ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಲೋಕಸಭಾ ಕ್ಷೇತ್ರ | ಎಲ್ಲೆಡೆ ಶಾಂತಿಯುತ: ಶೇ 78 ಮತದಾನ

Published 27 ಏಪ್ರಿಲ್ 2024, 6:37 IST
Last Updated 27 ಏಪ್ರಿಲ್ 2024, 6:37 IST
ಅಕ್ಷರ ಗಾತ್ರ

ತುಮಕೂರು: ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ, ತಡವಾದ ಮತದಾನ ಪ್ರಕ್ರಿಯೆ ಸೇರಿದಂತೆ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಶುಕ್ರವಾರ ಮತದಾನ ಶಾಂತಿಯುತವಾಗಿ ಮುಕ್ತಾಯ ಕಂಡಿದ್ದು, ಒಟ್ಟಾರೆಯಾಗಿ ಶೇ ... ಮತದಾನವಾಗಿದೆ.

ಉಷ್ಣಾಂಶದಲ್ಲಿ ತೀವ್ರ ಏರಿಕೆ, ಬಿಸಿಲಿನ ಝಳ ತೀವ್ರವಾಗಿದ್ದ ಕಾರಣಕ್ಕೆ ಹಲವರು ಮನೆಯಿಂದ ಹೊರಗೆ ಬರಲಿಲ್ಲ. ಜಿಲ್ಲೆಯಲ್ಲಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿಕೆಯಾಗಿದ್ದು, ಅದಕ್ಕಿಂತಲೂ ಹೆಚ್ಚಿನ ಬಿಸಿಯ ಅನುಭವವಾಗಿತ್ತು. ಮತದಾನದ ಸಲುವಾಗಿ ಶುಕ್ರವಾರ ರಜೆ ಘೋಷಿಸಿದ್ದು, ನಾಳೆ ನಾಲ್ಕನೇ ಶನಿವಾರ, ಮತ್ತೆ ಭಾನುವಾರ ರಜೆ. ಸಾಲುಸಾಲು ರಜೆಯಿಂದಾಗಿ ಹಲವರು ಪ್ರವಾಸಕ್ಕೆ ತೆರಳಿದ್ದರೆ, ಮತ್ತೆ ಕೆಲವರು ಊರಿನಿಂದ ಹೊರಗೆ ಹೋಗಿದ್ದಾರೆ. ಹಾಗಾಗಿ ಮತದಾನ ಪ್ರಮಾಣ ತೀವ್ರವಾಗಿ ಹೆಚ್ಚಳ ಕಾಣಲಿಲ್ಲ.

ಬೆಳಗ್ಗೆ ಮಂದಗತಿಯಲ್ಲಿ ಮತದಾನ ಆರಂಭವಾದರೂ, 10 ಗಂಟೆಯ ನಂತರ ಸ್ವಲ್ಪ ಬಿರುಸು ಪಡೆದುಕೊಂಡಿತ್ತು. ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ಹೆಚ್ಚಿದಂತೆ ಮತಗಟ್ಟೆಗಳತ್ತ ಜನರು ಬರುವುದು ಕಡಿಮೆಯಾಯಿತು. ನಂತರ 4 ಗಂಟೆವರೆಗೂ ಜನಸಂದಣಿ ಕಡಿಮೆ ಇತ್ತು. ಮತ್ತೆ ಸಂಜೆ ವೇಳೆಗೆ ಮತ್ತಷ್ಟು ಜೋರಾಯಿತು.

ಪ್ರಮುಖರ ಮತದಾನ: ಸಿದ್ಧಗಂಗಾ ಮಠದ ಬೂತ್‌ನಲ್ಲಿ ಸಿದ್ಧಲಿಂಗ ಸ್ವಾಮೀಜಿ ಮೊದಲಿಗರಾಗಿ ತಮ್ಮ ಹಕ್ಕು ಚಲಾಯಿಸಿದರು. ನಗರದ ಹೊರ ವಲಯದ ಗೊಲ್ಲಹಳ್ಳಿ ಶಾಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಮ್ಮ ಪತ್ನಿ ಕನ್ನಿಕಾ ಜತೆ ಮತದಾನ ಮಾಡಿದರು. ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್ ನಗರದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಮತದಾನ ಕೇಂದ್ರದಲ್ಲಿ ವೋಟು ಹಾಕಿದರು.

ಜಾಗೃತಿಗೂ ಬಗ್ಗದ ಜನ: ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕಳೆದ ಮೂರು ವಾರಗಳಿಂದ ಸತತವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ದಿನವೂ ಒಂದಿಲ್ಲೊಂದು ರೀತಿಯಲ್ಲಿ ಕಾರ್ಯಕ್ರಮ ನಡೆಸಿ ಜನರ ಮನಸ್ಸು ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ಕಳೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುವಂತೆ ನೋಡಿಕೊಳ್ಳಲು ಹಲವು ರೀತಿಯ ಪ್ರಯತ್ನ ಸಾಗಿತ್ತು. ಒಟ್ಟು ಮತದಾನ ಪ್ರಮಾಣ ಶೇ 80ಕ್ಕಿಂತ ಹೆಚ್ಚಿರುವಂತೆ ನೋಡಿಕೊಳ್ಳುವ ಗುರಿ ನಿಗದಿಪಡಿಸಿಕೊಳ್ಳಲಾಗಿತ್ತು. ಆದರೂ ಮತದಾರರು ನಿರೀಕ್ಷಿತ ಪ್ರಮಾಣದಲ್ಲಿ ಮತ ಚಲಾಯಿಸಿಲ್ಲ.

ತಮ್ಮ ವೋಟು ಹಾಕಿಕೊಳ್ಳದ ಎಸ್‌ಪಿಎಂ ಸೋಮಣ್ಣ!
ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ನಡುವೆ ಪೈಪೋಟಿ ಏರ್ಪಟ್ಟಿದ್ದು ಇಬ್ಬರೂ ತಮ್ಮ ವೋಟು ತಮಗೆ ಹಾಕಿಕೊಳ್ಳಲು ಸಾಧ್ಯವಾಗಿಲ್ಲ! ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿ ಸೊಬಗಾನಹಳ್ಳಿ ಮತಗಟ್ಟೆಯಲ್ಲಿ ಮುದ್ದಹನುಮೇಗೌಡ ಮತದಾನ ಮಾಡಿದರು. ಈ ಮತಗಟ್ಟೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ವಿ.ಸೋಮಣ್ಣ ಸಹ ಕ್ಷೇತ್ರದ ಮತದಾರರಲ್ಲ. ಅವರು ಬೆಂಗಳೂರಿನಲ್ಲಿ ಮತ ಹಾಕಿದರು.

ಎಲ್ಲೆಲ್ಲಿ ಅಡ್ಡಿ ಆತಂಕ?

* ತುಮಕೂರು ತಾಲ್ಲೂಕು ಕೋರಾ ಹೋಬಳಿ ಯಲದಡ್ಲು ಮತಗಟ್ಟೆಯಲ್ಲಿ ಕೈಕೊಟ್ಟ ಮತಯಂತ್ರ 40 ನಿಮಿಷ ಮತದಾನ ಸ್ಥಗಿತ. ಸರಿಪಡಿಸಿದ ನಂತರ ಪ್ರಾರಂಭ. * ಗುಬ್ಬಿ ತಾಲ್ಲೂಕಿನ ರಾಯವಾರ ಗಂಗಸಂದ್ರ ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಲ ಕಾಲ ಮತದಾನ ಸ್ಥಗಿತ. ಅಂಕಸಂದ್ರ ಧೂಳನಹಳ್ಳಿಯಲ್ಲಿ ವಿವಿ ಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ. ಕಡಬ ಹೋಬಳಿ ಕೆ.ಕಲ್ಲಹಳ್ಳಿ ಮತಗಟ್ಟೆಯ ಮತಯಂತ್ರದಲ್ಲಿ ದೋಷ ಮತದಾನ ತಾತ್ಕಾಲಿಕ ಸ್ಥಗಿತ. ನಂತರ ಆರಂಭ. * ಪಾವಗಡ ತಾಲ್ಲೂಕು ರಾಜವಂತಿ ನಾಗಲಮಡಿಕೆ ಹೋಬಳಿ ಕೆಂಚಗಾನಹಳ್ಳಿ ಮತಗಟ್ಟೆಗಳಲ್ಲಿ ಆರಂಭದಲ್ಲೇ ಇವಿಎಂನಲ್ಲಿ ತಾಂತ್ರಿಕ ದೋಷ. ಎರಡೂ ಕಡೆ ಇವಿಎಂ ಬದಲಾವಣೆ. * ಮಧುಗಿರಿ ತಾಲ್ಲೂಕಿನ ಹೊನ್ನಾಪುರದಲ್ಲಿ ವಿವಿ ಪ್ಯಾಟ್ ಸಮಸ್ಯೆಯಿಂದ 45 ನಿಮಿಷ ತಡವಾಗಿ ಆರಂಭವಾದ ಮತದಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT