ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ | ಅನಧಿಕೃತ ಕೋಚಿಂಗ್‌ ಕೇಂದ್ರಕ್ಕಿಲ್ಲ ಕಡಿವಾಣ

Published 1 ಮೇ 2024, 4:42 IST
Last Updated 1 ಮೇ 2024, 4:42 IST
ಅಕ್ಷರ ಗಾತ್ರ

ಕುಷ್ಟಗಿ: ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ತರಬೇತಿ (ಕೋಚಿಂಗ್) ಕೇಂದ್ರಗಳು ತಾಲ್ಲೂಕಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿದ್ದು ಶಿಕ್ಷಣದ ಬದಲು ಈ ತರಬೇತಿ ಕೇಂದ್ರಗಳು ಮಕ್ಕಳ ಪಾಲಿಗೆ ಶಿಕ್ಷೆಯ ಕೇಂದ್ರಗಳಂತಾಗಿವೆ ಎಂಬ ದೂರುಗಳು ಕೇಳಿಬಂದಿವೆ.

ಶಿಕ್ಷಕ ತರಬೇತಿ ಹೊಂದಿದ ನಿರುದ್ಯೋಗಿಗಳಷ್ಟೇ ಅಲ್ಲ ಸರ್ಕಾರಿ, ಅನುದಾನಿತ ಖಾಸಗಿ ಶಾಲೆಗಳಲ್ಲಿ ಕಾಯಂ ಶಿಕ್ಷಕರಾಗಿರುವ ಬಹುತೇಕ ಶಿಕ್ಷಕರೂ ಈ ಕೇಂದ್ರಗಳನ್ನು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ನವೋದಯ, ಸೈನಿಕ, ರಾಜ್ಯ ಪಠ್ಯಕ್ರಮದ ಮೊರಾರ್ಜಿ ಹಾಗೂ ಇತರೆ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸುವ ನೆಪದಲ್ಲಿ ಎಲ್ಲೆಂದರಲ್ಲಿ ಕೇಂದ್ರಗಳು ಹುಟ್ಟಿಕೊಳ್ಳುತ್ತಿವೆ. ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಬಹಳಷ್ಟು ಕೇಂದ್ರಗಳಿದ್ದು ಶಿಕ್ಷಣ ಇಲಾಖೆ ಪರವಾನಗಿಯೇ ಇಲ್ಲದೆ ಅನಧಿಕೃತವಾಗಿ ನಡೆಯುತ್ತಿವೆ.

ಹಾಗಾಗಿ ಇವುಗಳ ಮೇಲೆ ಶಿಕ್ಷಣ ಇಲಾಖೆಯ ನಿಯಂತ್ರಣವೇ ಇಲ್ಲದಂತಾಗಿದೆ. ಅನಧಿಕೃತ ಮತ್ತು ಮಕ್ಕಳನ್ನು ಕೊಟ್ಟಿಗೆಯಲ್ಲಿ ಕೂಡಿಹಾಕಿ ನಡೆಸುತ್ತಿರುವುದು ಗಮನಕ್ಕೆ ಬಂದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಗೈರಾದರೂ ಹಾಜರಿ: ರಜೆ ಅವಧಿಯಲ್ಲಿ ಮಕ್ಕಳಿಗೆ ಕೋಚಿಂಗ್ ಕೊಡುವುದಾಗಿ ಕೇಂದ್ರ ಆರಂಭಿಸಲಾಗುತ್ತದೆ. ಆದರೆ ಈ ಅನಧಿಕೃತ ಕೇಂದ್ರಗಳು ಪೂರ್ಣಾವಧಿವರೆಗೂ ಕಾರ್ಯನಿರ್ವಹಿಸುತ್ತವೆ. ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಖಾಸಗಿ ಶಾಲೆಗಳ ಮಕ್ಕಳೇ ಈ ಅನಧಿಕೃತ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿರುತ್ತಾರೆ ಎಂಬುದು ಗೊತ್ತಾಗಿದೆ. ಆದರೆ, ಮಕ್ಕಳು ಗೈರಾದರೂ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಮಾತ್ರ ಅಲ್ಲಿನ ಶಿಕ್ಷಕರು ನಿತ್ಯವೂ ಹಾಜರಿ ಹಾಕುವುದು ಸಾಮಾನ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

’ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿದರೂ ಅಲ್ಲಿಗೆ ಕಳಿಸದೆ ದುಬಾರಿ ಶುಲ್ಕ ತೆತ್ತು ಕೋಚಿಂಗ್‌ ಕೇಂದ್ರಗಳಿಗೆ ಕಳಿಸುತ್ತಾರೆ. ಸರ್ಕಾರಿ ಶಾಲೆ ಶಿಕ್ಷಕರು ಇದನ್ನು ಆಕ್ಷೇಪಿಸಿದರೆ ಅಂಥ ಶಿಕ್ಷಕರ ಮೇಲೆ ದಬ್ಬಾಳಿಕೆ ನಡೆಸಲೂ ಹಿಂದೆ ಮುಂದೆ ನೋಡುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಣ ಇಲಾಖೆ ಸಿಬ್ಬಂದಿ 'ಪ್ರಜಾವಾಣಿ'ಗೆ ತಿಳಿಸಿದರು.

ಬಾಡಿಗೆ ಮನೆ, ಬಹಿರ್ದೆಸೆ ಹೊರಗೆ:

ಕೋಚಿಂಗ್‌ ಕೇಂದ್ರಗಳ ಅವ್ಯವಸ್ಥೆಯ ಬಗ್ಗೆ ಬಹಳಷ್ಟು ಆರೋಪಗಳು ಕೇಳಿಬಂದಿವೆ, ಪಟ್ಟಣದಲ್ಲಿ ಕೆಲವು ಕೇಂದ್ರಗಳು ಕೋಳಿ ಗೂಡಿನಂತಿವೆ. ಇನ್ನೂ ಕೆಲವು ಸಣ್ಣ ಬಾಡಿಗೆ ಮನೆಗಳಲ್ಲಿ ನಡೆಯುತ್ತಿದ್ದ 50 ರಿಂದ 100ಕ್ಕೂ ಅಧಿಕ ಮಕ್ಕಳನ್ನು ಕೊಟ್ಟಿಗೆಯಲ್ಲಿ ದನಗಳಂತೆ ಕೂಡಿ ಹಾಕಲಾಗುತ್ತಿದೆ ಎಂಬ ಆರೋಪವೂ ಇದೆ.

ಮಕ್ಕಳ ರಕ್ಷಣಾ ಆಯೋಗಕ್ಕೆ ಪತ್ರ: ಅನಧಿಕೃತ ಕೋಚಿಂಗ್ ಕೇಂದ್ರಗಳಲ್ಲಿ ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದು ಅದರ ಬಗ್ಗೆ ಶಿಸ್ತಿನ ಕ್ರಮಕ್ಕೆ ಇಲಾಖೆಗೆ ಶಿಫಾರಸು ಮಾಡುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸದಸ್ಯ ಶೇಖರಗೌಡ ರಾಮತ್ನಾಳ ಮನವಿ ಮಾಡಿದ್ದಾರೆ. ಕ್ರಮಕ್ಕೆ ಆಗ್ರಹಿಸಿದ ಈ ಕುರಿತು ಆಯೋಗದ ಅಧ್ಯಕ್ಷರಿಗೆ ಪತ್ರವನ್ನೂ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT