ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಂದ ಭರ್ತಿಯಾದ ಕಾರವಾರ ಕಡಲತೀರ

ಜಿಲ್ಲೆಯ ರೆಸಾರ್ಟ್, ಹೋಟೆಲ್‌ಗಳು ಈಗಲೇ ಭರ್ತಿ: ಗೋವಾದಲ್ಲಿ ಜನಜಂಗುಳಿ
Last Updated 26 ಡಿಸೆಂಬರ್ 2022, 20:00 IST
ಅಕ್ಷರ ಗಾತ್ರ

ಕಾರವಾರ: ಕ್ರಿಸ್‌ಮಸ್ ಸೇರಿದಂತೆ ವರ್ಷಾಂತ್ಯದ ರಜಾದಿನಗಳು ದೂರದ ಊರುಗಳ ಪ್ರವಾಸಿಗರನ್ನು ಕರಾವಳಿ, ಮಲೆನಾಡಿನ ಪ್ರವಾಸಿ ತಾಣಗಳತ್ತ ಕೈಬೀಸಿ ಕರೆಯುತ್ತಿವೆ. ಹೊಸ ವರ್ಷಾಚರಣೆಗೆಂದು ಕಡಲತೀರಗಳತ್ತ ಯಾತ್ರಿಗಳು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ. ರೆಸಾರ್ಟ್‌ಗಳು, ಹೋಟೆಲ್‌ಗಳು, ಹೋಂ ಸ್ಟೇಗಳ ಕೊಠಡಿಗಳು ಈಗಾಗಲೇ ಭರ್ತಿಯಾಗಿವೆ.

ಗೋವಾದ ಪ್ರಸಿದ್ಧ ಕಡಲ ತೀರಗಳೆಲ್ಲವೂ ಕೆಲವು ದಿನಗಳಿಂದ ಗಿಜಿಗುಡುತ್ತಿವೆ. ಹಗಲು ದೋಣಿ ವಿಹಾರ, ಡಾಲ್ಫಿನ್ ವೀಕ್ಷಣೆ, ಪ್ಯಾರಾ ಗ್ಲೈಡಿಂಗ್‌ನಂಥ ಚಟುವಟಿಕೆಗಳಲ್ಲಿ ಪ್ರವಾಸಿಗರು ತಲ್ಲೀನರಾಗಿದ್ದಾರೆ. ಪಶ್ಚಿಮದಲ್ಲಿ ಸೂರ್ಯಾಸ್ತದಿಂದ ಆಗಸ ಕೆಂಪೇರಿದರೆ, ಇತ್ತ ಕಡಲತೀರಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಮೆರುಗು ಇಡೀ ವಾತಾವರಣದ ಮೆರುಗನ್ನೇ ಬದಲಿಸುತ್ತಿದೆ.

ಉತ್ತರ ಕನ್ನಡದ ಕಾರವಾರ, ಗೋಕರ್ಣ, ಮುರುಡೇಶ್ವರದ ಕಡಲ ಕಿನಾರೆಗೆ ಬರುವ ಅನೇಕರು, ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿಗೂ ಭೇಟಿ ನೀಡುತ್ತಾರೆ. ಸಮೀಪದ ದಕ್ಷಿಣ ಗೋವಾದ ಕಡಲಕಿನಾರೆಯಲ್ಲಿ ಸಂಭ್ರಮಿಸಲು ಬಯಸುವವರು, ಕಾರವಾರದಲ್ಲಿ ಹೋಟೆಲ್, ರೆಸಾರ್ಟ್‌ಗಳಲ್ಲಿ ಉಳಿದುಕೊಳ್ಳುವ ಪರಿಪಾಠವೂ ಈಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಇಲ್ಲಿ ವಾಸ್ತವ್ಯ, ಊಟೋಪಹಾರಗಳು ಗೋವಾದಷ್ಟು ದುಬಾರಿಯಲ್ಲ. ಹಾಗಾಗಿ ಈ ಭಾಗ ಪ್ರವಾಸೋದ್ಯಮಿಗಳಿಗೂ ಕೈತುಂಬ ಕೆಲಸ ಸಿಗುತ್ತಿದೆ.

‘ಗೋವಾದ ಕಡಲ ಕಿನಾರೆಗಳು ಸದಾ ಜನಜಂಗುಳಿಯಿಂದ ಕೂಡಿರುತ್ತವೆ. ಅಲ್ಲದೇ ಅಲ್ಲಿ ವರ್ಷಾಂತ್ಯದ ವಾಸ್ತವ್ಯಕ್ಕೆ ಕೊಠಡಿಗಳು ಬಹಳ ದುಬಾರಿಯಾಗಿರುತ್ತವೆ. ಹೇಗಿದ್ದರೂ ನಾವು ನಮ್ಮ ಸ್ವಂತ ವಾಹನದಲ್ಲಿ ಬಂದಿರುತ್ತೇವೆ. ಕಾರವಾರದಿಂದ ಗೋವಾ ಬಹಳ ದೂರವಲ್ಲ. ಹಾಗಾಗಿ ಕಾರವಾರದಲ್ಲಿ ಉಳಿದುಕೊಂಡು ಇಲ್ಲಿನ ಪ್ರಕೃತಿ ಸೌಂದರ್ಯವನ್ನೂ ಸವಿಯುತ್ತ, ಗೋವಾ ಪ್ರವಾಸವನ್ನೂ ಪೂರ್ಣಗೊಳಿಸುತ್ತಿದ್ದೇವೆ’ ಎನ್ನುತ್ತಾರೆ ಮೈಸೂರಿನ ಪ್ರವಾಸಿಗ ಮಹೇಶ ಗೌಡ.

‘ಕಾರವಾರವೂ ಸೇರಿದಂತೆ ನಮ್ಮ ರಾಜ್ಯದ ಯಾವುದೇ ಕಡಲತೀರಕ್ಕೆ ಪ್ರವಾಸವು ಗೋವಾದಷ್ಟು ದುಬಾರಿಯಾಗಿಲ್ಲ. ದಿನವಿಡೀ ಜನರಿಂದ ಗಿಜಿಗುಡದ ಕಾರಣ ಮುಕ್ತವಾಗಿ, ಸುರಕ್ಷಿತವಾಗಿ ಓಡಾಡಲು ಸಾಧ್ಯವಾಗುತ್ತದೆ. ವಾತಾವರಣವೂ ತುಂಬ ಪ್ರಶಾಂತ, ಸ್ವಚ್ಛವಾಗಿದೆ. ಇದು ಮುದ ನೀಡುತ್ತದೆ’ ಎನ್ನುತ್ತಾರೆ ದಾವಣಗೆರೆಯ ಪ್ರವಾಸಿ ಮಂಜುಳಾ ಹಿರೇಮಠ.

ಕೊಠಡಿಗಳು ಭರ್ತಿ:

‘ಈ ಬಾರಿಯ ವರ್ಷಾಂತ್ಯವು ಪ್ರವಾಸೋದ್ಯಮ ಒಟ್ಟೂ ದೃಷ್ಟಿಯಿಂದ ಅನುಕೂಲಕರವಾಗಿದೆ. ಜನವರಿ ಒಂದನೇ ತಾರೀಕಿನವರೆಗೂ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಕೊಠಡಿಗಳು ಬೇಕು ಎಂದು ದಿನವೂ ನೂರಾರು ಕರೆಗಳು ಬರುತ್ತಲೇ ಇವೆ’ ಎನ್ನುತ್ತಾರೆ ಕಾರವಾರದ ಓಷಿಯನ್ ಡೆಕ್ ಹೋಮ್‌ಸ್ಟೇ ಮಾಲೀಕ ವಿನಯ ನಾಯ್ಕ.

‘ಗೋವಾಕ್ಕೆ ಮತ್ತು ಕಾರವಾರಕ್ಕೆ ಬರುವ ಪ್ರವಾಸಿಗರ ವರ್ಗವೇ ಬೇರೆ ಬೇರೆಯಾಗಿದೆ. ಕಾರವಾರಕ್ಕೆ ಬರುವವರು ಇಲ್ಲಿನ ಯುದ್ಧನೌಕೆ ವಸ್ತು ಸಂಗ್ರಹಾಲಯ, ರಾಕ್ ಗಾರ್ಡನ್, ತೀಳ್ಮಾತಿ ಕಡಲತೀರ, ಡಾಲ್ಫಿನ್ ವೀಕ್ಷಣೆ, ಲೈಟ್ ಹೌಸ್ ನೋಡಲು, ಸ್ಥಳೀಯ ಮತ್ಸ್ಯ ಖಾದ್ಯ ಸೇವನೆ ಬಯಸುತ್ತಾರೆ. ಆದರೆ, ಗೋವಾದಲ್ಲಿರುವ ಪ್ರವಾಸೋದ್ಯಮದ ಪರಿಕಲ್ಪನೆಯೇ ವಿಭಿನ್ನವಾಗಿದೆ’ ಎಂದು ಅವರು ಹೇಳುತ್ತಾರೆ.

ರಕ್ಷಣೆಗೆ ಸಿಗದ ಸಲಕರಣೆ:

ಜಿಲ್ಲೆಯ ಕಡಲತೀರಗಳಿಗೆ ನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅವರಲ್ಲಿ ಅನೇಕರು ಸಮುದ್ರದ ಅಲೆಗಳಿಗೆ ಸಿಲುಕಿ ಜೀವಕ್ಕೇ ಅಪಾಯ ತಂದುಕೊಳ್ಳುತ್ತಿದ್ದಾರೆ. ಅಂಥ ಸಂದರ್ಭದಲ್ಲಿ ರಕ್ಷಣೆಗೆ ಧಾವಿಸಲು ನೇಮಕವಾಗಿ ‘ಲೈಫ್‌ ಗಾರ್ಡ್‌’ಗಳಿಗೆ ಅಗತ್ಯ ಸಲಕರಣೆಗಳನ್ನು ಪ್ರವಾಸೋದ್ಯಮ ಇಲಾಖೆಯಾಗಲೀ ಜಿಲ್ಲಾಡಳಿತವಾಗಲಿ ನೀಡಿಲ್ಲ.

‘ವ್ಯಕ್ತಿಯು ನೀರಿನಲ್ಲಿ ಮುಳುಗದಂತೆ ಟ್ಯೂಬ್‌ಗಳು, ಜಾಕೆಟ್‌ಗಳ ಕೊರತೆಯಿದೆ. ಮುರುಡೇಶ್ವರದಂಥ ಹೆಚ್ಚು ಪ್ರವಾಸಿಗರು ಬರುವ ಹಾಗೂ ಹೆಚ್ಚು ಅಪಾಯವಿರುವ ತಾಣಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಲೈಫ್‌ಗಾರ್ಡ್‌ಗಳ ನೇಮಕವೂ ಆಗಿಲ್ಲ’ ಎಂದು ಲೈಫ್‌ಗಾರ್ಡ್ ಒಬ್ಬರು ಅಳಲು ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT