ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ: ಬುಟ್ಟಿ ಹೆಣೆಯುವವರ ಬದುಕು ಬೀದಿಗೆ

ಹಂದಿಗುಡ್ಡ ಕಾವಲು ಹಾಡಿ ಜನರ ಸ್ಥಿತಿ ಅತಂತ್ರ; ಬಿದಿರು ಉತ್ಪನ್ನಕ್ಕೆ ಬೇಡಿಕೆ ಕುಸಿತ
Last Updated 12 ಡಿಸೆಂಬರ್ 2021, 17:58 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕಿನ ಬುಡಕಟ್ಟು ಜನಾಂಗದ ಹಂದಿಗುಡ್ಡ ಕಾವಲು ಹಾಡಿಯಲ್ಲಿ ಬಿದಿರು ಬುಟ್ಟಿ ಹೆಣೆದು ಜೀವನದ ಬಂಡಿ ಸಾಗಿಸುತ್ತಿರುವವರ ಉತ್ಪನ್ನಗಳಿಗೆ ಬೇಡಿಕೆ ಕುಸಿಯುತ್ತಿರುವುದರಿಂದ ಅವರ ಸ್ಥಿತಿ ಅತಂತ್ರವಾಗಿದ್ದು, ಕುಲಕಸುಬನ್ನು ತೊರೆಯುವ ಅನಿವಾರ್ಯ ಸೃಷ್ಟಿಯಾಗಿದೆ.

ಈ ಹಾಡಿಗಳಲ್ಲಿ 25–30ಕ್ಕೂ ಹೆಚ್ಚು ಕುಟುಂಬಗಳು ಸುಮಾರು 40 ವರ್ಷಗಳಿಂದ ಬಿದಿರಿನಿಂದ ಬುಟ್ಟಿ, ಪಂಜರ, ಬೀಸಣಿಗೆ, ಮಂಕರಿಗಳನ್ನು ತಯಾರಿಸುತ್ತಿದ್ದು, ಅವುಗಳನ್ನು ಸಂತೆಗಳಲ್ಲಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಬಿದಿರು ಉತ್ಪನ್ನಗಳಿಗೆ ಪರ್ಯಾಯವಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗಿದ್ದು, ಬಿದಿರು ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲವಾಗಿದೆ. ಇದರಿಂದ ಸುಮಾರು ಕುಟುಂಬಗಳ ಆದಾಯಕ್ಕೆ ಕತ್ತರಿ ಬಿದ್ದಿದೆ.

ಇತ್ತೀಚಿನ ದಿನಗಳಲ್ಲಿ ಬಿದಿರು ಸಹ ಸಿಗುತ್ತಿಲ್ಲ. ಈ ಹಿಂದೆ ಅರಣ್ಯ ಇಲಾಖೆ ಬಿದಿರು ಪೂರೈಕೆ ಮಾಡುತ್ತಿತ್ತು. ಈಚೆಗೆ ಪೂರೈಕೆ ಸ್ಥಗಿತಗೊಳಿಸಿದ್ದು, ಗಿರಿಜನರು ದುಪ್ಪಟ್ಟು ಹಣ ಕೊಟ್ಟು ಬಿದಿರನ್ನು ತರಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಇದರೊಂದಿಗೆ ಗಿರಿಜನರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಈಗ ವೃತ್ತಿ ಮಾಡುತ್ತಿರುವವರು 55 ವರ್ಷ ಮೇಲ್ಪಟ್ಟವರು ಮಾತ್ರ. ಅವರೂ ಸಹ ದಿನದ ಖರ್ಚಿಗಾಗಿ ಈ ವೃತ್ತಿ ಮಾಡುತ್ತಿದ್ದಾರೆ. ಆದರೆ, ಬೇಡಿಕೆಯೇ ಇಲ್ಲ.

ಈ ಕುಟುಂಬಗಳ ಯುವಕರು ಕುಲಕಸುಬಾದ ಬುಟ್ಟಿ ಹೆಣೆಯುವುದನ್ನು ಬಿಟ್ಟು, ಕಾಫಿ ತೋಟದಲ್ಲಿ ಕೂಲಿ ಕೆಲಸಕ್ಕೆ ಕೊಡಗು, ಕುಶಾಲನಗರ ಮಡಿಕೇರಿ ಸೇರಿದಂತೆ ಇತರೆಡೆ ತೆರಳುತ್ತಿದ್ದಾರೆ. ಈಗ 4–5 ಕುಟುಂಬಗಳು ಮಾತ್ರ ಆ ಕಾಯಕ ಮಾಡುತ್ತಿವೆ. ದಿನಕ್ಕೆ ₹300ರಿಂದ ₹400 ಕೂಲಿ ಸಂಪಾದನೆ ಮಾಡಿ ತಮ್ಮ ಕುಟುಂಬವನ್ನು ಸಾಕುತ್ತಿದ್ದಾರೆ. ಈ ಹಿಂದೆ ಅರಣ್ಯ ಇಲಾಖೆಯಿಂದ ಉಚಿತವಾಗಿ ಬಿದಿರನ್ನು ವಿತರಿಸಲಾಗುತ್ತಿತ್ತು. ಆದರೆ, ಈಗ‌ ಬಿದಿರು ಪೂರೈಸುತ್ತಿಲ್ಲ. ಬಿದಿರು ಸಿಗದೆ, ಬೇರೆ ಕೆಲಸವೂ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ.

ಇಲ್ಲಿ ತಯಾರಿಸುವ ಬಿದಿರಿನ ವಸ್ತುಗಳನ್ನು ಪಿರಿಯಾಪಟ್ಟಣ, ಕುಶಾಲನಗರ, ಕೊಣನೂರು, ಬೆಟ್ಟದಪುರ ಸಂತೆಗಳಲ್ಲಿ ಮಾರಾಟ ಮಾಡುವ ಗಿರಿಜನರು ಮಾರುಕಟ್ಟೆ ಕೊರತೆ ಎದುರಿಸುತ್ತಿದ್ದಾರೆ.

ಬುಟ್ಟಿ ಬೇಕಾದವರು ಮುನಿಯಪ್ಪ ಅವರ ಮೊ.ಸಂ. 7899094316 ಸಂಪರ್ಕಿಸಬಹುದು.

ಪ್ರೋತ್ಸಾಹಧನಕ್ಕೆ ಮನವಿ
ಬುಟ್ಟಿ ಹೆಣೆಯುವ ಕಾಯಕವನ್ನು ಅವಲಂಬಿಸಿರುವ ಕುಟುಂಬಗಳಿಗೆ ಸರ್ಕಾರವು ಪ್ರೋತ್ಸಾಹಧನ ನೀಡಬೇಕು. ಬಡ್ಡಿರಹಿತ ಸಾಲ ಸೌಲಭ್ಯ ನೀಡಬೇಕು. ಪ್ರತಿ ವರ್ಷ ಕನಿಷ್ಠ ₹50 ಸಾವಿರ ಪ್ರೋತ್ಸಾಹಧನ ನೀಡಬೇಕು ಎಂದು ಇಲ್ಲಿನ ಗಿರಿಜನ ಮುಖಂಡ ಮುನಿಯಪ್ಪ ಆಗ್ರಹಿಸಿದರು.

ಸರ್ಕಾರವು ಯಾವುದೇ ಸಾಲ– ಸೌಲಭ್ಯ ಕೊಡುತ್ತಿಲ್ಲ. ಸಂಸಾರ, ಮಕ್ಕಳ ವಿದ್ಯಾಭ್ಯಾಸಕ್ಕೆ ಕಷ್ಟವಾಗಿದೆ. ಬಿದಿರು ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಬೇಕು. ನಮ್ಮ ಜೀವನ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಬಿದಿರನ್ನು ಉಚಿತವಾಗಿ ಪೂರೈಸಬೇಕು ಎನ್ನುತ್ತಾರೆ ಗಿರಿಜಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT