ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರೋಹಳ್ಳಿ: ಸರ್ಕಾರಿ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ಯಾವಾಗ?

ಗೋವಿಂದರಾಜು ವಿ.
Published 1 ಮಾರ್ಚ್ 2024, 5:34 IST
Last Updated 1 ಮಾರ್ಚ್ 2024, 5:34 IST
ಅಕ್ಷರ ಗಾತ್ರ

ಹಾರೋಹಳ್ಳಿ: ಪಟ್ಟಣದಲ್ಲಿರುವ ಸರ್ಕಾರಿ ಐಟಿಐ ಕಾಲೇಜು 15 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಇದುವರೆಗೆ ವಿದ್ಯಾರ್ಥಿಗಳಿಗೆ ಸ್ವಂತ ಕಟ್ಟಡದ ಭಾಗ್ಯ ದೊರೆತಿಲ್ಲ.

ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಕಾಲೇಜಿನ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಐದು ವರ್ಷಗಳ ಹಿಂದೆ ಎರಡು ಎಕರೆ ಜಾಗವನ್ನು ನಿಗದಿಪಡಿಸಲಾಗಿದೆ. ಆದರೂ ಕಟ್ಟಡ ನಿರ್ಮಾಣ ಕಾಮಗಾರಿಗೆ ಇನ್ನೂ ಚಾಲನೆಯೇ ದೊರೆತಿಲ್ಲ.

ಬಡ ವಿದ್ಯಾರ್ಥಿಗಳು ತಾಂತ್ರಿಕ ತರಬೇತಿ ಪಡೆದು ಸರ್ಕಾರಿ, ಖಾಸಗಿ ಇಲ್ಲವೇ ಸ್ವಂತ ಉದ್ಯೋಗ ಅವಕಾಶ ಹೊಂದಲಿ ಎನ್ನುವ ಸದಾಸೆಯಿಂದ ಸರ್ಕಾರವು ತಾಲ್ಲೂಕಿಗೆ ಕೈಗಾರಿಕಾ ತರಬೇತಿ ಕೇಂದ್ರ ನೀಡಿದೆ. ಆದರೆ, ಕೇಂದ್ರಕ್ಕೆ ಇರಲೇಬೇಕಾದ ಮೂಲಸೌಕರ್ಯಗಳನ್ನು ಮಾತ್ರ ಕಲ್ಪಿಸಿಲ್ಲ.

ಅನುದಾನ ಬಿಡುಗಡೆ, ಆರಂಭವಾಗದ ಕಾಮಗಾರಿ: ಸರ್ಕಾರವೇ ಹಾರೋಹಳ್ಳಿಯಲ್ಲಿ  ಐದು ವರ್ಷಗಳ ಹಿಂದೆ ಸರ್ಕಾರಿ ಐಟಿಐ ಕಾಲೇಜಿನ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಎರಡು ಎಕರೆ ಜಮೀನು ಗುರುತಿಸಿದೆ. ಅಲ್ಲದೇ ಶೇ 50ರಷ್ಟು ಅಂದರೆ ₹ 3 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಿದೆ. ಆದರೂ ಸಂಬಂಧಿಸಿದವರು ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆಯನ್ನೇ ನೀಡಿಲ್ಲ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ₹ 65 ಸಾವಿರ ನಷ್ಟವಾಗುತ್ತಿದೆ. 15 ವರ್ಷಗಳಿಂದ ಕಟ್ಟಡಕ್ಕೆ ₹ 65 ಸಾವಿರ ಬಾಡಿಗೆ ರೂಪದಲ್ಲಿ ಕಟ್ಟಲಾಗುತ್ತಿದೆ. 

ಮೂಲಸೌಕರ್ಯಗಳಿಲ್ಲ, ವಿದ್ಯಾರ್ಥಿಗಳ ಪರದಾಟ: 

ಇಷ್ಟು ಮೊತ್ತದ ಬಾಡಿಗೆ ಹಣವನ್ನು ಪಾವತಿಸುತ್ತಿದ್ದರೂ, ಈ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ಸೌಕರ್ಯಗಳಾದ ಸೂಕ್ತ ಕೊಠಡಿ, ಶುದ್ಧ ಕುಡಿಯುವ ನೀರು, ಶೌಚಾಲಯ ಇತ್ಯಾದಿ ಸೌಕರ್ಯಗಳಿಲ್ಲ. ಈ ಬಗ್ಗೆ ಕಟ್ಟಡದ ಮಾಲೀಕರೂ ಗಮನಹರಿಸುತ್ತಿಲ್ಲ ಎಂಬುದು ಆರೋಪವಾಗಿದೆ. 

ಕಟ್ಟಡದೊಳಗಿರುವ ಕೊಠಡಿಗಳು ಗುಣಮಟ್ಟದಿಂದ ಕೂಡಿಲ್ಲ. ಗೋಡೆ ಗಟ್ಟಿಯಾಗಿಲ್ಲ. ಯಾವಾಗ ಗೋಡೆ ಬೀಳುವುದೋ ಎಂಬ ಅತಂಕದಲ್ಲಿಯೇ ಉಪನ್ಯಾಸಕರು ಪಾಠ ಮಾಡಬೇಕು. ವಿದ್ಯಾರ್ಥಿಗಳು ಜೀವ ಭಯದಲ್ಲೇ ಪಾಠ ಕೇಳುವಂಥ ಪರಿಸ್ಥಿತಿ ಉಂಟಾಗಿದೆ. 

ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಕಾಲೇಜಿನ ಕೊಠಡಿಯ ಹಿಂದಿನ ಆವರಣವೇ ಬಯಲು ಶೌಚಾಲಯವಾಗಿದೆ. ಕಾಲೇಜಿನ ಅವ್ಯವಸ್ಥೆಯಿಂದ ಕಾಲೇಜಿಗೆ ವಿದ್ಯಾರ್ಥಿಗಳು ದಾಖಲಾಗುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೂ ಕೆಲವೇ ದಿನಗಳಲ್ಲಿ ಕಾಲೇಜು ಮುಚ್ಚಿ ಹೋಗಲಿದೆ ಎಂಬ ಆತಂಕವೂ ಎದುರಾಗಿದೆ. ಇದರಿಂದಾಗಿ ತಾಲ್ಲೂಕಿನ ವಿದ್ಯಾರ್ಥಿಗಳು ಐಟಿಐ ಕಲಿಕೆಯಿಂದ ವಂಚಿತರಾಗುವ ಸಾಧ್ಯತೆ ಇದೆ. 

ಉಪನ್ಯಾಸಕರ ಕೊರತೆ: ಹಾರೋಹಳ್ಳಿ ಐಟಿಐ ಕಾಲೇಜಿನಲ್ಲಿ ಒಟ್ಟು 8 ಕಾಯಂ ಉಪನ್ಯಾಸಕರಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇನ್ನು ನಾಲ್ವರು  ಉಪನ್ಯಾಸಕರ ಕೊರತೆ ಇದೆ. ಇದರಿಂದಾಗಿ ಕಾಯಂ ಉಪನ್ಯಾಸಕರ ಮೇಲೆ ಇತರ ನಾಲ್ವರು ಉಪನ್ಯಾಸಕರ ಬೋಧನೆಯ ಒತ್ತಡವೂ ಹೆಚ್ಚಿದೆ. ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ.

ಕಲಿಕಾ ಉಪಕರಣಗಳಿಲ್ಲ: ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸರಿಯಾದ ಟೂಲ್ಸ್ ಕಲಿಕಾ ಉಪಕರಣಗಳೂ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸೂಕ್ತವಾದ ತರಬೇತಿಯೂ ದೊರೆಯುತ್ತಿಲ್ಲ. 

ತರಬೇತಿ ಯಂತ್ರಗಳಿಗೆ ಭದ್ರತೆಯಿಲ್ಲ: ತರಬೇತಿ ನೀಡಲು ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರಗಳಿದ್ದು ಅವುಗಳಿಗೆ ಸರಿಯಾದ ರೀತಿಯ ಭದ್ರತೆಯಿಲ್ಲ ಯಾವುದೇ ಸಿಸಿ ಕ್ಯಾಮೆರಾ ಕೂಡಾ ಅಳವಡಿಸಿಲ್ಲ.

ಒಟ್ಟಿನಲ್ಲಿ ಸಂಬಂಧಪಟ್ಟ ಎಂಜಿನಿಯರ್‌ಗಳು, ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲರ ಇಚ್ಛಾಶಕ್ತಿ ಕೊರತೆಯಿಂದ ಕಾಲೇಜಿಗೆ ಸ್ವಂತ ಕಟ್ಟಡ ಸೌಕರ್ಯವು ಕೈತಪ್ಪುವ ಭೀತಿ ಎದುರಾಗಿದೆ.

ಕಿರಿದಾದ ತರಗತಿ ಕೊಠಡಿ
ಕಿರಿದಾದ ತರಗತಿ ಕೊಠಡಿ
ಹೀಗಿದೆ ನೋಡಿ ಕಾಲೇಜಿನ ಶೌಚಾಲಯದ ಸ್ಥಿತಿ
ಹೀಗಿದೆ ನೋಡಿ ಕಾಲೇಜಿನ ಶೌಚಾಲಯದ ಸ್ಥಿತಿ
ಬಾಡಿಗೆ ಕಟ್ಟಡದ ಕೊಠಡಿಗಳು
ಬಾಡಿಗೆ ಕಟ್ಟಡದ ಕೊಠಡಿಗಳು
ನಾನು ಕಾಲೇಜಿಗೆ ಬಂದು ಆರು ತಿಂಗಳಾಗಿದೆ. ಸ್ವಂತ ಕಟ್ಟಡ ಕಾಮಗಾರಿಗೆ ಸಂಬಂಧಪಟ್ಟ ಎಂಜಿನಿಯರ್‌ಗೆ ಸಂಪರ್ಕಿಸಿದ್ದೇನೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ.
ರಾಜೇಶ್ ಪ್ರಾಂಶುಪಾಲ ಸರ್ಕಾರಿ ಐಟಿಐ ಕಾಲೇಜು ಹಾರೋಹಳ್ಳಿ
ಹಾರೋಹಳ್ಳಿ ಹೊಸ ತಾಲ್ಲೂಕು. ಆದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಬಡಮಕ್ಕಳು ಓದುವ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಬೇಕು. ಸಂಬಂಧಪಟ್ಟವರು ಈನಿಟ್ಟಿನಲ್ಲಿ ಕಾರ್ಯತತ್ಪರವಾಗಲಿ
ನಾಗರಾಜು ಸಾಮಾಜಿಕ ಕಾರ್ಯಕರ್ತ ಹಾರೋಹಳ್ಳಿ
ಪ್ರತಿತಿಂಗಳೂ ಬಾಡಿಗೆ ಕಟ್ಟಡಕ್ಕಾಗಿ ಅರ್ಧಲಕ್ಷಕ್ಕೂ ಹೆಚ್ಚಿನ ಮೊತ್ತದ ಹಣ ವ್ಯಯಿಸಲಾಗುತ್ತಿದೆ. 15 ವರ್ಷ ಕಟ್ಟಿರುವ ಬಾಡಿಗೆ ಮೊತ್ತದಲ್ಲಿಯೇ ಸ್ವಂತ ಕಟ್ಟಡ ಕಟ್ಟಬಹುದಿತ್ತು. ಈಗಲಾದರೂ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಿ. 
ಕೃಷ್ಣಮೂರ್ತಿ ಸ್ಥಳೀಯ ನಿವಾಸಿ
ಕಾಲೇಜಿಗೆ ಬೇಕು ಸುಸಜ್ಜಿತ ಸ್ವಂತ ಕಟ್ಟಡ ಐದು ವರ್ಷಗಳ ಹಿಂದೆ ಇದೇ ಕಾಲೇಜಿನ ಬಾಡಿಗೆ ಕಟ್ಟಡದಲ್ಲಿಯೇ ಓದಿ ನನ್ನ ವ್ಯಾಸಂಗ ಪೂರ್ಣಗೊಳಿಸಿದೆ. ಬಹು ಹಿಂದಿನಿಂದಲೂ ಕಾಲೇಜಿನಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಕುಡಿಯುವ ನೀರು ಮತ್ತು ಶೌಚಾಲಯದ ಸೌಲಭ್ಯ ಕೊರತೆಯಿದೆ.ಕನಿಷ್ಠ  ಈಗಿನ ವಿದ್ಯಾರ್ಥಿಗಳಿಗಾದರೂ ಸ್ವಂತ ಕಟ್ಟಡದ ಭಾಗ್ಯ ಹಾಗೂ ಮೂಲಸೌಕರ್ಯ ದೊರೆತು ಅನುಕೂಲವಾಗಲಿ.
–ಸಿದ್ದರಾಜು ಹಳೆಯ ವಿದ್ಯಾರ್ಥಿ
ಶೀಘ್ರ ಸೌಕರ್ಯ ದೊರೆಯಲಿ ನಾನೂ  ಈ ಕಾಲೇಜಿನ ಹಳೆಯ ವಿದ್ಯಾರ್ಥಿ. ಮೂಲಸೌಕರ್ಯಗಳ ಕೊರತೆಯಲ್ಲೇ ವಿದ್ಯಾಭ್ಯಾಸ ಮುಗಿಯಿತು. ನಾನು ಓದುವಾಗ ತರಬೇತಿಗಾಗಿ ಕೆಲವು ಕಲಿಕಾ ಉಪಕರಣಗಳೇ ಇರಲಿಲ್ಲ. ಜೊತೆಗೆ ಉಪನ್ಯಾಸಕರ ಕೊರತೆಯೂ ಇತ್ತು. ನಮ್ಮ ಬ್ಯಾಚಿನ ಅವಧಿಯಲ್ಲೇ ಹೊಸ ಕಟ್ಟಡಕ್ಕೆ ಅನುಮೋದನೆ ದೊರೆತಿತ್ತು. ಆದರೆ ಕಾಮಗಾರಿ ಆರಂಭವಾಗಲಿಲ್ಲ. ಈಗಲಾದರೂ ಸಂಬಂಧಿಸಿದವರು ಸ್ವಂತ ಕಟ್ಟಡ ನಿರ್ಮಾಣಕ್ಕೆ ಮನಸು ಮಾಡಲಿ.
–ರಾಜೇಶ್ ಹಳೆಯ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT