ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ | ಆಧಾರ್‌ ನೋಂದಣಿ ಕೇಂದ್ರ ಆರಂಭಿಸಲು ಆಗ್ರಹ

Published 15 ಆಗಸ್ಟ್ 2023, 6:14 IST
Last Updated 15 ಆಗಸ್ಟ್ 2023, 6:14 IST
ಅಕ್ಷರ ಗಾತ್ರ

ಸುಕುಮಾರ್‌ ಮುನಿಯಾಲ್

ಹೆಬ್ರಿ: ತಾಲ್ಲೂಕು ಕಚೇರಿಯಲ್ಲಿ ಮತ್ತೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಿ ಆಧಾರ್‌ ಕೇಂದ್ರ ಆರಂಭಿಸುವಂತೆ ಮನವಿ ಮಾಡಿದ್ದಾರೆ.

ಇಲ್ಲಿನ ಕೆನರಾ ಬ್ಯಾಂಕಿನಲ್ಲಿ ಒಂದು ನೋಂದಣಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ ದಿನಕ್ಕೆ ಸೀಮಿತ ತಿದ್ದುಪಡಿ ಹಾಗೂ ನೋಂದಣಿ ನಡೆಯುತ್ತಿದೆ. ತುರ್ತಾಗಿ ಬೇಕಾದರೆ ದೂರದ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಬೇಕಾಗುತ್ತದೆ. ಹಿರಿಯರು, ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ತಾಲ್ಲೂಕು ಕಚೇರಿಯಲ್ಲಿಯೇ ಆಧಾರ್ ಕೇಂದ್ರ ಆರಂಭಿಸುವಂತೆ ಒತ್ತಾಯ ಕೇಳಿಬಂದಿದೆ.

ಹೆಬ್ರಿ ಕೇಂದ್ರ ರದ್ದು

ತಾಲ್ಲೂಕು ಕಚೇರಿಯಲ್ಲಿ ಆಧಾರ್ ಕೇಂದ್ರ ಕೆಲ ದಿನಗಳ ಕಾಲ ಕೆಲಸ ಮಾಡಿತ್ತು. ಗುರಿ ತಲುಪಲು ಸಾಧ್ಯವಾಗದ ಆ ಕೇಂದ್ರವನ್ನು ಮುಚ್ಚಲಾಯಿತು. ಬಹುತೇಕ ಜನರು ತಾಲ್ಲೂಕು ಕಚೇರಿಯಲ್ಲಿ ಆಧಾರ್‌ನ ಪ್ರಯೋಜನ ಆಗುತ್ತಿತ್ತು ಎನ್ನುತ್ತಾರೆ.

ಗೃಹಲಕ್ಷ್ಮಿ ಯೋಜನೆಗೆ ತೊಡಕು

ಆಧಾರ್ ಕಾರ್ಡ್‌ನಲ್ಲಿ ತೊಡಕಾಗಿದ್ದರಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಮಾಹಿತಿ ತಿದ್ದುಪಡಿ ಮಾಡಲು ಕೆಲವು ಮಹಿಳೆಯರು ಕಷ್ಟಪಡುತ್ತಿದ್ದಾರೆ.

ತಾಲ್ಲೂಕು ಕಚೇರಿಯೇ ಉತ್ತಮ: ಆಧಾರ್‌ನ ಕೆಲವು ತಿದ್ದುಪಡಿಗೆ ಗೆಜೆಟೆಡ್‌ ಅಧಿಕಾರಿಯ ಸಹಿ ಬೇಕಾಗುತ್ತದೆ. ತಾಲ್ಲೂಕು ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್‌ ಗೆಜೆಟೆಡ್ ಆಫೀಸರ್ ಆದ ಕಾರಣ ಪರಿಶೀಲನೆ ಮಾಡಿ ಸಹಿ ಮಾಡಿಕೊಡುವುದರಿಂದ ಎಲ್ಲಾ ಪ್ರಕ್ರಿಯೆಗಳು ತ್ವರಿತವಾಗಿ ನಡೆಯುತ್ತವೆ. ಆ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಆಧಾರ್ ಕೇಂದ್ರ ಆರಂಭಿಸುವುದು ಸೂಕ್ತ ಎಂದು ಹಲವರು ಒತ್ತಾಯಿಸಿದ್ದಾರೆ.

ಹೆಬ್ರಿಯಲ್ಲಿ ಬೇಡಿಕೆ ಹೆಚ್ಚಿದೆ

ಕೆಲವು ದಿನಗಳ ಹಿಂದೆ ಹೆಬ್ರಿಯ ಚೈತನ್ಯ ಯುವವೃಂದ ಹಾಗೂ ಅಂಚೆ ಇಲಾಖೆ ನೇತೃತ್ವದಲ್ಲಿ ಮೂರು ದಿನಗಳ ಆಧಾರ್ ತಿದ್ದುಪಡಿ ಹಾಗೂ ನೋಂದಣಿ ನಡೆದಿದೆ. ಅದರಲ್ಲಿ ಸಾವಿರಕ್ಕೂ ಅಧಿಕ ಜನ ಪ್ರಯೋಜನ ಪಡೆದಿದ್ದಾರೆ. ಇದನ್ನು ಗಮನಿಸಿದಾಗ ಜಿಲ್ಲಾಧಿಕಾರಿ ಅವರು ವಿಶೇಷ ಮುತುವರ್ಜಿ ವಹಿಸಿ ಆಧಾರ್ ಕೇಂದ್ರ ಆರಂಭಿಸಬೇಕು ಎಂದು ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್. ಜನಾರ್ದನ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT