ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಲರಾಮ’ನ ಮೂರ್ತಿಗೆ ಶಿಲೆ ಸಿಕ್ಕ ಜಾಗದಲ್ಲಿ ಶ್ರೀರಾಮಮಂದಿರ: ಜಿ.ಟಿ. ದೇವೇಗೌಡ

Published 20 ಜನವರಿ 2024, 7:16 IST
Last Updated 20 ಜನವರಿ 2024, 7:16 IST
ಅಕ್ಷರ ಗಾತ್ರ

ಮೈಸೂರು: ‘ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ‍ಪ್ರತಿಷ್ಠಾಪನೆಗೊಳ್ಳಲಿರುವ ‘ಬಾಲರಾಮ’ನ ಮೂರ್ತಿಯನ್ನು ಕೆತ್ತಿರುವ ಕೃಷ್ಣಶಿಲೆಯು ಸಿಕ್ಕ ಜಾಗವಾದ ತಾಲ್ಲೂಕಿನ ಜಯಪುರ ಹೋಬಳಿಯ ಹಾರೋಹಳ್ಳಿಯ ದಲಿತ ಮುಖಂಡ ರಾಮದಾಸ್ ಅವರ ಹೊಲದಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದೆ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.

‘ಹಾರೋಹಳ್ಳಿ ಹಾಗೂ ಗುಜ್ಜೇಗೌಡನಪುರ ಗ್ರಾಮಸ್ಥರೊಂದಿಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಅಯೋಧ್ಯೆಯಲ್ಲಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುವ ದಿನವಾದ ಜ.22ರಂದು ಇಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಅಂದು ಬೆಳಿಗ್ಗೆ 6ರಿಂದಲೇ ಭಜನೆ ಮೊದಲಾದ ಕಾರ್ಯಕ್ರಮ ನಡೆಯಲಿದೆ. ಶ್ರೀರಾಮ ಭಕ್ತರು ಪಾಲ್ಗೊಳ್ಳಬಹುದು’ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ಶಿಲೆಯು ಆ ಗ್ರಾಮದ ಸ.ನಂ. 196, 197ಕ್ಕೆ ಸೇರಿದ ಜಾಗದಲ್ಲಿ ಸಿಕ್ಕಿದ್ದಾಗಿದೆ. ರಾಮದಾಸ್ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಅವರಿಗೆ ಸೇರಿದ ಜಮೀನು ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ನಮ್ಮೂರಿನ ಶಿಲೆಯು ಮೂರ್ತಿಯಾಗಿ ವಿಶ್ವಮಾನ್ಯತೆ ಪಡೆದಿರುವುದು ಹೆಮ್ಮೆ ತಂದಿದೆ’ ಎಂದು ತಿಳಿಸಿದರು.

‘ಶ್ರೀರಾಮ ಭಕ್ತರಾದ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಿದ್ದಾಗ ಚಾಮುಂಡೇಶ್ವರಿ ದೇಗುಲದಲ್ಲಿ ಅರ್ಧ ತಾಸು ಧ್ಯಾನ ಮಾಡಿದ್ದರು. ಆ ತಾಯಿಯ ಆಶೀರ್ವಾದದಿಂದಲೇ ರಾಮಲಲ್ಲಾ ಮೂರ್ತಿಗೆ ಬೇಕಾದ ಶಿಲೆಯು ಆಕೆಯ ಸನ್ನಿಧಿಯಲ್ಲೆ ಸಿಕ್ಕಿದೆ’ ಎಂದರು.

‘ಶಿಲೆ ದೊರೆತ ಜಾಗವು ಈಗ ಪುಣ್ಯಕ್ಷೇತ್ರವಾಗಿದೆ. ಆದ್ದರಿಂದ ಜನರಿಂದಲೇ ದೇಣಿಗೆ ಸಂಗ್ರಹಿಸಿ ಶ್ರೀರಾಮಮಂದಿರ ಕಟ್ಟಿಸಲಾಗುವುದು. ಪ್ರತಿಷ್ಠಾಪನೆಗೆ ಆಯ್ಕೆಯಾದ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್‌ ಯೋಗಿರಾಜ್‌ ಜ.27ರ ನಂತರ ಮೈಸೂರಿಗೆ ವಾಪಸಾಗಲಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಸನ್ಮಾನಿಸಿ, ಹಾರೋಹಳ್ಳಿ ಶ್ರೀರಾಮಮಂದಿರಕ್ಕೂ ಮೂರ್ತಿ ಕೆತ್ತಿ ಕೊಡುವಂತೆ ಕೋರಲಿದ್ದೇವೆ’ ಎಂದು ತಿಳಿಸಿದರು.

ಜಮೀನಿನ ಮಾಲೀಕ ರಾಮದಾಸ್ ಮಾತನಾಡಿ, ‘ನಮ್ಮ ಜಮೀನು ಸಮತಟ್ಟು ಮಾಡಿಸುವಾಗ, ಸುಮಾರು 10 ಅಡಿ ಆಳದಲ್ಲಿ ಸಿಕ್ಕ ಶಿಲೆಯಿಂದ ಬಾಲರಾಮನ ಮೂರ್ತಿ ಸಿದ್ಧವಾಗಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಭಾವಿಸಿದ್ದೇವೆ. ಅಲ್ಲಿ ನಮಗೆ 2 ಎಕರೆ 16 ಗುಂಟೆ ಜಮೀನಿದ್ದು, ಶ್ರೀರಾಮ ಮಂದಿರಕ್ಕೆ ಎಷ್ಟು ಜಾಗ ಬೇಕಾಗುತ್ತದೆಯೋ ಅಷ್ಟನ್ನು ಬಿಟ್ಟು ಕೊಡುತ್ತೇವೆ’ ಎಂದರು.

ಕಲ್ಲು ಗಣಿಗಾರಿಕೆ ಮಾಡುತ್ತಿರುವ ಶ್ರೀನಿವಾಸ್ ನಟರಾಜು ಮಾತನಾಡಿ, ‘ವಿಗ್ರಹಗಳಿಗೆ ಬೇಕಾದ ಕಲ್ಲು ಹುಡುಕಿ ಕೊಡುವ ಕೆಲಸವನ್ನು ಹಿಂದಿನಿಂದಲೂ ಮಾಡುತ್ತಿದ್ದೇವೆ. ಹಾರೋಹಳ್ಳಿಯಲ್ಲಿ ಜಮೀನು ಸಮತಟ್ಟು ಮಾಡುವಾಗ ಕಲ್ಲು ಕೀಳುವ ಕೆಲಸದಲ್ಲಿ ತೊಡಗಿದ್ದಾಗ ಸಿಕ್ಕಿದ್ದ ಶಿಲೆಯನ್ನು ಮೂರು ಭಾಗ ಮಾಡಿ ಇಟ್ಟಿದ್ದೆವು. ನಮಗೆ ಪರಿಚಯಸ್ಥರಾದ ಸುರೇಂದ್ರ ವಿಶ್ವಕರ್ಮ ಹಾಗೂ ಮಾನಯ್ಯ ಬಡಿಗೇರ್ ಅವರ ಮೂಲಕ ಅಯೋಧ್ಯೆಯ ಗೋಪಾಲ್‌ ಅವರು ಶಿಲೆ ಪಡೆದಿದ್ದರು’ ಎಂದು ಮಾಹಿತಿ ನೀಡಿದರು.

‘ಸುರೇಂದ್ರ ಅವರು ಬಂದು ವೀಕ್ಷಿಸಿದ ನಂತರ 10 ಅಡಿ ಆರಿಂಚು ಉದ್ದದ ಶಿಲೆಯನ್ನು ಅಯೋಧ್ಯೆಗೆ ಕಳುಹಿಸಿಕೊಟ್ಟಿದ್ದೆವು. 7 ಅಡಿ ಉದ್ದದ ಕಲ್ಲನ್ನು ಸೀತೆಯ ಮೂರ್ತಿಗೆಂದು ಕಳುಹಿಸಿದ್ದೆವು. ಅಯೋಧ್ಯೆಯಿಂದ ಬಂದಿದ್ದ ಅರ್ಚಕರೊಬ್ಬರು ಇಲ್ಲಿಂದ ಸ್ವಲ್ಪ ಮಣ್ಣನ್ನು ಒಯ್ದಿದ್ದರು. ಭರತ, ಲಕ್ಷ್ಮಣ ಹಾಗೂ ಶತ್ರುಜ್ಞ ಮೂರ್ತಿಗಾಗಿಯೂ ಕಲ್ಲು ರವಾನಿಸಿದ್ದೇವೆ. ಇದೆಲ್ಲವೂ ಪುಣ್ಯ ಹಾಗೂ ದೇವರು ಕೊಟ್ಟ ಅವಕಾಶ ಎಂದು ಭಾವಿಸಿದ್ದೇವೆ’ ಎಂದರು.

‘ಅಯೋಧ್ಯೆಗೆ ನಮ್ಮನ್ನು ಯಾರೂ ಆಹ್ವಾನಿಸಿಲ್ಲ. ನಾವು ನೀಡಿದ ಶಿಲೆಯೇ ಮೂರ್ತಿ ಆಗಿರುವುದರಿಂದ ಅದನ್ನು ನೋಡಬೇಕು ಎಂಬ ಆಸೆ ಇದೆ’ ಎಂದು ರಾಮದಾಸ್ ಹಾಗೂ ಶ್ರೀನಿವಾಸ್ ಹೇಳಿದರು.

ಪ್ರತಿಕ್ರಿಯಿಸಿದ ಜಿಟಿಡಿ, ‘ಶಿಲೆಯು ಅಯೋಧ್ಯೆಗೆ ಹೋಗಲು ಕಾರಣವಾದವರು ಹಾಗೂ ಜಮೀನಿನ ಮಾಲೀಕರನ್ನು ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT