ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಕೊಡಿ; ಚುನಾವಣೆಗೆ ಸ್ಪರ್ಧಿಸೋಣ: ಸಿದ್ದರಾಮಯ್ಯಗೆ ಜಿ.ಟಿ.ದೇವೇಗೌಡ ಸವಾಲು

Published 3 ಏಪ್ರಿಲ್ 2024, 5:12 IST
Last Updated 3 ಏಪ್ರಿಲ್ 2024, 5:12 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಗುಡುಗಿದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ಬಹಿರಂಗ ಸವಾಲನ್ನೂ ಹಾಕಿದ್ದಾರೆ.

'ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಏನು ಕಡಿದು ಕಟ್ಟೆ ಹಾಕಿದ್ದಾರೆ?' ಎಂಬ ಮುಖ್ಯಮಂತ್ರಿ ಹೇಳಿಕೆಗೆ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದ ಜಿಟಿಡಿ, 'ನೀವು ವರುಣ ಕ್ಷೇತ್ರಕ್ಕೆ ರಾಜೀನಾಮೆ ಕೊಡಿ. ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ರಾಜೀನಾಮೆ ಕೊಡ್ತಿನಿ. ಇಬ್ಬರೂ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕಿಳಿಯೋಣ. ಯಾರು ಗೆಲುತ್ತಾರೆ ನೋಡೋಣ ಬನ್ನಿ' ಎಂದು ಸವಾಲು ಹಾಕಿದರು.

ಅಭಿವೃದ್ಧಿ ಎಂದರೆ ಏನು ಎಂಬುದೇ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಅಭಿವೃದ್ಧಿ ಮಾಡದೇ ರಾಜಕೀಯದಲ್ಲಿ ಬೆಳೆದಿದ್ದಾರೆ ಎಂದರೆ ಅದು ಸಿದ್ದರಾಮಯ್ಯ ಮಾತ್ರ' ಎಂದು ಟೀಕಿಸಿದರು.

'ಮುಖ್ಯಮಂತ್ರಿಯು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಕಾರ್ಯದ ಶ್ವೇತಪತ್ರ ಹೊರಡಿಸಲಿ' ಎಂದರು.

'ಚಾಮುಂಡೇಶ್ವರಿ ಉಪ ಉಪ ಚುನಾವಣೆ ವೇಳೆ ನಾನು ಜೆಡಿಎಸ್ ಪರ ಪ್ರಚಾರಕ್ಕೆ ಹೋಗಲಿಲ್ಲ. ಅದಕ್ಕಾಗಿ ಆಗ ನೀವು ಗೆದ್ರಿ. ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಎಷ್ಟು ಸಲ ಪ್ರಯತ್ನ ಪಟ್ರಿ? ನನ್ನನ್ನು ಕಾಯುವುದಕ್ಕೆ ದೈವ ಇಲ್ವಾ, ಧರ್ಮ ಇಲ್ವಾ? ಅದ್ಹೇಗೆ ಸೋಲಿಸ್ತೀರಿ ನೀವು ನನ್ನ?' ಎಂದು ಆಕ್ರೋಶದಿಂದ ಕೇಳಿದರು.

'ನೀವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಮೇಲೆ ಮುಗಿದು ಹೋಯಿತು. ಯಾಕೆ ಪದೇ ಪದೇ ಹೀಗೆ ನನ್ನ ಬಗ್ಗೆ ಮಾತನಾಡುತ್ತೀರಿ? ಯಾವಾಗಲೂ ಮುಖ್ಯಮಂತ್ರಿಯಾಗಿಯೇ ಇರುತ್ತೇನೆ ಎಂದು ತಿಳಿದಿದ್ದೀರಾ' ಎಂದು ಪ್ರಶ್ನಿಸಿದರು.

'ಎಷ್ಟು ದಿನ ಮುಖ್ಯಮಂತ್ರಿ ಆಗಿರ್ತಿರಿ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೀರಾ ನೋಡೋಣಾ. ನಮಗೆ ನೋವು ಕೊಡುತ್ತಲೇ ಇದ್ದೀರಿ. ಪದೇ ಪದೇ ಬಂದು ಯಾಕೆ ರೀತಿ ಚುಚ್ಚು ಮಾತುಗಳನ್ನು ಆಡುತ್ತೀರಿ? ಮೌನವಾಗಿ, ಮರ್ಯಾದೆಯಿಂದ ಇರಿ.
35 ಸಾವಿರ ಮತಗಳ ಅಂತರದಿಂದ ನಿಮ್ಮನ್ನು ಸೋಲಿಸಿದ್ದಾಗಲೂ ನಿಮ್ಮ ಬಗ್ಗೆ ನಾನು ಅಗೌರವದಿಂದ ಮಾತಾಡಿಲ್ಲ' ಎಂದರು.

'ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಬಿಇಒ, ತಹಶೀಲ್ದಾರ್ ಮೊದಲಾದವರೆಲ್ಲರೂ ಮುಖ್ಯಮಂತ್ರಿ ಬಂಧುಗಳೇ. ಹೆಸರಿಗೆ ನಾನು ಶಾಸಕ. ಚಾಮುಂಡೇಶ್ವರಿಯಲ್ಲಿ ಎಲ್ಲಾ ನಿಮ್ಮದೇ. ಗುತ್ತಿಗೆದಾರರು ಕಮೀಷನ್ ಅನ್ನು ನಿಮ್ಮ ಪುತ್ರನಿಗೆ ಕೊಡಬೇಕು. ಯತೀಂದ್ರ ಸಿದ್ದರಾಮಯ್ಯ ನಮ್ಮ‌ ಕ್ಷೇತ್ರದಲ್ಲಿ ಕಮಿಷನ್ ಪಡೆಯುತ್ತಿದ್ದಾರೆ. 60% ಕಮಿಷನ್ ಸರ್ಕಾರ ನಿಮ್ಮದು' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ವರುಣದಲ್ಲಿ ನೀವು ಬಿಜೆಪಿಯ ದೊಡ್ಡವರ ಬೆಂಬಲವನ್ನು ಪಡೆದು ಗೆದ್ದಿಲ್ಲವೇ ಹೇಳಿ' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT