ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಕೃಷಿ ಜಮೀನಿನಲ್ಲಿ ಸ್ಫೋಟಕ ವಸ್ತು ಪತ್ತೆ!

Published 13 ಫೆಬ್ರುವರಿ 2024, 22:26 IST
Last Updated 13 ಫೆಬ್ರುವರಿ 2024, 22:26 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮದ ಕೃಷಿ ಜಮೀನುಗಳಲ್ಲಿ ಅಪಾಯಕಾರಿ ಸ್ಫೋಟಕಗಳು ಪತ್ತೆಯಾಗಿವೆ.

ತಮ್ಮ ಜಮೀನಿನಲ್ಲಿ ಬಿದ್ದಿದ್ದ ಸ್ಫೋಟಕ ವಸ್ತುಗಳನ್ನು ರೈತ ಜೆ.ಎಂ. ಬಾಲಕೃಷ್ಣ ಸೋಮವಾರ ಪ್ರದರ್ಶಿಸಿ, ತೀವ್ರ ಕಳವಳ ವ್ಯಕ್ತಪಡಿಸಿದರು.

‘ಗ್ರಾಮದ ಬಳಿಯ ಸ.ನಂ.83ರಲ್ಲಿ ಕಲ್ಲು ಗಣಿಗಾರಿಕೆ ನಡೆಸುವವರು ಸ್ಫೋಟಕಗಳನ್ನು ಮನಬಂದಂತೆ ಬಳಸುತ್ತಿದ್ದಾರೆ. ಅದು ಸರ್ಕಾರಿ ಗೋಮಾಳವಾಗಿದೆ. ಜಿಲೆಟಿನ್ ಕಡ್ಡಿ, ಮತ್ತು ಅಮೋನಿಯಂ ಸಲ್ಫೇಟ್‌ನಂತಹ ಅಪಾಯಕಾರಿ ವಸ್ತುಗಳು ಜನರ ಕೈಗೆ ಸುಲಭವಾಗಿ ಸಿಗುತ್ತಿವೆ. ಅವುಗಳನ್ನು ವಿಧ್ವಂಸಕ ಕೃತ್ಯಗಳಿಗೆ ಬಳಸಿದರೆ ಗತಿ ಏನು?’ ಎಂದು ಕಳವಳದಿಂದ ಕೇಳಿದರು.

‘ಕಲ್ಲು ಗಣಿಗಾರಿಕೆಯಿಂದಾಗಿ ನಾನೂ ಸೇರಿದಂತೆ ಆಸುಪಾಸಿನ ಹತ್ತಾರು ರೈತರು ಕೃಷಿ ಮಾಡದೇ ಜಮೀನನ್ನು ಪಾಳು ಬಿಟ್ಟಿದ್ದೇವೆ. ಹಗಲಿನಲ್ಲೇ ಕಲ್ಲು ಬಂಡೆ ಸ್ಫೋಟಿಸುತ್ತಿದ್ದು, ಕಲ್ಲು ಮತ್ತು ದೂಳು ಜಮೀನಿಗೆ ಬಂದು ಬೀಳುತ್ತಿದೆ. ಜಮೀನಿಗೆ ಹೋದರೆ ಕಲ್ಲುಗಳು ಮೈ ಮೇಲೆ ಬೀಳಬಹುದು ಎಂಬ ಭಯ ಕಾಡುತ್ತಿದೆ’ ಎಂದು ಅಳಲು ತೋಡಿಕೊಂಡರು.

‘ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಜಕ್ಕನಹಳ್ಳಿ ಬಳಿ ಅಕ್ರಮವಾಗಿ ಸ್ಫೋಟಕ ಬಳಸುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಸ್ಥಳ ಪರಿಶೀಲಿಸಿ ಕ್ರಮ ವಹಿಸಲಾಗುವುದು’ ಎಂದು ಗ್ರಾಮಾಂತರ ಠಾಣೆ ಸಿಪಿಐ ಬಿ.ಜಿ. ಕುಮಾರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT