ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾವರಗೇರಾ | ಗ್ರಾಮೀಣ ರಸ್ತೆಯಲ್ಲಿ ಸಂಚಾರವೇ ಸವಾಲು

Published 7 ಡಿಸೆಂಬರ್ 2023, 4:19 IST
Last Updated 7 ಡಿಸೆಂಬರ್ 2023, 4:19 IST
ಅಕ್ಷರ ಗಾತ್ರ

ತಾವರಗೇರಾ: ಪಟ್ಟಣದಿಂದ ಮುದೇನೂರು ಮಾರ್ಗವಾಗಿ ಹಾದು ಹೋಗುವ ಮುಖ್ಯ ರಸ್ತೆ ಅಲ್ಲಲ್ಲಿ ಡಾಂಬರು ಕಿತ್ತಿದ್ದು, ವಾಹನಗಳು ಓಡಾಟಕ್ಕೆ ತೊಂದರೆಯಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿ ಕಾಮಗಾರಿ ನಡೆಸುತ್ತಿದ್ದು, ಕಂಪನಿಯ ಬೃಹತ್ ಲಾರಿಗಳ ಓಡಾಟದಿಂದ ರಸ್ತೆ ಹದಗೆಟ್ಟಿದೆ.

ಹೀಗೆ ವಿವಿಧ ಗ್ರಾಮಗಳಲ್ಲಿ ರಸ್ತೆಯಿದ್ದರೂ ಸಮರ್ಪಕವಾಗಿ ವಾಹನಗಳು ಓಡಾಡಲು ಹರಸಾಹಸಪಡುವ ದೃಶ್ಯಗಳ ಕಂಡುಬರುತ್ತಿವೆ.

ತಾವರಗೇರಾ ಪಟ್ಟಣದಿಂದ ದೋಟಿಹಾಳ ಹೋಗುವ ರಸ್ತೆಯಲ್ಲಿ ತಗ್ಗು ಬಿದ್ದಿವೆ. ಜುಮಲಾಪುರ, ಇದ್ಲಾಪೂರ, ಹಾಗಲದಾಳ ಕ್ರಾಸ್‍ನಿಂದ ತಾವರಗೇರಾವರೆಗಿನ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಯುದ್ದಕ್ಕೂ ಗುಂಡಿಗಳು ರಾರಾಜಿಸುತ್ತವೆ. ಈ ರಸ್ತೆಯ ಮೇಲೆ ವಾಹನ ಸವಾರರು ಜೀವದ ಭಯದಲ್ಲಿ ವಾಹನ ಚಲಾಯಿಸುವುದು ಅನಿವಾರ್ಯವಾಗಿದೆ.

ತಾವರಗೇರಾದಿಂದ ಮುದೇನೂರು ರಸ್ತೆ ಮಾರ್ಗದಲ್ಲಿ ಒಟ್ಟು ಎಂಟು ಕಡೆ ತಿರುವು ರಸ್ತೆಗಳಿದ್ದು, ಎಲ್ಲಿಯೂ ಸೂಚನಾ ಫಲಕಗಳು ಇಲ್ಲ. ಮುದೇನೂರು ಕೆರೆಪಕ್ಕ, ಜುಮಲಾಪುರ, ಇದ್ಲಾಪೂರ, ಮುದೇನೂರು ಸೇರಿದಂತೆ ಹಲವು ಕಡೆ ತಿರುವುಗಳು ಇವೆ. ವೇಗವಾಗಿ ಬರುವ ವಾಹನಗಳು ಅಪಘಾತ ಸಂಭವಿಸುವ ಸಂದರ್ಭಗಳೇ ಹೆಚ್ಚಾಗಿವೆ ಎಂದು ಜುಮಲಾಪೂರ ಗ್ರಾಮದ ತಿಪ್ಪಣ್ಣ ಮಡ್ಡೇರ್ ದೂರಿದರು.

ಸಮೀಪದ ಹಾಗಲದಾಳ ಕ್ರಾಸ್ ಮೂಲಕ ನಂದಾಪೂರ ಸಂಪರ್ಕ ರಸ್ತೆಯು ಡಾಂಬರೀಕರಣವಿದ್ದರೂ ಖಾಸಗಿ ಕಂಪನಿಯ ಬೃಹತ್ ಲಾರಿಗಳ ಓಡಾಟದಿಂದ ಡಾಂಬರು ಕಿತ್ತು ಹಾಳಾಗಿದೆ. ಇದರಿಂದ ರೈತರ ಎತ್ತಿನ ಬಂಡಿ, ದ್ವಿಚಕ್ರ ವಾಹನಗಳ ಸವಾರರು ಹರಸಾಹಸ ಪಡುತ್ತಿದ್ದಾರೆ. ರೈತರು ಹೊಲಗಳಿಗೆ ಹೋಗಲು ಸಮರ್ಪಕ ರಸ್ತೆ ಇಲ್ಲದೇ ಭಯದಲ್ಲಿ ದಿನ ಕಳೆಯುತ್ತಿದ್ದಾರೆ.

ಸಮೀಪದ ನವಲಹಳ್ಳಿ ಗ್ರಾಮದಿಂದ ಹುಲಿಯಾಪೂರ ತಾಂಡಾ ಸಂಪರ್ಕಿಸುವ ರಸ್ತೆ ಐದು ಕಿ.ಮೀ. ಇದ್ದು, ಕಳೆದ ಎರಡ್ಮೂರು ವರ್ಷಗಳ ಹಿಂದೆ 2 ಕಿ.ಮೀ. ರಸ್ತೆ ಕಾಮಗಾರಿ ಮಂಜೂರಾಗಿ ಕೆಲಸ ಪೂರ್ಣಗೊಂಡಿದೆ. ಆದರೆ, ಡಾಂಬರೀಕರಣ ಅವಶ್ಯವಿದ್ದು, ರಸ್ತೆ ಪಕ್ಕದಲ್ಲೇ ಹಲವು ಕುಟುಂಬಗಳು ವಾಸ ಮಾಡುತ್ತಿವೆ. ಅಲ್ಲಿ ಕನಿಷ್ಠ 200 ಮೀಟರ್‌ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರಾದ ನಿಂಗಪ್ಪ ಬಾರಕೇರ ಆಗ್ರಹಿಸಿದರು.

ಬೇಕಿವೆ ಇನ್ನಷ್ಟು ಬಸ್‌ಗಳು

ತಾವರಗೇರಾ ಪಟ್ಟಣಕ್ಕೆ ಗ್ರಾಮೀಣ ಪ್ರದೇಶಗಳಿಂದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ನಾರಿನಾಳ ಗರ್ಜಿನಾಳ ಜೂಲಕುಂಟಿ ಗ್ರಾಮಗಳಿಂದ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚು. ಆದರೆ ಒಂದೇ ಬಸ್ ಬಂದು ಹೋಗುತ್ತಿದೆ. ಮುದೇನೂರು ‌ಮೂಲಕ ದೋಟಿಹಾಳ ಹೋಗುವ ಬಸ್‌ಗಳ ಸಂಖ್ಯೆ ಕಡಿಮೆಯಿದೆ. ಇದರಿಂದಾಗಿ ನಿತ್ಯ ಸರ್ಕಾರಿ ಇಲಾಖೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಬಹಳಷ್ಟು ಜನ ಸ್ವಂತ ವಾಹನಗಳ ಮೊರೆ ಹೋಗಿದ್ದಾರೆ. ಸಂಗನಾಳ ಹಿರೇಮುಕರ್ತನಾಳ ಹುಲಿಯಾಪೂರಕ್ಕೆ ಬಸ್‌ಗಳ ಕೊರತೆಯಿದೆ.

ತಾವರಗೇರಾ ಪಟ್ಟಣದಿಂದ ಬರುವ ರಸ್ತೆ ತುಂಬ ಹದೆಗೆಟಿದ್ದು ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ಹಲವು ಬಾರಿ ದ್ವಿಚಕ್ರ ವಾಹನಗಳು ಅಪಘಾತಕ್ಕೆ ಈಡಾಗಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಮಾಡಿಸಬೇಕು.
ತಿಪ್ಪಣ್ಣ ಮಡ್ಡೇರ್ರ ಜುಮಲಾಪೂರ, ಗ್ರಾ.ಪಂ. ಮಾಜಿ ಸದಸ್ಯ
ನವಲಹಳ್ಳಿ ಹುಲಿಯಾಪೂರ ತಾಂಡಾ ಸಂಪರ್ಕಿಸುವ 2 ಕಿ.ಮೀ. ಜಂಗಲ್‌ ಕಟಿಂಗ್‌ ಮಾಡಿದ್ದು ಈ ರಸ್ತೆಯ ಪಕ್ಕದಲ್ಲಿ ಕೆಲವು ಕುಟುಂಬಗಳ ವಾಸ ಇವೆ. ಗ್ರಾಮದಿಂದ ಕನಿಷ್ಠ ಎರಡು ನೂರು ಮೀಟರ್ ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ.
ನಿಂಗಪ್ಪ ಬಾರಕೇರ, ನವಲಹಳ್ಳಿ ನಿವಾಸಿ
ತಾವರಗೇರಾ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳ ರಸ್ತೆಗಳು ಹಾಳಾಗಿದ್ದರೂ ಸಮರ್ಪಕ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಲಾಗುವುದು.
ಸುಂದರಗೌಡ ಪಾಟೀಲ್, ವ್ಯವಸ್ಥಾಪಕ, ಕುಷ್ಟಗಿ ಸಾರಿಗೆ ಘಟಕ
ತಾವರಗೇರಾ ಸಮೀಪದ ನಂದಾಪುರಕ್ಕೆ ಹೋಗುವ ರಸ್ತೆ ಹದಗೆಟ್ಟಿರುವುದು
ತಾವರಗೇರಾ ಸಮೀಪದ ನಂದಾಪುರಕ್ಕೆ ಹೋಗುವ ರಸ್ತೆ ಹದಗೆಟ್ಟಿರುವುದು
ತಾವರಗೇರಾ ಸಮೀಪದ ನವಲಹಳ್ಳಿ ಗ್ರಾಮದಿಂದ ಹುಲಿಯಾಪುರ ತಾಂಡಾ ಸಂಪರ್ಕಿಸುವ ರಸ್ತೆಯ ದುಸ್ಥಿತಿ
ತಾವರಗೇರಾ ಸಮೀಪದ ನವಲಹಳ್ಳಿ ಗ್ರಾಮದಿಂದ ಹುಲಿಯಾಪುರ ತಾಂಡಾ ಸಂಪರ್ಕಿಸುವ ರಸ್ತೆಯ ದುಸ್ಥಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT