ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ | ಶಾಖಾಪುರ ಕೆರೆಗೆ ‘ಕೃಷ್ಣಾ ಭಾಗ್ಯ’

ಆಲಮಟ್ಟಿ ಜಲಾಶಯದಿಂದ ನೀರು: ಬರದಲ್ಲೂ ಭರ್ತಿಯಾಗಿ ಪ್ರಾಣಿಗಳಿಗೆ ಆಸರೆ
Published 10 ಆಗಸ್ಟ್ 2023, 6:40 IST
Last Updated 10 ಆಗಸ್ಟ್ 2023, 6:40 IST
ಅಕ್ಷರ ಗಾತ್ರ

ಕುಷ್ಟಗಿ: ‘ಹೊಲ್ದಾಗ ನೀರು ಹರಿಯುವಂಥ ಮುಂಗಾರಿ ಮಳೆಯೇ ಇಲ್ಲ, ಕೆರಿಯಾಗ ಗುಬ್ಬಿ ಕುಡಿಯಾಕ ಹನಿ ನೀರು ಇದ್ದಿಲ್ಲ. ಈ ವರ್ಷ ಬರ ಬಿದ್ದೈತ್ರಿ. ಇಂಥ ಸಂಕಟ ಪರಿಸ್ಥಿತಿಯೊಳ್ಗ ನಮ್ಮೂರ ಕೆರಿ ತುಂಬಿ ತುಳಕತೈತಂದ್ರ ಯಾರಿಗೆ ಸಂತೋಸ ಆಗಂಗಿಲ್ಲ ಹೇಳ್ರಿ’

ಮುಂಗಾರು ಮಳೆಯ ವೈಫಲ್ಯದ ನಡುವೆಯೂ ಬೃಹತ್ ಕೊಳವೆಯ ಮೂಲಕ ಕೃಷ್ಣಾ ನದಿ ನೀರು ಹರಿದು ಬಂದು ತಾಲ್ಲೂಕಿನ ಶಾಖಾಪುರ ಗ್ರಾಮದ ಬಳಿಯ ಕೆರೆ ಭರ್ತಿಯಾಗಿರುವುದಕ್ಕೆ ಆ ಊರಿನ ರೈತರಾದ ಹನುಮಂತ ಭಂಡಾರಿ, ಹನುಮಂತ ಭಜಂತ್ರಿ ಇತರರು ‘ಪ್ರಜಾವಾಣಿ’ ಜೊತೆಗೆ ಖುಷಿ ಹಂಚಿಕೊಂಡದ್ದು ಹೀಗೆ.

ಹೌದು, ಕಳೆದ ನಾಲ್ಕೈದು ವರ್ಷಗಳಿಂದ ಕೆರೆಯಲ್ಲಿ ಅಕ್ಷರಶಃ ತೇವ ಸಹಿತ ಇರಲಿಲ್ಲ. ಅಂತರ್ಜಲ ಕುಸಿದು ಸುತ್ತಲಿನ ಕೊಳವೆಬಾವಿಗಳಲ್ಲಿಯೂ ನೀರಿನ ಇಳುವರಿ ಇರಲಿಲ್ಲ. ಆದರೆ ಈಗ ಕೃಷ್ಣಾ ಭಾಗ್ಯ ಜಲ ನಿಗಮದ ಕೆರೆ ತುಂಬಿಸುವ ಯೋಜನೆ ಕುಷ್ಟಗಿ-2 ಪ್ಯಾಕೇಜ್‌ನಲ್ಲಿ ಶಾಖಾಪುರ ಕೆರೆಗೆ ಆಲಮಟ್ಟಿ ಜಲಾಶಯದಿಂದ ನೀರು ಸರಬರಾಜಾಗುತ್ತಿದ್ದು ಬತ್ತಿದ ಕೆರೆಗೆ ಜೀವಕಳೆ ಬಂದಿದೆ. ದೊಡ್ಡ ಗಾತ್ರದ ಕೊಳವೆ ಮೂಲಕ ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ರಭಸದಿಂದ ಭೋರ್ಗರೆಯುತ್ತಿದ್ದರೆ ಅಲ್ಲಿಯ ಜನರ ಸಂತಸಕ್ಕೆ ಪಾರವೇ ಇರಲಿಲ್ಲ. ಇದು ಕನಸೊ ನನಸೊ ನಂಬಲಿಕ್ಕೆ ಆಗುತ್ತಿಲ್ಲ ಎಂದು ಅಲ್ಲಿದ್ದ ಮೌನೇಶ ಕಮ್ಮಾರ, ಬಸವರಾಜ ಐಹೊಳಿ, ಅಡಿವೇಶ ನಾಯಕ ಇತರರು ಹೇಳಿದರು.

ಕಳೆದ ಎರಡು ದಿನಗಳಿಂದ ಕೆರೆಗೆ ನೀರು ಬರುತ್ತಿದೆ ಎಂದು ಕೆಬಿಜೆಎನ್‌ಎಲ್‌ ಮೂಲಗಳು ತಿಳಿಸಿವೆ. ಬರಗಾಲದಲ್ಲೂ ಕೆರೆ ತುಂಬಿದ್ದರಿಂದ ವರ್ಷಪೂರ್ತಿ ಜಾನುವಾರುಗಳು, ನಿಶಾಚರಿ ಪ್ರಾಣಿ, ಪಕ್ಷಿಗಳಿಗೆ ನೀರಿನ ಆಸರೆ ದೊರೆಯಲಿದೆ. ಅಷ್ಟೇ ಅಲ್ಲ ಅಂತರ್ಜಲ ಹೆಚ್ಚಳಕ್ಕೂ ನೆರವಾಗಿದೆ. ಬತ್ತಿರುವ ಸುತ್ತಲಿನ ಕೊಳವೆ ಬಾವಿಗಳಲ್ಲಿ ಜೀವಜಲ ಜಿನುಗಿ ಅನುಕೂಲವಾಗಲಿದೆ ಎಂಬ ಆಶಯ ರೈತರದು.

ಈ ಕುರಿತು ವಿವರಿಸಿದ ಕೆಬಿಜೆಎನ್‌ಎಲ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಮೇಶ್ ನೇಲಗಿ, ಕುಷ್ಟಗಿ ಪ್ಯಾಕೇಜ್-2 ದಲ್ಲಿ ಸದ್ಯ ನಾಲ್ಕು ಕೆರೆಗಳಿಗೆ ನೀರು ಬರುತ್ತಿದೆ. ಒತ್ತಡ ಹೆಚ್ಚಾಗುತ್ತಿದ್ದಂತೆ ಕೊರಡಕೇರಾ ಕೆರೆಗೂ ನೀರು ಹರಿಯಲಿದೆ ಎಂದರು. ಶಾಖಾಪುರ ಕೆರೆ ಅರಣ್ಯ ಇಲಾಖೆಗೆ ಸೇರಿದ್ದು, ಆಳ ಮತ್ತು ಅಗಲಗೊಳಿಸಿದರೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸಲು ಸಾಧ್ಯ ಎಂದರು.


ಸಂತಸದ ಜೊತೆಗೆ ಸಂಕಷ್ಟ:
ಶಾಖಾಪುರ ಗ್ರಾಮದ ಕೆರೆಗೆ ನೀರು ಬಂದಿರುವುದಕ್ಕೆ ಜನ ಬಹಳಷ್ಟು ಸಂತಸಗೊಂಡಿದ್ದಾರೆ. ಆದರೆ ಕೊಳವೆ ವಾಲ್ವ್‌ ಮೂಲಕ ನೀರು ಸೋರಿಕೆಯಾಗಿ ಜಮೀನಿನಲ್ಲಿ ನೀರು ಸಂಗ್ರವಾಗುತ್ತಿರುವುದರಿಂದ ಅನೇಕ ರೈತರು ಸಂಕಷ್ಟ ಎದುರಿಸುತ್ತಿರುವುದು ಬುಧವಾರ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು. ಹೊಲದಲ್ಲಿ ಎಂಟು ಅಡಿ ವ್ಯಾಸದ ಜೋಡಿ ಕೊಳವೆ ಅಳವಡಿಸಿದ್ದಾರೆ. ಜಮೀನು ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಪರಿಹಾರ ಕೊಟ್ಟಿಲ್ಲ. ಈಗ ಕೊಳವೆಯಲ್ಲಿ ನೀರು ಸೋರಿಕೆಯಾಗುತ್ತಿದ್ದು ಬೆಳೆಗಳು ಹಾಳಾಗುತ್ತವೆ. ಒಬ್ಬ ಎಂಜಿನಿಯರ್‌ ಕೂಡ ಇಲ್ಲಿಗೆ ಬಂದಿಲ್ಲ. ಬಹುಶಃ ಈ ಸಮಸ್ಯೆ ಶಾಶ್ವತವಾಗಲಿದೆ ಎಂದು ರೈತರಾದ ಭೀಮಪ್ಪ ತಳವಾರ, ಅಯ್ಯಪ್ಪ, ಹನುಮಂತ ಇತರರು ಆತಂಕ ವ್ಯಕ್ತಪಡಿಸಿದರು. ಅಲ್ಲದೆ ಕೆಬಿಜೆಎನ್‌ಎಲ್‌ ಕಚೇರಿಗೆ ಕರೆ ಮಾಡಿದರೆ ಒಬ್ಬರೂ ಕರೆ ಸ್ವೀಕರಿಸುತ್ತಿಲ್ಲ ಎಂದು ದೂರಿದರು.

ಬರದಲ್ಲೂ ಭರ್ತಿಯಾಗಿ ಪ್ರಾಣಿಗಳಿಗೆ ಆಸರೆಯಾದ ಶಾಖಾಪುರ ಕೆರೆ
ಬರದಲ್ಲೂ ಭರ್ತಿಯಾಗಿ ಪ್ರಾಣಿಗಳಿಗೆ ಆಸರೆಯಾದ ಶಾಖಾಪುರ ಕೆರೆ
ಶಾಖಾಪುರ ಬಳಿ ಭೀಮಪ್ಪ ತಳವಾರ ಎಂಬುವವರ ಜಮೀನಿನಲ್ಲಿ ಕೆಬಿಜೆಎನ್‌ಎಲ್‌ ವಾಲ್ವ್ ಸೋರಿಕೆಯಿಂದ ನೀರು ನಿಂತಿರುವುದು
ಶಾಖಾಪುರ ಬಳಿ ಭೀಮಪ್ಪ ತಳವಾರ ಎಂಬುವವರ ಜಮೀನಿನಲ್ಲಿ ಕೆಬಿಜೆಎನ್‌ಎಲ್‌ ವಾಲ್ವ್ ಸೋರಿಕೆಯಿಂದ ನೀರು ನಿಂತಿರುವುದು

ಸರ್ಕಾರ ಮನಸ್ಸು ಮಾಡಿದರೆ ಯಾವುದೂ ದೊಡ್ಡದಲ್ಲ ಆದರೆ ಕೆರೆಯನ್ನು ಇನ್ನಷ್ಟು ಆಳ ಅಗಲಗೊಳಿಸಬೇಕು.

ಹನುಮಂತ ಭಜಂತ್ರಿ ಶಾಖಾಪುರ ರೈತ

ವಾಲ್ವ್‌ನಲ್ಲಿ ನೀರು ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿಲ್ಲ. ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.

ರಮೇಶ್ ನೇಲಗಿ ಎಇಇ ಕೆಬಿಜೆಎನ್‌ಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT