಲಿರುವ ಸೇವಿಯರ್‌ ಸೇವಾ ಸಮಿತಿಯ ವಿಜಯನಗರ ಅಂಧರ ಕಲಾ ತಂಡದ ಸದಸ್ಯರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರಿಯ ಶ್ರೀಧರ ಕಲಾ ತಂಡದ ನೇತೃತ್ವ ವಹಿಸಿದ್ದು, ಜಾನಪದ ಹಾಡುಗಾರ ಶ್ರೀಕಾಂತ್‌, ಚಲನಚಿತ್ರ ಗಾಯಕ ತಿಪ್ಪೇಸ್ವಾಮಿ, ಕನ್ನಡ ಹಾಗೂ ತೆಲಗು ಭಾಷೆಗಳಲ್ಲಿ ಹಾಡುವ ಪುಷ್ಪಾ,  ಉಮಾದೇವಿ, ನೂರ್‌ ಮಹಮ್ಮದ್‌ ಕಲಾತಂಡದ ಸದಸ್ಯರು.

ಸೇವಿಯರ್‌ ಸಮಿತಿ 35 ಜನ ಅಂಧ ಮಕ್ಕಳ ಪೋಷಣೆಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ತಮ್ಮ ಪಾಲಕರು ಅಂಧ ಮಕ್ಕಳನ್ನು ನಿರ್ಲಕ್ಷ್ಯಕ್ಕೆ ಈಡು ಮಾಡಿದವರನ್ನು ಗುರುತಿಸಿ ಈ ಸಂಸ್ಥೆ ಆತಿಥ್ಯ ನೀಡುತ್ತದೆ. ಅಂಧ ಮಕ್ಕಳ ಓದು, ಜೀವನ ಕೌಶಲ ಕಲಿಕೆ, ಕಂಪ್ಯೂಟರ್‌ ಶಿಕ್ಷಣಕ್ಕೆ ಸಂಸ್ಥೆ ನೆರವಾಗುತ್ತಿದೆ. ದಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ನೀಡುವ ದಾನವೇ ಸಂಸ್ಥೆಗೆ ಆಧಾರ.

ಈ ಅಂಧ ಕಲಾವಿದರು ಹಾಡಿ ಗಳಿಸುವ ಹಣವನ್ನು ಅಂಧ ಮಕ್ಕಳ ಪೋಷಣೆಗೆ ಬಳಸಿಕೊಳ್ಳಲಾಗುತ್ತಿದೆ. ಸಂಸ್ಥೆಯಲ್ಲಿರುವ ಕಂಪ್ಯೂಟರ್‌, ಬ್ರೈಲ್‌  ಶಿಕ್ಷಣ ಕಲಿಸುವ ಶಿಕ್ಷಕರ ನಿರ್ವಹಣೆ, ಮಕ್ಕಳ ಆರೋಗ್ಯ ಕಾಳಜಿ, ಪ್ರತಿ ತಿಂಗಳು ಔಷಧಿ ಕೊಡಿಸಲು ಖರ್ಚು ಮಾಡಲಾಗುತ್ತಿದೆ. ಕಲಾವಿದರು ಗಂಗಾವತಿ, ಕಾರಟಗಿ, ಬಳ್ಳಾರಿ, ಸಿಂಧನೂರು, ಸಿರಗುಪ್ಪ, ಹೊಸಪೇಟೆ ಹೀಗೆ ಒಂದಲ್ಲ ಒಂದು ಊರಿಗೆ ಓಡಾಡುತ್ತ ಸಂಗೀತ ಕಾರ್ಯಕ್ರಮ ನೀಡುತ್ತಾರೆ. ಕಲಾವಿದರ ದುಡಿಮೆಗೂ ಫಲ ಸಿಗುತ್ತದೆ.

ತಮ್ಮ ಬದುಕು ಕತ್ತಲಾದರೂ ಈ ಅಂಧ ಕಲಾವಿದರು ಬದುಕಿನ ನಿತ್ಯದ ಪಾಡಿಗಾಗಿ ಯಾರನ್ನೂ ನೆಚ್ಚಿಕೊಂಡಿಲ್ಲ. ಮಧುರವಾಗಿ ಹಾಡುವ ಹಾಡುಗಳೇ ಇವರ ಗಳಿಕೆಯ ಅಸ್ತ್ರ.

ಸಣ್ಣ ಸಣ್ಣ ವಿಷಯಕ್ಕೆ ಬದುಕೇ ಬೇಸರವಾಯಿತು ಎಂದುಕೊಂಡು ಹತಾಶೆಗೆ ಜಾರುವ ಅನೇಕ ಜನರಿಗೆ ಈ ಕಲಾವಿದರ ಜೀವನ ಪ್ರೀತಿ, ನೋವು ನುಂಗಿ ನಗುವ ರೀತಿ, ಕಣ್ಣೀರು ಜಾರಿದರೂ ಕಾಣದಂತೆ ಎಲ್ಲರೂ ಖುಷಿಯಿಂದ ಇರುವಂತೆ ಮಾಡುವ ರೀತಿ ಬದುಕಿನ ಹುಮ್ಮಸ್ಸು ಹೆಚ್ಚಿಸುತ್ತದೆ. ಅವರನ್ನೊಮ್ಮೆ ಪ್ರೀತಿಯಿಂದ ಮಾತನಾಡಿಸಿದರೆ ’ಹಾಡು ನಮ್ಮ ಬದುಕು’ ಎನ್ನುತ್ತಾರೆ. ಮುಂದುವರಿದು ‘ಇಂದಿಗೊ ನಾಳೆಗೊ ಮುಂದಿನ ಬಾಳಲಿ, ಗೆಲ್ಲುವಂತ ಸ್ಫೂರ್ತಿ ದಾರಿದೀಪ ನಿನಗೆ ಆ ಅನುಭವ...’ ಎನ್ನುವ ಮಧುರ ಕಂಠದ ಗಾಯನ ಅನುರಣಿಸುತ್ತಿತ್ತು.

‘ಪುಟ್ಟರಾಜ ಗವಾಯಿಗಳೇ ಪ್ರೇರಣೆ’

ಕಾಲೇಜು ಓದುವ ದಿನಗಳಲ್ಲಿ ಸಂಗೀತ ಕಲಿಯಲು ಪುಟ್ಟರಾಜ ಗವಾಯಿಗಳ ಬಳಿ ಹೋದಾಗ ಅವರ ಬದುಕು ‘ಶಿಕ್ಷಣ ಕಲಿತ ಬಳಿಕ ಏನು ಮಾಡುತ್ತೀರಿ. ಇನ್ನೊಬ್ಬರ ಬದುಕಿಗೆ ಹೇಗೆ ನೆರವಾಗುತ್ತೀರಿ’ ಎಂದು ಕೇಳಿದ ಪ್ರಶ್ನೆಯೇ ನನ್ನ ಬದುಕಿನ ದಿಕ್ಕು ಬದಲಿಸಿತು.  ಉತ್ತರ ಕರ್ನಾಟಕ ಭಾಗದ ಅಂಧ ಮಕ್ಕಳು ಹಾಸ್ಟೆಲ್‌ ಸಿಗದೇ ಪರದಾಡಬಾರದು ಎನ್ನುವ ಕಾರಣಕ್ಕೆ ಸಂಸ್ಥೆ ಆರಂಭಿಸಿದ್ದೇವೆ. ದುಡಿಯುದೇ ಯಾರ ಬಳಿಯೂ ಹಣ ಕೇಳಬಾರದು ಎನ್ನುವುದು ನನ್ನ ಬದುಕಿನ ನಿಯಮ. ಅದಕ್ಕಾಗಿ ಹಾಡು ಹಾಡಿ ಹಣ ಸಂಗ್ರಹಿಸಿ ಅದನ್ನು ಅಂಧ ಮಕ್ಕಳಿ ಭವಿಷ್ಯ ರೂಪಿಸಲು ಬಳಕೆ ಮಾಡಲಾಗುತ್ತಿದೆ. ಸಂತೋಷ ಕುಮಾರ್‌ ಸಮಿತಿಯ ಸಂಸ್ಥಾಪನಾ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT