ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

44 ಕಾರ್ಮಿಕ ಕಾನೂನು ರದ್ದು; ದುಡಿಯುವ ವರ್ಗಕ್ಕೆ ವಂಚನೆ:ಸುರೇಶ್ ಕಲ್ಲಾಗರ

ಕಾರ್ಮಿಕರ ದಿನಾಚರಣೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ
Published 1 ಮೇ 2024, 14:39 IST
Last Updated 1 ಮೇ 2024, 14:39 IST
ಅಕ್ಷರ ಗಾತ್ರ

ಉಡುಪಿ: ಸಾವಿರಾರು ಕಾರ್ಮಿಕರ ಬಲಿದಾನದ ಫಲವಾಗಿ ಪಡೆದುಕೊಂಡ ಕಾರ್ಮಿಕ ಕಾನೂನುಗಳನ್ನು ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ರದ್ದು ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದರು.

ಕಾರ್ಮಿಕ ದಿನಾಚರಣೆ ಅಂಗವಾಗಿ ಬುಧವಾರ ಸಿಐಟಿಯು ವತಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ಕಾರ್ಪೋರೇಟ್ ಹಾಗೂ ಕೋಮುವಾದ ಮೈತ್ರಿಯಿಂದ ಕಾರ್ಮಿಕರನ್ನು ಬಂಡವಾಳಗಾರರ ಗುಲಾಮರಾಗಿ ಮಾಡಲಾಗುತ್ತಿದೆ.

ಜಾತಿ, ಮತ, ಧರ್ಮದ ಆಧಾರದಲ್ಲಿ ಕಾರ್ಮಿಕರನ್ನು ಎತ್ತಿಕಟ್ಟಿ ಕೋಮುವಾದದ ಅಡಿಯಾಳಾಗಿ ಮಾಡುವ ಬಿಜೆಪಿಯ ಅಪಾಯಕಾರಿ ನೀತಿಯ ವಿರುದ್ಧ ರೈತರು ಕಾರ್ಮಿಕರು ಕೂಲಿಕಾರರು ನೌಕರರು ಒಂದಾಗಿ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಕರೆ ನೀಡಿದರು.

ಕೋವಿಡ್‌ ಸಂಕಷ್ಟದ ದಿನಗಳಲ್ಲಿ ಕೇಂದ್ರ ಸರ್ಕಾರ 44 ಕಾರ್ಮಿಕ ಕಾನೂನುಗಳನ್ನು ರದ್ದುಮಾಡಿ 4 ಸಂಹಿತೆಗಳನ್ನು ಅಳವಡಿಸಿ ಕಾರ್ಮಿಕರ ಸೌಲಭ್ಯಗಳನ್ನು ಕಸಿದುಕೊಂಡಿದೆ. ಕಾರ್ಮಿಕರು ₹31,000 ಕನಿಷ್ಠ ವೇತನಕ್ಕೆ ಹೋರಾಟ ಮಾಡುತ್ತಿದ್ದರೆ, ಪ್ರಧಾನಿ ಮೋದಿ ತಳಮಟ್ಟದ ಕನಿಷ್ಠ ವೇತನ ಜಾರಿಗೊಳಿಸಿದೆ. ‌ಕಾರ್ಮಿಕ ವರ್ಗದ ಬಗ್ಗೆ ಬಿಜೆಪಿ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ಜನವಿರೋಧಿ ನೀತಿಗೆ ಇದು ಸಾಕ್ಷಿಯಾಗಿದೆ ಎಂದರು.

ಪ್ರಗತಿಪರ ಚಿಂತಕರಾದ ಪ್ರೊ.ಕೆ. ಫಣಿರಾಜ್ ಮಾತನಾಡಿ, ಕಾರ್ಮಿಕರು ಹಕ್ಕುಗಳ ರಕ್ಷಣೆಗಾಗಿ ರಾಜಕೀಯ ಮಾಡಬೇಕಾಗಿದೆ. ದೇಶದ ಸಂಪತ್ತು ಸೃಷ್ಠಿ ಮಾಡುವವರಿಗೆ ದೇಶದ ಸಂಪತ್ತು ಸಿಗಲೇಬಾಗಿದೆ. ದೇಶದ ಸಂಪತ್ತಿನ ಮೇಲೆ ನಾವೂ ಹಕ್ಕುದಾರರು ಎಂಬ ಅರಿವು ಕಾರ್ಮಿಕರಿಗೆ ಬಂದಾಗ ಮಾತ್ರ ಕಾರ್ಮಿಕ ದಿನಾಚರಣೆ ಮಹತ್ವ ಪಡೆದುಕೊಳ್ಳುತ್ತದೆ ಎಂದರು.

ಕಾರ್ಮಿಕ ದಿನಾಚಣೆ ಅಂಗವಾಗಿ ಉಡುಪಿ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದವರೆಗೂ ಮೆರವಣಿಗೆ ನಡೆಸಲಾಯಿತು. ಕಾರ್ಮಿಕರ ಹಕ್ಕುಗಳ ಪರವಾಗಿ ಘೋಷಣೆ ಕೂಗಲಾಯಿತು.

ಮೇ ದಿನಾಚರಣೆ ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಮುಖಂಡರಾದ ಶೇಖರ ಬಂಗೇರ ವಹಿಸಿ ಮಾತನಾಡಿದರು. ಸಭೆಯಲ್ಲಿ ವಿಮಾ ನೌಕರರ ಸಂಘದ ಉಡುಪಿ ವಿಭಾಗ ಕಾರ್ಯದರ್ಶಿ ಪ್ರಭಾಕರ್ ಕುಂದರ್, ಎಐಬಿಇಎ ಕಾರ್ಯದರ್ಶಿ ನಾಗೇಶ್ ನಾಯಕ್, ಎಐಟಿಯುಸಿ ಮುಖಂಡರಾದ ಶಿವನಂದ, ಇಂಟಕ್‌ ಜಿಲ್ಲಾ ಅಧ್ಯಕ್ಷರಾದ ಕಿರಣ್ ಹೆಗ್ಡೆ ಇದ್ದರು. ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್ ಕಾಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಟ್ಟಡ ಸಂಘದ ಜಿಲ್ಲಾ ಕಾರ್ಯದರ್ಶಿ ಶಶಿಧರ ಗೊಲ್ಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT