ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮೊದಲ ಮತದಾರರ ಸಂಭ್ರಮ, ಪ್ರಮುಖ ಬೇಡಿಕೆ ಮುಂದಿಟ್ಟ ಯುವ ಮತದಾರರು

Published 27 ಏಪ್ರಿಲ್ 2024, 6:32 IST
Last Updated 27 ಏಪ್ರಿಲ್ 2024, 6:32 IST
ಅಕ್ಷರ ಗಾತ್ರ

ತುಮಕೂರು: ನೂತನ ಸಂಸದರು ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಬೇಕು. ಜಿಲ್ಲೆಯ ಸಾಕ್ಷರತಾ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸಬೇಕು....

ಶುಕ್ರವಾರ ವಿವಿಧೆಡೆ ಮೊದಲ ಬಾರಿಗೆ ಮತದಾನ ಮಾಡಿದ ಯುವ ಮತದಾರರ ಪ್ರಮುಖ ಒತ್ತಾಯಗಳಿವು. 18 ವರ್ಷ ತುಂಬಿದ ನಂತರ ಇದೇ ಮೊದಲ ಬಾರಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ತುಂಬಾ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಿದ್ದಾರೆ ಎಂಬುವುದು ಅವರ ಮಾತುಗಳಿಂದಲೇ ತಿಳಿಯುತ್ತದೆ.

ಬೆಳಗ್ಗೆ 7 ಗಂಟೆ ನಂತರ ಕುತೂಹಲದಿಂದಲೇ ಮತದಾನ ಕೇಂದ್ರಗಳತ್ತ ಆಗಮಿಸಿದ್ದರು. ‘ಜನರಿಂದ ಆಯ್ಕೆಯಾದ ವ್ಯಕ್ತಿ ಸಾಮಾನ್ಯರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ದೆಹಲಿಗೆ ಸೀಮಿತವಾಗದೆ ಗ್ರಾಮೀಣ ಜನರಿಗೂ ಲಭ್ಯವಾಗಬೇಕು. ಸಮಸ್ಯೆ ಹೇಳಿಕೊಳ್ಳಲು ಬರುವ ಜನರಿಗೆ ಸ್ಪಂದಿಸಬೇಕು. ಮಾನವೀಯ ಗುಣ ಹೊಂದಿರಬೇಕು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘ಮತದಾನ ಮಾಡಲು ಎರಡು ವರ್ಷದಿಂದ ಕಾಯುತ್ತಿದ್ದೆವು. ಮೊದಲ ಬಾರಿಗೆ ಮತದಾನ ಮಾಡಿದ ಖುಷಿ ಇದೆ. ನಮ್ಮ ಹಕ್ಕು ಚಲಾಯಿಸಿದ್ದೇವೆ ಎಂಬ ಹೆಮ್ಮೆಯೂ ಇದೆ. ಇದೊಂದು ಹೊಸ ಅನುಭವ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದು ನಗರದ ನಿವಾಸಿಗಳಾದ ಎಂ.ಸುಮನ್, ಅವರ ಸಹೋದರಿ ಎಂ.ಸುಪ್ರಿಯಾ ತಮ್ಮ ಅಭಿಪ್ರಾಯ ಹಂಚಿಕೊಂಡರು.

‘ಸಂವಿಧಾನ ನಮಗೆ ಕೊಟ್ಟಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದು. ಸಂಸದರು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ಆರ್ಥಿಕತೆಗೆ ಒತ್ತು ಕೊಡಲಿ ಜನರಿಂದ ಆಯ್ಕೆಯಾದ ಪ್ರತಿನಿಧಿ ರಾಷ್ಟ್ರದ ಆರ್ಥಿಕತೆ ಸುಧಾರಣೆಗೆ ಶ್ರಮಿಸಬೇಕು. ಎಲ್ಲ ರೀತಿಯ ಸರ್ಕಾರಿ ಕೆಲಸಗಳು ತ್ವರಿತಗತಿಯಲ್ಲಿ ಆಗುವಂತೆ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ರೂಪಿಸಬೇಕು. ಜನರು ಸರ್ಕಾರದ ಕೆಲಸ ಮಾಡಿಕೊಳ್ಳಲು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು. ರಾಷ್ಟ್ರದ ಅಭಿವೃದ್ಧಿ ಜನರ ಜೀವನ ಮಟ್ಟ ಸುಧಾರಣೆಗೆ ಕೆಲಸ ಮಾಡಬೇಕು.

-ಪದ್ಮಶ್ರೀ ತುಮಕೂರು

ಮತದಾನದ ನಂತರ ಮಜಾ ಮಾಡಿ ಮತದಾನದ ದಿನ ರಜೆ ಸಿಗುತ್ತದೆ ಎಂದು ಮತ ಹಾಕದೆ ಮಜಾ ಮಾಡಲು ಹೋಗುವುದು ಸರಿಯಲ್ಲ. ಎಲ್ಲರು ತಮ್ಮ ಹಕ್ಕು ಚಲಾಯಿಸಿದ ನಂತರ ಮುಂದಿನ ಕೆಲಸ ನೋಡಿಕೊಳ್ಳಬೇಕು. ಇದು ಕೇವಲ ಮತವಲ್ಲ ನಮ್ಮ ಕರ್ತವ್ಯ. ನಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ನಮಗೆ ಇರುವ ಅವಕಾಶ. ಜನರು ಈ ನಿಟ್ಟಿನಲ್ಲಿ ಆಲೋಚನೆ ಮಾಡಿದರೆ ಮತ ಪ್ರಮಾಣ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ.

-ಜಾಹ್ನವಿ ತುಮಕೂರು

ಜನಪರ ವ್ಯಕ್ತಿಯಾಗಲಿ ಚುನಾವಣೆಯಲ್ಲಿ ಗೆದ್ದ ನಂತರ ಅಹಂ ತೋರದೆ ಜನಪರವಾಗಿ ಕೆಲಸ ಮಾಡಬೇಕು. ಮತದಾರರ ಸೂಕ್ತ ವ್ಯಕ್ತಿಗೆ ಮತ ನೀಡಬೇಕು. ಹಣ ಇತರೆ ಆಮಿಷಗಳಿಗೆ ಒಳಗಾಗಬಾರದು. ನನಗೂ ಮತದಾನ ಬಗ್ಗೆ ಕಾತುರ ಇತ್ತು. ಮತಗಟ್ಟೆಗೆ ಬರುವವರೆಗೂ ಕುತೂಹಲ ಇತ್ತು. ಮತದಾನ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸಕ್ತಿಯೂ ಜತೆಗಿತ್ತು. ಮತದಾನ ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ಪರಿಹಾರ ಕಂಡುಕೊಂಡಿದ್ದೇನೆ.

-ಸಿಂಚನಾ ತುಮಕೂರು

ಹೊಸ ಅನುಭವ ಮತದಾನ ಮಾಡಿರುವುದು ಹೊಸ ಅನುಭವ. ಎಲ್ಲರು ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ನಮ್ಮಿಂದ ಆಯ್ಕೆಯಾದ ವ್ಯಕ್ತಿ ಚುನಾವಣೆಗಿಂತ ಮುಂಚೆ ನೀಡಿದ ಭರವಸೆ ಈಡೇರಿಸಬೇಕು. ಪ್ರಣಾಳಿಕೆಯಲ್ಲಿನ ಅಂಶಗಳು ಕೇವಲ ಆಶ್ವಾಸನೆಗಳು ಆಗಬಾರದು. ಜಿಲ್ಲೆಯಲ್ಲಿ ಕ್ರೀಡಾಪಟುಗಳು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೊಕ್ಕೊ ಕಬಡ್ಡಿ ಅಥ್ಲೆಟಿಕ್ಸ್‌ ಬಿಟ್ಟರೆ ಇತರೆ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ನೂತನ ಸಂಸದರು ಕ್ರೀಡಾಪಟುಗಳ ಕಡೆಗೂ ಗಮನ ಹರಿಸಬೇಕು.

-ಟಿ.ಜೆ.ಚಿಂತನ್‌ ತುಮಕೂರು

ಆಮಿಷಕ್ಕೆ ಒಳಗಾಗಬಾರದು ಮತದಾನ ಪ್ರಕ್ರಿಯೆ ಹೇಗಿರುತ್ತದೆ ಎಂಬ ಕುತೂಹಲ ಇತ್ತು. ಒಳ್ಳೆಯ ವ್ಯಕ್ತಿಗೆ ಮತದಾನ ಮಾಡಿದ್ದೇನೆ. ಎಲ್ಲರು ಯೋಚಿಸಿ ಮತದಾನ ಮಾಡಬೇಕು. ಯಾವುದೇ ಆಮಿಷಕ್ಕೆ ಒಳಗಾಗದೆ ತಮ್ಮ ಹಕ್ಕು ಚಲಾಯಿಸಬೇಕು. ಚುನಾವಣೆಯಲ್ಲಿ ಆಯ್ಕೆಯಾದ ಸಂಸದರು ಸಮರ್ಪಕ ರಸ್ತೆ ಕುಡಿಯುವ ನೀರು ವಸತಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಕೆಲಸಗಳನ್ನು ಮಾಡಬೇಕು.

-ಹಿಮಶ್ರೀ ತುಮಕೂರು

ವೈದ್ಯಕೀಯ ಕಾಲೇಜು ಬೇಕು ಮತದಾನ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಕುತೂಹಲ ಇದ್ದೇ ಇತ್ತು. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಆದ್ಯತೆ ನೀಡಬೇಕು. ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸಬೇಕು. ಸಾಮಾನ್ಯರಿಗೂ ಉತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು. ಎಲ್ಲರೂ ಮತದಾನ ಮಾಡಿದರೆ ಮಾತ್ರ ಉತ್ತಮ ವ್ಯಕ್ತಿಯ ಆಯ್ಕೆ ಸಾಧ್ಯ.

-ಪ್ರೇರಣಾ ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT