ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರದಂಥ ಏಲಕ್ಕಿ ಬಾಳೆಯ ಯಶಸ್ವಿ ಪ್ರಯೋಗ

Last Updated 27 ಆಗಸ್ಟ್ 2017, 8:48 IST
ಅಕ್ಷರ ಗಾತ್ರ

ಮದ್ದೂರು: ಸದಾ ನೀರಿನಿಂದ ಜಿನುಗುವ ಭೂಮಿಯನ್ನು ಹದಗೊಳಿಸಿ ಬಂಗಾರದಂತಹ ಏಲಕ್ಕಿ ಬಾಳೆ ಬೆಳೆ ಬೆಳೆದ ರೈತನ ಯಶೋಗಾಥೆಯಿದು. ಜಿಲ್ಲೆಯಲ್ಲಿ ಬಹುತೇಕ ನಾಲಾ ನೀರಾವರಿ ಆಶ್ರಿತ ಭೂಮಿಯೇ ಹೆಚ್ಚಿದ್ದು, ಬಹುತೇಕ ರೈತರು ಸಂಪ್ರದಾಯಿಕ ಬೆಳೆಗಳಾದ ಕಬ್ಬು, ಭತ್ತ ಬೆಳೆದು ಸರಿಯಾದ ಬೆಲೆ ಸಿಗದೇ ನಷ್ಟ ಹೊಂದಿದ್ದಾರೆ.

ಆದರೆ ಇದಕ್ಕೆ ಅಪವಾದ ಎಂಬಂತೆ ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದ ಮಾದಯ್ಯ ಅವರ ಪುತ್ರ ಸಿದ್ದರಾಜು 2.5ಎಕರೆ ಜಮೀನಿನಲ್ಲಿ 1600 ಏಲಕ್ಕಿ ಬಾಳೆ ಗಿಡ ಬೆಳದಿದ್ದಾರೆ. ರೋಗ ರಹಿತವಾಗಿರುವ ಈ ಬಾಳೆ ಗಿಡಗಳು ಕಟಾವಿನ ಹಂತ ತಲುಪಿದ್ದು, ಸಿದ್ದರಾಜು ₹ 3ಲಕ್ಷಕ್ಕೂ ಹೆಚ್ಚು ಲಾಭದ ನಿರೀಕ್ಷೆಯಲ್ಲಿದ್ದಾರೆ.

ಮೊದಲಿಗೆ ತಮ್ಮ ತಗ್ಗುಪ್ರದೇಶದಲ್ಲಿದ್ದ ಭೂಮಿಗೆ ಎರಡು ಅಡಿ ಕೆಂಪುಮಣ್ಣು ಹಾಕಿ ಎತ್ತರ ಮಾಡಿದ ಇವರು ಬಳಿಕ 9 x 8 ಅಡಿ ಅಂತರದಲ್ಲಿ ರೋಗರಹಿತ ಏಲಕ್ಕಿ ಬಾಳೆ ಕಂದುಗಳನ್ನು ಕೆಹೊನ್ನಲಗೆರೆ ಹಾಗೂ ಡಿ.ಹೊಸೂರು ಗ್ರಾಮಗಳಿಂದ ತಂದು ನೆಟ್ಟರು. ಬಳಿಕ ರೋಗ ಬಾರದಂತೆ ಬೇವಿನಹಿಂಡಿ, ರಸಸಾರ ಗೊಬ್ಬರ ಬಳಸಿದರು.

30ದಿನಗಳ ಬಳಿಕ ಕೊಟ್ಟಿಗೆ ಗೊಬ್ಬರದೊಂದಿಗೆ ಡಿಎಪಿ ರಸಗೊಬ್ಬರ ಬಳಕೆ ಮಾಡಿದರು. ಈತನ್ಮಧ್ಯೆ ಬಾಳೆ ನಡುವೆ ಗೆಡ್ಡೆಕೋಸು ಅಂತರಬೆಳೆಯಾಗಿ ಬೆಳೆದು ಅದರಲ್ಲೂ ₹ 25ಸಾವಿರಕ್ಕೂ ಹೆಚ್ಚು ಲಾಭಗಳಿಸಿದರು. ಬಾಳೆ ಗಿಡ ಗಾಳಿಗೆ ಮುರಿದು ಬೀಳದಂತೆ ಟೇಪಿಂಗ್‌ ಪದ್ಧತಿಯನ್ನು ಯಶಸ್ವಿಯಾಗಿ ಅಳವಡಿಸಲಾಗಿದ್ದು, ನಷ್ಟದ ಭೀತಿ ದೂರವಾಗಿದೆ.

‘ಕಳೆದ ವರ್ಷ 6 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದೆ. ಸಕಾಲಕ್ಕೆ ನಾಲೆಯಲ್ಲಿ ನೀರು ಬರಲಿಲ್ಲ. ಕಾರ್ಖಾನೆಯಿಂದ ಕಟಾವು ಒಪ್ಪಿಗೆ ಸಿಗದ ಕಾರಣ ₹ 3ಲಕ್ಷ ನಷ್ಟ ಅನುಭವಿಸಿದ್ದೆ. ಇದೀಗ 2.5ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದೇನೆ. ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಗೆ ಕೆಜಿಗೆ ಕನಿಷ್ಠ ₹ 60 – 80ರೂ ಸಿಗುವುದರಿಂದ ಯಾವುದೇ ಕಾರಣಕ್ಕೂ ನಷ್ಟದ ಮಾತಿಲ್ಲ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಸಿದ್ದರಾಜು.

ಸಿದ್ದರಾಜು ಅವರ ಭರ್ಜರಿ ಬಾಳೆ ಫಸಲು ಪ್ರಯೋಗ ಜಿಲ್ಲೆಯ ರೈತರ ಕಣ್ತೆರೆಸಬೇಕಿದೆ. ರೈತರು ಆತ್ಮಹತ್ಯೆಯಿಂದ ಮುಕ್ತರಾಗಲು ವಾಣಿಜ್ಯ ಬೆಳೆ ಪ್ರಯೋಗಕ್ಕಿಳಿಯಲು ಇವರ ಯತ್ನ ಮಾದರಿಯಾಗಿದೆ. ಹೆಚ್ಚಿನ ವಿವರಗಳಿಗೆ ಮೊ: 9740138285 ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT