ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ನೀರು ಕೊರತೆಯಾಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಜಿಟಿಡಿ ಸೂಚನೆ

Published 7 ಫೆಬ್ರುವರಿ 2024, 9:17 IST
Last Updated 7 ಫೆಬ್ರುವರಿ 2024, 9:17 IST
ಅಕ್ಷರ ಗಾತ್ರ

ಮೈಸೂರು: ‘ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಗಳಲ್ಲಿ ಜನ–ಜಾನುವಾರಿಗೆ ಕುಡಿಯುವ ನೀರು ಸರಬರಾಜಿನಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಬೇಸಿಗೆ ಬರಲಿದ್ದು, ನೀರು ಪೂರೈಕೆಗೆ ಸಂಬಂಧಿಸಿದಂತೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು’ ಎಂದು ನಿರ್ದೇಶನ ನೀಡಿದರು.

ಕ್ಷೇತ್ರದ ಗ್ರಾಮ ಪಂಚಾಯಿತಿವಾರು ಪ್ರಗತಿ ಪರಿಶೀಲನೆ ನಡೆಸಿದ ಶಾಸಕರು, ಕುಡಿಯುವ ನೀರಿನ ಪರಿಸ್ಥಿತಿ, ನರೇಗಾ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪಿಡಿಒಗಳಿಂದ ಮಾಹಿತಿ ಪಡೆದರು.

‘ಎಲ್ಲೆಲ್ಲಿಗೆ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳು ಅಗತ್ಯವಿದೆ, ಎಲ್ಲೆಲ್ಲಿ ಕಟ್ಟಡ ನಿರ್ಮಿಸಬೇಕು ಮತ್ತು ಹೆಚ್ಚುವರಿ ಕೊಠಡಿಗಳೆಷ್ಟು ಬೇಕಾಗಿದೆ ಎಂಬ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಅದರ ಪ್ರತಿಯನ್ನು ನನಗೂ ಕೊಡಬೇಕು. ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ನಾನು ಆದ್ಯತೆ ಮೇಲೆ ಮಂಜೂರು ಮಾಡಿಸಿಕೊಡುತ್ತೇನೆ. ಪ್ರಸ್ತಾವ ಕಳುಹಿಸಿ ಸುಮ್ಮನೆ ಕುಳಿತುಕೊಂಡರೆ ಪ್ರಯೋಜನ ಆಗುವುದಿಲ್ಲ. ನನ್ನ ಮೂಲಕ ಫಾಲೋಅಪ್‌ ಮಾಡಿಸಬೇಕು. ಕೂಡಲೇ ಪಟ್ಟಿ ಕೊಡಬೇಕು’ ಎಂದು ನಿರ್ದೇಶನ ನೀಡಿದರು.

ನಿರ್ವಹಣೆಗೆ ಕ್ರಮ ವಹಿಸಿ: ‘ಸರ್ಕಾರಿ ಶಾಲಾ ಶೌಚಾಲಯಗಳ ನಿರ್ವಹಣೆಯನ್ನು ವಾರದಲ್ಲಿ ‌ಒಮ್ಮೆಯಾದರೂ ಗ್ರಾಮ ಪಂಚಾಯಿತಿಯಿಂದ ಮಾಡಬೇಕು. ಶಿಕ್ಷಕರು ಈ ವಿಷಯದಲ್ಲಿ ಕ್ರಮ ವಹಿಸುತ್ತಿಲ್ಲ. ಮಕ್ಕಳ ಕೈಯಲ್ಲಿ ಮಾಡಿಸಿಬಿಡುತ್ತಾರೆ. ಇದು ದೊಡ್ಡ ಸುದ್ದಿಯಾಗುತ್ತದೆ. ದೂರುಗಳು ಬರುತ್ತದೆ’ ಎಂದರು.

‘ತಾಲ್ಲೂಕಿನ ಬೀರಿಹುಂಡಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ನಾಲ್ಕು ಕೊಳವೆಬಾವಿಯಲ್ಲಿನ ನೀರಿನ ಇಳುವರಿ ಕಡಿಮೆಯಾಗಿದೆ. ಆದ್ದರಿಂದ ಖಾಸಗಿಯವರ ಜೊತೆ ಒಪ್ಪಂದ ‌ಮಾಡಿಕೊಳ್ಳಲಾಗಿದೆ. ಅವರಿಗೆ ಸೇರಿದ ಕೊಳವೆಬಾವಿಗಳಿಂದ ನೀರು ಪಡೆಯಲಾಗುವುದು. 15 ದಿನಗಳಲ್ಲಿ ಪೈಪ್‌ಲೈನ್ ಮಾಡಿ ಪೂರೈಸಲು ಕ್ರಮ ವಹಿಸಲಾಗುವುದು’ ಎಂದು ಅಲ್ಲಿನ ಪಿಡಿಒ ತಿಳಿಸಿದರು.

‘ಶಾಲೆಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಶಿಕ್ಷಕರು ಆದ್ಯತೆ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲಾ ಕಾಂಪೌಂಡ್, ಆಟದ ಮೈದಾನ ಹಾಗೂ ಸ್ಮಶಾನ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಆಶ್ರಯ ಯೋಜನೆಗೆ ಸಂಬಂಧಿಸಿದಂತೆ ಆಯಾ ಗ್ರಾಮಗಳಲ್ಲೇ ಸರ್ಕಾರಿ ಜಾಗವನ್ನು ಕೂಡಲೇ ಗುರುತಿಸಬೇಕು’ ಎಂದು ದೇವೇಗೌಡ ಸೂಚಿಸಿದರು.

ಕೆಂಗಣ್ಣಿಗೆ ಗುರಿಯಾಗಬೇಕೇಕೆ? ಪಿಡಿಒಗಳಿಗೆ ಪಾಠ: ‘ಪಿಡಿಒಗಳು ಯಾರೋ ಕೆಲವು ನಾಯಕರನ್ನು ಹಚ್ಚಿಕೊಳ್ಳುವುದಲ್ಲ; ಅಲ್ಲಿನ ಜನರನ್ನು ಹಚ್ಚಿಕೊಳ್ಳಬೇಕು. ಕೆಲವರನ್ನು ಓಲೈಸಿ ಯಾರದೋ ಕೆಂಗಣ್ಣಿಗೆ ಗುರಿಯಾಗಬೇಕೇಕೆ?’ ಎಂದು ಪಾಠ ಮಾಡಿದರು.

‘ಪಿಡಿಒಗಳನ್ನು ನಾನೇನೂ ವರ್ಗಾವಣೆ ಮಾಡಿಸುತ್ತಿಲ್ಲ. ಸರ್ಕಾರವೇ ದಿಢೀರನೆ ವರ್ಗಾವಣೆ ಮಾಡುತ್ತಿದೆ. ನಮ್ಮ ಕ್ಷೇತ್ರದಲ್ಲಿರುವವರನ್ನು ಬೇರೆ ಕ್ಷೇತ್ರಕ್ಕೆ ವರ್ಗಾಯಿಸಲು ಅವಕಾಶ ಕೊಡಬಾರದು. ಅಧಿಕಾರಿಗಳು ಕೂಡ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಚೆನ್ನಾಗಿ ಕೆಲಸ ಮಾಡುತ್ತಿರುವವರನ್ನು ನಮ್ಮಲ್ಲೇ ಉಳಿಸಿಕೊಳ್ಳಬೇಕು’ ಎಂದರು.

‘ನಮ್ಮ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರಿನಂತೆ ಒಂದು ಗುಂಟೆಗೂ ಬಹಳ ಬೆಲೆ ಬಂದಿದೆ. ಹೀಗಾಗಿ ಯಾರೂ ಒಂದು ಗುಂಟೆಯನ್ನೂ ಕೊಡುವುದಕ್ಕೆ ಬಯಸುವುದಿಲ್ಲ. ಕಂದಾಯ ದಾಖಲೆಯೇ ಶಾಶ್ವತ ದಾಖಲೆ. ಅದನ್ನು ಪರಿಗಣಿಸಿ ಜಾಗ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಗಿರಿಧರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT