ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನಕೇಶವ ದೇಗುಲಕ್ಕೆ ಜೀರ್ಣೋದ್ಧಾರ ಭಾಗ್ಯ

ಪಿರಿಯಾಪಟ್ಟಣ: ಹೊಯ್ಸಳರ ಕಾಲದ ದೇವಾಲಯಕ್ಕೆ ಪ್ರಚಾರ ಕೊರತೆ; 6 ಅಡಿ ಎತ್ತರದ ಚೆನ್ನಕೇಶವ ಮೂರ್ತಿ
Last Updated 3 ಫೆಬ್ರುವರಿ 2022, 4:30 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಇಲ್ಲಿನ ಹೊಯ್ಸಳರ ಕಾಲದ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಾಲ ಕೂಡಿ ಬಂದಿದ್ದು, ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ.

ಕ್ರಿ.ಶ. 1135ರಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನ ನಿರ್ಮಿಸಿರುವ ಈ ದೇಗುಲದ ಜೀರ್ಣೋದ್ಧಾರಕ್ಕೆ ಪ್ರಾಚ್ಯವಸ್ತು, ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯು ₹ 1.5 ಕೋಟಿ ಬಿಡುಗಡೆ ಯಾಗಿದ್ದು, ಶಾಸಕ ಕೆ. ಮಹದೇವ್ ಇತ್ತೀಚೆಗೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಪಟ್ಟಣದ ಒಳಕೋಟೆ ಬಡಾವಣೆಯಲ್ಲಿ ಇರುವ ಈ ದೇವಾಲಯವನ್ನು ಕೇಶವನಾಥ ಮಂದಿರ, ಚೆನ್ನಿಗರಾಯ ದೇವಸ್ಥಾನ, ಅಭಯ ನಾರಾಯಣ ದೆವಾಲಯ, ಮಹಾವಿಷ್ಣು ದೇವಸ್ಥಾನ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ದೇವಾಲಯದ ಗರ್ಭಗುಡಿ, ಸುಕನಾಸಿ, ನವರಂಗ, ವಸಂತ ಮಂಟಪ, ಧ್ವಜ ಕಿಂಡಿ, ಸುದರ್ಶನ ಹೋಮ ಕುಂಡ, ಗರುಡಗಂಭ ಗಮನ ಸೆಳೆಯುತ್ತವೆ.

ದೇವಾಲಯವು ಸಂಪೂರ್ಣ ಗ್ರಾನೈಟ್ ಶಿಲೆಯಿಂದ ನಿರ್ಮಾಣ ಗೊಂಡಿದ್ದು, ಗರ್ಭಗುಡಿ ಮತ್ತು ಸುಕನಾಸಿಯ ಚಾವಣಿ ಹೊರತಾಗಿ ಬೇರೆಯಲ್ಲಿಯೂ ಗಾರೆಯನ್ನು ಬಳಸಿಲ್ಲ. ದೇವಾಲಯವನ್ನು ಶಿಲ್ಪಿ ಮಯೊಜ ಕಟ್ಟಿದ ಎಂಬುದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ.

ಗರ್ಭಗುಡಿಯ ಒಳಭಾಗದಲ್ಲಿ ಸುಮಾರು 6 ಅಡಿ ಎತ್ತರದ ಚೆನ್ನಕೇಶವನ ಸುಂದರ ಮೂರ್ತಿ ಇದ್ದು, ಅಂತರಾಳದ ದ್ವಾರ ಮಂಟಪವು ಮನೋಹರವಾಗಿದೆ. ಪ್ರತಿ ವರ್ಷ ಯುಗಾದಿ ದಿನದಂದು ಸೂರ್ಯನ ಕಿರಣಗಳು ಮೂರ್ತಿಯ ಪಾದಗಳನ್ನು ಸ್ಪರ್ಶಿಸುತ್ತವೆ. ಕಳೆದ ಹತ್ತು ವರ್ಷಗಳಿಂದ ದೇವಾಲಯದ ಅರ್ಚಕ ನಾಗರಾಜ್ ಇಲ್ಲಿ ನಿತ್ಯ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಈ ದೇವಾಲಯಕ್ಕೆ ಭಕ್ತರ ಸಂಖ್ಯೆ ವಿರಳವಾಗಿದ್ದು, ಪ್ರಚಾರದ ಕೊರತೆಯೇ ಮುಖ್ಯ ಕಾರಣವಾಗಿದೆ.

‘ಐತಿಹಾಸಿಕ ಹಿನ್ನೆಲೆ ಹೊಂದಿರುವ ಚೆನ್ನಕೇಶವ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಆರಂಭವಾಗಿರುವುದು ಸ್ವಾಗತಾರ್ಹ. ದೇವಾಲಯದ ಸುತ್ತಮುತ್ತ ವಾಸವಿರುವ ಒಳಕೋಟೆ ಬಡಾವಣೆಯ ಮೂಲ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾಮಗಾರಿ ನಡೆಯಬೇಕು’ ಎಂದು ಪುರಸಭೆ ಅಧ್ಯಕ್ಷ ಮಂಜುನಾಥ ಸಿಂಗ್ ಒತ್ತಾಯಿಸಿದರು.

‘ಮುಜರಾಯಿ ಇಲಾಖೆಗೆ ಸೇರಿಸಿ’

‘ಚೆನ್ನಕೇಶವ ದೇವಾಲಯವು ಪ್ರಾಚ್ಯವಸ್ತು, ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ವ್ಯಾಪ್ತಿಯಲ್ಲಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ತರಬೇಕು’ ಎಂದು ಸ್ಥಳೀಯ ಮುಖಂಡ ಪಿ.ಟಿ. ವೇಣುಗೋಪಾಲ್ ಹೇಳಿದರು.

‘ದೇವಾಲಯದ ಸಮೀಪವಿರುವ ಮನೆಗಳನ್ನು ನಿಯಮದ ಪ್ರಕಾರ ತೆರವುಗೊಳಿಸಬೇಕು. ಆದರೆ, ಇದುವರೆಗೂ ತೆರವಾಗಿಲ್ಲ. 10 ವರ್ಷಗಳ ಹಿಂದೆ ತೆರವುಗೊಳಿಸು ವಂತೆ ಕೆಲವರು ಸರ್ಕಾರಕ್ಕೆ ಮನವಿ ಸಲ್ಲಿದ್ದರು. ಇದನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ಪಟ್ಟಣ ಬಂದ್‌ ನಡೆಸಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT