ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವನದುರ್ಗ: 5 ದಿನಗಳ ಶೋಧ ಕಾರ್ಯಾಚರಣೆ ಅಂತ್ಯ; ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

Published 28 ಡಿಸೆಂಬರ್ 2023, 12:13 IST
Last Updated 28 ಡಿಸೆಂಬರ್ 2023, 12:13 IST
ಅಕ್ಷರ ಗಾತ್ರ

ಮಾಗಡಿ (ರಾಮನಗರ): ತಾಲ್ಲೂಕಿನ ಸಾವನದುರ್ಗ ಬೆಟ್ಟದಲ್ಲಿ ಐದು ದಿನಗಳ ಹಿಂದೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಉತ್ತರಪ್ರದೇಶ ಮೂಲದ ಯುವಕ ಗಗನ್ ದೀಪ್ ಸಿಂಗ್ (30) ಶವ ಗುರುವಾರ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ವಾಲ್ ಮಾರ್ಟ್ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದ ಸಿಂಗ್ ಅವರು, ಡಿ. 24ರಂದು ಸ್ನೇಹಿತನೊಂದಿಗೆ ಚಾರಣಕ್ಕೆ ಬಂದಿದ್ದಾಗ ನಾಪತ್ತೆಯಾಗಿದ್ದರು. ಅವರಿಗಾಗಿ ಎಸ್‌ಡಿಆರ್‌ಎಫ್, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ, ಶ್ವಾನ ದಳ ಹಾಗೂ ಸ್ಥಳೀಯರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಸತತ 4 ದಿನಗಳಿಂದ ಶೋಧ ನಡೆಸುತ್ತಿದ್ದರು. ಕಡೆಗೆ ಐದನೇ ದಿನ ಸಿಂಗ್ ಶವವಾಗಿ ಪತ್ತೆಯಾಗಿದ್ದಾರೆ.

‘ಬೆಟ್ಟದ ತಪ್ಪಲಿನ ಎಮ್ಮೆ ಬೀಳು ಭಾಗದಲ್ಲಿ ಹುಡುಕಾಟ ನಡೆಸುತ್ತಿದ್ದ ಪೊಲೀಸ್ ಮತ್ತು ಅರಣ್ಯ ಇಲಾಖೆ‌ ಸಿಬ್ಬಂದಿ ಮಧ್ಯಾಹ್ನ 1.50ರ ಸುಮಾರಿಗೆ ಕುರುಚಲು ಗಿಡಗಳ ಮಧ್ಯೆ ಇದ್ದ ಸಿಂಗ್ ಅವರ ಶವವನ್ನು ಪತ್ತೆ ಹಚ್ಚಿದ್ದಾರೆ’ ಎಂದು ಶೋಧ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಮಾಗಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗಿರಿರಾಜ್ ತಿಳಿಸಿದರು.

‘ಬೆಟ್ಟ ಹತ್ತುವ ಸಂದರ್ಭದಲ್ಲಿ ಸಿಂಗ್ ಅವರು ಕಾಲು ಜಾರಿ ಅಥವಾ ಆಯತಪ್ಪಿ ಕೆಳಕ್ಕೆ ಬಿದ್ದಿರಬಹುದಾದ ಸಾಧ್ಯತೆ ಇರುವುದರಿಂದ, ದೇಹದ ಕೆಲ ಭಾಗಗಳು ಛಿದ್ರಗೊಂಡಿವೆ. ದೇಹವನ್ನು ಸ್ಥಳದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಕುಟುಂಬದವರಿಗೆ ಹಸ್ತಾಂತರ ಮಾಡಲಾಗುವುದು’ ಎಂದು ಹೇಳಿದರು.

ಡ್ರೋನ್‌ಗೆ ಹಾನಿ: ‘ಶೋಧ ಕಾರ್ಯಾಚರಣೆಗಾಗಿ ಮುಂಬೈ ಮತ್ತು ರಾಜಸ್ಥಾನದಿಂದ ಡ್ರೋನ್ ಮತ್ತು ರಾತ್ರಿ ಹುಡುಕಾಟಕ್ಕೆ ಅನುಕೂಲವಾಗುವ ಥರ್ಮಲ್ ಡ್ರೋನ್ ತರಿಸಲಾಗಿತ್ತು. ಡಿ. 25ರಂದು ಮಧ್ಯರಾತ್ರಿ ಥರ್ಮಲ್ ಡ್ರೋನ್ ಅನ್ನು ಮೇಲಕ್ಕೆ ಕಳಿಸಲಾಗಿತ್ತು. ಮಾರ್ಗ ಮಧ್ಯೆ ಸಿಗ್ನಲ್‌ ಕಳೆದುಕೊಂಡು ನಿಯಂತ್ರಣಕ್ಕೆ ಸಿಗದ ಡ್ರೋನ್ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸಂಪೂರ್ಣ ಹಾನಿಯಾಗಿದೆ’ ಎಂದು ತಿಳಿಸಿದರು.

‘ಡ್ರೋನ್‌ ಕಣ್ಣಿಗೂ ಸಿಗದಿದ್ದರಿಂದ ಸಿಬ್ಬಂದಿಯೇ ಬೆಟ್ಟದ ಸುತ್ತಲೂ ಶೋಧ ನಡೆಸುತ್ತಿದ್ದೆವು. ಸಿಂಗ್ ಅವರು ಕಟ್ಟಿದ್ದ ಆ್ಯಪಲ್ ಕಂಪನಿಯ ವಾಚ್ ಮತ್ತು ಬಳಸುತ್ತಿದ್ದ ಐಫೋನ್ ಲೋಕೇಷನ್ ಆಧರಿಸಿ ಪತ್ತೆ ಹಚ್ಚುವುದಕ್ಕಾಗಿ, ಆ್ಯಪಲ್ ಕಂಪನಿಗೂ ಪತ್ರ ಬರೆದಿದ್ದೆವು. ಆದರೆ, ಅಲ್ಲಿಂದ ಮಾಹಿತಿ ಬರುವುದಕ್ಕೆ ಮುಂಚೆಯೇ ಸಿಂಗ್ ಅವರ ಶವ ಪತ್ತೆಯಾಯಿತು’ ಎಂದು ಮಾಹಿತಿ ನೀಡಿದರು.

ಉತ್ತರಪ್ರದೇಶದ ಸಿಂಗ್ ಅವರು, ಬೆಂಗಳೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದ ತಮ್ಮ ಅಣ್ಣ ಅಮನ್ ಅವರ ಮನೆಯಲ್ಲಿ ವಾಸವಾಗಿದ್ದರು. ನಗರದಲ್ಲಿರುವ ವಾಲ್‌ ಮಾರ್ಟ್ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಆಗಿ ಸಿಂಗ್ ಕೆಲಸ ಮಾಡುತ್ತಿದ್ದರು.

ಡಿ. 24ರಂದು ಸಿಂಗ್ ಮತ್ತು ಅವರ ಸ್ನೇಹಿತ ಚಾರಣಕ್ಕೆ ಬಂದಿದ್ದರು. ಬೆಟ್ಟ ಹತ್ತುವಾಗ ಅವರ ಸ್ನೇಹಿತ ಮಾರ್ಗ ಮಧ್ಯೆ ಸುಸ್ತಾಗಿ ಕುಳಿತಿದ್ದರು. ಆಗ, ಸಿಂಗ್ ಒಬ್ಬರೇ ಬೆಟ್ಟ ಏರಿದ್ದರು. ಸಂಜೆಯಾದರೂ ಸಿಂಗ್ ಅವರು ವಾಪಸ್ಸಾಗಿರಲಿಲ್ಲ. ಮೊಬೈಲ್ ಫೋನ್ ಸಹ ಸ್ವಿಚ್‌ ಆಫ್ ಆಗಿತ್ತು. ಇದರಿಂದ ಆತಂಕಗೊಂಡಿದ್ದ ಅವರು ಮಾಗಡಿ ಪೊಲೀಸ್ ಠಾಣೆಗೆ ಸಿಂಗ್ ಅವರು ಬೆಟ್ಟದಲ್ಲಿ ನಾಪತ್ತೆಯಾಗಿರುವ ಕುರಿತು ದೂರು ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT