ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಲಿಯೊ ಲಸಿಕೆ: ಶ್ರೀರಂಗಪಟ್ಟಣದಲ್ಲಿ ಶೇ 110 ಸಾಧನೆ

Published 3 ಮಾರ್ಚ್ 2024, 15:25 IST
Last Updated 3 ಮಾರ್ಚ್ 2024, 15:25 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನಲ್ಲಿ ಭಾನುವಾರ ನಡೆದ ಪೋಲಿಯೊ ಲಸಿಕಾ ಅಭಿಯಾನದಲ್ಲಿ ಶೇ 110 ಸಾಧನೆಯಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ. ಬೆನ್ನೂರ ತಿಳಿಸಿದರು.

ತಾಲ್ಲೂಕಿನಾದ್ಯಂತ 69 ಬೂತ್‌ಗಳಲ್ಲಿ, 10 ಸಾವಿರ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಜನ ವಸತಿ ಸ್ಥಳಗಳು ಮಾತ್ರವಲ್ಲದೆ ಕೆಆರ್‌ಎಸ್‌ ಬೃಂದಾವನ, ರೈಲು ನಿಲ್ದಾಣ, ರಂಗನತಿಟ್ಟು ಪಕ್ಷಿಧಾಮ, ದೇವಾಲಯಗಳು, ಪ್ರವಾಸಿ ತಾಣಗಳು, ಚೆಕ್‌ಪೋಸ್ಟ್‌ ಬಳಿ ಕೂಡ ಲಸಿಕೆ ಹಾಕಲಾಗಿದೆ. ಸಂಜೆ ವೇಳೆಗೆ 5 ವರ್ಷದ ಒಳಗಿನ 10,899 ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮಾ.4ರಿಂದ ಎರಡು ದಿನಗಳ ಕಾಲ ಮತ್ತು ಪಟ್ಟಣ ಪ್ರದೇಶದಲ್ಲಿ ಮೂರು ದಿನಗಳ ಕಾಲ ಪೋಲಿಯೋ ಲಸಿಕಾ ಅಭಿಯಾನ ನಡೆಯಲಿದೆ. ನವ ಜಾತ ಶಿಶುಗಳು, ಅನಾರೋಗ್ಯ ಪೀಡಿತ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪೋಲಿಯೊ ಲಸಿಕಾ ಅಭಿಯಾನಕ್ಕೆ ಜಿ.ಪಂ. ಉಪ ಕಾರ್ಯದರ್ಶಿ ಆನಂದಕುಮಾರ್‌ ಚಾಲನೆ ನೀಡಿದರು. ಒಂದು ಮಗುವೂ ತಪ್ಪದಂತೆ 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಬೇಕು. ಪೋಲಿಯೊ ಮುಕ್ತ ಸಮಾಜಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದರು.

ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಂ. ನಂದೀಶ್‌, ಪುರಸಭೆ ಸದಸ್ಯ ಎಂ.ಎಲ್‌. ದಿನೇಶ್‌, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೇಣು, ನಗರ ಕಾಂಗ್ರೆಸ್‌ ಘಟಕದ ಗೌರವಾಧ್ಯಕ್ಷ ಎಂ. ಲೋಕೇಶ್‌, ಪ್ರಸನ್ನಕುಮಾರ್‌, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ. ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT